ಅಡ್ಡದಾರಿ ಹಿಡಿದ ಯುವಕನ ಲವ್ ಥ್ರಿಲ್ಲರ್ ಮುಖಾಮುಖಿ
Team Udayavani, Oct 6, 2017, 11:55 AM IST
“ಅವರಿಗೆ ಹೇಳ್ಳೋಕೆ ಬರ್ತಿಲ್ಲ ಪಾಪ. ಮೊದಲ ಸಿನಿಮಾ ಅಲ್ವಾ? ಸ್ವಲ್ಪ ಟೆನ್ಶನ್ ಆಗಿದ್ದಾರೆ. ನಿಜಕ್ಕೂ ಒಂದೊಳ್ಳೆಯ ಚಿತ್ರಕಥೆ ಮಾಡಿಕೊಂಡಿದ್ದಾರೆ. ಒಳ್ಳೆಯ ಚಿತ್ರ ಮಾಡುತ್ತಾರೆ ಅಂತ ನಂಬಿಕೆ ಇದೆ …’ ಹಾಗಂತ ಹೇಳಿದರು ಸಂಭಾಷಣೆಕಾರ ಮಂಜು ಮಾಂಡವ್ಯ. ಈ ಮೂಲಕ ನಿರ್ದೇಶಕರ ಟೆನ್ಶನ್ ಸ್ವಲ್ಪ ಕಡಿಮೆ ಮಾಡಿದರು.
ಅದಕ್ಕೂ ಮುನ್ನ ಮಾತಾಡಿದ್ದ ನಿರ್ದೇಶಕ ಸಂದೀಪ್ ಜನಾರ್ಧನ್, ಬಹಳ ಗೊಂದಲಕ್ಕೊಳಗಾಗಿದ್ದರು. ಚಿತ್ರದ ಕಥೆಯೇನು ಎಂದು ಪತ್ರಕರ್ತರ ಪ್ರಶ್ನೆಗೆ ದಡಬಡ ಒಂದಿಷ್ಟು ಹೇಳಿ ಮುಗಿಸಿದರು. ಅವರು ಟೆನ್ಶನ್‌ನಲ್ಲಿದ್ದಾರೆ ಎಂದು
ಅಲ್ಲಿದ್ದವರಿಗೆ ಸ್ಪಷ್ಟವಾಗಿತ್ತು. ಹಾಗಾಗಿ ಮಂಜು ಮೊದಲು ಅವರ ಬಗ್ಗೆ ಮಾತಾಡಿ, ನಂತರ ಚಿತ್ರದ ಬಗ್ಗೆ ಶಿಫ್ಟ್
ಆದರು. ಇದೆಲ್ಲಾ ಆಗಿದ್ದು “ಫೇಸ್ ಟು ಫೇಸ್’ ಚಿತ್ರದ ಮುಹೂರ್ತ ಪತ್ರಿಕಾಗೋಷ್ಠಿಯಲ್ಲಿ. ದಸರಾದ ಆರನೇ ದಿನ ಬನಶಂಕರಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆಯಿತು.
ಮುಹೂರ್ತವೇನೋ ಬಹಳ ಸರಳವಾಗಿ ಮುಗಿಯಿತು. ಆದರೆ, ಸಂದೀಪ್ ಟೆನ್ಶನ್ ಆಗುವುದಕ್ಕೆ ಕಾರಣವೂ ಇತ್ತು. ಅದೇನೆಂದರೆ ಅವರ ತಾಯಿ ಸುಮಿತ್ರಾ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅವರಿಗೆ ಇವೆಲ್ಲಾ ಹೊಸದು. ಹಾಗಾಗಿ
ಬರೀ ನಿರ್ದೇಶನವಷ್ಟೇ ಅಲ್ಲ, ನಿರ್ಮಾಣವನ್ನೂ ಸಂದೀಪ್ ಜೊತೆಜೊತೆಗೆ ನೋಡಿಕೊಳ್ಳುತ್ತಿದ್ದರಿಂದ, ಸ್ವಲ್ಪ ಟೆನ್ಶನ್‌ನಲ್ಲೇ ಮಾತಿಗೆ ಬಂದು ಕುಳಿತರು ಚಿತ್ರತಂಡದ ಜೊತೆಗೆ. ಸಂದೀಪ್ ಇದಕ್ಕೂ ಮುನ್ನ ಉಪೇಂದ್ರ ಅವರ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿದ್ದರು. ಈಗ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಇನ್ನು ನಾಯಕ ರೋಹಿತ್ ಭಾನುಪ್ರಕಾಶ್, ನಿರ್ದೇಶಕ ಪಿ. ವಾಸು ಅವರಿಗೆ ಸಹಾಯಕ ನಿರ್ದೇಶಕರಾಗಿದ್ದರು. ಅವರು ಈ ಚಿತ್ರದ ಮೂಲಕ ಮೊದಲ ಬಾರಿಗೆ ಹೀರೋ ಆಗುತ್ತಿದ್ದಾರೆ. ಸಂದೀಪ್ ಮತ್ತು ರೋಹಿತ್ ಅವರ ಪರಿಚಯ, “ಆರಕ್ಷಕ’ ಚಿತ್ರದಲ್ಲಾಯಿತಂತೆ. ಈ ಚಿತ್ರವನ್ನು ವಾಸು ನಿರ್ದೇಶಿಸಿದರೆ, ಉಪೇಂದ್ರ ನಟಿಸಿದ್ದರು. ಅಲ್ಲಿಂದ ಶುರುವಾದ ರೋಹಿತ್ ಮತ್ತು ಸಂದೀಪ್ ಅವರ ಸ್ನೇಹ, ಇದೀಗ ಒಟ್ಟಿಗೆ ಚಿತ್ರ ಮಾಡುವವರೆಗೂ ಬಂದು ನಿಂತಿದೆ.
ರೋಹಿತ್‌ಗೆ ಇಲ್ಲಿ ನಾಯಕಿಯರಾಗಿ ಪೂರ್ವಿ ಜೋಷಿ ಮತ್ತು ದಿವ್ಯ ಉರುಡುಗ ಇದ್ದಾರೆ. ಚಿತ್ರಕ್ಕೆ ಏಕ್ ಖ್ವಾಬ್ ಎಂಬ ಮುಂಬೈನ್ ಬ್ಯಾಂಡ್ ಸಂಗೀತ ಸಂಯೋಜಿಸಿದರೆ, ವಿಶ್ವಜಿತ್ ರಾವ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಅಡ್ಡದಾರಿ ಹಿಡಿದ ಹುಡುಗನೊಬ್ಬ ತನ್ನ ಸುತ್ತಮುತ್ತಲಿನವರನ್ನು ಮುಖಾಮುಖಿ ಮಾಡುವುದೇ “ಫೇಸ್ ಟು ಫೇಸ್’ ಚಿತ್ರದ ಕಥೆಯಂತೆ. ಇದೊಂದು ಲವ್ ಥ್ರಿಲ್ಲರ್ ಎನ್ನುತ್ತಾರೆ ಸಂದೀಪ್. “ಇದೊಂದು ತ್ರಿಕೋನ ಪ್ರೇಮಕಥೆ. ಪಕ್ಕದ್ಮನೆ ಹುಡುಗನೊಬ್ಬ ಒಂದಿಷ್ಟು ಘಟನೆಗಳನ್ನು ಎದುರಿಸುವುದೇ ಕಥೆ. ಇಲ್ಲಿ ಎಲ್ಲಾ ಅಂಶಗಳೂ ಇವೆ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ’ ಎಂದು ಅವರು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.