ತಂದೆಗೆ ಟೋಪಿ ಹಾಕಿದ ಮಗ ರೇವಣ್ಣ!
Team Udayavani, Oct 12, 2017, 12:05 PM IST
ಎಚ್.ಡಿ.ರೇವಣ್ಣ ಹಾಗೂ ಜೆಡಿಎಸ್‌ನಿಂದ ಅಮಾನತುಗೊಂಡಿರುವ ಶಾಸಕ ಜಮೀರ್ ಅಹಮದ್ ನಡುವಿನ “ಟಾಕ್‌ವಾರ್’ ಚರ್ಚೆಗೆ ಗ್ರಾಸವಾಗಿದೆ. “ಕೌನ್ಸಿಲರ್ ಆಗೋಕೂ ಸಾಧ್ಯವಿಲ್ಲದ ಜಮೀರ್ ಜೆಡಿಎಸ್‌ನಿಂದ ಸಚಿವರಾದ್ರು’ ಎಂಬ ರೇವಣ್ಣ ಮಾತಿನಿಂದ ವ್ಯಗ್ರಗೊಂಡಿರುವ ಜಮೀರ್ ಅಹಮದ್ “ರೇವಣ್ಣಗೆ ಮೀಟರ್ ಇದ್ರೆ ಚಾಮರಾಜಪೇಟೆಯಲ್ಲಿ ಬಂದು ನಿಲ್ಲಲಿ’ ಎಂದು ಸವಾಲು ಹಾಕಿದ್ದಾರೆ. ಅದಕ್ಕೆ ಪ್ರತಿಯಾಗಿ ಕುಣಿಗಲ್‌ನಲ್ಲಿ ಜಮೀರ್ ಅಹಮದ್ ನಿಲ್ಲಲಿ ಎಂದು ರೇವಣ್ಣ ಪ್ರತಿ ಸವಾಲು ಹಾಕಿದ್ದಾರೆ. ಈ ಬಗ್ಗೆ ಜಮೀರ್ ಅಹಮದ್ ಅವರೊಂದಿಗೆ ನೇರಾ-ನೇರ ಮಾತುಕತೆಗೆ ಇಳಿದಾಗ.
*ಎಚ್.ಡಿ.ರೇವಣ್ಣ ಹಾಗೂ ನಿಮ್ಮ ನಡುವೆ “ಟಾಕ್
ವಾರ್’ ಜೋರಾಗಿದೆಯಲ್ಲಾ?
ಏನ್ಮಾಡೋದು, ನಾವು ಸುಮ್ಮನಿದ್ದರೂ ಕಾಲು ಕೆರೆದು
ಕೊಂಡು ಜಗಳಕ್ಕೆ ಬರ್ತಾರೆ. ರೇವಣ್ಣ ಅವರು ಮಾಜಿ ಪ್ರಧಾನಿ ಮಗ, ಮಾಜಿ ಮುಖ್ಯಮಂತ್ರಿಯ ಸಹೋದರ, ನಾನು ಸಾಮಾನ್ಯ ಕುಟುಂಬದಿಂದ ಬಂದು ಜನರ ಪ್ರೀತಿ ಗಳಿಸಿ ಈ ಮಟ್ಟಕ್ಕೆ ಬೆಳೆದಿದ್ದೇನೆ. ಅದಕ್ಕೇ ಸಹಿಸೋದಿಲ್ಲ.
*ರೇವಣ್ಣ ಅವರೇಕೆ ನಿಮ್ಮನ್ನು ಸಹಿಸೋದಿಲ್ಲ?
ನಮ್ಮ ಹತ್ರ ಇದ್ದ, ಈಗ ಕಾಂಗ್ರೆಸ್‌ಗೆ ಹೋಗಿ ಬೆಳೆದು ಬಿಟ್ರೆ ಎಂಬ ಆತಂಕ. ಅದರಲ್ಲೂ ಎಐಸಿಸಿ ಉಸ್ತುವಾರಿ ವೇಣು ಗೋಪಾಲ್, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಅವರು ನಮ್ಮ ಬಗ್ಗೆ ಪ್ರೀತಿ ತೋರಿಸ್ತಿದಾರೆ ಅಂತ ಹೊಟ್ಟೆ ಉರಿ.
*ನೀವು ಕುಮಾರಸ್ವಾಮಿಗೆ ಟೋಪಿ ಹಾಕಿದಿರಂತೆ?
ನನ್ನ ರಾಜಕೀಯ ಜೀವನದಲ್ಲಿ ಯಾರಿಗೂ ಟೋಪಿ ಹಾಕಿಲ್ಲ. ಟೋಪಿ ಹಾಕುವ ಗುಣ ರಕ್ತಗತವಾಗಿರುವುದು ರೇವಣ್ಣ ಅವರಿಗೆ. ತಂದೆಗೆ ಟೋಪಿ ಹಾಕಿದ ಮಗ ಅವರು.
*ನಿಮ್ಮ ಮಾತಿನ ಅರ್ಥ?
ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ವೇಳೆ ಕುಮಾರಸ್ವಾಮಿ ಸಿಎಂ ಆಗಬಾರದೆಂದು ಶತಾಯಗತಾಯ ರೇವಣ್ಣ ಪ್ರಯತ್ನ ಪಟ್ರಾ. ನೀನು ಬಿಜೆಪಿ ಜತೆ ಸೇರಿ ಸಿಎಂ ಆದ್ರೆ ದೇವೇಗೌಡರು ವಿಷ ಕುಡಿದು ಸಾಯ್ತಾರೆ ಎಂದು ಚಂಡಿ ಹಿಡಿದಿದ್ದರು. ನಂತರ ಸರ್ಕಾರ ರಚನೆಯಾಗಿ ಕುಮಾರಸ್ವಾಮಿ ಸಿಎಂ ಆದ ಮೇಲೆ ದೇವೇಗೌಡರಿಗೆ ಟೋಪಿ ಹಾಕಿ, 3 ಖಾತೆ ಸಚಿವರಾಗಿ ಇಡೀ ಸಂಪುಟ ನಿಯಂತ್ರಣಕ್ಕೆ ತೆಗೆದುಕೊಂಡರು.
*ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ನೀವೇ ಕುಮಾರಸ್ವಾಮಿನಾ ದಾರಿ ತಪ್ಪಿಸಿದಿರಂತೆ?
ಕುಮಾರಸ್ವಾಮಿಯೇನು ಹಾಲು ಕುಡಿಯುವ ಮಗುನಾ? ಜೆಡಿಎಸ್-ಬಿಜೆಪಿ ಸರ್ಕಾರ ರಚನೆಗೆ ಮೊದಲು ವಿರೋಧ ಮಾಡಿದವನೇ ನಾನು ಮತ್ತು ಬಳ್ಳಾರಿಯ ಸೂರ್ಯನಾರಾಯಣರೆಡ್ಡಿ. ಕೊನೆಗೆ ನಿನ್ನ ಸ್ನೇಹಿತ ಮುಖ್ಯಮಂತ್ರಿ ಆಗುತ್ತಿದ್ದಾನೆ ಎಂದು ಚೆಲುವಣ್ಣ, ಬಾಲಣ್ಣ, ಪುಟ್ಟಣ್ಣ, ಸಂತೋಷ್ ಲಾಡ್ ಬಲವಂತ ಮಾಡಿ ಒಪ್ಪಿಸಿದರು.ಅಷ್ಟಾ ದರೂ ನಾನು ಮೊದಲು ಸಂಪುಟಕ್ಕೆ ಸೇರಿಯೇ ಇರಲಿಲ್ಲ.
*ಜೆಡಿಎಸ್-ಬಿಜೆಪಿ ಸರ್ಕಾರ ರಚನೆಯಲ್ಲಿ ದೇವೇಗೌಡರ ಪಾತ್ರ ಇತ್ತಾ?
ಇಲ್ಲ. ನನ್ನನ್ನು ಜೆಡಿಎಸ್ ಪಕ್ಷದಿಂದ ಹೊರಗೆ ಹಾಕಿರಬಹುದು. ಹಾಗಂತ ಸುಳ್ಳು ಹೇಳಬಾರದು. ದೇವೇಗೌಡರು ಶೇ.100ಕ್ಕೆ 200 ರಷ್ಟು ಸೆಕ್ಯುಲರ್. ಬಿಜೆಪಿ ಜತೆ ಹೋಗಿದ್ದಕ್ಕೆ ಅವರು ತೀರಾ ನೊಂದಿದ್ದರು. ಅಷ್ಟೇಕೆ ಬಿಬಿಎಂಪಿಯಲ್ಲಿ ಬಿಜೆಪಿ ಜತೆ ಹೋಗಲು ಒಂದು ಹಂತದಲ್ಲಿ ಕುಮಾರಸ್ವಾಮಿ ಸಿದ್ಧ ಇದ್ದರೂ ದೇವೇಗೌಡರು ಬಿಡಲಿಲ್ಲ.
* ದೇವೇಗೌಡರ ಬಗ್ಗೆ ಇಷ್ಟೆಲ್ಲಾ ಪ್ರೀತಿ ಹೊಂದಿರುವವರು ಜೆಡಿಎಸ್ ಯಾಕೆ ಬಿಟ್ಟಿರಿ?
ನಾನು ಬಿಡಲಿಲ್ಲ. ಅವರೇ ಹೊರಗೆ ಹಾಕಿದ್ದಾರೆ. ದೇವೇಗೌಡರಿಗೆ ಇರುವ ಸೆಕ್ಯುಲರ್ ಮೈಂಡ್‌ಸೆಟ್ ಅವರ ಮಕ್ಕಳ ಲ್ಲಿಲ್ಲ. ನಾನು ಜಯನಗರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಸೋತಾಗ ತಡರಾತ್ರಿ ನನ್ನ ಮನೆಗೆ ಬಂದು ಸಂತೈಸಿದವರು ದೇವೇಗೌಡರು. ಚಾಮರಾಜಪೇಟೆ
ಉಪಚುನಾವಣೆಯಲ್ಲಿ ಸ್ಪರ್ಧಿಸಿದಾಗ ಅವರ ಮಕ್ಕಳಿಗಿಂತ ಹೆಚ್ಚಾಗಿ ಪ್ರಚಾರ ಮಾಡಿ ಗೆಲ್ಲಿಸಿದವರು. ನನ್ನ ಜೀವ ಇರುವವರೆಗೂ ಅದನ್ನು ಮರೆಯಲ್ಲ. ನನ್ನ ಬಗ್ಗೆ ಅವರೇನೇ ಅಂದರೂ ನಾನೇನೂ ಮಾತನಾಡಲ್ಲ.
*ನೀವೇನೂ ತಪ್ಪೇ ಮಾಡಿಲ್ವ?
ತಪ್ಪು ಮಾಡಿದ್ದೇನೆ. ಆದರೆ, ದೊಡ್ಡವರಾದ ಅವರು ಕ್ಷಮಿಸಬಹುದಿತ್ತು. ಕುಮಾರಸ್ವಾಮಿಗೆ ಹೇಳಿ ಅವರ ಒಪ್ಪಿಗೆ ಪಡೆದೇ ರಾಜ್ಯಸಭೆ ಚುನಾವಣೆಯಲ್ಲಿ ಮತ ಹಾಕಿದ್ದೆ. ಈ ಬಗ್ಗೆ ಎಲ್ಲಿ ಬೇಕಾದರೂ ಪ್ರಮಾಣ ಮಾಡಲೂ ಸಿದ್ಧ. ಸ್ವಯಂಕೃತ ಅಪರಾಧದಿಂದ ಜೈಲಿಗೆ ಹೋಗಿ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿ ಬಿಜೆಪಿಗೆ ಕಾಟ ಕೊಟ್ಟ ಯಡಿಯೂರಪ ಅವರನ್ನು ಬಿಜೆಪಿಯವರು ರಾಜ್ಯಾಧ್ಯಕ್ಷ ಮಾಡಲಿಲ್ಲವೇ? ನಾನು ಅಂತಹ ತಪ್ಪು ಮಾಡಿದ್ದೆನಾ? ಕ್ಷಮಿಸಬಹುದಿತ್ತಲ್ಲವೇ?
*ಪಕ್ಷ ವಿರೋಧಿ ಚಟುವಟಿಕೆ ಮಾಡಲಿಲ್ವಾ?
ಹೆಬ್ಟಾಳ ಉಪ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಹಿರಿಯ ನಾಯಕ ಜಾಫರ್ ಷರೀಫ್ ಮೊಮ್ಮಗ ಸ್ಪರ್ಧೆ ಮಾಡಿದ್ದಾನೆ. ಸುಮ್ಮನಿದ್ದು ಬಿಡೋಣ ಅಂದೆ, ಕೇಳದೆ ಮುಸ್ಲಿಂ ಅಭ್ಯರ್ಥಿಯನ್ನೇ ಹಾಕಿದರು. 3800 ಮತ ಪಡೆದರು. ನಾನು ಮುಸ್ಲಿಂ ಸಮುದಾಯಕ್ಕೆ ಆತ್ಮಸಾಕ್ಷಿಯಾಗಿ
ಮತ ಹಾಕಲು ಹೇಳಿ ಸುಮ್ಮನಾದೆ. ಅದಕ್ಕೆ “ಮೀರ್ ಸಾದಿಕ್’ ಪಟ್ಟ ಕಟ್ಟಿಕೊಳ್ಳಬೇಕಾಯಿತು. ಗೌಡರು ನನ್ನನ್ನು ಮೀರ್‌ಸಾದಿಕ್ ಅಂದಿದ್ದಕ್ಕೆ ಕುಣಿಗಲ್ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೇಲಿ ಏನಾಯ್ತು ಕೇಳಿಕೊಳ್ಳಿ.
*ಕೌನ್ಸಿಲರ್ ಆಗೋಕೆ ಶಕ್ತಿ ಇಲ್ಲದ ನಿಮ್ಮನ್ನು ಮಿನಿಸ್ಟರ್ ಮಾಡಿದರಂತೆ?
ಅಯ್ಯೋ ಪಾಪ. ರೇವಣ್ಣಗೆ ಬುದ್ಧಿ ಕಡಿಮೆ. 2004ರಲ್ಲಿ ಚಾಮರಾಜಪೇಟೆಯಲ್ಲಿ ಖ್ಯಾತ ನಟ ಅನಂತ್‌ನಾಗ್ ಜೆಡಿಎಸ್ ಅಭ್ಯರ್ಥಿ, ಅವರು ಪಡೆದ ಮತ 4 ಸಾವಿರ. 2008ರಲ್ಲಿ ಯಾರೂ ಪ್ರಚಾರಕ್ಕೆ ಬರದಿದ್ದರೂ 20 ಸಾವಿರ ಲೀಡ್‌ನಲ್ಲಿ ಗೆದ್ದಿದ್ದೆ. 2013ರಲ್ಲಿ ಲೀಡ್ 35 ಸಾವಿರಕ್ಕೆ ಏರಿತ್ತು. ಆ ನಂತರ ಒಂದು ವರ್ಷದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ನಂದಿನಿ ಆಳ್ವಾರನ್ನು ಜೆಡಿಎಸ್ ಅಭ್ಯರ್ಥಿ ಮಾಡಿ ನನ್ನ ದೂರ ಇಟ್ಟು ದೇವೇಗೌಡರು ನನ್ನ ಕ್ಷೇತ್ರದಲ್ಲಿ ಮನೆ ಮನೆಗೆ ಹೋಗಿ ಪ್ರಚಾರ ನಡೆಸಿದಾಗ ಬಂದಿದ್ದು 540 ಮತ. ಮತ್ತೂಂದೇ ವರ್ಷದಲ್ಲಿ ನಡೆದ ಪಾಲಿಕೆ ಚುನಾವಣೆ ನನ್ನ ನೇತೃತ್ವದಲ್ಲಿ ನಡೆದಾಗ ನನ್ನ ಕ್ಷೇತ್ರದಲ್ಲಿ ಒಟ್ಟು ಪಡೆದ ಮತ 56 ಸಾವಿರ. ಇದು ನನ್ನ ತಾಕತ್ತು.
*ತಾಕತ್ತಿದ್ದರೆ ನಿಮ್ಮ ಹುಟ್ಟೂರು ಕುಣಿಗಲ್‌ನಲ್ಲಿ ಸ್ಪರ್ಧೆ ಮಾಡಿ ಅಂತ ರೇವಣ್ಣ ಸವಾಲು ಹಾಕಿದ್ದಾರೆ?
ರೇವಣ್ಣದು ಸ್ವಂತ ಪಕ್ಷ. ಅವರು ಎಲ್ಲಿ ಬೇಕಾದರೂ ಟಿಕೆಟ್ ಪಡೆದು ಸ್ಪರ್ಧೆ ಮಾಡಬಹುದು. ಆದರೆ, ನಾನು ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಕೊಟ್ಟ ಕಡೆ ಸ್ಪರ್ಧೆ ಮಾಡಬೇಕು. ರೇವಣ್ಣ ಅವರು ಟಿಕೆಟ್ ಕೊಡಿಸೋದಾದರೆ ನನ್ನ ಹುಟ್ಟೂರು ಕುಣಿಗಲ್ ಅಷ್ಟೇ ಯಾಕೆ ಅವರ ಕ್ಷೇತ್ರ ಹೊಳೇನರಸೀಪುರ, ಹಾಸನದಲ್ಲೂ ಸ್ಪರ್ಧೆ ಮಾಡೋಕೆ ಸಿದ್ಧ.
*ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮಾತನಾಡಲಿ ಅಂತಾರೆ?
ನನ್ನ ಆಯ್ಕೆ ಮಾಡಿದ್ದು ಚಾಮರಾಜಪೇಟೆಯ ಜನ. ಜೆಡಿಎಸ್ ನಮ್ಮಪ್ಪಂದಾ? ಅವರದೇ ಪಕ್ಷ ಅಮಾನತಿನಲ್ಲಿ ಯಾಕಿಟ್ಟಿದ್ದಾರೆ, ಉಚ್ಛಾಟನೆ ಮಾಡಲಿ, ಆ ಧಮ್ ಯಾಕಿಲ್ಲ?
*ಪಕ್ಷ ಕಟ್ಟಲು ನಿಮ್ಮದೇನೂ ಕೊಡುಗೆ ಇಲ್ಲವಂತೆ?
ರೇವಣ್ಣ ಎಷ್ಟರ ಮಟ್ಟಿಗೆ ಪಕ್ಷ ಕಟ್ಟಿದ್ದಾರೆ ಗೊತ್ತಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಪತ್ನಿಗೆ ಟಿಕೆಟ್ ಸಿಗಲಿಲ್ಲ ಎಂದು ಪಕ್ಷದ ಅಧಿಕೃತ ಅಭ್ಯರ್ಥಿ ಸೋಲಿಸಿದವರು. 2011ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಾನು ಅಲ್ಪಸಂಖ್ಯಾತರ ಸಮಾವೇಶ
ಮಾಡಿದಾಗ ಹಾಸನದಿಂದ ಜನರನ್ನು ಕರೆತರಲು ಬಸ್ಸಿಗೆ ದುಡ್ಡು ನನ್ನಿಂದ ಪಡೆದವರು ರೇವಣ್ಣ. ನನ್ನ ತಂಟೆಗೆ ಬಂದರೆ
ಅವರ ಪುರಾಣ-ಪಂಚಾಂಗ ಬಿಚ್ಚಿಡಬೇಕಾಗುತ್ತದೆ.
*ರೇವಣ್ಣ ನಿಮ್ಮ ಬಳಿ ಹಣ ಪಡೆದಿದ್ದರಾ?
ಹೌದು, ಜನರನ್ನು ಕರೆತರಲು ಬಸ್ಸಿಗೆ ನನ್ನ ಬಳಿ ದುಡ್ಡು ಪಡೆದಿದ್ದರು. ಇಲ್ಲ ಎಂದು ಹೇಳಲಿ. ಅವರು ರಾಜಕೀಯಕ್ಕೆ ಬರುವ ಮೊದಲು ಎಷ್ಟು ಆಸ್ತಿ ಇತ್ತು, ಈಗ ಎಷ್ಟಿದೆ, ನಾನು ರಾಜಕೀಯಕ್ಕೆ ಬರುವ ಮೊದಲು ಎಷ್ಟಿತ್ತು? ಈಗ ಎಷ್ಟಿದೆ ಎಂಬುದರ ಬಗ್ಗೆ ಸಿಬಿಐ ತನಿಖೆಯಾಗಲಿ. ಅವರು ಸವಾಲು ಸ್ವೀಕರಿಸುತ್ತಾರಾ?
* ನಿಮ್ಮನ್ನು ಜೆಡಿಎಸ್‌ಗೆ ಕರೆತಂದದ್ದು ರೇವಣ್ಣ ಅವರಂತೆ?
ನಾನು ಜೆಡಿಎಸ್‌ಗೆ ಬಂದಾಗ ಇವರು ಎಲ್ಲಿದ್ದರೋ ಗೊತ್ತಿಲ್ಲ. ನಾನು ಮಠದ ಹುಡುಗ. ನನಗೆ ಜೆಡಿಎಸ್‌ಗೆ ಹೋಗು ಎಂದವರು ಬಾಲಗಂಗಾಧರನಾಥ ಸ್ವಾಮೀಜಿ. ಇದಕ್ಕೆ ಶೇಖರ್‌ಸ್ವಾಮೀಜಿಯವರೇ ಸಾಕ್ಷಿ. ಎಚ್.ಡಿ.ರೇವಣ್ಣ ಏನು ಎಂಬುದನ್ನು ಈಗ ಬಿಜೆಪಿಯಲ್ಲಿರುವ ಬಚ್ಚೇಗೌಡರನ್ನು ಕೇಳಿದರೆ ಸಾಕು, ಅವರ ಕಥೆ ಹೇಳ್ತಾರೆ.
* ನೀವು ಸಚಿವರಾಗಿದ್ದು ಜೆಡಿಎಸ್‌ನಿಂದಲೇ ಅಲ್ಲವೇ?
ಅಲ್ಪಸಂಖ್ಯಾತರ ಕೋಟಾದಲ್ಲಿ ಕೊಡಬೇಕಿತ್ತು ಕೊಟ್ಟರು, ಧರ್ಮಕ್ಕೆ ಮಾಡಿಲ್ಲ.
*ನೀವು-ಕುಮಾರಸ್ವಾಮಿ ಗಳಸ್ಯ-ಕಂಟಸ್ಯ ರೀತಿ ಇದ್ರಲ್ಲಾ?
ಇದ್ದೆವು. ಆದರೆ, ಜಮೀರ್ ಅಹಮದ್ ಬೆಳೆಯುವುದು ಅವರಿಗೂ ಇಷ್ಟ ಇರಲಿಲ್ಲ. ಕುಮಾರಸ್ವಾಮಿಯವರಿಗೆ ತನಗಿಂತ ಪಕ್ಷದಲ್ಲಿ ಯಾರಾದ್ರೂ ಪವರ್‌ಫುಲ್ ಎಂದು ಗೊತ್ತಾದರೆ ಸಹಿಸುವುದಿಲ್ಲ. ಕುಮಾರಸ್ವಾಮಿಯವರು ನನಗೆ ಕಡಿಮೆ ನೋವು-ಕಾಟ ಕೊಟ್ಟಿಲ್ಲ. ನಾನು ಬೆಳೆಯಬಾರದು
ಎಂದು ಸಾಕಷ್ಟು ಪ್ರಯತ್ನ ನಡೆಸಿದ್ದರು.
*ಜೆಡಿಎಸ್‌ನಿಂದ ಏಳು ಶಾಸಕರು ಅಮಾನತುಗೊಂಡಿದ್ದರೂ ಜಮೀರ್ ಮೇಲೆಯೇ ಯಾಕೆ ಕಣ್ಣು?
ಯಾಕೆಂದರೆ ಒಬ್ಬ ಸಾಮಾನ್ಯ ಬಸ್ ಚಾಲಕನ ಮಗ, ಟ್ರಾನ್ಸ್ ಪೋರ್ಟ್ ಉದ್ಯಮಿಯಾಗಿ ಇಷ್ಟು ಮಟ್ಟಕ್ಕೆ ಬೆಳೆದಿದ್ದಾನೆ. ರಾಜಕಾರಣದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆದುಬಿಟ್ಟರೆ ಎಂಬಭಯ. ದೇವೇಗೌಡರ ಕುಟುಂಬ ಯಾರೂ ಬೆಳೆಯುವುದನ್ನು ಸಹಿಸುವುದಿಲ್ಲ. ಪ್ರಶ್ನೆ ಮಾಡಿದ್ದಕ್ಕೆ ನಾನು ಜೆಡಿಎಸ್ ನಲ್ಲಿ “ಖಳನಾಯಕ’ನಾಗಬೇಕಾಯಿತು. ಜೆಡಿಎಸ್‌ನಲ್ಲಿ ಮುಸ್ಲಿಂ ನಾಯಕರನ್ನು ಬೆಳೆಯಲು ಬಿಡುವುದಿಲ್ಲ. ಅದಕ್ಕೆ ನಾನು, ಸಿ.ಎಂ. ಇಬ್ರಾಹಿಂ, ಖಮರುಲ್ ಇಸ್ಲಾಂ, ರೋಷನ್ ಬೇಗ್, ಅಬ್ದುಲ್ ಅಜೀಂ, ಇಕ್ಬಾಲ್ ಆನ್ಸಾರಿ ಸಾಕ್ಷಿ.
* ನಿಮಗೆ ಟಿಕೆಟ್ ನೀಡಲು ಕಾಂಗ್ರೆಸ್‌ನಲ್ಲಿ ವಿರೋಧ ಇದೆಯಂತೆ?
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೊಡುವುದಾಗಿ ಖುದ್ದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ನನ್ನೊಬ್ಬನಿಗೆ ಅಷ್ಟೇ ಅಲ್ಲ ನಾವು ಏಳೂ ಜನರಿಗೆ ಟಿಕೆಟ್ ದೊರೆಯಲಿದೆ. ಸಹಜವಾಗಿ ಕಳೆದ ಚುನಾವಣೆಗೆ ನಿಂತವರು ಆಕಾಂಕ್ಷಿಗಳಾಗಿರುತ್ತಾರೆ. ಆದರೆ, ಹೈಕಮಾಂಡ್ ಮಾತಿಗೆ ಯಾರೂ ಮೀರುವುದಿಲ್ಲ. ಹಿಂದೊಮ್ಮೆ ಕಾಂಗ್ರೆಸ್ ಮಾತನ್ನು ಕೊಟ್ಟಂತೆ ಸಾಂಗ್ಲಿಯಾನ ಅವರಿಗೆ ಬೆಂಗಳೂರು ಸೆಂಟ್ರಲ್‌ನಲ್ಲಿ ಟಿಕೆಟ್ ನೀಡಿತ್ತು. ಏಳು ಬಾರಿ ಗೆದ್ದಿದ್ದ ಜಾಫರ್ ಷರೀಫ್ ಅವರ ವಿರೋಧವನ್ನೂ
ಲೆಕ್ಕಿಸಿರಲಿಲ್ಲ. ಅದು ಕಾಂಗ್ರೆಸ್ ಹೈಕಮಾಂಡ್ ಅಂದ್ರೆ.
*ಕಾಂಗ್ರೆಸ್‌ನಲ್ಲಿ ನೀವು ಸರ್ವೈವ್ ಆಗ್ತಿರಾ?
ನಾನು ಕಾಂಗ್ರೆಸ್‌ನಲ್ಲಿ ನಾಯಕನಾಗಲು ಹೋಗುತ್ತಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಇರುತ್ತೇನೆ. ಅಲ್ಲೂ ಸಾಕಷ್ಟು ಮುಸ್ಲಿಂ ನಾಯಕರಿದ್ದಾರೆ. ಜಾಫರ್ ಷರೀಫ್, ರೆಹಮಾನ್ ಖಾನ್, ಇಬ್ರಾಹಿಂ, ರೋಷನ್‌ಬೇಗ್, ನಸೀರ್ ಅಹಮದ್.. ಅವರ ನಾಯಕತ್ವದಲ್ಲೇ ಕೆಲಸ ಮಾಡಲು ನಾನು ಸಿದ್ಧ. ಇಡೀ ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಕಾಂಗ್ರೆಸ್ ಬೆಂಬಲಿಸುವಂತೆ ರಾಜ್ಯ ಪ್ರವಾಸ ಮಾಡುತ್ತೇನೆ. ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂಬುದು ನನ್ನ ಗುರಿ.
ಸಂದರ್ಶನ
ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
ನಾನೂ ಸೀನಿಯರ್ ಲೀಡರ್, ರಾಜ್ಯಕ್ಕೆ ದಲಿತ ಸಿಎಂ ಪ್ರಸ್ತಾವ ಬಂದರೆ ಮುಂಚೂಣಿಯಲ್ಲಿರುವೆ
Congress ಸರಕಾರದಲ್ಲಿ ಹಣಕಾಸು ಸಮಸ್ಯೆಯಿಂದ ಶಾಸಕರ ಬೇಡಿಕೆ ಈಡೇರಿಲ್ಲ ಎನ್ನುವುದು ವಾಸ್ತವ
ಬಿಜೆಪಿಗೆ ಇಡೀ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.