ಮಿಸ್ ವ್ಹೀಲ್‌ಚೇರ್ ಇಂಡಿಯಾ!
Team Udayavani, Sep 27, 2017, 12:26 PM IST
ನೀಳ ಮೂಗು, ದಾಳಿಂಬೆ ಹಲ್ಲು, ಮೀನಿನಂಥ ಕಣ್ಣುಗಳು, ಬಳುಕುವ ಸೊಂಟ… ಹೀಗೆ “ವಿಶ್ವ ಸುಂದರಿ’ ಅಂತ ಕರೆಸಿಕೊಳ್ಳಲು ಹಲವಾರು ಮಾನದಂಡಗಳಿವೆ. ಆದರೆ, ಅಂಥ ಎಲ್ಲಾ ಮಾನದಂಡಗಳನ್ನೂ ಮೀರಿ ನಿಂತ ಸುಂದರಿ ಈಕೆ. ರ್‍ಯಾಂಪ್ ಮೇಲೆ ಬಳುಕುತ್ತಾ ಹೆಜ್ಜೆ ಹಾಕುವ ಸೌಭಾಗ್ಯ ಈಕೆಗಿಲ್ಲ. ನಡೆಯುವ ಕಾಲುಗಳನ್ನೇ ಕಿತ್ತುಕೊಂಡ ವಿಧಿಯ ಬಗ್ಗೆ ಇವಳಿಗೇನೂ ಮುನಿಸಿದ್ದಂತಿಲ್ಲ. ವ್ಹೀಲ್‌ಚೇರ್ ಮೇಲೆ ಕುಳಿತೇ “ವಿಶ್ವ ಸುಂದರಿ’ಯಾಗೋ ಕನಸಿಗೆ ಹಾತೊರೆದ ಸುಂದರ ಹೂವಿನ ಕತೆಯನ್ನು ಹೃದಯಕ್ಕೆ ತುಂಬಿಕೊಳ್ಳಿ…
ಆಕೆಗೆ 19 ವರ್ಷ. ಹೇಳಿ ಕೇಳಿ ಅದು ಕನಸು ಕಾಣುವ ವಯಸ್ಸು. ಅವಳಲ್ಲೂ ಬೆಟ್ಟದಷ್ಟು ಕನಸುಗಳಿದ್ದವು. ಬ್ಯಾಚುಲರ್ ಆಫ್ ಫಿಸಿಯೋಥೆರಪಿಯ ಮೊದಲ ವರ್ಷದಲ್ಲಿದ್ದಾಗ ಅವಳ ಕನಸಿನ ಓಟಕ್ಕೆ ಬಲವಾದ ಪೆಟ್ಟು ಬಿತ್ತು. ಡಾಕ್ಟರ್ ಆಗಬೇಕೆಂದಿದ್ದ ಪ್ರಿಯಾ ಭಾರ್ಗವ ರೋಗವೊಂದಕ್ಕೆ ತುತ್ತಾದಳು.
ಗುಣಪಡಿಸಲಾಗದ ಆ ರೋಗಕ್ಕೆ ಡಾಕ್ಟರ್‌ಗಳು ಕೊಟ್ಟ ಹೆಸರು “ಸಿಸ್ಟಮಿಕ್ ಲುಪಸ್ ಎರಿಥೆಮಾಟೋಸಸ್’. ಅದರಿಂದ ಕಾಲುಗಳು ಸ್ವಾಧೀನ ಕಳೆದುಕೊಂಡು, ಜೀವನ ಪೂರ್ತಿ ವ್ಹೀಲ್‌ಚೇರ್ ಅನ್ನೇ ಅಪ್ಪಿಕೊಳ್ಳುವ ಸ್ಥಿತಿ ಬಂತು. ಮೊದಲಿಂದಲೂ ಆಲ್‌ರೌಂಡರ್ ಎನಿಸಿಕೊಂಡಿದ್ದ ಹುಡುಗಿ ಪ್ರಿಯಾ. ಫಿಸಿಯೋ ಓದುತ್ತಿದ್ದಾಗ ಅವಳ ಮುಖ, ತೋಳು ಮತ್ತು ಕಾಲಿನ ಮೇಲೆ ನವೆ, ಕಜ್ಜಿ ಮೂಡತೊಡಗಿದವು. ಚಿಟ್ಟೆಯಾಕಾರದಲ್ಲಿ ರ್ಯಾಶಸ್‌ಗಳನ್ನು ವೈದ್ಯರು ಮಲೇರಿಯಾ, ಡೆಂ à ಎಂದುಕೊಂಡು ಚಿಕಿತ್ಸೆ ನೀಡಿದರು. ಆ ತಪ್ಪು ಚಿಕಿತ್ಸೆಗಳಿಂದ ದೇಹ ಇನ್ನಷ್ಟು ಕುಗ್ಗಿ ಹೋಯ್ತು. ಕೊನೆಗೆ ಲುಪಸ್ ಬಗ್ಗೆ ತಿಳಿದಿದ್ದ ವೈದ್ಯರೊಬ್ಬರು ಕಾಯಿಲೆಯ ತೀವ್ರತೆಯನ್ನು ವಿವರಿಸಿದರು. ಆಗ ಪ್ರಿಯಾಳ ತಂದೆ ನಾಗಾಲ್ಯಾಂಡ್‌ನಲ್ಲಿ ಸೇನೆಯಲ್ಲಿದ್ದರು. ಇಡೀ ಕುಟುಂಬಕ್ಕೆ ಹೃದಯಾಘಾತವಾದಂಥ ಶಾಕ್. ದೇಹದ ಪ್ರಮುಖ ಅಂಗಗಳ ಮೇಲೆ ಲುಪಸ್ ಅಟ್ಯಾಕ್ ಆಗುವುದು ತುಂಬಾ ಅಪರೂಪ. ಹಾಗಾಗಿ, ಪ್ರಿಯಾ ಪದೇಪದೆ ತಪಾಸಣೆ, ಬ್ಲಿಡ್ ಟೆಸ್ಟ್‌ಗೆ ಒಳಪಡಬೇಕಾಯ್ತು. ಚಿಕಿತ್ಸೆಯ ಅಡ್ಡ ಪರಿಣಾಮಗಳು ಮತ್ತಷ್ಟು ಭಯಾನಕವಾಗಿದ್ದವು.
ವೈದ್ಯ ವಿದ್ಯಾರ್ಥಿನಿಯಾಗಿದ್ದ ಪ್ರಿಯಾ ಧೈರ್ಯಗೆಡಲಿಲ್ಲ. ಪೆಥಾಲಜಿ, ಅನಾಟಮಿ ಪುಸ್ತಕಗಳಲ್ಲಿ ಲುಪಸ್ ಬಗ್ಗೆ ಇದ್ದ ಪ್ರತಿ ವಿಷಯವನ್ನೂ ಓದಿದಳು. ಚಿಕಿತ್ಸೆ, ಮತ್ತದರ ಅಡ್ಡ ಪರಿಣಾಮಗಳ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿದಳು. ಆದರೆ, ಪರಿಸ್ಥಿತಿ ಹದಗೆಡುತ್ತಲೇ ಹೋಯ್ತು. ಯಾವ ಔಷಧವೂ ಸಹಾಯಕ್ಕೆ ಬರದಿದ್ದಾಗ, ಸ್ಟಿರಾಯ್ಡ ಮೊರೆ ಹೋಗಬೇಕಾಯ್ತು. ಅದರ ಸೈಡ್ ಎಫೆಕ್ಟ್ನಿಂದಾಗಿ ವೈದ್ಯರು ಕೀಮೋಥೆರಪಿಯ ಡ್ರಗ್ಸ್ (ಮೆಥೊಟ್ರೆಕ್ಸೇಟ್) ಕೊಟ್ಟರು.
ಪರಿಣಾಮ, ಆಕೆಯ ನೀಳ ಕೂದಲು ಉದುರತೊಡಗಿತು. ಕನ್ನಡಿ ನೋಡುವುದನ್ನೇ ನಿಲ್ಲಿಸಿಬಿಟ್ಟಳು ಪ್ರಿಯಾ. ಕೂದಲುದುರಿ ಬೋಳಾದ ಜಾಗಕ್ಕೆ ಬ್ಲಾಕ್ ಮಾರ್ಕರ್‌ನಿಂದ ಬಣ್ಣ ಹಚ್ಚಿದಳು. ಜನ ನಗಬಾರದೆಂದು ತಲೆಗೆ ಶಾಲು, ಟೊಪ್ಪಿ ಸುತ್ತಿಕೊಂಡಳು. ಆದರೂ ಜನ ಹೀಯಾಳಿಸಿದರು. ಒಂದೆರಡು ವಾರಗಳ ಚಿಕಿತ್ಸೆ ನಂತರ ಆಕೆ ಕಾಲೇಜಿಗೆ ಮರಳಿದಳು. ಆದರೆ, ನಿಧಾನಕ್ಕೆ ಆಕೆಯ ಕಾಲು ಸ್ವಾಧೀನ ಕಳೆದುಕೊಂಡಿತು. ಮೂತ್ರಕೋಶ ಕೂಡ ಹದಗೆಟ್ಟಿತ್ತು. ಅಂಗವಿಕಲರಿಗೆ ಆ ಕಾಲೇಜಿನಲ್ಲಿ ಯಾವುದೇ ವಿಶೇಷ ಸೌಲಭ್ಯಗಳಿರಲಿಲ್ಲ. ಟಾಯ್ಲೆಟ್ ಕೂಡ ಇಂಡಿಯನ್ ಶೈಲಿಯದ್ದು. ಆಕೆಯ ಹೆತ್ತವರು ಮಗುವಿನಂತೆ ಅವಳನ್ನು ಎತ್ತಿಕೊಂಡೇ ಎಕ್ಸಾಂ ಹಾಲ್‌ಗೆ ಕರೆತಂದರು. ಚಿಕಿತ್ಸೆ ಕಾರಣದಿಂದ ಕ್ಲಾಸ್‌ಗೆ ಹೋಗಿರಲಿಲ್ಲ. ಪರೀಕ್ಷೆಯಲ್ಲಿ ಏನನ್ನೂ ಬರೆಯಲಾಗದೆ, ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಳಾಕೆ. ಕೊನೆಗೂ ಅವಳಿಷ್ಟದ ಫಿಸಿಯೋಥೆರಪಿ ಕೋರ್ಸ್‌ನ್ನು ಅರ್ಧಕ್ಕೆ ನಿಲ್ಲಿಸಬೇಕಾಯ್ತು.
ಮಗಳ ಚಿಕಿತ್ಸೆಗಾಗಿ ಅವರ ತಂದೆ ದೆಹಲಿಗೆ ವರ್ಗವಾದರು. ಆಕೆಯ ಕುಟುಂಬ ನೋಯ್ಡಾಕ್ಕೆ ಬಂತು. ಆರ್ಮಿ ಆಸ್ಪತ್ರೆಗೆ ಪ್ರಿಯಾ ಅಡ್ಮಿಟ್ ಆದಳು. ಮೂರು ತಿಂಗಳಲ್ಲಿ ಐದು ಸರ್ಜರಿ! ಪ್ರಿಯಾ ಸೋದರಿ ಒಳ್ಳೆಯ ಸಂಬಳದ ಕೆಲಸ ಬಿಟ್ಟು ಈಕೆಯ ಆರೈಕೆಗೆ ನಿಂತಳು. ಅಮ್ಮ ಕೆಲಸಕ್ಕೆ ಹೋಗಲೇಬೇಕಿತ್ತು. ಪ್ರಿಯಾ ದೈಹಿಕವಾಗಿ ನೋವುಂಡರೆ, ಆಕೆಯ ಕುಟುಂಬ ಮಾನಸಿಕ, ಸಾಮಾಜಿಕ, ಆರ್ಥಿಕ ಯಾತನೆಗೊಳಗಾಯ್ತು.
ಅಕ್ಕನ ಮದುವೆಯ ನಂತರ ಪ್ರಿಯಾ ಒಂಟಿಯಾದಳು. ಏನನ್ನಾದರೂ ಕಲಿಯಬೇಕೆಂಬ ಹಠದಲ್ಲಿ, ಪೇಂಟಿಂಗ್ ಮತ್ತು ಕ್ರಾಫ್ಟ್ವರ್ಕ್‌ಗಳನ್ನು ಯುಟ್ಯೂಬ್ ನೋಡಿಯೇ ಕಲಿತಳು. ಕ್ರಾಫ್ಟ್ ಕ್ಲಾಸ್‌ಗಳನ್ನು ನಡೆಸತೊಡಗಿದಳು. ಓದನ್ನು ಅರ್ಧಕ್ಕೆ ನಿಲ್ಲಿಸಿದ ಕೊರಗಿನ್ನೂ ಹಾಗೇ ಇತ್ತು. ಮುಂದೆ ಇಗ್ನೊ ದೂರಶಿಕ್ಷಣದ ಮೂಲಕ ಬಿ.ಸಿ.ಎ. ಮತ್ತು ಎಂ.ಸಿ.ಎ. ಪದವಿ ಪಡೆದಳು. ಎಂ.ಸಿ.ಎ.ನಲ್ಲಿ ಆಕೆ ನೊಯ್ಡಾ ಇಗ್ನೊà ಸೆಂಟರ್‌ಗೆ ಮೊದಲಿಗಳಾಗಿದ್ದಳು!
ಅಷ್ಟರಲ್ಲಾಗಲೇ “ಮಿಸ್ ವ್ಹೀಲ್‌ಚೇರ್ ಇಂಡಿಯಾ’ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಸಲಹೆ ಬಂದಿತ್ತು. ಓದಿನ ಕಾರಣದಿಂದ ಪ್ರಿಯಾ ಆ ಕಡೆಗೆ ಗಮನ ಹರಿಸಿರಲಿಲ್ಲ. ಕೊನೆಗೆ 2015ರಲ್ಲಿ, ಸ್ಪರ್ಧೆಗೆ 2 ಸಾಧಾರಣ ಫೋಟೊ ಮತ್ತು ಬಯೋಡೆಟಾ ಕಳಿಸಿದ್ದಳು. ಕನ್ನಡಿ ನೋಡುವುದನ್ನೇ ಬಿಟ್ಟಿದ್ದವಳು ಬ್ಯೂಟಿ ಸ್ಪರ್ಧೆ ಗೆಲ್ಲುವುದೇ ಎಂದು ಆಕೆ ಮನಸ್ಸಲ್ಲೇ ನಕ್ಕಿದ್ದಳು. ಆದರೆ, ಇನ್ನಷ್ಟು ಫೋಟೊ ಕಳಿಸಿ ಎಂದು ಕರೆ ಬಂದಾಗ, ಮೊದಲು ಹಿಂಜರಿಕೆಯಾಯ್ತು. ಆಗ ಅವಳ ನೆರವಿಗೆ ಬಂದವರು ಅವಳ ಕ್ರಾಫ್ಟ್ ವಿದ್ಯಾರ್ಥಿಗಳು. ಅವರಿಂದ ಮೇಕಪ್ ಮಾಡಿಸಿಕೊಳ್ಳುತ್ತಿದ್ದವಳು, ನಿಧಾನಕ್ಕೆ ಮೊದಲಿನ ಸೌಂದರ್ಯಪ್ರಜ್ಞೆ ಮೂಡಿಸಿಕೊಂಡಳು.
ಆ ಸ್ಪರ್ಧೆಯ ಕೊನೆಯ ಸುತ್ತಿಗೆ ಆಯ್ಕೆಯಾದ ಏಳು ಜನರಲ್ಲಿ ಪ್ರಿಯಾಳೂ ಇದ್ದಳು. ನಿರೀಕ್ಷೆಯಂತೆ ಆಕೆಯೇ “ಮಿಸ್ ವ್ಹೀಲ್‌ಚೇರ್ ಇಂಡಿಯಾ’ ಗರಿಯನ್ನು ಮುಡಿಗೇರಿಸಿಕೊಂಡಳು. “ನಿಮ್ಮ ಅಂಗವೈಕಲ್ಯ ನಿಮ್ಮನ್ನು ನಿರ್ಧರಿಸುವುದಿಲ್ಲ. ಮಾನಸಿಕ ಸ್ಥೈರ್ಯದಿಂದ ದೈಹಿಕ ನ್ಯೂನತೆಗಳನ್ನು ಮೆಟ್ಟಿ ನಿಲ್ಲುತ್ತೇನೆ ಎನ್ನುವವರಿಗೆ ಯಾವ ಪರ್ವತವೂ ಹತ್ತಲಾರದ್ದಲ್ಲ’ ಎನ್ನುತ್ತಾರೆ ಪ್ರಿಯಾ ಭಾರ್ಗವ.
ಸೌಂದರ್ಯ ಸ್ಪರ್ಧೆಗೆಂದು ಆಕೆ ಯಾವ ಟ್ರೇನಿಂಗ್ ಪಡೆದಿಲ್ಲ. ನಗುಮೊಗದ ಆಕೆಗೆ ಆತ್ಮವಿಶ್ವಾಸವೇ ಶ್ರೀರಕ್ಷೆ. ಹಾnಂ, ಮುಂದಿನ ತಿಂಗಳು ಪೋಲೆಂಡ್‌ನಲ್ಲಿ ನಡೆಯುವ “ಮಿಸ್ ವ್ಹೀಲ್‌ಚೇರ್ ವರ್ಲ್ಡ್’ ಸ್ಪರ್ಧೆಯಲ್ಲಿ ಪ್ರಿಯಾ ಭಾಗವಹಿಸಲಿದ್ದಾಳೆ. ಯಶಸ್ಸು ಆಕೆಯದ್ದೇ ಆಗಲಿ ಎಂದು ಹಾರೈಸೋಣ.
ಬಾತ್‌ರೂಮ್‌ನಲ್ಲಿ ಮರದ ತುಂಡಿನಂತೆ ಬಿದ್ದಿದ್ದೆ..!
“ನಾನೆಂಥ ದಯನೀಯ ಸ್ಥಿತಿ ತಲುಪಿದ್ದೇ ಗೊತ್ತಾ? ಒಂದು ದಿನ ವಾಶ್‌ರೂಮ್‌ಗೆ ಹೋದವಳಿಗೆ ವಾಪಸ್ ಬರಲಾಗಲಿಲ್ಲ. ಅಲ್ಲೇ ಮೂರು ಗಂಟೆ ಇದ್ದೆ. ತುಂಬಾ ಚಳಿ ಬೇರೆ ಆಗುತ್ತಿತ್ತು. ಅಮ್ಮ ಮನೆಗೆ ವಾಪಸ್ ಬಂದಾಗ ನಾನ್ ಬಾತ್‌ರೂಮಿನೊಳಗೆ ಮರದ ತುಂಡಿನಂತೆ ಬಿದ್ದುಕೊಂಡಿದ್ದೆ! ತಕ್ಷಣ ನನ್ನನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ, ಅಲ್ಲಿನ ಡಾಕ್ಟರ್ಗಳೂ ನನಗೆ ಸರಿಯಾಗಿ ಚಿಕಿತ್ಸೆ ಕೊಡದೆ ನಿರ್ಲಕ್ಷಿಸಿದರು. ಬರುಬರುತ್ತಾ ಡಿಪ್ರಶನ್ ಮತ್ತು ಸ್ಕಿಝೋಫ್ರೆàನಿಯಾದ ಲಕ್ಷಣಗಳೂ ಜೊತೆಯಾಯ್ತು. ಅಪ್ಪ- ಅಮ್ಮನನ್ನೂ ಗುರುತಿಸದ ಸ್ಥಿತಿ ತಲುಪಿದ್ದೆ. ಊಟ ಕೂಡ ಮಾಡುತ್ತಿರಲಿಲ್ಲ. ಯಾರಾದರೂ ತಿನ್ನುವ ಅನ್ನಕ್ಕೆ ವಿಷ ಹಾಕುತ್ತಾರೆಂಬ ಹುಚ್ಚು ಭಯ ಕಾಡುತ್ತಿತ್ತು’ ಎಂದು ಹಳೆಯ ದಿನಗಳನ್ನು ನೆನೆಸಿಕೊಳ್ಳುತ್ತಾರೆ ಪ್ರಿಯಾ.
ಪ್ರಿಯಾಂಕಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.