ಬೈಕ್ ಬದಲಿಸದ ಶೋರೂಂನಲ್ಲೇ ಆತಹತ್ಯೆಗೆ ಯತ್ನಿಸಿದ ಮಹಿಳೆ
Team Udayavani, Oct 11, 2017, 11:21 AM IST
ಬೆಂಗಳೂರು: ಪುತ್ರ ಆಸೆಪಟ್ಟ ಎಂಬ ಕಾರಣಕ್ಕೆ ತಾವು ಕಷ್ಟಪಟ್ಟು ಕೂಡಿಟ್ಟಿದ್ದ 1.8 ಲಕ್ಷ ರೂ.ಹಣದಲ್ಲಿ ಕೊಡಿಸಿದ್ದ ಐಷಾರಾಮಿ ಬೈಕ್, ಕೆಲವೇ ತಿಂಗಳಲ್ಲಿ ಹಾಳಾಗಿದ್ದು, ಶೋರೂಮ್‌ನವರು ಬೈಕ್ ಬದಲಾವಣೆ ಮಾಡಿಕೊಡದ ಕಾರಣ ಬೇಸತ್ತ ತಾಯಿ ಬೈಕ್ ಶೋರೂಮ್‌ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೋಮವಾರ ನಡೆದಿದೆ.
ಸರೋಜಮ್ಮ (48) ಆತ್ಮಹತ್ಯೆಗೆ ಯತ್ನಿಸಿದವರು. ಪ್ರಸ್ತುತ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕಬ್ಬನ್ ಪಾರ್ಕ್ ಪೊಲೀಸರು ತಿಳಿಸಿದ್ದಾರೆ. ಸರೋಜಮ್ಮ ತಮ್ಮ ಪುತ್ರ ಶ್ರೀಪಾದ್ ರಾಘವ್‌ಗಾಗಿ ಆರು ತಿಂಗಳ ಹಿಂದೆ ಕಸ್ತೂರಬಾ ರಸ್ತೆಯಲ್ಲಿನ ಖೀವ್‌ರಾಜ್ ಬಜಾಜ್ ಶೋರೂಮ್‌ನಿಂದ ಬಜಾಜ್ ಡಾಮಿನಾರ್ 400 ಸಿಸಿ ಬೈಕ್ ಕೊಡಿಸಿದ್ದರು.
ಖರೀದಿಸಿದ ಕೆಲ ದಿನಗಳಲ್ಲೇ ತಾಯಿ, ಮಗ ಇಬ್ಬರೂ ಜೆಸಿ ರಸ್ತೆಯಲ್ಲಿ ಹೋಗುವಾಗ ಇದಕ್ಕಿದ್ದಂತೆ ಬೈಕ್‌ನಲ್ಲಿ ಹೊಗೆ ಕಾಣಿಸಿಕೊಂಡು ಎಂಜಿನ್‌ನಲ್ಲಿ ಆಯಿಲ್ ಸೋರಿಕೆಯಾಗಿ ಬೆಂಇಕಿ ಹೊತ್ತಿಕೊಂಡಿತ್ತು. ಈ ವೇಳೆ ಸರೋಜಮ್ಮ ಹಾಗೂ ಶ್ರೀಪಾದ್‌ಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ನಂತರ ಟೋಯಿಂಗ್ ಮೂಲಕ ಬೈಕ್ ಅನ್ನು ಶೋರೂಂಗೆ ಕೊಂಡೊಯ್ದರೆ, ಶೋರೂಂನ ಸಿಬ್ಬಂದಿ ರಿಪೇರಿ ಮಾಡುತ್ತೇವೆಯೇ ಹೊರತು ಬೈಕ್ ಬದಲಿಸುವುದಿಲ್ಲ ಎಂದು ತಿಳಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ತಾಯಿ, ಮಗ 1.80 ಲಕ್ಷ ರೂ. ಕೊಟ್ಟು ಬೈಕ್ ಖರೀದಿಸಿದ್ದೇವೆ. ಬೈಕ್‌ನ ಎರಡನೇ ಸರ್ವಿಸ್ ಕೂಡ ಆಗಿಲ್ಲ. ಆಗಲೇ ಈ ರೀತಿ ಸಮಸ್ಯೆಯಾಗಿದೆ. ಹೀಗಾಗಿ ಹೊಸ ಬೈಕ್ ಕೊಡಬೇಕೆಂದು ಪಟ್ಟು ಹಿಡಿದರು. ಆದರೆ, ಶೋರೂಂ ಸಿಬ್ಬಂದಿ ಒಪ್ಪಲ್ಲಿಲ್ಲ. ಇದೀಗ ಇಬ್ಬರ ನಡುವಿನ ಹಗ್ಗ-ಜಗ್ಗಾಟದಲ್ಲಿ ಬೈಕ್ ರಿಪೇರಿಯಾಗದೆ ಶೋರೂಂನಲ್ಲೇ ಉಳಿದಿದೆ.
ಆದಾಗ್ಯೂ ತಾಯಿ, ಮಗ ಆಗಾಗ ಶೋರೂಂಗೆ ಹೋಗಿ ಬೈಕ್ ಬದಲಾವಣೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೊನೆಗೆ ವಕೀಲರ ಮೂಲಕ ನೋಟಿಸ್ ಕೂಡ ಕೊಡಲಾಯಿತು. ಇದಕ್ಕೆ ಪ್ರತಿಯಾಗಿ ಶೋರೂಂನ ಅಧಿಕಾರಿಗಳು ಸರೋಜಮ್ಮ ಅವರಿಗೇ ನೋಟಿಸ್ ನೀಡಿದ್ದಾರೆ.
ಸಿಬ್ಬಂದಿ ಎದುರೇ ವಿಷ ಸೇವನೆ: ಈ ಮಧ್ಯೆ ಲಕ್ಷಾಂತರ ರೂ. ಕೊಟ್ಟು ಐಶಾರಾಮಿ ಬೈಕ್ ಕೊಡಿಸಿದರೂ ಮಗ ಹಳೆಯ ಕೈನೆಟಿಕ್ ಹೊಂಡಾದಲ್ಲಿ ಓಡಾಡುವುದನ್ನು ಕಂಡು ಬೇಸರಗೊಂಡ ತಾಯಿ ಸರೋಜಮ್ಮ, ಸೋಮವಾರ ಬೈಕ್ ಶೂರೂಂಗೆ ಹೋಗಿ ಅಧಿಕಾರಿಗಳ ಜತೆ ಮತ್ತೂಮ್ಮೆ ಚರ್ಚಿಸಿದ್ದಾರೆ.
ಈ ವೇಳೆ ಸರಿಯಾಗಿ ಸ್ಪಂದಿಸಿದ ಅಧಿಕಾರಿಗಳು ಸರೋಜಮ್ಮ ಅವರ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಈಗಾಗಲೇ ಹಲವು ಬಾರಿ ಶೋರೂಮ್‌ಗೆ ತೆರಳಿ ಮಾತುಕತೆ ನಡೆಸಿ ಬೇಸತ್ತಿದ್ದ ಸರೋಜಮ್ಮ, ಸಿಬ್ಬಂದಿಯ ಎದುರೇ ವಿಷ ಸೇವಿಸಿದ್ದಾರೆ. ಕೂಡಲೇ ಕಕ್ಕಾಬಿಕ್ಕಿಯಾದ ಸಿಬ್ಬಂದಿ, ಪುತ್ರ ಶ್ರೀಪಾದ್‌ಗೆ ಕರೆ ಮಾಡಿ, ತಾಯಿ ಆತ್ಮಹತ್ಯೆ ಯತ್ನಿಸಿರುವ ವಿಷಯ ತಿಳಿಸಿದ್ದಾರೆ ಎಂದು ಕಬ್ಬನ್‌ಪಾರ್ಕ್ ಪೊಲೀಸರು ತಿಳಿಸಿದ್ದಾರೆ.
ಅಮ್ಮ ಕಷ್ಟಪಟ್ಟು ಕೂಡಿಟ್ಟ ಹಣ: ಈ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯೆ ನೀಡಿದ ಶ್ರೀಪಾದ, “ನಮ್ಮ ತಾಯಿ ಬಹಳ ಕಷ್ಟಪಟ್ಟು ನನ್ನನ್ನು, ಸಹೋದರಿಯನ್ನು ಸಾಕುತ್ತಿದ್ದಾರೆ. ನಾನೂ ಕೂಡ ಬೆಳಗ್ಗೆ ಎದ್ದು 200 ಮನೆಗಳಿಗೆ ಹಾಲು ಹಾಕುತ್ತೇನೆ. ಶಾಲಾ ವಾಹನ ಚಾಲನೆ ಮಾಡುತ್ತೇನೆ.
ಜೀವನದಲ್ಲಿ ಒಮ್ಮೆ ಐಶಾರಾಮಿ ಬೈಕ್ ಖರೀದಿಸಬೇಕೆಂಬ ಆಸೆಯಿತ್ತು. ಹೀಗಾಗಿ ನಮ್ಮ ತಾಯಿ ಕೂಡಿಟ್ಟ ಹಣದಲ್ಲಿ ಬೈಕ್ ಕೊಡಿಸಿದ್ದರು. ಈಗ ಬೈಕ್‌ನ ಎಂಜಿನ್ ಹಾಳಾಗಿದೆ. ಖರೀದಿಸಿದ ಕೆಲವೇ ದಿನಗಳಲ್ಲಿ ಈ ರೀತಿ ಆಗಿರುವ ಕಾರಣ, ಬೈಕ್ ಬದಲಿಸಿಕೊಡುವಂತೆ ಕೇಳಿಕೊಂಡರು ಶೂರೂಂನ ಸಿಬ್ಬಂದಿ ಸ್ಪಂದಿಸುತ್ತಿಲ್ಲ,’ ಎಂದು ದೂರಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.