ನದಿಗಳನ್ನು ಮಲಿನಗೊಳಿಸುವ ಚಟಕ್ಕೆ ಏನೆನ್ನಬೇಕು!


Team Udayavani, Sep 23, 2017, 10:34 AM IST

23-STATE-17.jpg

ನದಿಗಳ ಅಗತ್ಯವೇ ನಮಗಿನ್ನೂ ಅರ್ಥವಾಗಿಲ್ಲ. ಐದು ವರ್ಷಗಳಲ್ಲಿ ಮಾಲಿನ್ಯಗೊಳಿಸುವ ನಮ್ಮ ಈ ಚಟ ದುಪ್ಪಟ್ಟು ಬೆಳೆದಿದೆ ಎಂದರೆ ನಂಬಲೇಬೇಕು.

ನಮ್ಮ ದೇಶದಲ್ಲಿ ಯಾವ ನದಿ ಇನ್ನೂ ಪವಿತ್ರವಾಗಿರಬಹುದು? ಮಲಿನಗೊಳ್ಳದಿರಬಹುದು? ಎಂದು ಅಧ್ಯಯನ ಮಾಡ ಹೊರಟರೆ ನಮಗೆ ಸಿಗುವುದು ಶೂನ್ಯವೇ ಹೊರತು ಮತ್ತೇನೂ ಅಲ್ಲ. ಅನಿಯಂತ್ರಿತ ನಗರೀಕರಣ ಸೃಷ್ಟಿಸುತ್ತಿರುವ ಸಮಸ್ಯೆಗಳು ಬೇರೆ ಎಂದು ಕೆಲವೊಮ್ಮೆ ಯೋಚಿಸಬಹುದು. ಆದರೆ, ನಗರದ ಕಡೆ ಹೆಚ್ಚುತ್ತಿರುವ ವಲಸೆಯಿಂದ ಏರುತ್ತಿರುವ ಜನಸಂಖ್ಯೆ, ಅದಕ್ಕೆ ತಕ್ಕಂತೆ ಮೂಲ ಸೌಲಭ್ಯ ಒದಗಿಸಲು ಹೆಣಗಾಡುವ  ಸ್ಥಳೀಯ ಸಂಸ್ಥೆಗಳು, ಹಾಗೆಂದು ಸೋಲು ಒಪ್ಪದೇ  ಮೌನವಾಗುವ ಆಡಳಿತ ವ್ಯವಸ್ಥೆ- ಸರಕಾರ, ಜವಾಬ್ದಾರಿಯುತವಾಗಿ ನಡೆದುಕೊಳ್ಳಲು ಮರೆಯುವ ನಾಗರಿಕರಾದ ನಾವು- ಎಲ್ಲರೂ ಮತ್ತೂಂದು ಅವ್ಯವಸ್ಥೆ ನಿರ್ಮಿಸುತ್ತಿದ್ದೇವೆ ಎಂದೇ ಅನಿಸುವುದುಂಟು. ನದಿಗಳನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವುದನ್ನು ನಮ್ಮ ಹಿರಿಯರು ಕಲಿಸಿದ್ದು. ಕೇವಲ ನದಿಗಳನ್ನಷ್ಟೇ ಅಲ್ಲ; ಇಡೀ ಪ್ರಕೃತಿಯನ್ನು. ಅದರಲ್ಲಿ ಗಿಡಮರಗಳಿಗೂ ಸ್ಥಾನ ಕಲ್ಪಿಸಿದ್ದರು, ಪ್ರಾಣಿ ಪಕ್ಷಿಗಳನ್ನೂ ಒಳಗೊಂಡಿದ್ದರು. ಪ್ರಕೃತಿ ಆರಾಧನೆಯೇ ನಿಜವಾದ ಪೂಜೆಯಾಗಿಸಿಕೊಂಡಿದ್ದವರ ಪರಂಪರೆಯಿಂದ ನಾವು ಕಲಿತಿರುವುದು ಏನು ಎಂಬುದೇ ಇನ್ನೂ ಅರ್ಥವಾಗದ ಸಂಗತಿ. 

ಒಮ್ಮೆ ನೋಡಿ
ಹದಿನೈದು ನಿಮಿಷ ಬಿಡುವು ಮಾಡಿಕೊಂಡು ಸುಮ್ಮನೆ ಒಮ್ಮೆ ಅಂತರ್ಜಾಲವನ್ನು ಕೆದಕಿ ನೋಡಿ. ಶುದ್ಧವಾದ ನದಿ ಯಾವುದಾದರೂ ಇದೆಯೇ ಎಂದು ಹುಡುಕಿ. ಉತ್ತರ ಸಿಕ್ಕರೆ ಅದನ್ನು ಹಂಚಿಕೊಳ್ಳಿ. ಜಗತ್ತಿನಲ್ಲಿ ನದಿಗಳೆಲ್ಲ ಕಲುಷಿತಗೊಂಡಿವೆ ಎನ್ನುವ ಮಾತು ಬಿಡಿ. ನಮ್ಮ ದೇಶದಲ್ಲೇ ಎಲ್ಲ ನದಿಗಳನ್ನೂ ಕಲುಷಿತಗೊಳಿಸಲಾಗಿದೆ ಎಂಬುದು ಆತಂಕದ ಸಂಗತಿಯೇ ಸರಿ. ಗಂಗೆ, ಯಮುನೆಯರನ್ನು ನೋಡಿದರೆ ನಾವು ನದಿಗೆ ಕೊಟ್ಟಿರಬಹುದಾದ ಗೌರವವನ್ನು ಕಾಣಬಹುದು. ಅವುಗಳ ಕಥೆ ಬೇರೆಯೇ ಹೇಳುವುದಿದೆ. ನದಿಗಳ ಮಾಲಿನ್ಯಕ್ಕೆ ಕೈಗಾರೀಕರಣದ ಕೊಡುಗೆ ಎಷ್ಟಿದೆಯೋ ಅಷ್ಟೇ ನಮ್ಮ ನಿರ್ಲಜ್ಜತನದ ಉಪಕಾರವೂ ಇದೆ. ಸ್ಥಳೀಯ ಸಂಸ್ಥೆಗಳ ಔದಾಸೀನ್ಯ ಮತ್ತು ಅರಿವಿನ ಕೊರತೆ ಸಲ್ಲಿಸಿರುವ ಕೊಡುಗೆ ಕಡಿಮೆ  ಏನಿಲ್ಲ. 

ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) 29 ರಾಜ್ಯಗಳು ಹಾಗೂ ಆರು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿರುವ 445 ನದಿಗಳನ್ನು ಸಮೀಕ್ಷೆ ಮಾಡಿತ್ತು. ಎಷ್ಟರಮಟ್ಟಿಗೆ ಕಲುಷಿಗೊಂಡಿವೆ, ಏನು ಕಾರಣ ಎಂಬುದನ್ನು ತಿಳಿಯುವುದು ಅದರ ಉದ್ದೇಶ. ಈ ಪೈಕಿ 275 ನದಿಗಳು ಸಂಪೂರ್ಣ ಕಲುಷಿತಗೊಂಡಿವೆ. ಉಳಿದವು ಸ್ವತ್ಛವಾಗಿವೆಯೆಂಬುದು ಒಪ್ಪಿಕೊಳ್ಳಲು ಕಷ್ಟವೆನಿಸುವ ಸಂಗತಿ. ಮಾಲಿನ್ಯ ಎಂಬುದು ಸ್ವಲ್ಪ ಕಡಿಮೆ ಪ್ರಮಾಣದಲ್ಲಿರಬಹುದು ಅಷ್ಟೇ. ರೋಗದಲ್ಲೂ ಕೆಲವು ಹಂತಗಳಿರುತ್ತವೆ. ಒಂದನೇ ಹಂತ, ಎರಡನೇ ಹಂತ ಸುಧಾರಿಸುವಂಥವು. ಮೂರನೇ ಹಂತ-ಕಷ್ಟ. ನಾಲ್ಕನೇ ಹಂತ ಅಥವಾ ಅಂತಿಮ ಹಂತ- ಸಾಧ್ಯವಿಲ್ಲದ್ದು ಎಂಬುದು. ನದಿಗಳ ಸ್ಥಿತಿಗೂ ಇದನ್ನು ಅನ್ವಯಿಸಬಹುದು.

ನಮ್ಮ ಮಾಲಿನ್ಯ ಹೆಚ್ಚಿಸುವ ಚಟ ಎಷ್ಟರ ಮಟ್ಟಿನ ವೇಗ ಪಡೆದಿದೆಯೆಂದರೆ, ಕೇವಲ ಐದು ವರ್ಷಗಳಲ್ಲಿ ನದಿಗಳ ಮಾಲಿನ್ಯ ದುಪ್ಪಟ್ಟು ಹೆಚ್ಚಾಗಿದೆ. 2009ರಲ್ಲಿ ನಡೆದ ಸಮೀಕ್ಷೆಯ ಪ್ರಕಾರ ಸುಮಾರು 121 ನದಿಗಳು ಮಲಿನಗೊಂಡಿದ್ದವು. 2015ರಲ್ಲಿ ಈ ಸಂಖ್ಯೆ 275ಕ್ಕೆ ಏರಿತು. ಅಂದರೆ ಐದು ವರ್ಷಗಳಲ್ಲಿ  154 ನದಿಗಳನ್ನು ನಾವು ಹಾಳು ಮಾಡಿದೆವು. ಇದೇ ರೀತಿ ನದಿಗಳ ತೀರ ಪ್ರದೇಶದ ಕತೆ ಹೀಗಿದೆ. 2009ರಲ್ಲಿ 150 ನದಿಗಳ ತೀರ ಪ್ರದೇಶ ಮಲಿನಗೊಂಡಿತ್ತು. ಆ ಸಂಖ್ಯೆ 2015ರಲ್ಲಿ 302ಕ್ಕೆ ಏರಿಕೆಯಾಗಿದೆ. ಇದರಲ್ಲಿ ಯಾವ ರಾಜ್ಯಗಳೂ ಹಿಂದೆ ಬಿದ್ದಿಲ್ಲ. ನದಿ ತೀರ ಪ್ರದೇಶಗಳ ಹಾಳುಗೆಡವುತ್ತಿರುವ-ಮಲಿನಗೊಳಿಸುತ್ತಿರುವ ಸಂಗತಿ  ಬಹುತೇಕ ರಾಜ್ಯಗಳಲ್ಲಿ ನಡೆಯುತ್ತಿದೆ. ಈ ಸಂಖ್ಯೆ

ವಿವರ ಹೀಗಿದೆ: ಮಹಾರಾಷ್ಟ್ರದಲ್ಲಿ 49 ನದಿ ತೀರ ಪ್ರದೇಶ ಮಲಿನಗೊಂಡಿದ್ದರೆ, ಅಸ್ಸಾಂನಲ್ಲಿ 28, ಮಧ್ಯ ಪ್ರದೇಶದಲ್ಲಿ 21, ಗುಜರಾತ್‌ನಲ್ಲಿ 20, ಪಶ್ಚಿಮ ಬಂಗಾಲದಲ್ಲಿ 17, ಕರ್ನಾಟಕದಲ್ಲಿ 15, ಕೇರಳ ಮತ್ತು ಉತ್ತರ ಪ್ರದೇಶಗಳಲ್ಲಿ 13, ಮಣಿಪುರ ಮತ್ತು ಒರಿಸ್ಸಾಗಳಲ್ಲಿ 12, ಮೇಘಾಲಯದಲ್ಲಿ 10, ಜಮ್ಮು-ಕಾಶ್ಮೀರದಲ್ಲಿ 9. ಒಟ್ಟು ಮಲಿನಗೊಂಡ ನದಿ ತೀರ ಪ್ರದೇಶ ಎಂದು ಅಂದಾಜು ಮಾಡುವುದಾದರೆ ಸುಮಾರು 12,363 ಕಿಮೀ. ದಿಲ್ಲಿಯ ಯಮುನಾ ಸರಿಪಡಿಸಲಾಗದಷ್ಟು ಮಲಿನಗೊಂಡಿದ್ದರೆ ಎಂದರೆ ಅಚ್ಚರಿಗೊಳ್ಳಬಹುದು. 

ಅವ್ಯವಸ್ಥೆ ಸರಿಪಡಿಸುವುದು ಹೇಗೆ?
ಇದು ಚರ್ಚೆಯ ಭಾಗವಾಗಿಯಷ್ಟೇ ಇರುವುದೇ ಇಂದಿನ ಸ್ಥಿತಿಗೆ ಕಾರಣ. ಯಾಕೆಂದರೆ, ಈ ಎಲ್ಲ ಸಂಗತಿಗಳೂ ಸ್ಥಳೀಯ ಸಂಸ್ಥೆಗಳಿಗೆ, ಆಯಾ ರಾಜ್ಯ, ಕೇಂದ್ರ ಸರಕಾರಕ್ಕೆ ತಿಳಿದಿಲ್ಲವೆಂದಲ್ಲ. ಆದರೆ, ನದಿ ಮಾಲಿನ್ಯ ನಿಯಂತ್ರಣಕ್ಕೆ ಏನು ಕ್ರಮ ಕೈಗೊಳ್ಳಬಹುದು ಎಂಬುದು ಕೇವಲ ಚರ್ಚೆಯ ವಸ್ತುವಾಗಿಯೇ ಇದೆಯೇ ಹೊರತು ಪರಿಹಾರ ಕ್ರಮ ಕೈಗೊಳ್ಳುವ ನೆಲೆಯಲ್ಲಿ ಅನುಷ್ಠಾನಕ್ಕೆ ಇಳಿಯತ್ತಿಲ್ಲ ಎಂಬುದಕ್ಕೆ ಸದ್ಯದ ಸ್ಥಿತಿಯೇ ಉದಾಹರಣೆ. 

ಬಹುತೇಕ ನದಿಗಳು ಕಲುಷಿತಗೊಳ್ಳುತ್ತಿರುವುದು ಕೈಗಾರಿಕೆಗಳಿಂದ ಮತ್ತು ಸ್ಥಳೀಯ ಸಂಸ್ಥೆಗಳ ಕೊಳಚೆ ಸೇರ್ಪಡೆಯಿಂದ ಎಂಬ ಸಂಗತಿ ಸಾಬೀತಾಗಿರುವಂಥದ್ದು. ಅದಕ್ಕೆ ಪ್ರತ್ಯೇಕ ಸಾಕ್ಷಿಗಳೇನೂ ಬೇಕಾಗಿಲ್ಲ. ಇದರ ನಿಯಂತ್ರಣಕ್ಕಾಗಲೀ, ನಗರಗಳಲ್ಲಿ ಉತ್ಪತ್ತಿಯಾಗುವ ಕೊಳಚೆಯ ನಿರ್ಮೂಲನೆಗೆ, ನಿಯಂತ್ರಣಕ್ಕೆ ಹಾಗೂ ಶುದ್ಧೀಕರಣಕ್ಕೆ ಕೈಗೊಂಡ ಕ್ರಮವಿರಲಿ, ತೋರಿರುವ ಉತ್ಸಾಹವೇ ಆಸಕ್ತಿ ಹುಟ್ಟಿಸುವಂತಿಲ್ಲ. 

2009ರಲ್ಲಿ ಇದೇ 302 ಕಲುಷಿತ ನದಿ ತೀರ ಪ್ರದೇಶದ ಸುತ್ತಮುತ್ತಲಿರುವ 650 ನಗರ ಮತ್ತು ಪಟ್ಟಣಗಳಿಂದ ಉತ್ಪತ್ತಿಯಾಗುವ ಕೊಳಚೆ ನೀರಿನ ಪ್ರಮಾಣ ದಿನಕ್ಕೆ 38 ಸಾವಿರ ದಶಲಕ್ಷ ಲೀಟರ್‌ಗಳಾಗಿದ್ದವು. ಅದು 2015ರಲ್ಲಿ 62 ಸಾವಿರ ದಶಲಕ್ಷ ಲೀಟರ್‌ಗೆ ಏರಿಕೆಯಾಯಿತು. ಅಂದರೆ ಶೇ. 80ರಷ್ಟು ಹೆಚ್ಚಳವಾಗಿತ್ತು. ಅಷ್ಟೇ ಪ್ರಮಾಣದ ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ನಮ್ಮ ಆಡಳಿತ ಗಮನಹರಿಸಿತೇ ಎಂದು ಕೇಳಿದರೆ, ಇಲ್ಲ ಎಂಬುದು ಸ್ಪಷ್ಟವಾದ ಉತ್ತರ. 2009ರಲ್ಲಿ ಸುಮಾರು 11,800 ದಶಲಕ್ಷ ಲೀಟರ್‌ ಕೊಳಚೆ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ನಮ್ಮ ಘಟಕಗಳು ಹೊಂದಿದ್ದವು. ಆ ಪ್ರಮಾಣ ಐದು ವರ್ಷಗಳಲ್ಲಿ 24 ಸಾವಿರ ದಶಲಕ್ಷ ಲೀಟರ್‌ಗೆ ಏರಿತು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮೀಕ್ಷೆಯ ಅಂದಾಜಿನ ಪ್ರಕಾರ ಕೆಲವೇ ವರ್ಷಗಳಲ್ಲಿ ಈ ಕೊಳಚೆ ನೀರಿನ ಪ್ರಮಾಣ ದಿನಕ್ಕೆ 57 ಸಾವಿರ ದಶಲಕ್ಷ ಲೀಟರ್‌ ಮುಟ್ಟುವ ಸಾಧ್ಯತೆ ಇದೆ. ಇದರಲ್ಲಿ ಗ್ರಾಮೀಣ ಭಾರತದ ಭಾಗವನ್ನು ಸೇರಿಸಿಕೊಂಡಿಲ್ಲ. ಕೇವಲ 650 ನಗರಗಳು-ಪಟ್ಟಣಗಳ ಲೆಕ್ಕ ಮಾತ್ರ. 

ಕಳೆದ ಬಾರಿ ಬೆಂಗಳೂರಿನಲ್ಲಿ ವೃಷಭಾವತಿ ಕಾಣೆಯಾಗಿದ್ದ ಕಥೆ ಹೇಳಲಾಗಿತ್ತು. ಇಂಥದ್ದೇ ಕಥೆ ಮುಂಬಯಿಯಲ್ಲೂ ಇದೆ. ಅಲ್ಲಿ ಮಿಥಿ ನದಿ ಎಲ್ಲಿದೆ ಎಂದು ಎಲ್ಲರೂ ನೋಡಬೇಕಾದ ಸ್ಥಿತಿ ಇದೆ. ಮಿಥಿ ಪುನರುಜ್ಜೀವನ ಕೆಲಸ ಆಗುತ್ತಿದೆ ಎನ್ನುವುದಷ್ಟೆ ಸಮಾಧಾನದ ಸಂಗತಿ. ಬೃಹನ್ಮುಂಬಯಿ ಮಹಾನಗರ ಪಾಲಿಕೆ ಸುಮಾರು 659 ಕೋಟಿ ರೂ.ಗಳನ್ನು ವ್ಯಯಿಸಿ ಅದರ ಪುನರುಜ್ಜೀವನ ಮಾಡಲು ಹೊರಟಿದೆಯಂತೆ. ಪರಿಸರವಾದಿಗಳ ಪ್ರಕಾರ, ನದಿಯ ಆರೋಗ್ಯ ಉಳಿಸುವತ್ತ ಬಹಳ ದೊಡ್ಡ ಬದಲಾವಣೆಯಾಗಿಲ್ಲ ಎಂಬ ಆರೋಪವಿದೆ. 

ಇಂಥ ಹತ್ತಾರು ನದಿಗಳು ಕಾಣೆಯಾಗುತ್ತಿರುವುದು ಹೀಗೆಯೇ. ಅವುಗಳನ್ನು ಉಳಿಸುವತ್ತ ನಾಗರಿಕರಾದ ನಾವು ಮೊದಲು ಯೋಚಿಸಿ ಕ್ರಿಯಾಶೀಲವಾಗಬೇಕು. ಆಡಳಿತಗಳು, ಸ್ಥಳೀಯ ಸಂಸ್ಥೆಗಳ ಮೇಲೆ ಒತ್ತಡ ಹೇರಬೇಕು. ನದಿಗೆ ತ್ಯಾಜ್ಯವನ್ನು ಬಿಡುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಬೇಕು. ಹಾಗೆಯೇ ಸರಕಾರ, ಸ್ಥಳೀಯ ಸಂಸ್ಥೆಗಳು ನದಿಯ ಅಗತ್ಯವನ್ನು ಮನಗಂಡು ಗಂಭೀರವಾಗಿ ವರ್ತಿಸಬೇಕು. ಇವೆಲ್ಲವೂ ಒಟ್ಟಾಗಿ ನಡೆದರೆ ನಮ್ಮ ಕವಿಗಳು ಹೇಳಿದಂತೆ “ನದಿಗಳ ಬೀಡು’ ನಮ್ಮದಾಗಬಹುದು. ಇಲ್ಲವಾದರೆ ಮುಂದೇನೂ ಹೇಳುವಂತಿಲ್ಲ.

ಟಾಪ್ ನ್ಯೂಸ್

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

vidan-soudha-kannada

Golden Jubilee: ಕನ್ನಡವೇ ಅಧಿಕಾರಿಗಳ‌ ಹೃದಯದ ಭಾಷೆ ಆಗಲಿ

KSRTC

Transport: ಕೆಎಸ್ಸಾರ್ಟಿಸಿ ದಾಖಲೆ: ಒಂದೇ ದಿನ 1.23 ಕೋಟಿ ಮಂದಿ ಪ್ರಯಾಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Maha-Election

Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

HDD–By-election

By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್‌.ಡಿ.ದೇವೇಗೌಡ ಗುಡುಗು

ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

Super App: ರೈಲು ಬುಕಿಂಗ್‌, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್‌’: ಮುಂದಿನ ತಿಂಗಳು ಬಿಡುಗಡೆ

High-Court

Kambala: ಪೆಟಾ ಪಿಐಎಲ್‌; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್‌

CM-Shiigavi-2

MUDA Case: ಕೇವಲ 14 ಸೈಟ್‌ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.