‘ಕಾಂಗ್ರೆಸ್‌ನಲ್ಲೇ ಸಂತೋಷವಾಗಿದ್ದೇನೆ, ಬಿಜೆಪಿಗೆ ಹೋಗಲ್ಲ’
Team Udayavani, Oct 17, 2017, 4:37 PM IST
ಮೊದಲ ಬಾರಿಗೆ ಶಾಸಕರಾಗಿ, ಮೀನುಗಾರಿಕೆ, ಯುವಸಬಲೀಕರಣ ಹಾಗೂ ಕ್ರೀಡಾ ಸಚಿವರಾಗಿ, ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ, ಈಗ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಭಡ್ತಿ ಪಡೆದ ಪ್ರಮೋದ್ ಮಧ್ವರಾಜ್ ಅವರು ಹಂತ- ಹಂತವಾಗಿ ಉನ್ನತಿಯನ್ನು ಪಡೆದವರು. ಮೊದಲ ಬಾರಿಗೆ ಸಚಿವರಾದರೂ ಅಲ್ಪ ಅವಧಿಯಲ್ಲಿಯೇ ಜನಪರ ಹಾಗೂ ಭ್ರಷ್ಟಚಾರ ಮುಕ್ತ ಆಡಳಿತದೊಂದಿಗೆ ತನ್ನ ವಿಧಾನಸಭಾ ಕ್ಷೇತ್ರಕ್ಕೆ ಅತೀ ಹೆಚ್ಚಿನ ಅನುದಾನ ತಂದು ಕೊಟ್ಟ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಉದಯವಾಣಿ’ಯೊಂದಿಗೆ ಮಾತನಾಡಿದ ಸಚಿವ ಪ್ರಮೋದ್ ಅವರು ತಮ್ಮ ಮುಂದಿನ ರಾಜಕೀಯ ಭವಿಷ್ಯ, ಮುಂಬರುವ ವಿಧಾನಸಭಾ ಚುನಾವಣೆ, ಮುಂದಿನ ಕಾರ್ಯ ಯೋಜನೆಗಳ ಕುರಿತು ಮುಕ್ತವಾಗಿ ಹಂಚಿಕೊಂಡಿದ್ದಾರೆ.
►Video Link►ಸಚಿವ ಪ್ರಮೋದ್ ಮಧ್ವರಾಜ್ ಅವರೊಂದಿಗೆ ವಿಶೇಷ ಮಾತುಕತೆ: http://bit.ly/2yvoCtl
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಮತ್ತೆ ಗೆಲ್ಲುವ ವಿಶ್ವಾಸವಿದೆಯೇ?
– ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮಾಡಿರುವಷ್ಟು ಕೆಲಸ- ಕಾರ್ಯಗಳನ್ನು ಬೇರೆ ಯಾವ ಸರಕಾರವು ಮಾಡಿಲ್ಲ. ಬಡವರಿಗಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಅನ್ನಭಾಗ್ಯ, ಕೃಷಿಭಾಗ್ಯ, ಇಂದಿರಾ ಕ್ಯಾಂಟೀನ್, ಕ್ಷೀರಭಾಗ್ಯ, ಕೃಷಿಭಾಗ್ಯ ಹೀಗೆ ಸರ್ವ ಇಲಾಖೆಯಿಂದಲೂ ಜನರ ಶ್ರೇಯೋಭಿವೃದ್ಧಿಯೇ ನಮ್ಮ ಗುರಿಯಾಗಿಸಿ ಉತ್ತಮ ಆಡಳಿತ ನೀಡಿದ್ದೇವೆ. ಮುಂದಿನ ಬಾರಿಯೂ ಕಾಂಗ್ರೆಸ್ಸೇ ಆಡಳಿತದ ಚುಕ್ಕಾಣಿ ಹಿಡಿಯಲಿದೆ.
ನಿಮ್ಮ ಕಾರ್ಯವೈಖರಿ ನಿಮಗೆ ತೃಪ್ತಿ ತಂದಿದೆಯೇ?
– ಒಬ್ಬ ಶಾಸಕನಾಗಿ, ಸಚಿವನಾಗಿ, ಜನಪ್ರತಿನಿಧಿಯಾಗಿ ಸರಕಾರದ ಯೋಜನೆಗಳನ್ನು ಮನೆ- ಮನೆಗೆ ತಲುಪಿಸುವುದೇ ನನ್ನ ಕೆಲಸ. ಉಡುಪಿ ಜಿಲ್ಲೆಯಲ್ಲಿ ಈವೆರೆಗೆ ಯಾರೂ ಮಾಡಿರದಂತಹ ಅನೇಕ ಅಭಿವೃದ್ಧಿ ಕಾರ್ಯಗಳಾಗಿದೆ. 16 ಸಾವಿರ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಮೂಲಭೂತ ಸೌಕರ್ಯಗಳಿಗಾಗಿ 1873 ಕೋ. ರೂ. ಅನುದಾನ ತರಿಸಲಾಗಿದೆ. ಈ ಬಗ್ಗೆ ತೃಪ್ತಿಯಿದೆ.
ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಕೈಗೊಂಡ ಮಹತ್ವದ ಯೋಜನೆಗಳು ಯಾವುವು?
– ಉಡುಪಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸಲು ಈಗಾಗಲೇ ಅನೇಕ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಅದರಲ್ಲಿ ಈಗಾಗಲೇ ಹಲವು ಯೋಜನೆಗಳು ಕಾರ್ಯಗತಗೊಂಡಿವೆ. ಇನ್ನು ಕೆಲವು ಪ್ರಗತಿ ಹಂತದಲ್ಲಿವೆ. ಮಲ್ಪೆ ಬೀಚ್ ಅಭಿವೃದ್ಧಿ, ಕ್ರೀಡಾಭಿವೃದ್ಧಿ, ರಾಜ್ಯ ಹೆದ್ದಾರಿಗಳು ಹಾಗೂ ಒಳರಸ್ತೆಗಳ ಅಭಿವೃದ್ಧಿ, ಕೇವಲ ಮೂಲಸೌಕರ್ಯಗಳಿಗಾಗಿಯೇ 711 ಕೋ.ರೂ. ವ್ಯಯಿಸಲಾಗಿದೆ. ಉಡುಪಿಯ ಪ್ರವಾಸೋದ್ಯಮಕ್ಕೂ ಒತ್ತು ನೀಡಲಾಗಿದೆ. ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಇನ್ನೂ ಸುಮಾರು 600 ಕೋ. ರೂ. ಅಗತ್ಯವಿದೆ.
ವಾರಾಹಿ ಯೋಜನೆ ಹಾಗೂ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ ಈ ಸರಕಾರದ ಅವಧಿಯಲ್ಲಿಯೇ ಕಾರ್ಯಗತಗೊಳ್ಳುವುದೇ?
– ಉಡುಪಿ ನಗರಕ್ಕೆ ವಾರಾಹಿ ನದಿ ನೀರನ್ನು ತರುವ 270 ಕೋ. ರೂ. ಗಳ ಯೋಜನೆಗೆ ಚಾಲನೆ ದೊರೆತಿದ್ದು, ಈಗ ಡಿಪಿಆರ್ ತಯಾರಿಸಲಾಗುತ್ತಿದೆ. ಇನ್ನು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಆರಂಭಿಸುವ ಕುರಿತು ಎಲ್ಲ ಆಯಾಮಗಳಿಂದಲೂ ಪರಿಶೀಲಿಸಲಾಗುತ್ತಿದೆ. ಈಗಿರುವ ಯಂತ್ರಗಳೆಲ್ಲ ಯೋಗ್ಯವೇ, ಬೇರೆ ಏನೆಲ್ಲ ಬೇಕಾಗಬಹುದು, ಇನ್ನು ಎಷ್ಟು ಹಣವನ್ನು ವಿನಿಯೋಗಿಸಬೇಕಾಗಬಹುದು ಎನ್ನುವ ಬಗ್ಗೆ ಯೋಜನೆ ತಯಾರಾಗುತ್ತಿದೆ.
ಸಿದ್ದರಾಮಯ್ಯ ಸರಕಾರ ಹಿಂದೂ ವಿರೋಧಿಯೇ?
– ದೇವಸ್ಥಾನಗಳಿಗೆ ಸರಕಾರ ಕೊಡುವ ತಸ್ತೀಕು ಈ ಮೊದಲು 21 ಸಾವಿರವಿದ್ದರೆ ಈಗ ಸಿದ್ದರಾಮಯ್ಯ ಅವರ ಸರಕಾರ ಬಂದ ಅನಂತರ 40 ಸಾವಿರಕ್ಕೇರಿಸಲಾಗಿದೆ. ಅನ್ನಭಾಗ್ಯ ಕೇವಲ ಮುಸ್ಲಿಮರು ಮಾತ್ರ ಪಡೆಯುತ್ತಾರೆಯೇ. ಹಿಂದೂಗಳು ಪಡೆಯುವುದಿಲ್ಲವೇ. ರಾಜ್ಯದಲ್ಲಿ ಈಗ 39 ಜಯಂತಿಗಳನ್ನು ಆಚರಿಸಲಾಗುತ್ತಿದ್ದು, ಅದರಲ್ಲಿ ಕೇವಲ ಟಿಪ್ಪು ಜಯಂತಿ ಮಾತ್ರ ಮುಸ್ಲಿಂರಿಗೆ ಸಂಬಂಧಿಸಿದ್ದು. ಕಾಂಗ್ರೆಸ್ ಸರಕಾರ ಎಲ್ಲ ಧರ್ಮದವರಿಗೂ ಪ್ರಾಮುಖ್ಯತೆ ನೀಡುತ್ತಿದೆ. ಸರಕಾರ ಜನಪರ ಆಡಳಿತವನ್ನು ಸಹಿಸದ ಬಿಜೆಪಿಗರು ಈ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ.
ಕ್ರೀಡಾ ಸಚಿವರಾಗಿ ಕ್ರೀಡಾಭಿವೃದ್ಧಿಗೆ ಹಮ್ಮಿಕೊಂಡ ಯೋಜನೆಗಳೇನು?
– ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 1000 ಯುವಕರನ್ನು ಗುರುತಿಸಿ, ಅವರಿಗೆ ತಲಾ 40 ಸಾವಿರ ರೂ. ನೀಡುವ ಯೋಜನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಪ್ರತ್ಯೇಕ ಕ್ರೀಡಾ ನೀತಿಯನ್ನು ರೂಪಿಸಲಾಗುತ್ತಿದೆ. ಉಡುಪಿಯನ್ನು ಕ್ರೀಡಾ ರಾಜಧಾನಿಯಾಗಿಸುವ ನಿಟ್ಟಿನಲ್ಲಿ 20 ಕೋ. ರೂ. ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
ಮೀನುಗಾರಿಕಾ ವೃದ್ಧಿಗೆ ಕೈಗೊಂಡ ಜನಪರ ಯೋಜನೆಗಳು?
– ಮಲ್ಪೆ ಮೀನುಗಾರಿಕಾ ಬಂದರಿನ 3 ನೇ ಹಂತದ ಕಟ್ಟಡ ಕಾಮಗಾರಿಗೆ 30 ಕೋ. ರೂ., ಮಲ್ಪೆ- ಉದ್ಯಾವರ ನದಿಯಲ್ಲಿ ಹೂಳೆತ್ತಲು 3.54 ಕೋ. ರೂ., ಉಡುಪಿಯಲ್ಲಿ ಹೈಟೆಕ್ ಮಹಿಳಾ ಮೀನು ಮಾರುಕಟ್ಟೆ, ಮೀನುಗಾರಿಕಾ ದೋಣಿಗಳಿಗೆ ಡೀಸೆಲ್ ಮಾರಾಟ ತೆರಿಗೆ ಯೋಜನೆಯನ್ವಯ ಮೀನುಗಾರ ಮಹಿಳೆಯರ ಖಾತೆಗೆ ತಲಾ 50 ಸಾವಿರ ರೂ. ಇದಕ್ಕಾಗಿ 10 ಕೋ. ರೂ. ವ್ಯಯಿಸಲಾಗಿದೆ.
ಮರಳು ಮಾಫಿಯಾ ದಂಧೆಗೆ ಸಹಕಾರ ನೀಡಿದ್ದೀರಿ ಎನ್ನುವ ಆರೋಪವಿದೆ?
– ಉಡುಪಿಯಲ್ಲಿ 1 ಯೂನಿಟ್ ಮರಳಿಗೆ 15 ಸಾವಿರ ರೂ. ಇದ್ದ ದರ ಈಗ 5 ಸಾವಿರ ರೂ. ಗೆ ಸಿಗುತ್ತಿದೆ. ನಾನು ಮರಳು ಮಾಫಿಯಾ ದಂಧೆಗೆ ಪ್ರೋತ್ಸಾಹ ನೀಡುವಂತಿದ್ದರೆ, ಮರಳು ದರ ಏರಿಕೆಯಾಗಬೇಕಿತ್ತು. ಆದರೆ ದರ ಇಳಿಕೆಯಾಗಿದೆ. ನಾನು ಮರಳು ಮಾಫಿಯಾ ನಡೆಸಿಲ್ಲ. ಉಡುಪಿಯ ಮರಳು ಈ ಜಿಲ್ಲೆಯವರಿಗೆ ಮಾತ್ರ ಸಿಗಬೇಕು. ಹೊರಗಿನವರಿಗೆ ಹೋಗಬಾರದು ಎನ್ನುವುದೊಂದೇ ನನ್ನ ಉದ್ದೇಶ.
ಉಡುಪಿಯ ಸರಕಾರಿ ಆಸ್ಪತ್ರೆ ಖಾಸಗಿಯವರಿಗೆ ವಹಿಸಿರುವ ಬಗ್ಗೆ?
– 70 ಬೆಡ್‌ಗಳಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ದ್ಯಮಿ ಬಿ. ಆರ್. ಶೆಟ್ಟಿ ಅವರಿಗೆ ವಹಿಸಿ ಕೊಡಲಾಗಿದೆ. ಅಕ್ಕ- ಪಕ್ಕದಲೇ 2 ಆಸ್ಪತ್ರೆಗಳು ನಿರ್ಮಾಣವಾಗಲಿದೆ. ಬಿ. ಆರ್. ಶೆಟ್ಟಿ ಒಡೆತನದಲ್ಲಿ 200 ಬೆಡ್‌ಗಳಿರುವ ಆಸ್ಪತ್ರೆಯನ್ನು ನ.19ಕ್ಕೆ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಆ ಆಸ್ಪತ್ರೆಯಿಂದ ಬರುವ ಲಾಭದಲ್ಲಿ ಮತ್ತೂಂದು 200 ಬೆಡ್‌ಗಳ ಆಸ್ಪತ್ರೆ ನಿರ್ಮಾಣವಾಗಲಿದೆ. ಅದು ಸಂಪೂರ್ಣ ಉಚಿತವಾಗಿರಲಿದೆ.
ಸಂದರ್ಶನ: ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.