ಮೂರು ದಶಕಗಳ ದಾಖಲೆ ಅಳಿಸಿದ 24 ದಿನಗಳ ಮಳೆ!
Team Udayavani, Sep 25, 2017, 12:52 PM IST
ಬೆಂಗಳೂರು: ಕಳೆದ ಮೂರು ದಶಕಗಳಲ್ಲಿ ಸೆಪ್ಟೆಂಬರ್‌ನಲ್ಲಿ ಸುರಿದ ದಾಖಲೆ ಮಳೆಗೆ ನಗರ ಈ ಬಾರಿ ಸಾಕ್ಷಿಯಾಗಿದೆ. ಕೇವಲ 24 ದಿನಗಳಲ್ಲಿ (ಸೆ.1ರಿಂದ 24) ನಗರದಲ್ಲಿ 376.7 ಮಿ.ಮೀ ಮಳೆಯಾಗಿದ್ದು, ಇದು 30 ವರ್ಷಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಬಿದ್ದ ಅತ್ಯಧಿಕ ಮಳೆಯಾಗಿದೆ. ಈ ಹಿಂದೆ 1986ರಲ್ಲಿ ಇದೇ ತಿಂಗಳಲ್ಲಿ 516.6 ಮಿ.ಮೀ. ಮಳೆಯಾಗಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ.
ನಗರದಲ್ಲಿ ಸೆಪ್ಟೆಂಬರ್‌ನ ವಾಡಿಕೆ ಮಳೆ 211.5 ಮಿ.ಮೀ. ಆದರೆ, ಇನ್ನೂ ತಿಂಗಳಾಂತ್ಯಕ್ಕೆ ಆರು ದಿನಗಳು ಬಾಕಿ ಇರುವಾಗಲೇ ಒಂದೂವರೆಪಟ್ಟು ಹೆಚ್ಚು ದಾಖಲಾಗಿದೆ. ಒಟ್ಟಾರೆ ಬಿದ್ದ 376.7 ಮಿ.ಮೀ. ಮಳೆಯಲ್ಲಿ ಸೆ. 1ರಂದು ಅತಿ ಹೆಚ್ಚು 72.0 ಮಿ.ಮೀ. ಮಳೆ ಆಗಿದೆ. ಮುಂದಿನ ಎರಡು-ಮೂರು ದಿನಗಳು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆ ಮುನ್ಸೂಚನೆ ಇರುವುದರಿಂದ ಈ ಪ್ರಮಾಣ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಚಿತ್ರವೆಂದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಇಡೀ ತಿಂಗಳು ಬರೀ 33.2 ಮಿ.ಮೀ. ಮಳೆಯಾಗಿತ್ತು. ಇನ್ನು 2000ದಿಂದ ಈಚೆಗೆ ಕೇವಲ ನಾಲ್ಕು ಬಾರಿ ಮಾತ್ರ ಸೆಪ್ಟೆಂಬರ್‌ನಲ್ಲಿ ಮಳೆ ಪ್ರಮಾಣ 300 ಮಿ.ಮೀ. ಗಡಿ ದಾಟಿದ್ದು, 2013ರಲ್ಲಿ 352.6 ಮಿ.ಮೀ. ಬಿದ್ದಿದೆ. 1988ರಲ್ಲಿ ಸೆಪ್ಟೆಂಬರ್ 12ರಂದು 177.6 ಮಿ.ಮೀ. ಮಳೆಯಾಗಿತ್ತು. ಇದು ಆ ತಿಂಗಳ ಕೇವಲ 24 ಗಂಟೆಗಳಲ್ಲಿ ಸುರಿದ ಈವರೆಗಿನ ಅತ್ಯಧಿಕ ಮಳೆಯಾಗಿದೆ.
ನಗರದ ಒಟ್ಟಾರೆ ಒಂದು ವರ್ಷದಲ್ಲಿ ಸುರಿಯುವ 980 ಮಿ.ಮೀ. ಮಳೆಯ ಹಂಚಿಕೆ ಪರಿಗಣಿಸಿದರೆ, ಸೆಪ್ಟೆಂಬರ್‌ನಲ್ಲಿ ಅತಿ ಹೆಚ್ಚು 211.5 ಮಿ.ಮೀ. ಇದೆ. ಜೂನ್ 1ರಿಂದ ಈವರೆಗೆ ನಗರದಲ್ಲಿ 813 ಮಿ.ಮೀ. ಮಳೆಯಾಗಿದ್ದು, ಇದು ವಾಡಿಕೆಗಿಂತ 311 ಮಿ.ಮೀ. ಹೆಚ್ಚುವರಿಯಾಗಿದೆ. ಅದೇ ರೀತಿ, ನಗರದ ಎಚ್‌ಎಎಲ್ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ಕೂಡ ವಾಡಿಕೆಗಿಂತ 262 ಮಿ.ಮೀ. ಹೆಚ್ಚುವರಿ ಮಳೆಯಾಗಿದ್ದು, 689 ಮಿ.ಮೀ. ದಾಖಲಾಗಿದೆ.
ನಗರದ ಇಡೀ ಮುಂಗಾರು ಹಂಗಾಮಿನ ವಾಡಿಕೆ ಮಳೆ 550 ಮಿ.ಮೀ. ಆಗಿದೆ. ಆದರೆ, ಆಗಸ್ಟ್ 15ರಿಂದ ಸೆ. 24ರ ಅವಧಿಯಲ್ಲೇ 677.3 ಮಿ.ಮೀ. ಮಳೆಯಾಗಿದೆ. ಅಲ್ಪಾವಧಿಯಲ್ಲಿ ಅತ್ಯಧಿಕ ಮಳೆ ಪರಿಣಾಮ ಹಲವು ಅವಾಂತರಗಳಿಗೆ ಇದು ಕಾರಣವಾಯಿತು. 800ರಿಂದ 1000 ಮರಗಳು ಧರೆಗುರುಳಿದವು ಹಾಗೂ ನಾಲ್ವರು ಬಲಿಯಾದರು.
ನಗರವು ಈ ಬಾರಿ ದಾಖಲೆ ಮಳೆಗೆ ಸಾಕ್ಷಿಯಾಗಿದ್ದರೆ, ಕರಾವಳಿ ಮತ್ತು ಮಲೆನಾಡಿನ ತಲಾ ಮೂರು ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಹಾವೇರಿಯಲ್ಲಿ ಈಗಲೂ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಒಟ್ಟಾರೆ ರಾಜ್ಯದಲ್ಲಿ ಜೂನ್ 1ರಿಂದ ಸೆಪ್ಟೆಂಬರ್ 20ರವರೆಗಿನ ವಾಡಿಕೆ ಮಳೆ 768.5 ಮಿ.ಮೀ. ಪೈಕಿ 708.9 ಮಿ.ಮೀ. ಬಿದ್ದಿದೆ.
* ಹವಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನೀಡಿದ ಅಂಕಿ-ಅಂಶಗಳ ಪ್ರಕಾರ 2005ರಿಂದ ಈಚೆಗೆ ನಗರದಲ್ಲಿ ಸೆಪ್ಟೆಂಬರ್‌ನಲ್ಲಿ ದಾಖಲಾದ ಮಳೆ ವಿವರ ಹೀಗಿದೆ.
-ವರ್ಷ ಮಳೆ ಪ್ರಮಾಣ (ಮಿ.ಮೀ)
-2005 181
-2006 45.3
-2007 271.4
-2008 140
-2009 345.8
-2010 190.3
-2011 111.1
-2012 68.4
-2013 352.6
-2014 319
-2015 189.8
-2016 33.2
-2017 376.7
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.