13ರಂದು ಪೆಟ್ರೋಲ್, ಡೀಸೆಲ್ ಸಿಗೋಲ್ಲ
Team Udayavani, Oct 8, 2017, 11:05 AM IST
ಬೆಂಗಳೂರು: ಪೆಟ್ರೋಲ್, ಡೀಸೆಲ್ ಡೀಲರ್‌ಗಳಿಗೆ ಅ.2ರಂದು ಕೇಂದ್ರ ಸರ್ಕಾರ ವಿಧಿಸಿರುವ ನಿಯಮಾವಳಿ ಕೈಬಿಡಬೇಕು, ತೈಲ ಬೆಲೆ ದೈನಂದಿನ ಪರಿಷ್ಕರಣೆ ವ್ಯವಸ್ಥೆ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಡೀಲರ್‌ಗಳು ಅ.13ರಂದು ದೇಶವ್ಯಾಪಿ ತೈಲ ಖರೀದಿ, ಮಾರಾಟ ಸ್ಥಗಿತಗೊಳಿಸಿ ಒಂದು ದಿನದ ಮಟ್ಟಿಗೆ ಬಂದ್ ಮಾಡಲು ಮುಂದಾಗಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ತೈಲ ಕಂಪನಿಗಳು ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳದಿದ್ದರೆ ಅ.27ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಡೀಲರ್‌ಗಳು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಸುಮಾರು 4,400 ಪೆಟ್ರೋಲ್ ಬಂಕ್‌ಗಳಿದ್ದು, ಅ.13ರಂದು ವಹಿವಾಟು ಬಂದ್ ಆದರೆ ಗ್ರಾಹಕರು ತೀವ್ರ ಪರದಾಡುವ ಆತಂಕ ಮೂಡಿದೆ.
ಮುಂಬೈನಲ್ಲಿ ಶನಿವಾರ ಯುನೈಟೆಡ್ ಪೆಟ್ರೋಲಿಯಂ ಅಸೋಸಿಯೇಷನ್ ಫ್ರಂಟ್‌ನಡಿ 17 ರಾಜ್ಯಗಳ ಪೆಟ್ರೋಲಿಯಂ ಡೀಲರ್ ಅಸೋಸಿಯೇಷನ್‌ನ ಪ್ರತಿನಿಧಿಗಳ ಸಭೆ ಬಳಿಕ ಪ್ರತಿಕ್ರಿಯಿಸಿದ ಕರ್ನಾಟಕ ರಾಜ್ಯ ಪೆಟ್ರೋಲಿಯಂ ಡೀಲರ್ ಸಂಘದ ಅಧ್ಯಕ್ಷ ಎಚ್.ಎಸ್.ಮಂಜಪ್ಪ, ಕೇಂದ್ರ ಸರ್ಕಾರ ಹಾಗೂ ತೈಲ ಕಂಪನಿಗಳು ಬೇಡಿಕೆಗಳಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಅ.13ರಂದು ಪೆಟ್ರೋಲ್, ಡೀಸೆಲ್ ಖರೀದಿ, ವಿತರಣೆ ಸ್ಥಗಿತಗೊಳಿಸಿ ಬಂದ್ ಮಾಡಲು ನಿರ್ಧರಿಸಲಾಗಿದೆ.
ನಂತರವೂ ಬೇಡಿಕೆ ಈಡೇರಿಸದಿದ್ದರೆ ಅ.27ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು. ದೇಶಾದ್ಯಂತ ಸುಮಾರು 54,000 ಬಂಕ್‌ಗಳಿದ್ದು, ಅ.13ರಂದು ಖರೀದಿ, ವಿತರಣೆ ಸ್ಥಗಿತವಾಗಲಿದೆ’ ಎಂದು ಹೇಳಿದರು. 2016ರ ನ.14ರಂದು ತೈಲ ಕಂಪನಿಗಳು ಹಾಗೂ ಡೀಲರ್‌ಗಳ ಸಂಘಗಳೊಂದಿಗೆ ನಡೆದ ಒಪ್ಪಂದದಂತೆ ಬೇಡಿಕೆಗಳ ಈಡೇರಿಕೆಗೆ ಈವರೆಗೆ ಕ್ರಮ ಕೈಗೊಂಡಿಲ್ಲ.
ನಿರಂತರವಾಗಿ ಮುಂದೂತ್ತಿರುವುದರಿಂದ ತೀವ್ರ ತೊಂದರೆ ಹಾಗೂ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಈ ಬಗ್ಗೆ ಗಮನಕ್ಕೆ ತಂದರೂ ಸ್ಪಂದಿಸದ ಕಾರಣ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದರು. ಪ್ರತಿ ಬಂಕ್‌ಗಳಿಗೆ ವಿಧಿಸಿರುವ “ಮಾರುಕಟ್ಟೆ ಶಿಸ್ತು ಮಾರ್ಗಸೂಚಿ’ಗಳನ್ನು ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. ಆದರೆ ಇತ್ತೀಚೆಗೆ ಗಾಂಧಿ ಜಯಂತಿಯಂದು ಕೇಂದ್ರ ಸರ್ಕಾರ ವಿಧಿಸಿರುವ ಮಾರ್ಗಸೂಚಿಗಳು ಬಾಲಿಷವಾಗಿವೆ.
ಬಂಕ್‌ನಲ್ಲಿನ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೂ ನೀಡಬೇಕು ಹಾಗೂ ದಿಢೀರ್ ತಪಾಸಣೆ ವೇಳೆ ಶೌಚಾಲಯದಲ್ಲಿ ಸ್ವತ್ಛತೆ ಕಂಡುಬರದಿದ್ದರೆ 2 ಲಕ್ಷ ರೂ. ದಂಡ ವಿಧಿಸುವ ನಿಯಮ ರೂಪಿಸಿರುವುದು ಖಂಡನೀಯ ಎಂದು ದೂರಿದರು. ಹಾಗೆಯೇ ಹಿಂದೆಲ್ಲಾ ಐದು ಲೀಟರ್ ತೈಲದ ಅಳತೆಯಲ್ಲಿ 25 ಎಂ.ಎಲ್. ಮಿತಿಯೊಳಗಿನ ವ್ಯತ್ಯಯಕ್ಕೆ ವಿನಾಯ್ತಿಯಿತ್ತು. 25 ಎಂ.ಎಲ್.ಗಿಂತ ಹೆಚ್ಚು ವ್ಯತ್ಯಯವಿದ್ದರೆ ಕ್ರಮ ಕೈಗೊಳ್ಳಲಾಗುತ್ತಿತ್ತು.
ಆದರೆ ಇತ್ತೀಚಿನ ಮಾರ್ಗಸೂಚಿಯಂತೆ ಐದು ಲೀಟರ್ ಮಾಪನದಲ್ಲಿ ಒಂದು ಎಂ.ಎಲ್.ನಷ್ಟು ಏರಿಕೆ ಅಥವಾ ಇಳಿಕೆ ಕಂಡುಬಂದರೆ ಏಳು ದಿನ ಬಂಕ್ ಬಂದ್ ಮಾಡಬೇಕಾಗುತ್ತದೆ. ಬಳಿಕ 25,000 ರೂ. ದಂಡ ಪಾವತಿಸಿ ಮತ್ತೆ ನಿಖರವಾಗಿ ಮಾಪನ ದೃಢೀಕರಿಸಿಕೊಂಡು ವಹಿವಾಟು ನಡೆಸಬೇಕಾಗುತ್ತದೆ. ಇದು ಕೂಡ ಪಾಲನೆಗೆ ಸಾಧ್ಯವಿಲ್ಲದ ನಿಯಮವೆನಿಸಿದೆ ಎಂದು ಹೇಳಿದರು.
ಇಂತಹ ಬಾಲಿಷ ಮಾರ್ಗಸೂಚಿಗಳನ್ನು ಕೈಬಿಡಬೇಕು. ಪ್ರತಿನಿತ್ಯ ತೈಲ ಬೆಲೆ ಪರಿಷ್ಕರಣೆ ವ್ಯವಸ್ಥೆ ಕೈಬಿಡಬೇಕು ಎಂಬುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅ.13ರಂದು ಮುಷ್ಕರ ನಡೆಸಲಾಗುತ್ತಿದೆ. 24 ಗಂಟೆ ಕಾರ್ಯ ನಿರ್ವಹಿಸುವ ಬಂಕ್‌ಗಳು ಅ.12ರ ಮಧ್ಯರಾತ್ರಿಯಿಂದ ಅ.13ರ ಮಧ್ಯರಾತ್ರಿವರೆಗೆ ಬಂದ್ ಆಗಿರಲಿವೆ. ಉಳಿದ ಬಂಕ್‌ಗಳಲ್ಲಿ ಅ.13ರ ಮುಂಜಾನೆ 6ರಿಂದ ಮರುದಿನ ಮುಂಜಾನೆ 6ರವರಗೆ ವಹಿವಾಟು ಸ್ಥಗಿತವಾಗಲಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.