ದಯವಿಟ್ಟು ಗಮನಿಸಿ ಆಸ್ಟ್ರೇಲಿಯಾದಲ್ಲಿ ಪ್ರೀಮಿಯರ್ ಶೋ
Team Udayavani, Oct 2, 2017, 10:32 AM IST
ಕನ್ನಡ ಸಿನಿಮಾಗಳು ಸಾಗರದಾಚೆ ಹೋಗಿ ಸುದ್ದಿ ಮಾಡುವುದು ಹೊಸ ವಿಷಯವೇನಲ್ಲ. ಈಗಾಗಲೇ ಕನ್ನಡದ ಹಲವು ಚಿತ್ರಗಳು ವಿದೇಶಗಳಲ್ಲಿ ಪ್ರದರ್ಶನಗೊಂಡು ಅಲ್ಲಿನವರ ಮನ ಗೆದ್ದಿರುವುದುಂಟು. ಆ ಸಾಲಿಗೆ ಈಗ ಹೊಸ ಕನ್ನಡ ಚಿತ್ರವೂ ಸೇರಿದೆ. ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಕನ್ನಡ ಚಿತ್ರವೊಂದು ಪ್ರೀಮಿಯರ್ ಶೋ ಆಗುತ್ತಿರುವುದೇ ಈ ಹೊತ್ತಿನ ವಿಶೇಷ.
ಹೌದು, ರೋಹಿತ್ ಪದಕಿ ಚೊಚ್ಚಲ ನಿರ್ದೇಶನದ “ದಯವಿಟ್ಟು ಗಮನಿಸಿ’ ಚಿತ್ರ ಅಕ್ಟೋಬರ್ 15 ರಂದು ಸಿಡ್ನಿ ಮತ್ತು ಮೆಲ್ಬೋರ್ನ್ನಲ್ಲಿ ಪ್ರದರ್ಶನ ಕಾಣುತ್ತಿದೆ. ಅಕ್ಟೋಬರ್ 20 ರಂದು ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಅದಕ್ಕೂ ಐದು ದಿನಗಳ ಮೊದಲೇ ಆಸ್ಟ್ರೇಲಿಯಾದಲ್ಲಿ ಪೂರ್ವ ಪ್ರದರ್ಶನ ಕಾಣುತ್ತಿರುವುದು ವಿಶೇಷ. ಅಕ್ಟೋಬರ್ 27 ರಂದು ಇಂಡಿಯಾ ಸೇರಿದಂತೆ ಯುಕೆ, ಯುಎಸ್‌ನಲ್ಲೂ ತೆರೆ ಕಾಣಲಿದೆ. ಅದಕ್ಕೂ ಮುನ್ನ ಸಿಂಗಾಪುರ್‌ನಲ್ಲೂ ಪ್ರದರ್ಶನವಾಗುವ ಮುನ್ಸೂಚನೆಯೂ ಇದೆ.
ಅಲ್ಲಿ ಸೆನ್ಸಾರ್ ಆಗಬೇಕಿರುವುದರಿಂದ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂಬುದು ನಿರ್ದೇಶಕ ರೋಹಿತ್ ಪದಕಿ ಅವರ ಮಾತು. ಅಂದಹಾಗೆ, “ದಯವಿಟ್ಟು ಗಮನಿಸಿ’ ಎಂಬ ಶೀರ್ಷಿಕೆ ಎಷ್ಟು ಕುತೂಹಲ ಮೂಡಿಸಿತ್ತೋ, ಅಷ್ಟೇ ಕುತೂಹಲ ಟ್ರೇಲರ್ ಮತ್ತು ಪ್ರೋಮೋ ಕೂಡ ಮೂಡಿಸಿದೆ. ಈಗಾಗಲೇ ಎರಡು ಟ್ರೇಲರ್ ರಿಲೀಸ್ ಆಗಿದ್ದು, ಶನಿವಾರ ಸಂಜೆ ಚಿತ್ರದ ಮೂರನೆಯ ಪ್ರೋಮೋ ಕೂಡ ರಿಲೀಸ್ ಮಾಡಲಾಗಿದೆ.
ಈಗಾಗಲೇ ಹಾಡುಗಳಿಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದ್ದು, ಎಲ್ಲಾ ಕಡೆಯಿಂದಲೂ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿವೆ ಎನ್ನುವ ರೋಹಿತ್ ಪದಕಿ ಅವರಿಗೆ ಇದು ಮೊದಲ ಚಿತ್ರವಾದ್ದರಿಂದ ಸಹಜವಾಗಿಯೇ ಅವರಿಗೆ ಒಂದು ಕಡೆ ಭಯ ಮತ್ತು ಖುಷಿ ಎರಡೂ ಇದೆಯಂತೆ. ಈ ಹಿಂದೆ ರೋಹಿತ್ “ಅಷ್ಟ್ರಲ್ಲೇ ಜಸ್ಟ್‌ಮಿಸ್’ ಚಿತ್ರ ನಿರ್ದೇಶಿಸಿದ್ದರು. ಕಾರಣಾಂತರದಿಂದ ಅದು ಬಿಡುಗಡೆಯಾಗಲಿಲ್ಲ. ಆ ಬಳಿಕ “ಆಟಗಾರ’ ಮತ್ತು “ಆಕೆ’ ಚಿತ್ರಕ್ಕೆ ಸಂಭಾಷಣೆ ಹಾಗು ಬರೆದಿದ್ದರು. ಈಗ ಒಳ್ಳೆಯ ತಂಡ ಕಟ್ಟಿಕೊಂಡು ನಮ್ಮತ್ತ ಗಮನಿಸಿ ಎನ್ನುತ್ತಿದ್ದಾರೆ.
ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತವಿದೆ. ಅರವಿಂದ್ ಕ್ಯಾಮೆರಾ ಹಿಡಿದಿದ್ದಾರೆ. ಕೃಷ್ಣ ಸಾರ್ಥಕ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ವಸಿಷ್ಟ, ರಾಜೇಶ್ ನಟರಂಗ, ರಘುಮುಖರ್ಜಿ, ಸಂಯುಕ್ತಾ ಹೊರನಾಡು, ಭಾವನಾರಾವ್, ಅವಿನಾಶ್ ಶತಮರ್ಷನ್, ಸುಕೃತಾ ವಾಗ್ಲೆ, ಪ್ರಕಾಶ್ ಬೆಳಡವಾಡಿ,ಪೂರ್ಣಚಂದ್ರ ಇತರರು ನಟಿಸಿದ್ದಾರೆ. ಬೆಂಗಳೂರು, ಡೆಲ್ಲಿ, ಲಡಾಕ್, ಪಂಜಾಬ್, ಚಂಡೀಗಡ, ಕಳಸ, ಚಿಕ್ಕಮಗಳೂರು, ಶ್ರೀನಗರ ಸುತ್ತಮುತ್ತ ಚಿತ್ರೀಕರಣವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.