ಭ್ರಷ್ಟಾಚಾರ ನಿರ್ಮೂಲನೆಗೆ ಅರೆಮನಸ್ಸಿನ ಧೋರಣೆ
Team Udayavani, Oct 3, 2017, 11:59 AM IST
ಬೆಂಗಳೂರು: “ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ರಾಜ್ಯ ಸರ್ಕಾರ ಅರೆಮನಸ್ಸಿನ ಧೋರಣೆ ಹೊಂದಿದೆ,’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಟೀಕಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಸರ್ಕಾರ ತೃಪ್ತಿಕರ ಕೆಲಸ ಮಾಡಿಲ್ಲ. ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತುಹಾಕಬೇಕು,’ ಎಂದು ಆಗ್ರಹಿಸಿದರು.
“ಧರ್ಮವನ್ನು ರಾಜಕೀಯದಲ್ಲಿ ಬೆರೆಸುವ ಪ್ರಯತ್ನ ಮಾಡಬೇಡಿ. ಇದೊಂದು ಮಹಾ ಅಪರಾಧ. ಹಾಗೆಯೇ ಸರ್ಕಾರಗಳು ಮಠಕ್ಕೆ, ಮಠಾಧೀಶರಿಗೆ ಹಣ ನೀಡುವುದನ್ನು ನಿಲ್ಲಿಸಬೇಕು. ಚುನಾವಣೆಯಲ್ಲಿ ಹಣ, ಹೆಂಡ ಹಂಚುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಗಾಂಧೀಜಿಯವರ ಆಶಯಕ್ಕೆ ತಕ್ಕಂತೆ ಸರ್ಕಾರ ನಡೆದುಕೊಳ್ಳಬೇಕು ಹಾಗೂ ಜನರು ಗಾಂಧೀಜಿಯ ಹಾದಿಯಲ್ಲೇ ಸಾಗುವ ಪ್ರಯತ್ನ ಮಾಡಬೇಕು,’ ಎಂದರು.
“ದೇಶಾದ್ಯಂತ ಹಿಂಸೆ ಹೆಚ್ಚಾಗುತ್ತಿದೆ. ಹಿಂಸೆಯೇ ಅಸಹಿಷ್ಣುತೆಗೆ ಕಾರಣವಾಗುತ್ತಿದೆ. ಹಿಂಸಾ ಪ್ರವೃತ್ತಿ ರಾಜಕೀಯ ವಲಯಕ್ಕೂ ವಿಸ್ತಾರವಾಗಿದೆ. ಮಂಗಳೂರಿನ ಘಟನೆ ಸಂಪೂರ್ಣ ರಾಜಕೀಯ ಪ್ರೇರಿತವಾಗಿದ್ದು, ಕಾನೂನು ಸುವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳಬೇಕು,’ ಎಂಬ ದೊರೆಸ್ವಾಮಿ ಅವರು ಸಲಹೆ ನೀಡಿದರು.
“ಧರ್ಮಾಚರಣೆಯಿಂದ ಹಿಂಸಾಚಾರ ಹೆಚ್ಚಾಗುತ್ತಿದೆ. ಗೌರಿ ಲಂಕೇಶ್ ಹತ್ಯೆಯ ಪ್ರಕರಣವನ್ನು ಸರ್ಕಾರ ಎಲ್ಲಾ ರೀತಿಯಿಂದಲೂ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲೂ ತನಿಖೆಯಾಗಬೇಕು. ಧರ್ಮಾಚರಣೆ ಅತಿಯಾದರೆ, ಸಿವಿಲ್ ವಾರ್ ಉಂಟಾಗಬಹುದು. ಗೂಂಡಾಗಳು ಅಧಿಕಾರಕ್ಕೆ ಬರುವ ಸಾಧ್ಯತೆಯೂ ಇದೆ. ಇದನ್ನೆಲ್ಲ ಈಗಿಂದಲೇ ಚಿವುಟಿ ಹಾಕಬೇಕು,’ ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಗಾಂಧೀಜಿ ಇನ್ನು ಹೆಚ್ಚು ಕಾಲ ಬದುಕಬೇಕಿತ್ತು. ಆದರೆ, ಮತಾಂಧ ಶಕ್ತಿ ಅವರನ್ನು ಬದಕುಲು ಬಿಟ್ಟಿಲ್ಲ. ಅದೇ ಶಕ್ತಿ ಇಂದು ಸಮಾಜದಲ್ಲಿ ದ್ವೇಷ ಅಸೂಯೆ ಸೃಷ್ಟಿಸುತ್ತಿದೆ. ಮನುಷ್ಯ ಮನುಷ್ಯನ ನಡುವೆ ಗೋಡೆ ನಿರ್ಮಾಣ ಮಾಡುವುದು ಅತ್ಯಂತ ಅಮಾನವೀಯ. ವೋಟು ಅಥವಾ ಇನ್ಯಾವುದೇ ಕಾರಣಕ್ಕೂ ದ್ವೇಷದ ಕಿಚ್ಚು ಹಚ್ಚಿಸುವ ಕೆಲಸ ಯಾರೂ ಮಾಡಬಾರದು ಎಂದರು.
ಗೃಹ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಪ್ರಶಸ್ತಿ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್, ಇಲಾಖೆ ನಿರ್ದೇಶಕ ಡಾ.ಪಿ.ಎಸ್.ಹರ್ಷ ಮೊದಲಾದವರು ಉಪಸ್ಥಿತರಿದ್ದರು.
ಖಾದಿಗೆ ಬ್ರಿಟೀಷರೂ ತೆರಿಗೆ ವಿಧಿಸಿರಲಿಲ್ಲ: “ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಸಂದರ್ಭದಲ್ಲಿಯೂ ಖಾದಿ ಉತ್ಪನ್ನಗಳ ಮೇಲೆ ಯಾವುದೇ ತೆರಿಗೆ ವಿಧಿಸಿರಲಿಲ್ಲ. ನಮ್ಮ ಶತ್ರುಗಳೇ ಖಾದಿಯ ಮೇಲೆ ತೆರಿಗೆ ಹಾಕಿಲ್ಲ ಎಂದಾದ ಮೇಲೆ ಕೇಂದ್ರ ಸರ್ಕಾರವು ಖಾದಿ ಉತ್ಪನ್ನವನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದಿರುವುದು ಸರಿಯಲ್ಲ. ಹಾಗೆಯೇ ತಿನ್ನುವ ಪದಾರ್ಥಗಳನ್ನು ಜಿಎಸ್‌ಟಿಯಿಂದ ಹೊರಗಿಡಬೇಕು,’ ಎಂದು ಸ್ವಾತಂತ್ರ್ಯ ಹೋರಾಟಗಾರ ಚ್.ಎಸ್.ದೊರೆಸ್ವಾಮಿ ಒತ್ತಾಯಿಸಿದರು.
ರಾಜ್ಯ ಸರ್ಕಾರ ಮಹಾತ್ಮಗಾಂಧಿ ಸೇವಾ ಪ್ರಶಸ್ತಿಯ ಜತೆಗೆ 5 ಲಕ್ಷ ನಗದು ನೀಡಿದೆ. ಅದರಲ್ಲಿ 1 ಲಕ್ಷವನ್ನು ಭೂ ಒತ್ತುವರಿ ತೆರವು ಹೋರಾಟ ಸಮಿತಿಗೆ, ಇನ್ನೊಂದು ಲಕ್ಷವನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ಹಾಗೂ ಉಳಿದ ಮೂರು ಲಕ್ಷವನ್ನು ಮಡದಿಗೆ ನೀಡಲಿದ್ದೇನೆ.
-ಎಚ್.ಎಸ್.ದೊರೆಸ್ವಾಮಿ, ಸ್ವಾತಂತ್ರ್ಯ ಹೋರಾಟಗಾರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.