ನೋಟ್‌ ಬ್ಯಾನ್‌ ದುರಂತ, ಜಿಎಸ್‌ಟಿ ಅವಸರ ಆಘಾತ


Team Udayavani, Sep 28, 2017, 6:00 AM IST

Yashwant.jpg

ನವದೆಹಲಿ: ನಾನೀಗ ಮಾತನಾಡದಿದ್ದರೆ ಅದು ದೇಶಕ್ಕೆ ದ್ರೋಹ ಮಾಡಿದಂತೆ, ಹೀಗಾಗಿ ಹಣಕಾಸು ಸಚಿವರು ಸೃಷ್ಟಿಸಿರುವ ಆರ್ಥಿಕತೆಯ ಅವ್ಯವಸ್ಥೆ ಬಗ್ಗೆ ನಾನೀಗ ಮಾತನಾಡಲೇಬೇಕಿದೆ,” ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಹಣಕಾಸು ಖಾತೆ ಮಾಜಿ ಸಚಿವರೂ ಆಗಿರುವ ಯಶವಂತ ಸಿನ್ಹಾ ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಗೆ “ನಾನೀಗ ಮಾತನಾಡಬೇಕಿದೆ’ ಎಂಬ ಶಿರೋನಾಮೆಯಲ್ಲಿ ಲೇಖನ ಬರೆದಿರುವ ಅವರು, ಈ ಎರಡೂವರೆ ವರ್ಷದಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ಪ್ರತಿ ತಪ್ಪು ಹೆಜ್ಜೆಯ ಲೆಕ್ಕ ಕೊಟ್ಟಿದ್ದಾರೆ. ನೋಟು ಅಮಾನ್ಯ ದೇಶದ ಬಹುದೊಡ್ಡ ದುರಂತ ಎಂದು ಕರೆದಿರುವ ಅವರು, ಜಿಎಸ್‌ಟಿಯನ್ನು ಅವಸರದಲ್ಲಿ ಏಕೆ ಜಾರಿ ಮಾಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಈಗ ನಾನು ಎತ್ತಿರುವುದು ನನ್ನದಷ್ಟೇ ದನಿಯಲ್ಲ, ಬಿಜೆಪಿಯಲ್ಲೇ ಇರುವ ಹೇಳಬೇಕೆನಿಸಿದರೂ ಹೇಳಲಾರದೇ ಕುಳಿತಿರುವಂಥ ಅಸಂಖ್ಯಾತರ ಧ್ವನಿ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಮಧ್ಯೆ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಯಶವಂತ್‌ ಸಿನ್ಹಾ ಅವರ ಮಾತನ್ನು ತಳ್ಳಿಹಾಕಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ದೇಶದ ಆರ್ಥಿಕತೆ ವೇಗವಾಗಿ ವೃದ್ಧಿಯಾಗುತ್ತಿದೆ. ಹೀಗಾಗಿಯೇ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ಹೆಸರು ಪಡೆದಿದೆ ಎಂದು ಹೇಳಿದ್ದಾರೆ. ಸಿನ್ಹಾ ಹೇಳಿಕೆ ಸ್ವಾಗತಿಸಿರುವ ಕಾಂಗ್ರೆಸ್‌, ಇದನ್ನು ನಾವು ಈ ಹಿಂದೆಯೇ ಹೇಳಿದ್ದೆವು ಎಂದಿದೆ.

ಯಶವಂತ್‌ ಸಿನ್ಹಾ ಅವರು ಹೇಳಿದ್ದು:
ಅರುಣ್‌ ಜೇಟ್ಲಿಗೆ ಅದೃಷ್ಟ ಹೆಚ್ಚು

ಅರುಣ್‌ ಜೇಟ್ಲಿ ಅದೃಷ್ಟವಂತ ಸಚಿವ. ಸೋತರೂ ಹಣಕಾಸು ಇಲಾಖೆ ಜತೆಗೆ ಕಾರ್ಪೊರೇಟ್‌ ವ್ಯವಹಾರ, ಬಂಡವಾಳ ಹಿಂತೆಗೆತ ಮತ್ತು ರಕ್ಷಣೆ ಖಾತೆಗಳನ್ನೂ ವಹಿಸಿಕೊಂಡರು. ಆದರೆ 1998ರಲ್ಲಿ ಸೋತಿದ್ದ ಜಸ್ವಂತ್‌ ಸಿಂಗ್‌ ಮತ್ತು ಪ್ರಮೋದ್‌ ಮಹಾಜನ್‌ಗೆ ಅಟಲ್‌ ಸಂಪುಟದಲ್ಲಿ ಸ್ಥಾನವನ್ನೇ ಕೊಟ್ಟಿರಲಿಲ್ಲ. ಇನ್ನೂ ಆರ್ಥಿಕತೆಯ ವಿಚಾರದಲ್ಲೂ ಜೇಟ್ಲಿ ಅದೃಷ್ಟ ಚೆನ್ನಾಗಿದೆ. ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪಾತಾಳಮುಖೀಯಾಗಿದೆ. ಇದು ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಹಣ ಉಳಿಸುತ್ತಿದೆ. ಇದನ್ನೇ ಪರಿಣಾಮಕಾರಿಯಾಗಿ ಬಳಕೆ ಮಾಡಿದ್ದರೆ ಆರ್ಥಿಕತೆಗೆ ಭರ್ಜರಿ ಬೋನಸ್‌ ಕೊಡಬಹುದಿತ್ತು. ಆದರೆ, ತಲತಲಾಂತರದಿಂದ ಬಂದಿರುವ ಬ್ಯಾಂಕುಗಳ ಅನುತ್ಪಾದಕ ಆಸ್ತಿ ಸರ್ಕಾರಕ್ಕೆ ಹೊರೆಯಾಗಿದ್ದು ಸತ್ಯ. ಆದರೆ ತೈಲದಲ್ಲಿ ಸಿಕ್ಕ ಬೋನಸ್‌ ರೀತಿಯ ಹಣವನ್ನು ಇತ್ತ ಕಡೆಗೆ ದೂಕಿ ಸರಿಪಡಿಸಬಹುದಾಗಿತ್ತು. ಆದರೆ ಹಾಗೆ ಮಾಡದೇ, ಬೆಂಕಿಯಲ್ಲಿ ಇದ್ದ ಆರ್ಥಿಕತೆಯನ್ನು ಬಾಣಲೆಯಲ್ಲಿ ಹಾಕಲಾಯಿತು.

ಆರ್ಥಿಕತೆಯ ವ್ಯಥೆ
ಖಾಸಗಿ ಹೂಡಿಕೆ ಎರಡು ದಶಕಗಳಷ್ಟು ಹಿಂದಕ್ಕೆ ಹೋಗಿದೆ. ಕೈಗಾರಿಕೆಗಳ ಉತ್ಪಾದನೆ ಪಾತಾಳಕ್ಕೆ ಕುಸಿದಿದೆ. ಕೃಷಿ ಇಳಿಮುಖದಲ್ಲಿದೆ. ಸಾವಿರಾರು ಮಂದಿಗೆ ಕೆಲಸ ತಂದು ಕೊಡುವ ನಿರ್ಮಾಣ ವಲಯವೂ ಅಯೋಮಯವಾಗಿದೆ. ಉಳಿದ ಸೇವಾ ವಲಯಗಳೂ ನಿಧಾನಗತಿಯಲ್ಲಿವೆ. ರಫ್ತು ಕ್ಷಿಣಿಸುತ್ತಿದೆ, ವಲಯದಿಂದ ವಲಯಕ್ಕೆ ಆರ್ಥಿಕತೆ ಒತ್ತಡದಲ್ಲಿದೆ. ನೋಟು ಅಮಾನ್ಯ ಸರಿಪಡಿಸಲಾಗದ ಆರ್ಥಿಕ ದುರಂತವಾಗಿದೆ. ಹೊಸಬರಿಗೆ ಉದ್ಯೋಗ ಕೊಡುವ ಭರವಸೆ ನೀಡಿದ್ದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ)ಯ ಅವ್ಯವಸ್ಥೆಯ ಜಾರಿಯಿಂದಾಗಿ ನಲುಗಿಹೋಗಿವೆ. ಎಷ್ಟೋ ಕೈಗಾರಿಕೆಗಳು ಮುಳುಗಿವೆ. ಲಕ್ಷಾಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ತ್ತೈಮಾಸಿಕದಿಂದ ತ್ತೈಮಾಸಿಕಕ್ಕೆ ಜಿಡಿಪಿ ದರ ಕುಸಿಯುತ್ತಲೇ ಇದೆ. ಈಗ ಅದು ಶೇ.5.7ಕ್ಕೆ ಬಂದು ನಿಂತಿದೆ. ಇದು ಕಳೆದ ಮೂರು ವರ್ಷದ ಹಿಂದಕ್ಕೆ ಹೋಗಿದೆ. ಆದರೂ ನಮ್ಮ ವಕ್ತಾರರು ಜಿಡಿಪಿ ಕುಸಿತಕ್ಕೆ ನೋಟು ಅಮಾನ್ಯ ಕಾರಣವಲ್ಲ ಎನ್ನುತ್ತಿದ್ದಾರೆ. ಹೌದು, ಅವರು ಹೇಳುತ್ತಿರುವುದು ಸರಿ, ಕುಸಿಯುತ್ತಿರುವ ಜಿಡಿಪಿಗೆ ನೋಟು ಅಮಾನ್ಯ ಎಣ್ಣೆ ಹಾಕಿತಷ್ಟೇ.

ಲೆಕ್ಕದಲ್ಲಿ ಶೇ.3.7!
ಈಗಿನ ಜಿಡಿಪಿ ಲೆಕ್ಕಾಚಾರವೇ ಬೇರೆಯದ್ದು. ಹಿಂದಿನ ಸರ್ಕಾರಗಳ ಅವಧಿಯಲ್ಲಿದ್ದ ಜಿಡಿಪಿ ಅಳತೆಯ ಮಾನದಂಡಕ್ಕೆ ಹೋಲಿಕೆ ಮಾಡಿದರೆ, ಶೇ.5.7 ಎಂದರೆ, ಶೇ.3.7. ಜಿಡಿಪಿ ಕುಸಿತಕ್ಕೆ ತಾಂತ್ರಿಕ ಸಮಸ್ಯೆ ಕಾರಣ ಎಂದು ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ. ಆದರೆ ಎಸ್‌ಬಿಐ ತಾಂತ್ರಿಕ ಸಮಸ್ಯೆಯಿಂದಾಗಿ ಜಿಡಿಪಿ ಕುಸಿತವಾಗಿಲ್ಲ. ಇದಕ್ಕೆ ನೈಜವಾದ ಕಾರಣಗಳಿವೆ ಎಂದು ಹೇಳಿದೆ. ಅಲ್ಲದೆ ಎಸ್‌ಬಿಐನ ವರದಿಯ ಪ್ರಕಾರವೇ, ಸದ್ಯದ ಕುಸಿತ ಕಾಣುತ್ತಿರುವ ವಲಯವೆಂದರೆ ಟೆಲಿಕಾಂ ಕ್ಷೇತ್ರ.

ಪಾಪ ಒಬ್ಬರಿಗೇ ಎಷ್ಟು ಮಾಡಲಿಕ್ಕಾಗುತ್ತೆ?!
ಆರ್ಥಿಕತೆಯ ಕುಸಿತ ದಿಢೀರನೇ ಉದ್ಭವವಾಗಿದ್ದಲ್ಲ. ಇದು ನಿಧಾನಗತಿಯಲ್ಲೇ ಆಗುತ್ತಿದೆ. ಎರಡೂವರೆ ವರ್ಷದಿಂದ ಶುರುವಾದ ಇಳಿಕೆ, ಸದ್ಯದ ಸ್ಥಿತಿಗೆ ಕಾರಣವಾಗಿದೆ. ಇದನ್ನು ನಿವಾರಿಸಲು ಬೇಕಾದ ಮಾರ್ಗಗಳು ಇಲ್ಲವೆಂಬುದೇನಿಲ್ಲ. ಖಚಿತವಾಗಿ ಇವುಗಳನ್ನು ನಿವಾರಣೆ ಮಾಡಬಹುದು. ಆದರೆ ಇವು ಇದರ ಜವಾಬ್ದಾರಿ ಹೊಂದಿರುವ ವ್ಯಕ್ತಿಯ ಶ್ರಮ ಮತ್ತು ಬದ್ಧತೆಯನ್ನು ಕೇಳುತ್ತವೆ. ಗಂಭೀರವಾಗಿ ಕುಳಿತು, ಕುಸಿತಕ್ಕೆ ಕಾರಣಗಳೇನು ಎಂಬುದನ್ನು ಅರಿತು, ಇವುಗಳನ್ನು ನಿವಾರಿಸುವ ಬಗ್ಗೆ ಗೇಮ್‌ ಪ್ಲಾನ್‌ ಮಾಡಬೇಕು. ಆದರೆ, ಒಬ್ಬನೇ ವ್ಯಕ್ತಿಯಿಂದ ನಾವು ಎಷ್ಟು ನಿರೀಕ್ಷಿಸಲು ಸಾಧ್ಯ? ಪಾಪ ಅವರು ಹಲವಾರು ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿಯೇ ನಾವು ಇಂದು ಇಂಥ ಸ್ಥಿತಿಯನ್ನು ನೋಡಬೇಕಾಯ್ತು!

ಪ್ರಧಾನಿ ಕಳವಳದಲ್ಲಿದ್ದಾರೆ!
ಪ್ರಧಾನ ಮಂತ್ರಿ ಕಳವಳದಲ್ಲಿದ್ದಾರೆ. ಹಣಕಾಸು ಸಚಿವರು ಮತ್ತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲು ಪ್ರಧಾನಿ ಕರೆದಿದ್ದ ಸಭೆ ಮುಂದಕ್ಕೆ ಹೋಗಿದೆ. ಅಷ್ಟರಲ್ಲೇ ಸಚಿವ ಜೇಟ್ಲಿ ಅವರು, ಉತ್ತೇಜನ ಪ್ಯಾಕೇಜ್‌ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ನಾವು ಕೂಡ ಉಸಿರು ಹಿಡಿದು ಆ ಪ್ಯಾಕೇಜ್‌ಗಾಗಿ ಕಾಯುತ್ತಿದ್ದೇವೆ. ಆದರೂ ಇನ್ನೂ ಬಂದಿಲ್ಲ. ಇದರ ನಡುವೆಯೇ ಪ್ರಧಾನಿ ಐದು ಮಂದಿ ಸದಸ್ಯರ ಆರ್ಥಿಕ ಸಲಹಾ ಸಮಿತಿ ನೇಮಕ ಮಾಡಿದ್ದಾರೆ. ಈ ಐವರು ಪಾಂಡವರು, ಮಹಾಭಾರತದಲ್ಲಿ ನಡೆಸಿದ್ದಂಥ ಯುದ್ಧ ಮಾಡಿ ಆರ್ಥಿಕತೆ ಎತ್ತಬೇಕಿದೆ.

ರೇಡ್‌ ಸ್ಟೇಟ್‌ ಬೇಡವಾಗಿತ್ತು
ನಾವು ವಿರೋಧ ಪಕ್ಷದ ಸಾಲಿನಲ್ಲಿ ಕುಳಿತಿದ್ದಾಗ “ದಾಳಿ ರಾಜ್ಯ’ವನ್ನು ವಿರೋಧಿಸಿದ್ದೆವು. ಆದರೆ ಇಂದು ಅದು ಪ್ರತಿದಿನದ ಕಸರತ್ತಾಗಿದೆ. ಆದಾಯ ತೆರಿಗೆ ಇಲಾಖೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ ಲಕ್ಷಾಂತರ ಮಂದಿಯ ಹಣೆಬರಹ ಬರೆಯುವಲ್ಲಿ ನಿರತವಾಗಿವೆ. ಜಾರಿ ನಿರ್ದೇಶನಾಲಯ ಮತ್ತು ಸಿಬಿಐನ ತಟ್ಟೆ ತುಂಬಿದೆ. ಜನ ಕೂಡ ಇವರ ದಾಳಿಯಲ್ಲಿ ತಾವೂ ಈಡಾಗಬಹುದೇ ಎಂಬ ಆತಂಕದಲ್ಲಿ ದಿನ ದೂಡುತ್ತಿದ್ದಾರೆ.

ನಾಶ ಕ್ಷಣಿಕದ ಕೆಲಸ
ಆರ್ಥಿಕತೆಯನ್ನು ಕಟ್ಟುವುದಕ್ಕಿಂತ, ಬಹುಬೇಗನೇ ನಾಶ ಮಾಡಿಬಿಡಬಹುದು. 1990ರ ನಂತರ ಮತ್ತು 2000ನೇ ಇಸವಿಯ ಬಳಿಕದ ನಾಲ್ಕು ವರ್ಷ ಭಾರಿ ಪರಿಶ್ರಮದಿಂದ ಕೆಲಸ ಮಾಡಿದ್ದರಿಂದಲೇ ಆರ್ಥಿಕತೆ ಒಂದೊಳ್ಳೆಯ ಹಾದಿಗೆ ಬಂದಿತ್ತು. ತೊಂಬತ್ತರ ದಶಕದಲ್ಲಿ ಬಂದ ಸುಧಾರಣೆಯನ್ನು 1998ರಲ್ಲಿ ನಾವು ಮುನ್ನಡೆಸಿಕೊಂಡು ಹೋಗಿದ್ದೆವು. ನನಗೆ ಗೊತ್ತಿದೆ, ಯಾರೂ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಆರ್ಥಿಕತೆಯನ್ನು ಮೇಲೆತ್ತಲು ಸಾಧ್ಯವಿಲ್ಲ. ಇದಕ್ಕೆ ಅದರದ್ದೇ ಆದ ಸಮಯ ಬೇಕು. ಈಗ ಶುರು ಮಾಡಿಕೊಂಡರೂ 2019ರ ವೇಳೆಗೆ ಸರಿ ಹಾದಿಗೆ ತರುವುದು ಕಷ್ಟದ ಸಂಗತಿ. “ಜೋರು ಮತ್ತು ಗರ್ಜನೆಯ ಮಾತುಗಳು ವೇದಿಕೆಗೆ ಮಾತ್ರ ಚೆನ್ನ, ಆದರೆ ವಾಸ್ತವದಲ್ಲಿ ಅವು ಆವಿಯಾಗುತ್ತವೆ’ ಎಂಬುದನ್ನು ಮರೆಯಬಾರದು.

ನಮ್ಮ ಪ್ರಧಾನಿ ಬಡತನವನ್ನು ನೋಡಿಕೊಂಡೇ ಬೆಳೆದು ಬಂದದ್ದು ಎಂದು ಹೇಳುತ್ತಲೇ ಇರುತ್ತಾರೆ. ನಮ್ಮ ಜನ ಕೂಡ ಹಣಕಾಸು ಸಚಿವರು ಇದೇ ಬಡತನವನ್ನು ಬಿಟ್ಟ ಕಣ್ಣಿನಿಂದ ನೋಡುವ ಹಾಗೆ ಭಾರಿ ಕಷ್ಟದಿಂದಲೇ ಕೆಲಸ ಮಾಡುತ್ತಿದ್ದಾರೆ!

ಇದು ಹತಾಶೆಯ ಕೆಲಸವೆಂದ ಬಿಜೆಪಿ
ದೇಶದ ಆರ್ಥಿಕತೆ ಚೆನ್ನಾಗಿಯೇ ಇದೆ. ಆದರೆ, ಅಧಿಕಾರ ಸಿಗದೇ ಹಪಾಹಪಿತನ ಅನುಭವಿಸುತ್ತಿರುವ ಯಶವಂತ್‌ ಸಿನ್ಹಾ ಮತ್ತು ಅರುಣ್‌ ಶೌರಿ ಇಂಥ ಮಾತುಗಳನ್ನು ಆಡುತ್ತಿದ್ದಾರೆ. ಅವರ ಮಾತುಗಳನ್ನು ಸಂಪೂರ್ಣವಾಗಿ ತಳ್ಳಿಹಾಕಲಾಗಿದೆ ಎಂದು ಹೆಸರೇಳದ ಬಿಜೆಪಿ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅಧಿಕೃತವಾಗಿಯೇ ಹೇಳಿಕೆ ನೀಡಿದ ರಾಜನಾಥ್‌ ಸಿಂಗ್‌ ಮತ್ತು ಇಂಧನ ಸಚಿವ ಪಿಯೂಶ್‌ ಗೋಯಲ್‌, ಭಾರತದ ಆರ್ಥಿಕತೆ ಸದೃಢವಾಗಿದ್ದು, ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಯಶವಂತ್‌ ಸಿನ್ಹಾ ಅವರ ಹೇಳಿಕೆ ತಳ್ಳಿಹಾಕಿದ್ದಾರೆ. ಈ ಮಧ್ಯೆ, ಸಿನ್ಹಾ ಹೇಳಿಕೆ ಬಗ್ಗೆ ಅರುಣ್‌ ಜೇಟ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಮಾನದ ರೆಕ್ಕೆಗಳು ಬೀಳುತ್ತಿವೆ…
“ಮಹಿಳೆಯರೇ ಮತ್ತು ಪುರುಷರೇ, ಇದು ಸೆಕೆಂಡ್‌ ಪೈಲಟ್‌ ಮತ್ತು ಹಣಕಾಸು ಸಚಿವರ ಮಾತು ಕೇಳಿಸಿಕೊಳ್ಳಿ, ಬೇಗ ನಿಮ್ಮ ಸೀಟು ಬೆಲ್ಟ್‌ಗಳನ್ನು ಕಟ್ಟಿಕೊಳ್ಳಿ, ಸಿದ್ಧವಾಗಿ ಕುಳಿತುಕೊಳ್ಳಿ, ವಿಮಾನದ ರೆಕ್ಕೆಗಳು ಮುರಿದು ಬೀಳುತ್ತಿವೆ.’ ಇದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ವ್ಯಂಗ್ಯದ ಮಾತು. ಯಶವಂತ್‌ ಸಿನ್ಹಾ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ, ಅರುಣ್‌ ಜೇಟ್ಲಿ ಅವರ ಬಗ್ಗೆ ಲೇವಡಿ ಮಾಡಿದ ಅವರು, ನಾವು ಈ ಹಿಂದೆಯೇ ಆರ್ಥಿಕತೆ ಕುಸಿಯುತ್ತಿರುವ ಬಗ್ಗೆ ಹೇಳಿದ್ದೆವು ಎಂದಿದ್ದಾರೆ.

ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರದ ವಿರುದ್ಧ ಹರಿಹಾಯ್ದಿದ್ದಲ್ಲದೇ, ಯಶವಂತ್‌ ಸಿನ್ಹಾ ಹೇಳಿಕೆ ನಮಗೆ ಖುಷಿ ತಂದಿದೆ ಎಂದಿದ್ದಾರೆ. ನಮ್ಮ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಲಾಯಿತು. ಆದರೂ ಕಾಂಗ್ರೆಸ್‌ ದೃಢ ನಿರ್ಧಾರ ತೆಗೆದುಕೊಂಡು ಸರ್ಕಾರದ ವೈಫ‌ಲ್ಯವನ್ನು ಹೇಳುತ್ತಲೇ ಹೋಯಿತು. ನೋಟು ಅಮಾನ್ಯ ಮತ್ತು ಜಿಎಸ್‌ಟಿ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳಿವೆ ಎಂದರು. ಇಡೀ ದೇಶ ಸುತ್ತಿದರೂ ಜನ ಮಾತ್ರ ಅಚ್ಚೇದಿನ್‌ ಬಂದಿಲ್ಲ ಎಂದು ಹೇಳುತ್ತಲೇ ಇದ್ದಾರೆ ಎಂದು ಅವರು ಟೀಕಿಸಿದರು.

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

9

Kasturi Shankar: ನಟಿ ಕಸ್ತೂರಿ ಶಂಕರ್‌ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ  

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

byndoor

Kundapura: ಪ್ರತ್ಯೇಕ ಅಪಘಾತ ಪ್ರಕರಣ; ಗಾಯ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.