ಫರಂಗಿಪೇಟೆಯಲ್ಲಿ ರೌಡಿ ಗ್ಯಾಂಗ್‌ವಾರ್
Team Udayavani, Sep 27, 2017, 10:03 AM IST
ಬಂಟ್ವಾಳ /ಮಂಗಳೂರು : ನಗರದ ಹೊರ ವಲಯದಲ್ಲಿ ಸೋಮವಾರ ರಾತ್ರಿ ರೌಡಿಗಳು ಮಚ್ಚು-ಲಾಂಗ್‌ಗಳಿಂದ ಅಟ್ಟಹಾಸ ಮೆರೆದಿದ್ದಾರೆ. ಬಿ.ಸಿ. ರೋಡ್‌ನಿಂದ ಮಂಗಳೂರಿಗೆ ಬರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಫರಂಗಿಪೇಟೆ ಪೊಲೀಸ್ ಔಟ್‌ಪೋಸ್ಟ್ ಸಮೀಪ ಸೋಮವಾರ ತಡರಾತ್ರಿ ಎರಡು ರೌಡಿ ಗುಂಪುಗಳ ನಡುವೆ ನಡೆದ ಗ್ಯಾಂಗ್‌ವಾರ್‌ನಲ್ಲಿ ಇಬ್ಬರು ಬರ್ಬರವಾಗಿ ಹತ್ಯೆಗೀಡಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೊಲೆಯಾದವರು ಮಂಗಳೂರು ಹೊರ ವಲಯದ ಅಡ್ಯಾರ್ ನಿವಾಸಿಗಳಾದ ಝಿಯಾ (31) ಮತ್ತು ಫಯಾಝ್ (32). ಮಾರಕಾಸ್ತ್ರಗಳಿಂದ ನಡೆದ ಈ ದಾಳಿಯಲ್ಲಿ ಫಯಾಝ್ ಸ್ಥಳದಲ್ಲಿಯೇ ಮೃತಪಟ್ಟರೆ, ಝಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿಯೇ ಸಾವಿಗೀಡಾಗಿದ್ದಾನೆ.
ರೌಡಿ ಕಾಳಗದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅನೀಷ್, ಮುಸ್ತಾಕ್ ಹಾಗೂ ಅಜ್ಮಲ್ ಅವರನ್ನು ಈಗ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಫಯಾಝ್ ಹಾಗೂ ಆತನ ಬೆಂಬಲಿಗರ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಪರಾರಿ ಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆಗೆ ವಿಶೇಷ ಪೊಲೀಸರ ತಂಡವನ್ನು ರಚಿಸಲಾಗಿದೆ. ರೌಡಿಗಳ ನಡುವಿನ ಈ ಗ್ಯಾಂಗ್‌ವಾರ್‌ಗೆ ಹಳೇ ದ್ವೇಷವೇ ಕಾರಣ ಎನ್ನಲಾಗಿದೆ.
ಘಟನೆ ಹಿನ್ನೆಲೆ
ಸೋಮವಾರ ರಾತ್ರಿ ಸುಮಾರು 10 ಗಂಟೆಗೆ ಫೈಝಲ್‌ನಗರದ ಮಹಮ್ಮದ್‌ಗೆ ಮಾರಿಪಳ್ಳ ನಿವಾಸಿಯಾದ ಅಪ್ಪಿ ಎಂಬಾತ ಮೊಬೈಲ್ ಕರೆ ಮಾಡಿ ‘ನನ್ನ ಮೇಲೆ ಇಲ್ಲಿನ ಗ್ಯಾಂಗ್‌ವೊಂದು ಹಲ್ಲೆ ನಡೆಸುವುದಕ್ಕೆ ಯತ್ನಿಸಿದೆ’ ಎಂದು ತಿಳಿಸಿದ್ದು, ಈ ವಿಚಾರವನ್ನು ಮಹಮ್ಮದ್ ತನ್ನ ಸ್ನೇಹಿತ ಹಾಗೂ ಗ್ಯಾಂಗ್ ನಾಯಕ ಝಿಯಾ ಯಾನೆ ರಿಯಾಜ್‌ಗೆ
ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಝಿಯಾ ಹಾಗೂ ತನ್ನ ನಾಲ್ವರು ಬೆಂಬಲಿಗರೊಂದಿಗೆ ಫಯಾಝ್ಗೆ ಸೇರಿದ ಸ್ವಿಫ್ಟ್ ಕಾರಿನಲ್ಲಿ ರಾತ್ರಿ ಸುಮಾರು 11ರ ಹೊತ್ತಿಗೆ ಅಡ್ಯಾರ್ ಕಡೆಯಿಂದ ಫರಂಗಿ ಪೇಟೆ ಸಮೀಪದ ಮಾರಿಪಳ್ಳದತ್ತ ಹೊರಟು ಬಂದಿದ್ದರು. ಝಿಯಾ ತಂಡದಲ್ಲಿದ್ದ ಫಯಾಝ್ ಕಾರು ಚಲಾಯಿಸುತ್ತಿದ್ದ. ಇದೇ ಸಂದರ್ಭದಲ್ಲಿ ಫೈಝಲ್‌ನಗರದ ಮತ್ತೂಂದು ರೌಡಿಗಳ ತಂಡ ಇನ್ನೋವಾ ಕಾರಿನಲ್ಲಿ ಝಿಯಾ ಮತ್ತು ಬೆಂಬಲಿಗರ ಕಾರನ್ನು ಹಿಂಬಾಲಿಸಿಕೊಂಡು ಅದೇ ಮಾರ್ಗದಲ್ಲಿ ಬಂದಿದೆ. ತಮ್ಮ ಕಾರನ್ನು ಹಿಂಬಾಲಿಸುತ್ತಿರುವುದನ್ನು ಕಂಡ ಫಯಾಝ್ ತತ್‌ಕ್ಷಣ ಫರಂಗಿಪೇಟೆಯಲ್ಲಿರುವ ಪೊಲೀಸ್ ಹೊರಠಾಣೆ ಬಳಿ ಮತ್ತೆ ಮಂಗಳೂರಿನತ್ತ ಕಾರನ್ನು ತಿರುಗಿಸುವುದಕ್ಕೆ ಪ್ರಯತ್ನಿಸಿದ. ಆಗ ಫಯಾಝ್ ಕಾರು ನಿಯಂತ್ರಣ ತಪ್ಪಿ ಪಿಕಪ್‌ವೊಂದಕ್ಕೆ ಢಿಕ್ಕಿ ಹೊಡೆಯಿತು. ಇದೇ ಸಂದರ್ಭ ಬಳಸಿಕೊಂಡ ಇನ್ನೊಂದು ತಂಡವು ಫಯಾಝ್, ಝಿಯಾ ಸಹಿತ ಕಾರಿನಲ್ಲಿ ಕುಳಿತಿದ್ದ ಐವರ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿತು.
ಏಕಾಏಕಿ ನಡೆದ ದಾಳಿ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಫಯಾಝ್ ಸ್ಥಳದಲ್ಲೇ ಮೃತ ಪಟ್ಟ. ತೀವ್ರವಾಗಿ ಗಾಯಗೊಂಡಿದ್ದ ಝಿಯಾ ಕೂಡ ಆಸ್ಪತ್ರೆಯಲ್ಲಿ ಸೋಮವಾರ ತಡರಾತ್ರಿಯೇ ಮೃತಪಟ್ಟಿದ್ದಾನೆ.
ಈ ಮಧ್ಯೆ ಎರಡು ರೌಡಿ ಗುಂಪುಗಳ ನಡುವೆ ಕಾಳಗ ನಡೆದಿರುವ ವಿಷಯ ತಿಳಿಯುತ್ತಿದ್ದಂತೆ ಫರಂಗಿಪೇಟೆಯ ಪೊಲೀಸ್ ಹೊರಠಾಣೆಯಲ್ಲಿ ಕರ್ತವ್ಯನಿರತರಾಗಿದ್ದ ಸಿಬಂದಿ ಸುಬ್ರಹ್ಮಣ್ಯ ಅವರು ತತ್‌ಕ್ಷಣ ಸ್ಥಳಕ್ಕೆ ಧಾವಿಸಿ ಬಂದಿದ್ದು, ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಿದ್ದರು. ಕೂಡಲೇ ಪೊಲೀಸ್ ಉನ್ನತ ಅಧಿಕಾರಿಗಳಾದ ಎಸ್‌ಪಿ ಸುಧೀರ್ ಕುಮಾರ್ ರೆಡ್ಡಿ, ಎಎಸ್ಪಿ ಅರುಣ್, ಇನ್ಸ್‌ಪೆಕ್ಟರ್ ಪ್ರಕಾಶ್, ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಉಮೇಶ್ ಕುಮಾರ್ ಕೂಡ ಸ್ಥಳಕ್ಕೆ ಧಾವಿಸಿ ಬಂದು ಪರಿಸ್ಥಿತಿ ಅವಲೋಕನ ನಡೆಸಿದರು.
ಟ್ರಾಫಿಕ್ ಜಾಮ್
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಾಗಿರುವ ಕಾರಣ ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಕೂಡ ಜಮಾಯಿಸಿ ಟ್ರಾಫಿಕ್ ಜಾಮ್ ಆಗಿತ್ತು. ಅಲ್ಲದೆ ಫರಂಗಿಪೇಟೆಯು ಸೂಕ್ಷ್ಮ ಪ್ರದೇಶವಾಗಿರುವ ಕಾರಣ ಈ ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಕೂಡ ನಿರ್ಮಾಣವಾಗಿತ್ತು. ಆದರೆ ದೊಡ್ಡ ಮಟ್ಟದ ರೌಡಿಗಳ ನಡುವೆ ಗ್ಯಾಂಗ್‌ವಾರ್ ಆಗಿದ್ದರು ಕೂಡ ಎಸ್‌ಪಿ ಸಹಿತ ಉನ್ನತ ಹಂತದ ಪೊಲೀಸರು ಸ್ಥಳದಲ್ಲಿ ಹಾಜರಾಗಿದ್ದ ಕಾರಣ ಪರಿಸ್ಥಿತಿಯನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾದರು.
ಸುಳಿವು ಲಭ್ಯ
ಫರಂಗಿಪೇಟೆಯಲ್ಲಿ ನಡೆದ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಸುಳಿವು ಲಭ್ಯವಾಗಿದ್ದು ಶೀಘ್ರದಲ್ಲೇ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು. ಪೊಲೀಸರ ವಿಶೇಷ ತನಿಖಾ ತಂಡವು ಆರೋಪಿಗಳ ಬಂಧನಕ್ಕೆ ಈಗಾಗಲೇ ಬಲೆ ಬೀಸಿದ್ದು, ಶೀಘ್ರದಲ್ಲೇ ಬಂಧನವಾಗುವ ವಿಶ್ವಾಸವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟ ಪಡಿಸಿದ್ದಾರೆ.
ಹಳೇ ದ್ವೇಷ ಕಾರಣ
ಝಿಯಾ ಹೆಸರು ರೌಡಿಗಳ ಪಟ್ಟಿಯಲ್ಲಿದ್ದು, ಮಂಗಳೂರು ಗ್ರಾಮಾಂತರ ಠಾಣೆ ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಕೊಲೆ ಆರೋಪ ಪ್ರಕರಣ ದಾಖಲಾಗಿವೆ. ಈ ಎರಡೂ ಗುಂಪಿನಲ್ಲಿದ್ದ ಕೆಲವರ ಮೇಲೂ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪಗಳಿದ್ದು, ಕ್ರಿಮಿನಲ್ ಪ್ರಕರಣ ಕೂಡ ಇದೆ. ಹಲ್ಲೆ ನಡೆಸಿದವರು ಹಾಗೂ ಹಲ್ಲೆಗೊಳಗಾದವರು ಹಿಂದೆ ಗೆಳೆಯರಾಗಿದ್ದು ಬಳಿಕ ಗಾಂಜಾ ವ್ಯವಹಾರದಲ್ಲಿ ತಲೆದೋರಿದ ವೈಷಮ್ಯದಿಂದ ಪರಸ್ಪರ ವಿರೋಧಿಗಳಾಗಿದ್ದರು.
ಮೃತಪಟ್ಟ ಝಿಯಾ ಗ್ಯಾಂಗಿನ ಸದಸ್ಯ ಕಣ್ಣೂರು ಪುತ್ತ ಕೊಲೆ 2012ರಲ್ಲಿ ನಡೆದಿದ್ದು, ಇದರಲ್ಲಿ ಇಜಾಝ್ ಕಣ್ಣೂರು ಆರೋಪಿಯಾಗಿದ್ದ. 2014ರ ಅ. 31ರಂದು ಝಿಯಾ ನೇತೃತ್ವದ ತಂಡ ಕಣ್ಣೂರಿನಲ್ಲಿ ಸೆಲೂನಿಗೆ ನುಗ್ಗಿ ಇಜಾಜ್‌ನನ್ನು ಕೊಲೆ ಮಾಡಿತ್ತು. ಈಗ ಝಿಯಾ ಕೂಡ ಅದೇ ರೀತಿ ಗ್ಯಾಂಗ್‌ವಾರ್‌ಗೆ ಬಲಿಯಾಗಿದ್ದು, ಹಳೇ ದ್ವೇಷದ ಪ್ರತೀಕಾರವಾಗಿ ಈ ಕೃತ್ಯ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ಹಂತದ ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿಗಳ ಪತ್ತೆಗೆ ಪೊಲೀಸ್ ತಂಡ
ಕೊಲೆ ಪ್ರಕರಣ ಆಗಿರುವ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಜಿಲ್ಲಾ ಮತ್ತು ಮಂಗಳೂರು ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಪೊಲೀಸರನ್ನು ಒಳಗೊಂಡ ಜಂಟಿ ತನಿಖಾ ತಂಡವನ್ನು ರಚನೆ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ನಗರ ಅಪರಾಧ ವಿಭಾಗ ಎಸಿಪಿ, ಸಿಸಿಬಿ ಇನ್‌ಸ್ಪೆಕ್ಟರ್ ಮತ್ತು ಸಿಬಂದಿ, ಮಂಗಳೂರು ಗ್ರಾಮಾಂತರ ಇನ್‌ಸ್ಪೆಕ್ಟರ್, ಬಂಟ್ವಾಳ ಇನ್‌ಸ್ಪೆಕ್ಟರ್, ಡಿಸಿಐಬಿ ಇನ್‌ಸ್ಪೆಕ್ಟರ್, ಜಿಲ್ಲಾ ಎಸ್ಪಿ ವ್ಯಾಪ್ತಿಯ 4 ಎಸ್‌ಐಗಳು, ನಗರ ವ್ಯಾಪ್ತಿಯ 4 ಎಸ್‌ಐಗಳು ಈ ಜಂಟಿ ತನಿಖಾ ತಂಡದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Hoax Call: ಈ ವರ್ಷದಲ್ಲಿ 994 ವಿಮಾನಕ್ಕೆ ಹುಸಿ ಬಾಂಬ್ ಕರೆ ಬಂದಿದೆ: ಸರಕಾರ
Chennai: ಐಶ್ವರ್ಯ ರಜನಿಕಾಂತ್, ಧನುಷ್‌ಗೆ ವಿಚ್ಛೇದನ ನೀಡಿದ ಕೋರ್ಟ್
information Technology Appointment: ಬೆಂಗಳೂರಲ್ಲೇ ಹೆಚ್ಚಿನ ಉದ್ಯೋಗ ನಿರೀಕ್ಷೆ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.