ಅಮೃತಾ ರಾವ್
Team Udayavani, Sep 24, 2017, 5:03 PM IST
ಒಂದು ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಸಾಮಾನ್ಯವಾಗಿ ಹೊಸ ನಟಿಯರು ಒಂದಷ್ಟು ಅವಕಾಶಗಳಿಗಾಗಿ ಎದುರು ನೋಡಬೇಕಾಗುತ್ತದೆ, ಕೆಲವು ದಿನ ಕಾಯಬೇಕಾಗುತ್ತದೆ ಅಥವಾ ವರ್ಷಗಟ್ಟಲೇ ಅವಕಾಶ ಇಲ್ಲದೇ ಸಿನಿಮಾಕ್ಕೆ ಬಂದು ತಪ್ಪು ಮಾಡಿದೆನೋ ಎಂದು ಕೊರಗಬೇಕಾಗುತ್ತದೆ. ಆದರೆ, ಆ ವಿಷಯದಲ್ಲಿ ಅಮೃತಾ ರಾವ್ ಮಾತ್ರ ತುಂಬಾ ಅದೃಷ್ಟವಂತೆ. ಯಾಕೆ ಅಂತೀರಾ, ಈಗಷ್ಟೇ ಅಮೃತಾ ನಟಿಸಿದ ಒಂದು ಸಿನಿಮಾ ಬಿಡುಗಡೆಯಾಗಿದೆ. ಅದರ ಬೆನ್ನಲ್ಲೇ ಅಮೃತಾ ಐದು ಸಿನಿಮಾಗಳನ್ನು ಒಪ್ಪಿಕೊಮಡಿದ್ದಾರೆ. ಈ ಮೂಲಕ ಚಿತ್ರರಂಗಕ್ಕೆ ಬಂದ ಎರಡೇ ವರ್ಷದಲ್ಲಿ ತುಂಬಾ ಬಿಝಿಯಾದ ನಾಯಕಿಯರ ಪಟ್ಟಿಯಲ್ಲಿ ಅಮೃತಾ ಸೇರುತ್ತಾರೆ. ಸದ್ಯ ಅಮೃತಾ “ಉಸಿರೇ ಉಸಿರೇ’, “ಡ್ರೀಮ್ ಗರ್ಲ್’, “ನನ್ಮಗಳೇ ಹೀರೋಯಿನ್’, “ಮಾಲ್ಗುಡಿ ಸ್ಟೆಷನ್’ ಹಾಗೂ ನಾಗೇಂದ್ರ ಪ್ರಸಾದ್ ನಿರ್ದೇಶನದ ಸಿನಿಮಾವೊಂದರಲ್ಲೂ ಅಮೃತಾ ನಟಿಸುತ್ತಿದ್ದಾರೆ.
ಅಂದಹಾಗೆ, ಅಮೃತಾ ಉಡುಪಿಯ ಹುಡುಗಿ. ಆದರೆ, ಬೆಳೆದಿದ್ದು, ಓದಿದ್ದೆಲ್ಲಾ ಬೆಂಗಳೂರು. ಸಹಜವಾಗಿಯೇ ಸಿನಿಮಾ ಆಸಕ್ತಿ ಅಮೃತಾಗೆ ಇತ್ತು. ಆದರೆ, ಸಿನಿಮಾ ಮಾಡಲೇಬೇಕೆಂಬ ಅತ್ಯುತ್ಸಾಹ ಮಾತ್ರ ಇರಲಿಲ್ಲ. ಏಕೆಂದರೆ ಅಮೃತಾ ಭರತನಾಟ್ಯದಲ್ಲಿ ಖುಷಿ ಕಾಣುತ್ತಿದ್ದರು. ಹೌದು, ಅಮೃತಾ ರಾವ್ ಮೂಲತಃ ಭರತನಾಟ್ಯ ಕಲಾವಿದೆ. ಸಾಕಷ್ಟು ಶೋಗಳನ್ನು ಕೂಡಾ ಕೊಟ್ಟಿದ್ದಾರೆ. ಭರತನಾಟ್ಯ ಮಾಡಿಕೊಂಡು ಖುಷಿಯಾಗಿದ್ದ ಅಮೃತಾಗೆ ಸಿನಿಮಾ ಸಿಕ್ಕಿದ್ದು ಕೂಡಾ ಅಚಾನಕ್ ಆಗಿ ಎಂದರೆ ನೀವು ನಂಬಲೇಬೇಕು. ಅದು ದೇವಸ್ಥಾನವೊಂದರಲ್ಲಿ.
ದೇವಸ್ಥಾನದಲ್ಲಿ ಸಿಕ್ಕ ಅವಕಾಶ
ಮೊದಲೇ ಹೇಳಿದಂತೆ ಅಮೃತಾ ರಾವ್‌ಗೆ ಸಿನಿಮಾ ಮಾಡಲೇಬೇಕೆಂಬ ಆಸೆಯಂತೂ ಇರಲಿಲ್ಲ. ಸಿನಿಮಾ ಅವಕಾಶಕ್ಕಾಗಿ ಪ್ರಯತ್ನ ಕೂಡಾ ಪಟ್ಟಿರಲಿಲ್ಲ. ಆದರೂ ಅವರಿಗೆ ಸುಲಭವಾಗಿ ಸಿನಿಮಾ ಅವಕಾಶ ಸಿಕ್ಕಿದೆ. ಅದು ದೇವಸ್ಥಾನವೊಂದರಲ್ಲಿ. ಅದೊಂದು ದಿನ ಅಮೃತಾ ದೇವಸ್ಥಾನವೊಂದಕ್ಕೆ ಹೋಗಿದ್ದರಂತೆ. ಅದೇ ಸಮಯದಲ್ಲಿ ಅಲ್ಲಿಗೆ “ಮಂಡ್ಯ ಟು ಮುಂಬೈ’ ಚಿತ್ರದ ನಿರ್ದೇಶಕರು ಕೂಡಾ ಅಲ್ಲಿಗೆ ಬಂದಿದ್ದಾರೆ. ಅಮೃತಾರನ್ನು ನೋಡಿದ ನಿರ್ದೇಶಕರಿಗೆ ತಾನಂದುಕೊಂಡ ಪಾತ್ರಕ್ಕೆ ಈ ಹುಡುಗಿ ಹೇಳಿಮಾಡಿಸಿದಂತಿದ್ದಾಳೆಂದುಕೊಂಡು, ನೇರವಾಗಿ ಹೋಗಿ ಕೇಳಿಯೇ ಬಿಡುತ್ತಾರೆ. ಪಾತ್ರದ ಬಗ್ಗೆ ವಿವರಿಸಿದ ನಂತರ ಅಮೃತಾ ಕೂಡಾ ಒಪ್ಪುತ್ತಾರೆ. ಮೊದಲ ಚಿತ್ರ ಅಮೃತಾಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದಂತೂ ಸುಳ್ಳಲ್ಲ. ಆ ಖುಷಿ ಅಮೃತಾಗೂ ಇದೆ. “ನಾನು ಸಿನಿಮಾ ಮಾಡಲೇಬೇಕೆಂದು ಪಣ ತೊಟ್ಟಿರಲಿಲ್ಲ. ನಾನು ಭರತನಾಟ್ಯ ಕಲಾವಿದೆ. ಹಾಗಾಗಿ ನನಗೆ ಕಲೆ ಬಗ್ಗೆ ಆಸಕ್ತಿ ಇತ್ತು. ಸಾಕಷ್ಟು ಭರತನಾಟ್ಯ ಶೋ ಕೊಟ್ಟಿದ್ದೇನೆ. ನಾನು ಅದರಲ್ಲೇ ಖುಷಿಯಾಗಿದ್ದೆ ಕೂಡಾ. ಹೀಗಿರುವಾಗ ನನಗೆ ಸಿಕ್ಕಿದ್ದು “ಮಂಡ್ಯ ಟು ಮುಂಬೈ’ ಅವಕಾಶ. ದೇವಸ್ಥಾನದಲ್ಲಿ ನನ್ನನ್ನು ನೋಡಿದ ನಿರ್ದೇಶಕರು ಅವಕಾಶ ಕೊಟ್ಟರು’ ಎಂದು ತಮಗೆ ಸಿಕ್ಕ ಮೊದಲ ಅವಕಾಶದ ಬಗ್ಗೆ ಹೇಳುತ್ತಾರೆ ಅಮೃತಾ.
ಸಹಜವಾಗಿಯೇ ಮಗಳು ಸಿನಿಮಾಕ್ಕೆ ಹೋಗುತ್ತಾಳೆಂದಾಗ ಆರಂಭದಲ್ಲಿ ಮನೆಯವರಿಗೆ ಭಯ ಆಯಿತಂತೆ. ಅದರಲ್ಲೂ ಇವರ ತಂದೆ-ಅಣ್ಣನಿಗೆ ಇಷ್ಟವಿರಲಿಲ್ಲವಂತೆ. ಆದರೆ ಮಗಳ ಆಸೆ ಅಡ್ಡಿಮಾಡದೇ ಆರೆಮನಸ್ಸಿನಿಂದಲೇ ಒಪ್ಪಿಕೊಂಡ ಅವರಿಗೆ ಚಿತ್ರಮಂದಿರದಲ್ಲಿ ನಿರಾಸೆಯಾಗಲಿಲ್ಲ. ಮೊದಲ ದಿನ ಸಿನಿಮಾ ನೋಡಿದ ಅವರ ಕುಟುಂಬ ದೊಡ್ಡ ಪರದೆಯಲ್ಲಿ ಮಗಳನ್ನು ನೋಡಿ ಖುಷಿಪಟ್ಟಿತಂತೆ. ಈಗ ಮಗಳಿಗೆ ಸಿಗುತ್ತಿರುವ ಅವಕಾಶ, ಚಿತ್ರರಂಗದ ಬೆಳೆಯುತ್ತಿರುವ ರೀತಿ ಬಗ್ಗೆಯೂ ಖುಷಿ ಇದೆಯಂತೆ.
ಪಾತ್ರಕ್ಕಾಗಿ ಒಪ್ಪಿಕೊಂಡ ಸಿನಿಮಾಗಳು
ಅಮೃತಾ ರಾವ್ ಕೈಯಲ್ಲಿ ಸದ್ಯ ಐದು ಸಿನಿಮಾಗಳಿವೆ ಎಲ್ಲವೂ ಚಿತ್ರೀಕರಣ ಹಂತದಲ್ಲಿದ್ದು, ಈ ವರ್ಷ ಹಾಗೂ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಸಹಜವಾಗಿಯೇ ಒಂದು ಪ್ರಶ್ನೆ ಬರುತ್ತದೆ. ಅವಕಾಶ ಬಂತೆಂಬ ಕಾರಣಕ್ಕೆ ಅಮೃತಾ ಸಿನಿಮಾಗಳನ್ನು ಒಪ್ಪಿಕೊಂಡರಾ ಅಥವಾ ಪಾತ್ರ ನೋಡಿಯಾ ಎಂದು. ಆದರೆ, ಅಮೃತಾ ತಾನು ಪಾತ್ರ ನೋಡಿ ಖುಷಿಯಾಗಿ ಸಿನಿಮಾ ಒಪ್ಪಿಕೊಂಡೆ ಎನ್ನುತ್ತಾರೆ. “ನಾನು ಸಿನಿಮಾ ಮೇಲೆ ಸಿನಿಮಾ ಮಾಡಬೇಕು, ಕೈ ತುಂಬಾ ಸಿನಿಮಾ ಇರಬೇಕೆಂಬ ಕಾರಣಕ್ಕೆ ಬಂದ ಅವಕಾಶಗಳನ್ನು ಒಪ್ಪಿಕೊಂಡಿಲ್ಲ. ನನಗೆ ಸಾಕಷ್ಟು ಅವಕಾಶಗಳು ಬಂದುವು. ಅದರಲ್ಲಿ ನಾನು ಒಪ್ಪಿಕೊಂಡಿದ್ದು ಐದು ಸಿನಿಮಾ. ಆ ಐದು ಸಿನಿಮಾಗಳನ್ನು ಒಪ್ಪಿಕೊಳ್ಳಲು ಕಾರಣ ಅದರಲ್ಲಿನ ಪಾತ್ರ. ಐದಕ್ಕೆ ಐದು ಸಿನಿಮಾಗಳಲ್ಲಿ ವಿಭಿನ್ನವಾದ, ಹೊಸ ಬಗೆಯ ಪಾತ್ರ ಸಿಕ್ಕಿದೆ. ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ನಾನು ನನ್ನ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು. ಆ ನಿಟ್ಟಿನಲ್ಲಿ ಈ ಪಾತ್ರಗಳು ನನಗೆ ಸಹಾಯವಾಗುತ್ತವೆ ಎಂಬ ವಿಶ್ವಾಸವಿದೆ’ ಎನ್ನುವುದು ಅಮೃತಾ ಮಾತು.
ಅಮೃತಾ ಪಾತ್ರದ ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಿದ್ದಾರಂತೆ. “ಮೊದಲೇ ಹೇಳಿದಂತೆ ಸಿನಿಮಾ ರಂಗದಲ್ಲೇ ಮಿಂಚಬೇಕೆಂಬ ಅತಿಯಾಸೆಯಿಂದ ನಾನು ಚಿತ್ರರಂಗಕ್ಕೆ ಬಂದಿಲ್ಲ. ನನಗೆ ಪಾತ್ರಗಳು, ಒಳ್ಳೆಯ ಸಿನಿಮಾ ಮುಖ್ಯ. ನಾನು ಕೆಲವೇ ಕೆಲವು ಸಿನಿಮಾ ಮಾಡಿದರೂ ಅದರಲ್ಲಿನ ನನ್ನ ಪಾತ್ರ ಜನರಿಗೆ ಇಷ್ಟವಾದರೆ, ಅದರ ಅವರು ನಾಲ್ಕು ಒಳ್ಳೆಯ ಮಾತನಾಡಿದರೆ ಅದಕ್ಕಿಂತ ದೊಡ್ಡ ಖುಷಿ ಇನ್ನೊಂದಿಲ್ಲ. ಒಳ್ಳೆಯ ಪಾತ್ರ ಸಿಕ್ಕರೆ ಮಾತ್ರ ನಾನು ಸಿನಿಮಾ ಮಾಡುತ್ತೇನೆ. ಇಲ್ಲದಿದ್ದರೆ ಆರಾಮವಾಗಿ ಮನೆಯಲ್ಲಿ ಕೂರಲು ನಾನು ರೆಡಿ. ನನಗೆ ಸಿನಿಮಾದ ಸಂಖ್ಯೆ ಮುಖ್ಯವಲ್ಲ. ಪಾತ್ರ ಮುಖ್ಯ’ ಎನ್ನುವ ಮೂಲಕ ತಾನು ಚೂಸಿ ನಟಿ ಎನ್ನುತ್ತಾರೆ.
ಇನ್ನು, ಅಮೃತಾಗೆ ಚಿತ್ರರಂಗದಲ್ಲಿ ಬಂದ ಕೂಡಲೇ ಒಳ್ಳೆಯ ಹಾಗೂ ಕೆಟ್ಟ ಅನುಭವ ಆಗಿದೆ. ಕೆಟ್ಟ ಅನುಭವ ಏನು ಎಂದರೆ ಕಾಲೆಳೆಯುವವರ ಸಂಖ್ಯೆ ಎನ್ನುತ್ತಾರೆ. ಮೊದಲ ಚಿತ್ರದ ಸಮಯದಲ್ಲೇ ಅಮೃತಾ ಅವರನ್ನು ಕೆಲವರು ಕಾಲೆಳೆಯುತ್ತಾ ಬೇಸರ ಪಡಿಸಿದರಂತೆ. “ನಾನು ಚಿತ್ರರಂಗಕ್ಕೆ ಬಂದ ಕೂಡಲೇ ಕೆಲವರು ನನ್ನ ಕಾಲೆಳೆದರು. ನವನಟಿಯನ್ನು ಬೆಂಬಲಿಸುವ ಮೊದಲು ಬೇಸರ ಪಡಿಸಿದರು. ಅದು ನನಗೆ ಬೇಸರ ಆಯಿತು. ಹಾಗಂತ ನಾನು ತಲೆಕೆಡಿಸಿಕೊಳ್ಳಲಿಲ್ಲ. ಏಕೆಂದರೆ ಒಳ್ಳೆಯ ಸಿನಿಮಾ ಮಾಡೋದಷ್ಟೇ ನನ್ನ ಕೆಲಸ. ಯಾರು ಏನು ಹೇಳುತ್ತಾರೆಂಬ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸಿನಿಮಾ ಚೆನ್ನಾಗಿ ಹೋದಾಗ, ನಮ್ಮ ಪರ್‌ಫಾರ್ಮೆನ್ಸ್ ಗುರುತಿಸಿಕೊಂಡಾಗ ಎಲ್ಲರೂ ಸುಮ್ಮನಾಗುತ್ತಾರೆಂಬುದನ್ನು ನಾನು ನಂಬಿದ್ದೇನೆ’ ಎನ್ನುತಾರೆ ಅಮೃತಾ.
ಅಂದಹಾಗೆ, ಅಮೃತಾಗೆ ಒಂದು ಆಸೆ ಇದೆ. ಅದೇನೆಂದರೆ ನಾಯಕಿ ಪ್ರಧಾನ ಚಿತ್ರಗಳಲ್ಲಿ ನಟಿಸಬೇಕೆಂದು. ನಾಯಕಿ ಪ್ರಧಾನ ಚಿತ್ರಗಳಲ್ಲಾದರೆ ತಮ್ಮ ಪ್ರತಿಭೆಗೆ, ನಟನೆಗೆ ಹೆಚ್ಚು ಸ್ಕೋಪ್ ಇರುತ್ತದೆಂಬ ಕಾರಣಕ್ಕೆ ಆ ಆಸೆಯಂತೆ. ಆ ನಿಟ್ಟಿನಲ್ಲಿ ಸಿನಿಮಾಗಳನ್ನು ಎದುರು ನೋಡುತ್ತಿದ್ದಾರೆ ಕೂಡಾ.
ಕೆಲವು ನಟಿಯರು ಸಿನಿಮಾವನ್ನೇ ನಂಬಿಕೊಂಡಿರುತ್ತಾರೆ, ಸಿನಿಮಾ ಸಿಗದೇ ಹೋದಾಗ ಬೇಸರ ಮಾಡಿಕೊಳ್ಳುತ್ತಾರೆ. ಆದರೆ, ಅಮೃತಾ ಮಾತ್ರ ಸಿನಿಮಾನೇ ನಂಬಿಕೊಂಡಿಲ್ಲ. ತಮ್ಮದೇ ಆದ ಒಂದು ಬಿಝಿನೆಸ್ ಆರಂಭಿಸಿದ್ದಾರೆ. ಅದು ಟೂರ್‌ಗೆ ಸಂಬಂಧಪಟ್ಟದ್ದು. ಅವರ ಫ್ಯಾಮಿಲಿ ಕೂಡಾ ಅದಕ್ಕೆ ಪ್ರೋತ್ಸಾಹ ನೀಡುತ್ತಿದೆಯಂತೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.