ಹೀರೆ ಬೆಳೆದವರ ಹಿರಿಹಿರಿ ಹಿಗ್ಗು..
Team Udayavani, Sep 25, 2017, 1:12 PM IST
ಇಳಿಜಾರಾದ ಗುಡ್ಡ. ಅಲ್ಲಿ ಒಂದಿಷ್ಟು ರಬ್ಬರ್ ಮರಗಳು. ಕೆಳಗೆ ತೆಂಗಿನ ಮರಗಳು. ಉಳಿದಿರುವ ಖಾಲಿ ಜಾಗದಲ್ಲಿ ಮಾಡಿರುವುದು ಹೀರೆ ಕೃಷಿ. ಮಳೆಗಾಲವಾದುದರಿಂದ ನೀರುಣಿಸುವ ಅಗತ್ಯವಿಲ್ಲ. ಕೆಲವು ದಿನ ಮಳೆ ದೂರ ಹೋದರೂ ಬರ ಸಹಿಷ್ಣುವಾದ ಹೀರೆ ಬಳ್ಳಿ ಅದಕ್ಕೆ ಹೊಂದಿಕೊಳ್ಳುತ್ತದೆ. ಗುಡ್ಡದಲ್ಲಿ ಬೆಳೆದರೂ ಹೀರೆ ಕೃಷಿ ಆ ಮಣ್ಣಿಗೆ ಒಗ್ಗಿಕೊಂಡಿದೆ. ಎರಡು ಅಡಿಗಿಂತಲೂ ಉದ್ದವಾದ ಭರ್ಜರಿ ಗಾತ್ರದ ಕಾಯಿಗಳನ್ನು ಬಿಟ್ಟಿದೆ. ಮೂರು ಕಾಯಿಗಳನ್ನು ಕೊಯ್ದು ತಂದು ತಕ್ಕಡಿಯಲ್ಲಿಟ್ಟರೆ ಭರ್ತಿ ಎರಡು ಕಿಲೋ ತೂಗುತ್ತದೆ. ಹೀಗೊಂದು ಕೃಷಿಯ ಪ್ರಯೋಗ ಮಾಡಿ ಗೆದ್ದಿರುವವರು ಕಾಶೀನಾಥ ಕಂಗಿನ್ನಾಯರು. ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಅವರಿಗೆ ಔಷಧ ಮಾರಾಟದ ಅಂಗಡಿ ಇದೆ. ಇಲ್ಲಿಂದ ಸ್ವಲ್ಪ ದೂರದ ಬ್ರಾಣೇರೆ ಬೈಲು ಎಂಬಲ್ಲಿ ಖಾಲಿ ಜಾಗ ಕೊಂಡುಕೊಂಡು ಕೃಷಿ ಮಾಡಿದ್ದಾರೆ. ಕೃಷಿಕ ಕುಟುಂಬದಿಂದಲೇ ಬಂದ ಮಡದಿ ಅರ್ಚನಾ, ಕೃಷಿ ಕಾಯಕದಲ್ಲಿ ಪತಿಗೆ ಸಾಥ್ ಕೊಡುತ್ತಾರೆ.
ಸಾಲಿನಿಂದ ಸಾಲಿಗೆ ಹತ್ತು ಅಡಿ ಅಂತರ ವಿರಿಸಿ, ಗಿಡದಿಂದ ಗಿಡಕ್ಕೆ ಆರು ಅಡಿ ಅಂತರವಿರಿಸಿರುವ ಕಾಶೀನಾಥರ ಕೃಷಿ ವಿಧಾನದಲ್ಲಿ ಒಂದು ಪುಟ್ಟ ಗುಟ್ಟೂ ಇದೆ. ಎರಡು ಸಾಲುಗಳ ನಡುವೆ ಇರುವ ಜಾಗದಲ್ಲಿ ಇನ್ನು ಸ್ವಲ್ಪ ಸಮಯದಲ್ಲಿ ಹಾಗಲ ಬೀಜ ಬಿತ್ತಿದ,ೆ ಹೀರೆ ಕೃಷಿ ಮುಗಿಯುವ ಹೊತ್ತಿಗೆ ಹಾಗಲ ಬಳ್ಳಿ ಹರಡಲು ಸಿದ್ಧವಾಗುತ್ತದೆ. ಈಗ ಹೀರೆ ಬಳ್ಳಿಗಾಗಿ ಹೆಣೆದಿರುವ ಹಂದರವೇ ಹಾಗಲಕ್ಕೂ ಸಾಕಾಗುತ್ತದೆ. ಹೆಚ್ಚಿನ ಹೀರೆ ಬೆಳೆಗಾರರು ಕಾಡಿನ ಕೊಂಬೆಗಳನ್ನು ಕಡಿದು ತಂದು ಹಂದರ ಹಾಕುತ್ತಾರೆ ಅಥವಾ ದುಬಾರಿ ಬೆಲೆಯ ನೈಲಾನ್ ಹಗ್ಗ ಬಳಸುತ್ತಾರೆ. ಇಲ್ಲಿ ಅಂಗಡಿಗಳಲ್ಲಿ ಪೊಟ್ಟಣ ಕಟ್ಟಲು ಉಪಯೋಗಿಸುವ ಪ್ಲಾಸ್ಟಿಕ್ ದಾರ ಮತ್ತು ನಿರರ್ಥಕ ವಿದ್ಯುತ್ ಕೇಬಲ್ ಬಳಸಿ ಅತೀ ಕಡಮೆ ವೆಚ್ಚದಲ್ಲಿ ಮಾದರಿ ಎನಿಸುವ ಹಂದರ ನಿರ್ಮಾಣ ಮಾಡಲಾಗಿದೆ.
ಕಾಶೀನಾಥರ ಕೃಷಿ ಬಹುತೇಕ ಸಾವಯವವನ್ನೇ ಆಧರಿಸಿದೆ. ಕೇವಲ ಸಗಣಿ ಮತ್ತು ಕಸಕಡ್ಡಿಗಳನ್ನು ಸುಟ್ಟು ತಯಾರಿಸಿದ ಸುಡುಮಣ್ಣನ್ನು ಸಾಲುಗಳಿಗೆ ತುಂಬಿಸಿ ಬೀಜ ಬಿತ್ತನೆ ಮಾಡಿದ್ದಾರೆ. ಬೆಂಗಳೂರಿನಿಂದ ತರಿಸಿದ ಶಿಷ್ಟ ಬೀಜೋಪಚಾರದ ಬೀಜಗಳಿಗೆ ಒಂದು ಬೀಜಕ್ಕೆ ಒಂದೂವರೆ ರೂಪಾಯಿ ಕೊಟ್ಟಿದ್ದಾರೆ. ಇಲ್ಲಿ ನೂರ ಎಂಭತ್ತು ಬೀಜಗಳನ್ನು ಬಿತ್ತಿದ್ದು ಎಲ್ಲವೂ ಗಿಡಗಳಾಗಿವೆ. ಪೋಷಕಾಂಶದ ಕೊರತೆಯಾಗದಂತೆ ಒಂದೂವರೆ ಚಮಚ ಪ್ರಮಾಣದಲ್ಲಿ ಸುಫಲಾ ರಸಗೊಬ್ಬರವನ್ನು ಒಮ್ಮೆ ನೀಡಿದ್ದು ಬಿಟ್ಟರೆ ಯಾವುದೇ ರಸಗೊಬ್ಬರ, ಕೀಟನಾಶಕ ಬಳಸಿಲ್ಲ. ಒಂದೂವರೆ ತಿಂಗಳಲ್ಲೇ ಮಾರುಕಟ್ಟೆಗೆ ಒಯ್ಯಲು ಕಾಯಿ ಲಭಿಸಿದೆ. ಅಚ್ಚ ಹಸಿರು ವರ್ಣದ ಆರೋಗ್ಯಕರ ಕಾಯಿಗಳು ಸಾವಯವದ ಸಣ್ತೀವನ್ನೇ ಹೆಚ್ಚು ಉಂಡಿರುವುದರಿಂದ ತುಂಬ ಮೃದುವಾಗಿವೆ. ಸುವಾಸನೆ, ಹೆಚ್ಚು ರುಚಿ, ಹಸಿಯಾಗಿ ತಿಂದರೂ ಸಿಹಿ, ಸಿಹಿಯಾಗಿವೆ. ಹೆಚ್ಚುವಾಗ ಇದರ ರುಚಿ ನೋಡಿ, ಕುದ್ದರೆ ಉಪ್ಪುನೀರಿನಲ್ಲಿ ಹೋಳುಗಳನ್ನು ಹಾಕಿಟ್ಟರೆ ಕಹಿ ಗುಣ ಮಾಯವಾಗುತ್ತದೆ ಎನ್ನುತ್ತಾರೆ ಕಾಶೀನಾಥರು.
ಸ್ಥಳೀಯ ಮಾರುಕಟ್ಟೆಯಲ್ಲಿ ಹೀರೆಯನ್ನು ಕೊಳ್ಳುವಾಗ ನಲುವತ್ತು ರೂಪಾಯಿ ಬೆಲೆ ಇದ್ದರೆ ಮಾರಾಟಕ್ಕೆ ಒಯ್ದರೆ ಇಪ್ಪತ್ತು ರೂಪಾಯಿ ಮಾತ್ರ ಸಿಕ್ಕಿತು. ಕಾಶೀನಾಥರು ಸ್ಥಳೀಯ ಮಾರುಕಟ್ಟೆಯನ್ನು ದಾಟಿ ಮಂಗಳೂರಿಗೆ ಕಳುಹಿಸಿದರು. ಅಲ್ಲಿ ಕಿಲೋಗೆ ಮೂವತ್ತೆ„ದು ರೂಪಾಯಿ ಲಭಿಸಿದೆ. ಅವರು ಇದರ ಕೃಷಿಗೆ ತೊಡಗಿಸಿದ ಆರೇಳು ಸಾವಿರ ರೂ. ಈಗಾಗಲೇ ಮರಳಿದೆ. ಮೂರು ದಿವಸಗಳಿಗೊಮ್ಮೆ ಕಾಯಿಗಳು ಕೊಯ್ಲಿಗೆ ಸಿಗುತ್ತವೆ. ಇನ್ನು ಬರುವುದೆಲ್ಲವೂ ಲಾಭದ ಲೆಕ್ಕಾಚಾರ. ಬೆಳೆಗೆ ನಲುಗಳ ಬಾಧೆ ಕಾಣಿಸಿದೆ. ಇದಕ್ಕಾಗಿ ಅಲ್ಲಲ್ಲಿ ಹಳೆಯ ಪ್ಲಾಸ್ಟಿಕ್ ಚೀಲಗಳನ್ನು ತೂಗಾಡಿಸಿದರೆ ನಲು ಬಳಿಗೆ ಸುಳಿಯುವುದಿಲ್ಲ ಎನ್ನುವ ಪರಿಹಾರವನ್ನೂ ಅವರು ಕಂಡುಕೊಂಡಿದ್ದಾರೆ. ಉಳಿದ ತರಕಾರಿಗಳಿಗಿಂತ ಹೀರೆ ಸುಲಭವಾದ ಕೃಷಿ. ಬಂಡವಾಳ ಕಡಿಮೆ, ಅಧಿಕ ಆದಾಯ. ಗುಡ್ಡದಲ್ಲಿಯೂ ಬೆಳೆಯಬಹುದೆಂಬುದು ಇಲ್ಲಿ ಸಾಬೀತಾಗಿದೆ. ಮುಂದಿನ ವರ್ಷ ಗುಡ್ಡದ ಬಹುತೇಕ ಜಾಗದಲ್ಲಿ ಇದನ್ನು ಬೆಳೆಯಬಹುದೆಂಬ ಯೋಚನೆಗೆ ಇಲ್ಲಿ ಧೈರ್ಯ ಮೂಡಿದೆ ಎನ್ನುತ್ತಾರೆ ಕಾಶೀನಾಥ್.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.