ಬೆಲೆ ಬಲು, ಬಲು ಏರಿಕೆ!
Team Udayavani, Oct 16, 2017, 11:03 AM IST
ಇಂದು ನಾವು ಬಳಸುವ ಆಹಾರೋತ್ಪನ್ನಗಳ ಬೆಲೆ ಏರುತ್ತಲೇ ಇದೆ. ಮೂರು ವರ್ಷದ ಹಿಂದೆ ಅಕ್ಕಿ, ರಾಗಿ ನಡುವಣ ಬೆಲೆ ಅಜಗಜಾಂತರವಿತ್ತು. ಇವತ್ತು ಹೆಚ್ಚಾ ಕಮ್ಮಿ ಎರಡೂ ಒಂದೇ ಆಗಿದೆ. ಗೋಧಿ, ಅಕ್ಕಿ ಕೂಡ ದರ ಸ್ಪರ್ಧೆಗೆ ನಿಂತಿವೆ. ನಿಮಗಿಂತ ನಾನೇನು ಕಮ್ಮಿ ಅನ್ನೋ ರೀತಿ ತೊಗರಿ ಬೇಳೆ- ಅಕ್ಕಿ, ರಾಗಿ, ಗೋಧಿಯನ್ನು ಮೀರಿಸಿ ಬೆಲೆ ಗಿಟ್ಟಿಸಿಕೊಂಡಿದೆ. ವರ್ಷಕ್ಕೆ ಏನಿಲ್ಲ ಅಂದರೂ ಕನಿಷ್ಠ ಶೇ. 10-20ರಷ್ಟು ಬೆಲೆ ಏರಿಸಿಕೊಳ್ಳುತ್ತಿರುವ ನಮ್ಮ ಆಹಾರ ಉತ್ಪನ್ನಗಳ ಹಿಂದಿನ ಗುಟ್ಟು ವಿಶ್ವಆಹಾರ ದಿನದ ನೆಪದಲ್ಲಿ ಇಲ್ಲಿ ರಟ್ಟಾಗಿದೆ.
ಅರವತ್ತರ ದಶಕದಲ್ಲಿ ನಮ್ಮ ಆಹಾರ ಭದ್ರತೆಯ ವಿಚಾರವಾಗಿ ಹಡಗಿನಿಂದ ಬಾಯಿಗೆ (sಜಜಿಟ ಠಿಟ ಞಟuಠಿಜ) ಎನ್ನುವ ಮಾತು ಚಾಲ್ತಿಯಲ್ಲಿ ಇತ್ತು. ಅಮೆರಿಕದ ಸಂಸದರೊಬ್ಬರು ಭಾರತದ ಹಸಿವನ್ನು ನೀಗಿಸಲು ಏರ್ಪಡಿಸಿದ್ದ ಚರ್ಚೆಯಲ್ಲಿ ಭಾಗವಹಿಸಿ “ಭಾರತವನ್ನು ಹಸಿವಿನಿಂದ ಉಳಿಸಲು ಅದು ಯೋಗ್ಯ ರಾಷ್ಟ್ರವಲ್ಲ’ ಎಂದೆಲ್ಲ ಮೂದಲಿಸಿದ್ದರು.
ನಮ್ಮ ದೇಶದ ಅಂದಿನ ಪ್ರಧಾನಿ ಅಮೆರಿಕಾ ವಿದೇಶಾಂಗ ನೀತಿಯನ್ನು ಟೀಕಿಸಿದ್ದರಿಂದ, ಭಾರತಕ್ಕೆ ಹೊರಟಿದ್ದ ಆಹಾರ ಸರಕನ್ನು ಹಿಂತೆಗೆದುಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದರು. ಇದನ್ನು ನೀಗಿಸಲು ಹುಟ್ಟಿಕೊಂಡ “ಹಸಿರು ಕ್ರಾಂತಿ’ ಆಹಾರ ಭದ್ರತೆಯನ್ನು ಒದಗಿಸುವಲ್ಲಿ ಯಶಸ್ಸನ್ನು ಕಂಡಿತು. ಜೊತೆಗೆ ಅದರದ್ದೇ ಆದ ದುಷ್ಪರಿಣಾಮಗಳನ್ನು ನಾವೆಲ್ಲ ಅನುಭವಿಸಬೇಕಾಯಿತು. ಇಂದಿಗೂ ಅದು ತಪ್ಪಿಲ್ಲ.
ಬೆಳೆದರೂ ಪ್ರಯೋಜನ ಇಲ್ಲ
ಕಳೆದ ವಾರ ಮಹಾರಾಷ್ಟ್ರದ ಯವತ್‌ಮಾಲ್‌ನಲ್ಲಿ ಕೀಟನಾಶಕ ಸಿಂಪಡಿಸುವಾಗ ಸುಮಾರು 50 ಜನ ರೈತರು ಮೃತಪಟ್ಟಿದ್ದಾರೆ. ಮಣ್ಣಿನ ಅಪೌಷ್ಟಿಕತೆ, ರಾಸಾಯನಿಕ ಕೀಟನಾಶಕ ಮತ್ತು ಕಳೆನಾಶಕಗಳ ಅಂಶ ನಮ್ಮ ಆಹಾರದಿಂದ ತಾಯಿಯ ಎದೆ ಹಾಲಿನವರೆಗೆ ಆವರಿಸಿಕೊಂಡಿದೆ. ಆದರೂ ಆಹಾರ ಭದ್ರತೆಯಲ್ಲಿ, ಅದರಲ್ಲೂ ವಿಶೇಷವಾಗಿ ಮಧ್ಯಮವರ್ಗ ಯಥೇಚ್ಚವಾಗಿ ಬಳಸುವ ಎರಡು ಏಕದಳ ಧಾನ್ಯಗಳಾದ ಅಕ್ಕಿ ಮತ್ತು ಗೋಧಿಯಲ್ಲಿ ಗಣನೀಯವಾದ ಉತ್ಪಾದನೆ ಇನ್ನೂ ಕಂಡೇ ಇಲ್ಲ.
ಇಂದು ನಮ್ಮಲ್ಲಿ ಸುಮಾರು 100 ಮಿಲಿಯನ್ ಟನ್ ಅಕ್ಕಿ ಮತ್ತು 100 ಮಿಲಿಯನ್ ಟನ್ ಗೋಧಿ ಬೆಳೆಯಲಾಗುತ್ತಿದೆ. ನಮ್ಮ ಒಟ್ಟು ಆಹಾರ ಧಾನ್ಯದ ಬೆಳೆ 273 ಮಿಲಿಯನ್ ಟನ್ ಮುಟ್ಟಿದೆ. ಇದರಲ್ಲಿ ಸುಮಾರು 20 ಮಿಲಿಯನ್ ಟನ್ ಪ್ರಾಣಿಗಳ ಮೇವಿಗೆ ಬಳಸುವ ಮೆಕ್ಕೆ ಜೋಳ ಕೂಡ ಸೇರಿದೆ. ಇದೇ ರೀತಿ ಸುಮಾರು 300 ಮಿಲಿಯನ್ ಟನ್ ಹಣ್ಣು ಮತ್ತು ತರಕಾರಿಯನ್ನು ಸಹ ಬೆಳೆಯಲಾಗುತ್ತಿದೆ. 153 ಮಿಲಿಯನ್ ಟನ್ ಹಾಲನ್ನು ಕೂಡ ಉತ್ಪಾದಿಸುತ್ತೇವೆ.
ಜೊತೆಗೆ ಕುಕ್ಕುಟ ಉದ್ಯಮ ಗಣನೀಯವಾಗಿ ಬೆಳೆದಿದ್ದು, ಸುಮಾರು 75 ಬಿಲಿಯನ್ ಮೊಟ್ಟೆ ಹಾಗೂ ಸುಮಾರು 4 ಮಿಲಿಯನ್ ಟನ್ ಕೋಳಿ ಮಾಂಸವನ್ನು ಉತ್ಪಾದಿಸಲಾಗುತ್ತಿದೆ. ಹೀಗಿದ್ದರೂ ಸಹ ನಾವು ಸುಮಾರು 65 ಸಾವಿರ ಕೋಟಿಯಷ್ಟು ಅಂದರೆ ಸುಮಾರು 15 ಮಿಲಿಯನ್ ಟನ್‌ನಷ್ಟು ಆಹಾರೋತ್ಪನ್ನವನ್ನು ಆಮದು ಮಾಡಿಕೊಳ್ಳುತ್ತಲೇ ಇದ್ದೇವೆ. ಇದರಲ್ಲಿ ಸುಮಾರು 6 ಮಿಲಿಯನ್ ಟನ್ ಬೇಳೆಕಾಳನ್ನು ಸೇರಿಸಿಕೊಳ್ಳಬಹುದು. ನಾವೀಗ ಅಭಿವೃದ್ಧಿ ಹೊಂದುತ್ತಿದ್ದೇವೆ ಎಂದು ಬೆನ್ನು ತಟ್ಟಿಕೊಂಡರೂ, ಆಮದು- ರಫ್ತಿನ ನಡುವೆ ಅಂತ ವ್ಯತ್ಯಾಸವೇನೂ ಆಗಿಲ್ಲ.
ನಾಮ ಹಾಕುವ ಸರ್ಕಾರ
ಕಳೆದ ವರ್ಷ ಭಾರತದ ರೈತರು ಸರ್ಕಾರದ ಬೆಂಬಲ ಬೆಲೆಗೆ ಓಗೊಟ್ಟು ಸುಮಾರು 6 ಮಿಲಿಯನ್ ಟನ್ ಬೇಳೆಕಾಳನ್ನು ಹೆಚ್ಚಾಗಿ ಬೆಳೆದರು. ವಿಪರ್ಯಾಸವೆಂದರೆ ನಮ್ಮ ದೇಶಕ್ಕೆ ಬೇಕಾದ ಸುಮಾರು 23 ಮಿಲಿಯನ್ ಟನ್ ಬೇಳೆಕಾಳನ್ನು ಬೆಳೆದರೂ ಸಹ ಸರ್ಕಾರ ಹೊರ ದೇಶದಿಂದ 6 ಮಿಲಿಯನ್ ಟನ್ ಬೇಳೆಕಾಳನ್ನು ಆಮದು ಮಾಡಿಕೊಂಡಿತು. ಇದರ ಪರಿಣಾಮ ಭಾರತದ ಬೇಳೆಕಾಳಿಗೆ ಸರ್ಕಾರವೇ ನಿಗದಿ ಮಾಡಿದ ಕನಿಷ್ಠ ಬೆಲೆಗಿಂತ ಶೇ.40ರಷ್ಟು ಬೆಲೆ ಕುಸಿಯಿತು.
ಸರ್ಕಾರದ ಬೆಂಬಲ ಬೆಲೆಯನ್ನು ನಂಬಿ ಅಧಿಕ ಬೇಳೆಕಾಳು ಬೆಳೆದ ರೈತರಿಗೆ ಇದು ದುರಂತವೇ ಸರಿ. ನಮ್ಮಲ್ಲಿ ಗ್ರಾಹಕರ ರಕ್ಷಣೆಗೆ ಸದಾ ಮುಂದಿರುವ ಸರ್ಕಾರ ರೈತರ ರಕ್ಷಣೆಯಲ್ಲಿ ಅದೇ ಕಾಳಜಿ ತೋರದು ಅನ್ನೋದಕ್ಕೆ ಇದಕ್ಕಿಂತ ತಾಜಾ ಉದಾಹರಣೆ ಮತ್ತೂಂದು ಸಿಗೋದಿಲ್ಲ. ಸರ್ಕಾರವೇ ನಿಗದಿಪಡಿಸುವ ಬೆಂಬಲ ಬೆಲೆ ಶೇ.80ರಷ್ಟು ರೈತರಿಗೆ ತಲುಪುವುದೇ ಇರುವ ಪರಿಸ್ಥಿತಿ ನಮ್ಮಲ್ಲಿ ಇದೆ. ಡಾ.ಎಂ.ಎಸ್.ಸ್ವಾಮಿನಾಥನ್ ಸಮಿತಿ ಸೂಚಿಸಿದ ಕನಿಷ್ಠ ಬೆಲೆ ಖರ್ಚಿನ ಮೇಲೆ ಶೇ.50ರಷ್ಟು ಲಾಭವನ್ನು ಅನುಷ್ಟಾನಗೊಳಿಸದೆ ಒಂದೂವರೆ ದಶಕ ಕಾಲಹರಣ ಮಾಡಿದೆ.
ಈಗ ಹಣದುಬ್ಬರ ಶೇ.3 ರಷ್ಟು ಇದೆ ಎಂದು ಸರ್ಕಾರ ಹೆಮ್ಮೆ ಪಡುತ್ತಿದೆ. ಇದರ ಹಿಂದಿನ ಕಾರಣ ರೈತರಿಗೆ ಬೆಂಬಲ ಬೆಲೆಗಿಂತ ಶೇ.30 ರಿಂದ 40 ರಷ್ಟು ಬೆಲೆ ಕುಸಿತವಾಗಿರುವುದನ್ನು ನಾವು ಗಮನಿಸಬಹುದು. ಸರ್ಕಾರ ರೈತರು ಬೆಳೆದ ಬೆಳೆಗೆ ಎಲ್ಲಿಲ್ಲದ ನಿಯಂತ್ರಣ ಒಡ್ಡುತ್ತದೆ. ತಮಗೆ ಉತ್ತಮ ಬೆಲೆ ಸಿಕ್ಕಲ್ಲಿ ರಫ್ತು ಮಾಡುವಂತಿಲ್ಲ. ಇಲ್ಲಿ ಅವರ ಬೆಲೆಯನ್ನು ತಗ್ಗಿಸಲು ಸರ್ಕಾರ ಯಾವಾಗ ಬೇಕಾದರೂ ಆಹಾರ ಆಮದು ಮಾಡಿಕೊಳ್ಳಬಹುದು. ಕೆಲವೊಮ್ಮೆ ರಾತ್ರೋರಾತ್ರಿ ಇನ್ನೆರಡು ತಿಂಗಳಲ್ಲಿ ರಫ್ತು ಮಾಡಿ ಎಂದು ಶಿಫಾರಸ್ಸು ಮಾಡುತ್ತದೆ. ಇಂಥ ಆಮದು ಮತ್ತು ರಫ್ತು ಈ ರೀತಿ ಸರ್ಕಾರದ ದ್ವಂದ್ವ ನೀತಿಯಿಂದ ರೈತರು ಉಳಿಯಲು ಸಾಧ್ಯವೇ? ನಾವು ಆಹಾರ ಸ್ವಾವಲಂಬಿಗಳಾಗಲು ಹೇಗೆ ಸಾಧ್ಯ?
ಗ್ರಾಹಕರೇ ಮುಖ್ಯ
ಉಳಿದ ಕೈಗಾರಿಕಾ ಉತ್ಪನ್ನಗಳಿಗೆ ಸರ್ಕಾರ ಎಲ್ಲ ರೀತಿಯ ರಿಯಾಯಿತಿಯನ್ನು ಕೊಟ್ಟು ಉದ್ಯಮಿಗಳಿಗೆ ಲಾಭ ಬರುವಂತೆ ನೋಡಿಕೊಳ್ಳುತ್ತದೆ. ಆದರೆ ರೈತಾಪಿ ವರ್ಗವನ್ನು ಒಂದು ರೀತಿಯಲ್ಲಿ ಗುಲಾಮರಂತೆ ಕಾಣುತ್ತಲೇ ಇದೆ. ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಅಂದರೆ ಇದೇ. ಆಹಾರದ ಬೆಳವಣಿಗೆಯಲ್ಲಿ ಗಾತ್ರದಷ್ಟು ಗುಣ ಕಾಣದು. ಆಹಾರ ವೈವಿಧ್ಯತೆಯಲ್ಲಂತೂ ಮಾರಣಹೋಮವಾಗಿದೆ. ಡಾ.ರಿಚಾರಿಯ ಹೇಳಿದಂತೆ ಭಾರತದ ಅಕ್ಕಿ ತಳಿಗಳು ಸುಮಾರು 1 ಲಕ್ಷದಷ್ಟಿವೆ.
ಆದರೆ ಇಂದು ಸೋನಾಮಸೂರಿಯಂಥ ಒಂದೋ ಎರಡೋ ತಳಿಗಳಿಗೆ ಮಾತ್ರ ಜೋತುಬಿದ್ದಿದ್ದೇವೆ. ತರಕಾರಿಯ ಹೆಸರಿನಲ್ಲಿ ಸುಮಾರು 35 ಮಿಲಿಯನ್ ಟನ್ ಆಲೂಗೆಡ್ಡೆ ಬೆಳೆದು, ಅದನ್ನು ರೊಟ್ಟಿಯೊಂದಿಗೆ ಆಲೂಗೆಡ್ಡೆ ಪಲ್ಯ ಮಾಡಿ ಒಂದು ಸ್ಟಾರ್ಚ್‌ಗೆ ಇನ್ನೊಂದು ಸ್ಟಾರ್ಚ್ (ಗಂಜಿ) ಸೇರಿಸಿ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳುತ್ತಿದ್ದೇವೆ. ಅಲ್ಲದೆ ನಮ್ಮ ಕೆರೆ, ಕುಂಟೆ, ನದಿಗಳನ್ನೆಲ್ಲಾ ಹೀರಿ ಬೆಳೆದ ಸುಮಾರು 300 ಮಿಲಿಯನ್ ಟನ್ ಕಬ್ಬಿನಿಂದ ಸುಮಾರು 30 ಮಿಲಿಯನ್ ಟನ್ ಸಕ್ಕರೆ ಉತ್ಪಾದಿಸುತ್ತಿದ್ದೇವೆ.
ಅದರ ಉಪಉತ್ಪನ್ನವಾಗಿ ಬರುವ ಸಾರಾಯಿಯನ್ನು ಜನರಿಗೆ ಹಂಚಿ ಮದುಮೇಹ ಮತ್ತು ಲಿವರ್ ಸಮಸ್ಯೆ ಹೆಚ್ಚಾಗಲು ನೆರವಾಗುತ್ತಿದ್ದೇವೆ. ನಮ್ಮಲ್ಲಿ ಇನ್ನೂ ಸಹ ಶೇ.1 ರಷ್ಟು ಸಣ್ಣ ಇಳಿವರಿ ರೈತರಲ್ಲಿ ಆಹಾರ ವೈವಿಧ್ಯತೆಯ ಸಂಪತ್ತು ಉಳಿದುಕೊಂಡಿದೆ. ಅಲ್ಲದೆ ಜಾನುವಾರುಗಳ ವೈವಿಧ್ಯತೆ ಕೆಲವು ಭಾಗಗಳಲ್ಲಿ ಇನ್ನೂ ಉಳಿದುಕೊಂಡಿದೆ. ಭವಿಷ್ಯದಲ್ಲಿ ಆಹಾರದ ವೈವಿಧ್ಯತೆಯನ್ನು ಉತ್ತೇಜಿಸಿ, ಆಹಾರದ ಭದ್ರತೆ ಮಾಡಿಕೊಳ್ಳಬೇಕು. ಇವಿಷ್ಟೇ ಅಲ್ಲ, ನಮ್ಮ ಮುಂದಿರುವ ಸವಾಲೆಂದರೆ ಪೌಷ್ಟಿಕಾಂಶದ ಭದ್ರತೆ ಹಾಗೂ ಆರೋಗ್ಯದ ರಕ್ಷಣೆಗೆ ನಾಂದಿಯಾಡಬೇಕಾಗಿದೆ. ಇಲ್ಲವಾದರೆ ಭವಿಷ್ಯದಲ್ಲಿ ಅಭದ್ರತೆ ಗ್ಯಾರಂಟಿ.
ಬೆಲೆ ಏರಿದರೂ ಪ್ರಯೋಜನವಿಲ್ಲ…
ಈರುಳ್ಳಿ ಬೆಲೆ ಕೆ.ಜಿ.ಗೆ 120ರೂ. ದಾಟಬಹುದು, ತೊಗರಿ ಬೇಳೆಯ ಬೆಲೆ 150ರೂ.ಗೆ ತಲುಪಬಹುದು. ಎಲ್ಲವೂ ಗ್ರಾಹಕರಿಗೆ ಕಣ್ಣೀರು ತರಿಸಬಹುದು. ಇಷ್ಟಾದರೂ ಗ್ರಾಹಕರು ಕೊಡುವ ಹಣ ನೇರವಾಗಿ ಉತ್ಪಾದಕರಿಗೆ ತಲುಪುತ್ತದೆಯೇ ? ಇಲ್ಲವೇ ಇಲ್ಲ. ನಮ್ಮಲ್ಲಿ ಗ್ರಾಹಕರು-ಉತ್ಪಾದಕರ ಬೆಲೆಯ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಒಂದು ಸತ್ಯ ಏನೆಂದರೆ, ಐದುಗ್ರಾಂ.
ಕಾಫಿಪುಡಿಯಿಂದ ಒಂದು ಲೋಟ ಕಾಫಿಯಾಗುತ್ತದೆ ಅಂದರೆ ಒಂದು ಕೆ.ಜಿ ಕಾಫಿಬೀಜ ಎಷ್ಟು ಲಾಭ ಮಾಡಬಹುದು? ಕಾಫಿ ಉತ್ಪಾದಕನಿಗೆ ಕೆ.ಜಿಗೆ ಬೀಜಕ್ಕೆ 100ರೂ.ಕೂಡ ಸಿಗುವುದಿಲ್ಲ. ಉತ್ಪಾದಕನಿಗೆ ಸಿಗುವ, ಗ್ರಾಹಕರು ಕೊಡುವ ಮೊತ್ತಕ್ಕೆ ಶೇ.200-300ರಷ್ಟು ಅಂತರವಿದೆ. ಇದು ಆರೋಗ್ಯಯುತ ಮಾರ್ಕೆಟ್‌ನ ಲಕ್ಷಣವಲ್ಲ. ಶೇ. 50ರಷ್ಟು ವ್ಯತ್ಯಾಸವಿದ್ದರೆ ತೊಂದರೆ ಇಲ್ಲ. ಆದರೆ ನೂರಾರು ಪಟ್ಟು ಅಂತರ ಮಧ್ಯವರ್ತಿಗಳನ್ನು ಉದ್ದಾರ ಮಾಡುತ್ತಿದೆ.
ವೈವಿಧ್ಯತೆ ಇಲ್ಲ
ಆಹಾರ ಸ್ವಾವಲಂಬನೆ ಗುಟ್ಟು ಇರೋದು ವೈವಿಧ್ಯತೆಯಲ್ಲಿ. ಈಗ ಅದು ಇಲ್ಲ. ನಾವು ಸೋನಾಮಸೂರಿ, ಬಾಸುಮತಿ ಅಕ್ಕಿಯ ಹಿಂದೆ ಬಿದ್ದು ಲಕ್ಷಾಂತರ ತಳಿಗಳನ್ನೇ ಮರೆತಿದ್ದೇವೆ. ಮಾರ್ಕೆಟ್‌ನಲ್ಲೂ ಅಷ್ಟೇ. ಹೆಚ್ಚೆಂದರೆ 5 ಥರದ ಅಕ್ಕಿ ಸಿಗಬಹುದು. ಗೋಧಿಯಲ್ಲೂ ಅಷ್ಟೇ. ವೈವಿಧ್ಯತೆ ಉಳಿಯಲು ಏನು ಮಾಡಬೇಕು? ಮಾಡಬೇಕಾದ್ದು ಇಷ್ಟೇ. ಪ್ರತಿ ಬೆಳೆಯನ್ನೂ ಬ್ರಾಂಡ್ ಮಾಡಬೇಕು. ಉದಾಹರಣೆ- ಹಾಲು ಅಂದರೆ ಅದು ಕೇವಲ ಹಾಲು. ಹೀಗೆ ಆಗಬಾರದು. ಇದು ಮಲನಾಡಗಿಡ್ಡದ ಹಾಲು, ದೇಸಿ ತಳಿಯ ಹಾಲು ಹೀಗೆ ಬ್ರಾಂಡ್ ಆದರೆ ಕೊಳ್ಳುವವರೂ ಹೆಚ್ಚುತ್ತಾರೆ. ಆ ತಳಿಗಳೂ ಉಳಿಯುತ್ತವೆ. ವೈವಿಧ್ಯತೆ ಬದುಕುತ್ತದೆ.
ತಲುಪದ ಬೆಂಬಲ ಬೆಲೆ
ನಮ್ಮ ದೇಶದಲ್ಲಿ ಬೆಂಬಲ ಬೆಲೆ ಸಿಗೋದು ಅಕ್ಕಿ ಮತ್ತು ಗೋಧಿಗೆ ಮಾತ್ರ. ಗೋಧಿಯ ಬೆಂಬಲ ಬೆಲೆ ಆಂಧ್ರ, ಪಂಜಾಬ್‌ಗಳನ್ನು ಸುಲಭವಾಗಿ ತಲುಪುತ್ತದೆ. ಆದರೆ ಅದೇ ಬೆಲೆ ಬಿಹಾರವನ್ನು ಮುಟ್ಟೋದಿಲ್ಲ. ಇದರಿಂದ ಬೆಳೆ ವೈವಿಧ್ಯತೆಯ ಬಗ್ಗೆ ನಿರಾಸಕ್ತಿ ಕೂಡ ಇದೆ. ಸರ್ಕಾರಕ್ಕೆ ಗೊತ್ತಿದ್ದರೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದರ ಹಿಂದೆ ರಾಜಕೀಯ ಹೊಯ್ದಾಟಗಳು ಸೇರಿವೆ. ದುರಂತ ನೋಡಿ, ನಮ್ಮ ರಾಷ್ಟ್ರದ ಈರುಳ್ಳಿಯನ್ನು ನಿಯಂತ್ರಿಸುವುದು ದೇಶದ ನಾಲ್ಕು ಮಂಡಿಗಳು. ರೈತರು ಈರುಳ್ಳಿ ಬೆಳೆದಾಗ ಬೆಲೆ ಇಳಿಸುವುದು, ನಂತರ ತಮ್ಮ ಲಾಭಕ್ಕೆ ಏರಿಸಿಕೊಳ್ಳುವ ತಾಕತ್ತು ಈ ಮಂಡಿಗಳಿಗೆ ಇದೆ.
* ಡಾ.ಕೆ.ಸಿ. ರಘು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.