ಪ್ರಜ್ಞಾವಂತರಿಂದಲೇ ಕಸ – ತ್ಯಾಜ್ಯದ ಹೊಂಡ ಸೃಷ್ಠಿ !
Team Udayavani, Sep 23, 2017, 4:48 PM IST
ಕಾಪು: ತ್ಯಾಜ್ಯಮುಕ್ತ ಉಡುಪಿ ಜಿಲ್ಲೆಯ ಕನಸು ಕಾಣುತ್ತಿರುವ ಜಿಲ್ಲಾಧಿಕಾರಿಗಳ ಆಶಯಕ್ಕೆ ಅಪವಾದವೆಂಬಂತೆ ಕಟಪಾಡಿ – ಶಿರ್ವ ರಾಜ್ಯ ಹೆದ್ದಾರಿ ನಡುವಿನ ಕಟಪಾಡಿ-ಚೊಕ್ಕಾಡಿ ರೈಲ್ವೇ ಸೇತುವೆ ಬಳಿಯಲ್ಲಿ ರಸ್ತೆ ಪಕ್ಕದಲ್ಲೇ ಕಸ – ತ್ಯಾಜ್ಯಗಳು ಸಂಗ್ರಹಿತವಾಗುತ್ತಿರುವುದು ಮತ್ತು ಸಂಗ್ರಹಿತವಾಗುವ ಪ್ಲಾಸ್ಟಿಕ್ ತ್ಯಾಜ್ಯಗಳು ರಸ್ತೆಯುದ್ದಕ್ಕೂ ಹರಡಿಕೊಂಡಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕಟಪಾಡಿ-ಶಿರ್ವ ರಸ್ತೆಯ ಸುಭಾಸ್‌ನಗರ-ಚೊಕ್ಕಾಡಿ ನಡುವಿನ ರೈಲ್ವೇ ಕ್ರಾಸ್ ರಸ್ತೆಯ ಮೇಲ್ಭಾಗದಲ್ಲಿ ಪ್ರತೀ ನಿತ್ಯ ಕಸದ ರಾಶಿ ಸಂಗ್ರಹವಾಗುತ್ತಿದ್ದು, ಕಸ ಅಲ್ಲಿಯೇ ಕೊಳೆತು ನಾರುತ್ತಿದೆ. ಅಂಗಡಿ ತ್ಯಾಜ್ಯ, ಹೊಟೇಲ್ ತಿಂಡಿ, ಆಮ್ಲೆಟ್, ಮಾಂಸಾಹಾರಿ ಖಾದ್ಯಗಳ ತೊಟ್ಟೆಗಳ ಸಹಿತವಾಗಿ ಮಕ್ಕಳು ಮತ್ತು ಮಹಿಳೆಯರು ಬಳಸುವ ಕೆಲವೊಂದು ಖಾಸಗಿ ವಸ್ತುಗಳನ್ನೂ ಜನರು ರಸ್ತೆ ಬದಿಯಲ್ಲೇ ಎಸೆದು ಹೋಗುವ ಮೂಲಕ ತ್ಯಾಜ್ಯ ಉತ್ಪಾದನೆಗೆ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ.
ರಸ್ತೆ ಬದಿಯಲ್ಲೇ ಎಸೆಯುವ ತಿಂಡಿಯ ಪೊಟ್ಟಣಗಳ ಪರಿಮಳಕ್ಕೆ ಮನಸೋಲುವ ಬೀದಿ ನಾಯಿಗಳು ಕಸವನ್ನು ಜಾಲಾಡುವುದು, ಬೀದಿ ಬದಿಯಲ್ಲೇ ಜಗಳವಾಡಿಕೊಳ್ಳುವುದು, ಕಸ ತ್ಯಾಜ್ಯಗಳನ್ನು ಪಸರಿಸಿ ಬಿಡುವುದು ಮಾಮೂಲಾಗಿದೆ.
ಹೀಗೆ ಚೆಲ್ಲಾಪಿಲ್ಲಿಯಾಗುವ ತ್ಯಾಜ್ಯ ವಸ್ತುಗಳು, ಪ್ಲಾಸ್ಟಿಕ್ ಚೀಲ, ಕವರ್, ಕಾಗದ ಸಹಿತ ಹಲವು ವಸ್ತುಗಳು ರಸ್ತೆಯಲ್ಲಿ ಎಡೆಬಿಡದೆ ಸಂಚರಿಸುವ ವಾಹನಗಳ ಚಕ್ರಕ್ಕೆ ಸಿಲುಕಿ ಅಥವಾ ಗಾಳಿಗೆ ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಹರಡಿ ಅಸಹನೀಯತೆಗೆ ಕಾರಣವಾಗುತ್ತಿವೆ.
ಪ್ರಜ್ಞಾವಂತರೇ ಕಸದ ಮೂಲ
ಕಟಪಾಡಿ – ಶಿರ್ವ ರಸ್ತೆಯಲ್ಲಿ ಸಂಚರಿಸುವ ವಿದ್ಯಾವಂತ ಮತ್ತು ಪ್ರಜ್ಞಾವಂತ ವಾಹನ ಸವಾರರೇ ಇಲ್ಲಿನ ಕಸದ ಮೂಲವಾಗಿದ್ದು, ತಮ್ಮ ಮನೆಗಳಲ್ಲಿ ಸಂಗ್ರಹವಾದ ಕಸವನ್ನು ರಾಜಾರೋಷವಾಗಿ ರಸ್ತೆ ಬದಿಯಲ್ಲಿ ಎಸೆಯುವ ಮೂಲಕ ಚೊಕ್ಕಾಡಿ ಸೇತುವೆ ಬಳಿಯ ಪ್ರದೇಶವನ್ನು ತ್ಯಾಜ್ಯದ ಗುಂಡಿ ಯಂತೆ ಪರಿವರ್ತಿಸುತ್ತಿದ್ದಾರೆ. ಆ ಮೂಲಕ ಜಿಲ್ಲಾಧಿಕಾರಿಗಳ ಸ್ವತ್ಛ ಉಡುಪಿ ನಿರ್ಮಾಣದ ಕನಸಿಗೆ ತಣ್ಣೀರೆರಚುವ ಪ್ರಯತ್ನ ಮಾಡುತ್ತಿದ್ದಾರೆ.
ನಾಗರಿಕ ಸಮಾಜವೂ ಎಚ್ಚೆತ್ತುಕೊಳ್ಳಲಿ : ಮರಾಠೆ
ಉಡುಪಿ ಜಿಲ್ಲಾಧಿಕಾರಿಗಳು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಸ್ಥಳೀಯಾಡಳಿತ, ಶಾಲಾ ಕಾಲೇಜು, ಸ್ಥಳೀಯ ಸಂಘಟನೆಗಳ ಸಹಭಾಗಿತ್ವದಲ್ಲಿ ಸ್ವತ್ಛತೆಗಾಗಿ ಜನಾಂದೋಲನ ನಡೆಸುತ್ತಾ ಬರುತ್ತಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು, ವಿವಿಧ ಸಂಘ – ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸ್ವತ್ಛತೆಯ ಪಾಠ ಹೇಳಿಕೊಡುತ್ತಿದ್ದಾರೆ. ಒಣ ಕಸ, ಹಸಿ ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ವಿಲೇವಾರಿ ನಡೆಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದರೂ ಪರಿಸರದ ಪ್ರಜ್ಞಾವಂತ ನಾಗರಿಕರು ಮಾತ್ರ ರಸ್ತೆ ಬದಿಯಲ್ಲೇ ಕಸ-ತ್ಯಾಜ್ಯಗಳನ್ನು ಎಸೆಯುತ್ತಿರುವುದು ಖಂಡನೀಯ ಎನ್ನುವುದು ನಿವೃತ್ತ ಶಿಕ್ಷಕ ಪುಂಡಲೀಕ ಮರಾಠೆಯವರ ಅಭಿಪ್ರಾಯ.
ಕಸ – ತ್ಯಾಜ್ಯ ನಿಯಂತ್ರಣಕ್ಕೆ ಕ್ರಮ : ಪಿಡಿಒ
ಕಟಪಾಡಿ – ಶಿರ್ವ ರಸ್ತೆಯಲ್ಲಿ ಸುರಿಯಲ್ಪಡುವ ಕಸ ತ್ಯಾಜ್ಯಗಳನ್ನು ನಿಯಂತ್ರಿಸಲು ಕಟಪಾಡಿ ಗ್ರಾಮ ಪಂಚಾಯತ್ ಹಲವು ಬಾರಿ ಕ್ರಮ ತೆಗೆದುಕೊಂಡು ಕಸ ಸುರಿದವರಿಗೆ ದಂಡ ವಿಧಿಸಿದರೂ ಅದು ನಿಷ್ಪ್ರಯೋಜಕವೆನಿಸಿದೆ. ಕಸ ಎಸೆಯುವವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದು ಎಚ್ಚರಿಕೆ ನೀಡಿದ್ದರೂ ಅಲ್ಲಿ ಮತ್ತೆ ಅದೇ ಪುನರಾವರ್ತನೆಯಾಗುತ್ತಿದೆ. ಜನರೇ ಈ ಬಗ್ಗೆ ಜಾಗೃತರಾಗಿ ಕಸ ಎಸೆಯುವವರ ಬಗ್ಗೆ ಗ್ರಾ.ಪಂ.ಗೆ ಮಾಹಿತಿ ನೀಡಿ ನಮ್ಮೊಂದಿಗೆ ಕೈಜೋಡಿಸಬೇಕು. ಅ. 1ರಿಂದ ಪ್ರತೀ ಮನೆ-ಮನೆಗೆ ತೆರಳಿ ಅಲ್ಲಿನ ಕಸ ತ್ಯಾಜ್ಯಗಳನ್ನು ಸಂಗ್ರಹಿಸಲು ಪ್ರತ್ಯೇಕ ವಾಹನವನ್ನು ಕಳುಹಿಸುವ ವ್ಯವಸ್ಥೆ ಮಾಡಲು ಚಿಂತಿಸಿದ್ದು, ಇದಕ್ಕಾಗಿ ಪ್ರತೀ ಮನೆಯವರಿಂದ 50 ರೂ. ಗಳಂತೆ ಶುಲ್ಕವನ್ನು ಸಂಗ್ರಹಿಸಲು ಸೆ. 20ರಂದು ನಡೆದಿರುವ ಗ್ರಾಮಸಭೆಯಲ್ಲೂ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಕಟಪಾಡಿ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಇನಾಯತ್ ಅಲಿ ತಿಳಿಸಿದ್ದಾರೆ.
ರಾಕೇಶ್ ಕುಂಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.