55/75 ಸಿನಿಮಾ ನನ್ನ ಬದುಕು
Team Udayavani, Oct 18, 2017, 11:00 AM IST
ಅವರು ಹುಟ್ಟಿದ್ದು ಹುಣಸೂರು. ಆಡಿದ್ದು, ಓದಿದ್ದು, ಬೆಳೆದಿದ್ದೆಲ್ಲಾ ಮೈಸೂರು. ಒಂದನೇ ವಯಸ್ಸಿನಿಂದ ಇಪ್ಪತ್ತು ವರ್ಷದವರೆಗೂ ಮೈಸೂರಲ್ಲೇ ಕಾಲ ಕಳೆದವರು. ಮೈಸೂರಿನ ಶಾರದ ವಿಲಾಸ ಕಾಲೇಜ್‌ನಲ್ಲಿ ಓದಿದ ಬಳಿಕ, ಅವರಿಗಾಗಿಯೇ ಅವರ ಸಹೋದರ ಒಂದು ಅಂಗಡಿ ಶುರು ಮಾಡಿದರು. ಆದರೆ, ಅವರ ಸೋದರ ಮಾವ (ತಾಯಿ ಅಣ್ಣ ) ಹುಣಸೂರು ಕೃಷ್ಣಮೂರ್ತಿ ಅವರನ್ನು ಸಿನಿಮಾಗೆ ಕರೆದರು.
ಸೋದರ ಮಾವ ಕರೆದಾಗ ಅವರು ಇಲ್ಲ ಎನ್ನಲಿಲ್ಲ. ತನ್ನ ಅಣ್ಣನ ಬಳಿ ಬಂದು, “ಮಾವ ಸಿನಿಮಾಗೆ ಕರೆಯುತ್ತಿದ್ದಾರೆ. ಒಂದೇ ಒಂದು ಸಿನಿಮಾದಲ್ಲಿ ಪಾರ್ಟ್ ಮಾಡಿ ಬಂದು ಬಿಡ್ತೀನಿ’ ಅಂತ ಕೇಳಿಕೊಂಡು 1962 ರಲ್ಲಿ ಶುರುವಾದ “ವೀರ ಸಂಕಲ್ಪ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಧುಮುಕಿದರು. ಅಲ್ಲಿಂದ ಅವರು ಬರೋಬ್ಬರಿ ಐದು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಮಿಂದೆದ್ದಿದ್ದಾರೆಂದರೆ ಅದೊಂದು ಮೈಲಿಗಲ್ಲು.
ಅಂದಹಾಗೆ, ಅವರು ಬೇರಾರೂ ಅಲ್ಲ “ಕರುನಾಡ ಕುಳ್ಳ’ ಎಂದೇ ಕರೆಸಿಕೊಳ್ಳುವ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್. ಹೌದು, ದ್ವಾರಕೀಶ್ ಅವರ ಬಗ್ಗೆ ಈಗ ಹೇಳುವುದಕ್ಕೂ ಒಂದು ಬಲವಾದ ಕಾರಣವಿದೆ. ಅವರಿಗೀಗ ವಯಸ್ಸು 75. ಈ ಎಪ್ಪತ್ತೈದು ವಸಂತಗಳನ್ನು ಕಳೆದಿರುವ ದ್ವಾರಕೀಶ್, ತಮ್ಮ “ಬ್ಲಾಕ್ ಅಂಡ್ ವೈಟ್’ ದಿನಗಳನ್ನು “ರೂಪಾತಾರ’ ಜೊತೆ ಮೆಲುಕು ಹಾಕಿದ್ದಾರೆ.
ಓವರ್ ಟು ದ್ವಾರಕೀಶ್ …
ನನ್ನ ಸಿನಿಮಾ ಜರ್ನಿ ಶುರುವಾಗಿದ್ದು 1962ರಲ್ಲಿ. ನನ್ನ ಸೋದರ ಮಾವ ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ “ವೀರ ಸಂಕಲ್ಪ’ ನನ್ನ ಮೊದಲ ಚಿತ್ರ. ಅದು 1964 ರಲ್ಲಿ ಬಿಡುಗಡೆಯಾಯ್ತು. ಅಲ್ಲಿಂದ ಇಲ್ಲಿಯವರೆಗೂ ನನ್ನ ಬಣ್ಣದ ಬದುಕು ಸಾಗಿ ಬಂದಿದೆ. ಇದುವರೆಗೆ ನಾನು ಹಿಂದಿರುಗಿ ನೋಡಿಲ್ಲ. ನೋಡ ನೋಡುತ್ತಲೇ 75 ವರ್ಷಗಳಾಗಿಬಿಟ್ಟಿವೆ. ಈ ಎಪ್ಪತ್ತೈದು ವರ್ಷಗಳಲ್ಲಿ ನಾನು ಐವತ್ತೈದು ವರ್ಷಗಳ ಕಾಲ ಚಿತ್ರರಂಗದಲ್ಲಿದ್ದೇನೆ ಎಂಬುದೇ ದೊಡ್ಡ ವಿಷಯ.
ಸಿನಿಮಾ ನನ್ನ ಬದುಕು ಎಂದು ನಂಬಿದವನು ನಾನು. ಹಾಗಾಗಿ, ಕಳೆದ ಐದು ದಶಕಗಳಿಂದಲೂ ಸಿನಿಮಾ ಚಟುವಟಿಕೆಯಲ್ಲೇ ನಿರತನಾಗಿದ್ದೇನೆ. ಒಂದಲ್ಲ, ಒಂದು ಚಿತ್ರಗಳನ್ನು ಮಾಡುತ್ತಲೇ ಬಂದಿದ್ದೇನೆ. ಈ ಸಿನಿಮಾ ಬದುಕಿನಲ್ಲಿ ನಾನು ಬಹಳಷ್ಟು ಏಳು-ಬೀಳುಗಳನ್ನು ಕಂಡಿದ್ದೇನೆ, ನೋವು-ನಲಿವು ಉಂಡಿದ್ದೇನೆ, ಸಾಕಷ್ಟು ಸಕ್ಸಸ್ ಮತ್ತು ಫೇಲ್ಯೂರ್ ನೋಡಿದ್ದೇನೆ. ಕನ್ನಡಿಗರ ಪ್ರೀತಿ ವಿಶ್ವಾಸ ಗಳಿಸಿದ್ದೇನೆ. ಇಂತಹವನ ಲೈಫಲ್ಲೂ ಗಾಳಿ, ಬಿರುಗಾಳಿ, ಸಿಡಿಲು, ಗುಡುಗು, ಮಿಂಚು ಬಂದಿದೆ.
ಅವೆಲ್ಲವನ್ನೂ ಅನುಭವಿಸಿ, ದಾಟಿ ಬಂದಿದ್ದೇನೆ ಮತ್ತು ಬದುಕಿದ್ದೇನೆ. ಸಿನಿಮಾ ಸುಲಭವಾದ ಬದುಕಲ್ಲ. ಅದಕ್ಕೆ ಆದಂತಹ ಸಾಕಷ್ಟು ಕಷ್ಟಗಳಿವೆ. ಯಾರ ಮನೆಯಲ್ಲೂ ಕೂಡ ಸಿನಿಮಾಗೆ ಹೋಗು ಅನ್ನೋದಿಲ್ಲ. ಬದಲಾಗಿ ಆ ರಂಗಕ್ಕೆ ಯಾಕೆ ಹೋಗ್ತಿàಯಾ ಅನ್ನುವವರೇ ಹೆಚ್ಚು. ಅಂತಹ ರಂಗದಲ್ಲಿ ನಾನು 55 ವರ್ಷ ಪೂರೈಸಿದ್ದೇನೆ ಎಂಬುದೇ ಖುಷಿಯ ವಿಷಯ … ನಾನು 1962 ರಲ್ಲಿ “ವೀರ ಸಂಕಲ್ಪ’ ಚಿತ್ರ ಮಾಡಿದ್ದಷ್ಟೇ, ಆಮೇಲೆ ಹಿಂದಿರುಗಿ ನೋಡಲಿಲ್ಲ.
ಸಾಲು ಸಾಲು ಸಿನಿಮಾಗಳು ಹುಡುಕಿ ಬಂದವು. 1965 ರಲ್ಲಿ ನಾನೇ “ಮಮತೆಯ ಬಂಧನ’ ಸಿನಿಮಾ ಮಾಡಿದೆ. ಆಗ ಆ ಚಿತ್ರವನ್ನು 55 ಸಾವಿರ ರೂಪಾಯಿನಲ್ಲಿ ಮಾಡಿದ್ದೆ. ಮಣಿರತ್ನಂ ತಂದೆ ರತ್ನಮಯ್ಯರ್ ಚಿತ್ರದ ಹಂಚಿಕೆ ಮಾಡಿದ್ದರು. ಹಾಗೇ, ನಾನು ಡಾ. ರಾಜಕುಮಾರ್ ಅವರೊಂದಿಗೆ ಸುಮಾರು 45 ಸಿನಿಮಾಗಳಲ್ಲಿ ನಟಿಸಿದ್ದೆ. ಅದಾಗಲೇ, ರಾಜ್ ಮತ್ತು ದ್ವಾರಕೀಶ್ ಜೋಡಿ ಜನಪ್ರಿಯವಾಗಿತ್ತು. ಅದೇ ಟೈಮಲ್ಲಿ ನನಗೊಂದು ಅದೃಷ್ಟ ಹೊಡೀತು.
ಡಾ.ರಾಜ್‌ಕುಮಾರ್ ಅವರ ಡೇಟ್ಸ್ ಸಿಗದ ಸಂದರ್ಭದಲ್ಲಿ ನಾನು “ಮೇಯರ್ ಮುತ್ತಣ್ಣ’ ಸಿನಿಮಾ ನಿರ್ಮಾಣ ಮಾಡಿದೆ. ರಾಜ್ ಹಾಗೂ ಭಾರತಿ ನಾಯಕ, ನಾಯಕಿಯಾಗಿದ್ದರು. ನಿರ್ದೇಶಕ ಸಿದ್ಧಲಿಂಗಯ್ಯನಿಗೂ ಅದು ಮೊದಲ ಚಿತ್ರ. ಆಗ ಆ ಚಿತ್ರವನ್ನು ಸುಮಾರು ಒಂದುವರೆ ಎರಡು ಲಕ್ಷ ರೂ. ಬಜೆಟ್‌ನಲ್ಲಿ ಮಾಡಿದ್ದೆ. “ಲಗ್ನ ಪತ್ರಿಕೆ’ ಚಿತ್ರ ನಡೆಯುವಾಗ, ಸಿದ್ದಲಿಂಗಯ್ಯ ಅವರಿಗೆ ಒಂದು ರುಪಾಯಿ ಅಡ್ವಾನ್ಸ್ ಕೊಟ್ಟು, ನೀನು ನನ್ನ ಮುಂದಿನ ನಿರ್ಮಾಣದ ಚಿತ್ರಕ್ಕೆ ನಿರ್ದೇಶಕ ಅಂದಿದ್ದೆ. ಆ ಚಿತ್ರ ಸೂಪರ್ ಹಿಟ್ ಆಯ್ತು.
ನನ್ನ ಗೋಲ್ಡನ್ ಎರಾ ಅದು
ಆಮೇಲೆ ಆಗಿದ್ದೆಲ್ಲವೂ ಪವಾಡ. ನಾನು ಒಂದೊಂದೇ ಕುಳ್ಳ ಸೀರಿಸ್ ಚಿತ್ರಗಳನ್ನು ಮಾಡುತ್ತಾ ಹೋದೆ. “ಕುಳ್ಳ ಏಜೆಂಟ್000′, “ಕೌಬಾಯ್ ಕುಳ್ಳ’, “ಕಳ್ಳ ಕುಳ್ಳ’, “ಕುಳ್ಳ ಕುಳ್ಳಿ’, “ಪ್ರಚಂಡ ಕುಳ್ಳ’ ಚಿತ್ರಗಳು ಮೂಡಿಬಂದವು. 1982ರಲ್ಲಿ ನಾನು ಮಡ್ರಾಸ್‌ಗೆ ಹೋದೆ. ಆಗ ನನ್ನ ಬೆನ್ನು ತಟ್ಟಿ, ಬನ್ನಿ ದ್ವಾರಕೀಶ್ ನಾನಿದ್ದೇನೆ ಅಮತ ಕಾಲ್‌ಶೀಟ್ ಕೊಟ್ಟು ಆಹ್ವಾನಿಸಿದ್ದು ರಜನಿಕಾಂತ್. ಅವರ ಜತೆ ನಾನು ಎರಡು ತಮಿಳು ಚಿತ್ರ ಹಾಗು ಹಿಂದಿಯಲ್ಲಿ “ಗಂಗ್ವಾ’ ಚಿತ್ರ ಮಾಡಿದ್ದೆ.
ಹಿಂದಿಯಲ್ಲಿ ಮಾಡಿದ “ಗಂಗ್ವಾ’ ಚಿತ್ರದಲ್ಲಿ ರಜನಿಕಾಂತ್, ಶಬಾನಾ ಆಜ್ಮಿ, ಅಮರೀಶ್‌ಪುರಿ ಸೇರಿದಂತೆ ಹಲವರು ನಟಿಸಿದ್ದರು. 1982 ರಿಂದ 1990 ರವರೆಗೆ ನನ್ನ ಸಿನಿಮಾ ಜೀವನ ಅತ್ಯಂತ ಬಿಜಿಯಾಗಿತ್ತು. ಈ ಎಂಟು ವರ್ಷದಲ್ಲಿ ನಾನು 25 ಸಿನಿಮಾ ಮಾಡಿದ್ದೇನೆ. ಹಾಗೆ ಹೇಳುವುದಾದರೆ, ಆ ಎಂಟು ವರ್ಷಗಳನ್ನು ನಿಜವಾಗಿಯೂ “ಗೋಲ್ಡನ್ ಎರಾ’ ಅಂತನ್ನಬಹುದು.ಆ ವರ್ಷಗಳಲ್ಲಿ ಮಾಡಿದ್ದೆಲ್ಲವೂ ಸೂಪರ್ ಹಿಟ್ ಸಿನಿಮಾಗಳು.
ಶೇರ್ ಹೋಲ್ಡರ್ ಆಫ್ ದ್ವಾರಕೀಶ್ ಚಿತ್ರ
1990 ದುರಾದೃಷ್ಟ ಒದಗಿಬಂತು. “ಆಫ್ರಿಕಾದಲ್ಲಿ ಶೀಲ’ ಎಂಬ ಚಿತ್ರ ಮಾಡಿದೆ. ಅಲ್ಲಿ ಹೊಡೆತ ತಿಂದವನು, “ಆಪ್ತಮಿತ್ರ’ ಬರೋವರೆಗೆ ಕಷ್ಟ ಅನುಭವಿಸಬೇಕಾಯಿತು. ಸಿನಿಮಾದಲ್ಲಿ ಸೋಲು-ಗೆಲುವು ಕಾಮನ್. ನಾನು ಗೆಲುವು ನೋಡಿ, ನೋಡಿ, ಆ ಗೆಲುವಲ್ಲಿದ್ದ ನನಗೆ ಆ ಅಷ್ಟು ವರ್ಷಗಳು ಗೆಲುವು ಸಿಗೋದೇ ಕಷ್ಟವಾಯ್ತು. ಯಾವ ಸಿನಿಮಾ ಗೆಲುವು ಕೊಡದೇ ಇದ್ದಾಗ, “ಆಪ್ರಮಿತ್ರ’ ನನಗೆ ಮತ್ತೂಂದು ಲೈಫ್ ಕೊಡ್ತು.
ನನ್ನ ಲೈಫಲ್ಲಿ ನಾಲ್ಕೈದು ಜನರನ್ನು ಎಂದಿಗೂ ಮರೆಯೋದಿಲ್ಲ. ಅದು ಡಾ.ರಾಜ್‌ಕುಮಾರ, ಡಾ.ವಿಷ್ಣುವರ್ಧನ್, ರಜನಿಕಾಂತ್, ಶಂಕರ್‌ನಾಗ್ ಮತ್ತು ಅಂಬರೀಷ್. ಇವರೆಲ್ಲರೂ ನನ್ನ ಸಿನಿ ಜರ್ನಿಯಲ್ಲಿ ಜೊತೆಯಾದವರು. ಎಲ್ರೂ ನನ್ನ ಸಿನಿಮಾ ಅಂತ ಕಾಲ್‌ಶೀಟ್ ಕೊಟ್ಟು ಬೆನ್ನುತಟ್ಟಿದವರು. ಅವರಿಲ್ಲ ಅಂದಿದ್ದರೆ, ಈ ಕುಳ್ಳ ಇರುತ್ತಿರಲಿಲ್ಲ. ಎಲ್ಲರೂ ಶೇರ್ ಹೋಲ್ಡರ್ ಆಫ್ ದ್ವಾರಕೀಶ್ ಚಿತ್ರ. ಅವೆಲ್ಲರಿಗೂ ನಾನು ಚಿರಋಣಿ.
ಸೂಟ್‌ಕೇಸ್ ನೋಡಿ ಕಥೆ ಮಾಡಿದ್ದು
ವಿದೇಶದಲ್ಲಿ ಸಿನಿಮಾ ಮಾಡಬೇಕೆಂಬ ನನ್ನ ಧೈರ್ಯ ಸಣ್ಣದ್ದೇನಲ್ಲ. ಒಮ್ಮೆ ಮಡ್ರಾಸ್‌ನಲ್ಲಿ ಎಂಜಿಆರ್ ಅವರ ತಮಿಳು ಚಿತ್ರ ನೋಡಿದ್ದೆ. ಅದು ಸಿಂಗಾಪುರದಲ್ಲಿ ಚಿತ್ರೀಕರಣವಾಗಿತ್ತು. ಕನ್ನಡದವರು ನಾವೇಕೆ ವಿದೇಶದಲ್ಲೂ ಶೂಟಿಂಗ್ ಮಾಡಬಾರದು ಅಂತ ಯೋಚಿಸಿದೆ. ಅಂಥದ್ದೊಂದು ಐಡಿಯಾವನ್ನು ರವಿಚಂದ್ರನ್ ಅವರ ತಂದೆ ವೀರಸ್ವಾಮಿ ಬಳಿ ಹೇಳಿದೆ. ಆಗ, ಅವರು, ನಡೀ, ದ್ವಾರಕೀಶ್ ನಿಮ್ಮ ಜೊತೆ ನಾನಿದ್ದೇನೆ ಅಂತ ಸಾಥ್ ಕೊಟ್ಟರು.
ಲೊಕೇಷನ್ ನೋಡೋಕೆ ಬ್ಯಾಂಕಾಕ್, ಟೋಕಿಯೋ, ಜಪಾನ್, ಮಲೇಷಿಯಾ, ಸಿಂಗಾಪುರ್‌ಗೆ ಹೋಗಿದ್ದೆವು. ಕೊನೆಗೆ “ಸಿಂಗಾಪುರ್‌ನಲ್ಲಿ ರಾಜಾಕುಳ್ಳ’ ಎಂಬ ಸಿನಿಮಾ ಮಾಡಿದ್ವಿ. ಆಗ ಜತೆಗೆ ವಿಷ್ಣು ಇದ್ದರು. ಅದಾಗಲೇ ವಿಷ್ಣು ಜತೆ ನಾನು “ಕಳ್ಳ ಕುಳ್ಳ’, “ಕಿಟ್ಟು ಪುಟ್ಟು’ ಚಿತ್ರ ಮಾಡಿದ್ದೆ. ಆಗ ಮೊದಲು ಟೈಟಲ್ ಇಟ್ಟು ಆಮೇಲೆ ಕಥೆ ಮಾಡಿ ತೆಗೆದ ಚಿತ್ರ “ಸಿಂಗಾಪುರ್‌ನಲ್ಲಿ ರಾಜಾಕುಳ್ಳ’. ಲೊಕೇಷನ್ ನೋಡಿ ಮಾಡಿದ ಅದಕ್ಕೆ ತಕ್ಕಂತಹ ಕಥೆ ಮಾಡಿದ್ವಿ.
ಅಲ್ಲೊಂದು ಪಬ್ ನೋಡಿ, ಪಬ್ ಸೀನ್ ಮಾಡಿದ್ವಿ, ದೊಡ್ಡ ಬಿಲ್ಡಿಂಗ್ ನೋಡಿ, ಅಲ್ಲೊಂದು ಫೈಟ್ ಸೀನ್ ಇಟ್ವಿ. ಹೀಗೆ ಎಲ್ಲವೂ ನೋಡಿಕೊಂಡು ಮಾಡಿದ ಕಥೆ ಅದು. ಕನ್ನಡದಲ್ಲಿ ಸೂಪರ್ ಹಿಟ್ ಆಯ್ತು. ತಮಿಳು, ತೆಲುಗು, ಹಿಂದಿಗೂ ಡಬ್ ಆಯ್ತು. ಇನ್ನು, ಕುಳ್ಳ ಸೀರಿಸ್ ಚಿತ್ರಗಳೂ ಬಂದವು. “ಕುಳ್ಳ ಏಜೆಂಟ್ 000′ ಸಿನಿಮಾ ಮಾಡೋಕೆ ಸ್ಫೂರ್ತಿ ಆಗಿದ್ದು, ಒಬ್ಬ ಮೆಡಿಕಲ್ ರೆಪ್! ಅವನ ಕೈಯಲ್ಲೊಂದು ಸೂಟ್‌ಕೇಸ್ ಹಿಡಿದು ಹೋಗುತ್ತಿದ್ದ.
ಅದನ್ನು ನೋಡಿ, ಬಾಂಡ್ ಸಿನಿಮಾ ಯಾಕೆ ಮಾಡಬಾರದು ಅಂದುಕೊಂಡು, ಆ ಚಿತ್ರ ಮಾಡಿದ್ವಿ. ನಾನು ಪರ್ಸನಾಲಿಟಿ ಇಲ್ಲ ಸೊನ್ನೆ, ಬುದ್ಧಿ ಇಲ್ಲ ಸೊನ್ನೆ. ಹೈಟ್ ಇಲ್ಲ ಸೊನ್ನೆ. ಹಾಗಾಗಿ “ಕುಳ್ಳ ಏಜೆಂಟ್ 000′ ಅಂತ ಟೈಟಲ್ ಇಟ್ಟಿದ್ದೆ. ಆ ಚಿತ್ರಕ್ಕೆ ಹಾಕಿದ ಹಣ ಒಂದೇ ವಾರದಲ್ಲಿ ಬಂತು. ಅದರಲ್ಲಿ, ರಾಜಣ್ಣರ ಫೋಟೋ ಬಳಸಿದ್ದೆ. “ಗುರು ನಿನ್ನ ಮೇಲೆ ಭಕ್ತಿ ನನಗೆ ಕೊಡು ಶಕ್ತಿ’ ಎಂಬ ಡೈಲಾಗ್ ಮೂಲಕ ಆ ಕುಳ್ಳ ದೊಡ್ಡ ವಿಲನ್‌ಗಳನ್ನು ಸದೆಬಡಿಯುತ್ತಿದ್ದ.
ಯಶಸ್ಸು ಪ್ರೇಕ್ಷಕರಿಗೆ ಬಿಟ್ಟದ್ದು
ನನಗೆ “ಆಪ್ತಮಿತ್ರ’ ದೊಡ್ಡ ಸಕ್ಸಸ್ ಕೊಡುತ್ತೆ ಅಂತ ಯಾವತ್ತೂ ಅನಿಸಿರಲಿಲ್ಲ. ಒಂದೊಳ್ಳೆಯ ಸಿನಿಮಾ ಮಾಡಿದ್ದೇನೆ ಎಂಬ ವಿಶ್ವಾಸವಿತ್ತು. ಆದರೆ, ಇದು ದೊಡ್ಡಮಟ್ಟದಲ್ಲಿ ಸಕ್ಸಸ್ ಆಗುತ್ತೆ ಗೊತ್ತಿರಲಿಲ್ಲ. ಆದರೆ, ಸಿನಿಮಾ ಸಕ್ಸಸ್ ಆಗುತ್ತೆ ಅಂತ ಸೌಂದರ್ಯಗೆ ಮಾತ್ರ ಗೊತ್ತಿತ್ತು. ಆಕೆ ಧೈರ್ಯ ಕೊಟ್ಟಿದು. ಮಾಮ ಯೋಚನೆ ಮಾಡಬೇಡಿ, ಈ ಚಿತ್ರ ಗೆಲ್ಲುತ್ತೆ. ಕ್ಲೈಮ್ಯಾಕ್ಸ್ ಒಂದೇ ಸಾಕು ಅಂದಿದ್ದಳು. ಅದು ನಿಜವಾಯ್ತು. ಒಂದು ಮಾತಂತೂ ನಿಜ, ಯಾವ ನಿರ್ಮಾಪಕನಿಗೂ ತನ್ನ ಚಿತ್ರ ಗೆಲ್ಲುತ್ತೆ ಅಂತ ಗೊತ್ತಿರಲ್ಲ.
ಮಾಡ್ತಾನೆ ಅಷ್ಟೇ. ಯಶಸ್ಸು ಪ್ರೇಕ್ಷಕರಿಗೆ ಬಿಟ್ಟದ್ದು. ನಾನು ಮೊದಲ ಸಲ “ನೀ ಬರೆದ ಕಾದಂಬರಿ’ ಚಿತ್ರ ನಿರ್ದೇಶಿಸಿದೆ. ಅದನ್ನು ಆಡುತ್ತಲೇ ತೆಗೆದೆ. ಮೊದಲ ನಿರ್ದೇಶನ ಬೇರೆ ಹೇಗೆ ಇರುತ್ತೆ ಹೇಳಿ? ಆದರೆ, ಅದು ಸೂಪರ್ ಡೂಪರ್ ಹಿಟ್ ಆಯ್ತು. ನಾನೇ ನಂಬಲಾಗಲಿಲ್ಲ. 21 ಲಕ್ಷ ಖರ್ಚು ಮಾಡಿದ್ದೆ. 60 ಲಕ್ಷ ರೂ. ಬಂತು. ಆ ಚಿತ್ರದ ಬಳಿಕ ಇನ್ನು ಮುಂದೆ ಯಾರೂ ನಮ್ಮನ್ನು ಹಿಡಿಯೋಕ್ಕಾಗಲ್ಲ, ಯಾರೂ ನನಗೆ ಡೈರೆಕ್ಷನ್ ಹೇಳಿಕೊಡೋದು ಬೇಡ ಅಂತ ಧಿಮಾಕು ಮಾಡಿದ್ದೆ.
ಅದೇ ವೇಳೆ, ಜಯಪ್ರದ ನನಗೆ ಕಾಲ್ ಮಾಡಿ, ಒಂದು ಐಡಿಯಾ ಕೊಟ್ಟರು. “ಶರಾಬಿ’ ಚಿತ್ರ ಚೆನ್ನಾಗಿದೆ. ನಾನು ಮಾಡ್ತೀನಿ, ನೀವು ರೈಟ್ಸ್ ತಗೊಳ್ಳಿ ಅಂದ್ರು. ನನಗೂ ಒಳ್ಳೇ ಚಾನ್ಸ್ ಅನಿಸ್ತು. ಜಯಪ್ರದ ನಾಯಕಿ, ವಿಷ್ಣುವರ್ಧನ್ ನಾಯಕ ಸಖತ್ ಆಗಿರುತ್ತೆ ಅಂತ 63 ಸಾವಿರ ರೂಪಾಯಿ ಕೊಟ್ಟು ಶರಾಬಿ ರೈಟ್ಸ್ ತಗೊಂಡು ಬಂದೆ. ಆಗ ಜಯಪ್ರದ ಮಲಯಾಳಂ ಸಿನಿಮಾಗೆ ಡೇಟ್ ಕೊಟ್ಟಿದ್ದರು. ಮೂರು ತಿಂಗಳು ಮುಂದೆ ಹೋಗಿ, ನಾನು ಮಲಯಾಳಂ ಸಿನಿಮಾ ಮುಗಿಸಿ ಬರಿ¤àನಿ ಅಂದರು.
ಆದರೆ, ವಿಷ್ಣು ಡೇಟ್ ಸಿಕ್ಕಿದೆ. “ನೀ ಬರೆದ ಕಾದಂಬರಿ’ ಚಿತ್ರ ಹಿಟ್ ಆಗಿದೆ, ಅದೇ ಜೋಡಿ ಇನ್ನೊಂದು ಸಿನಿಮಾ ಅಂದಮೇಲೆ, ನಾನು ನಾಯಕಿಗೇಕೆ ಕಾಯಬೇಕು ಅಂತ ಜಯಪ್ರದ ಬಿಟ್ಟು ಜಯಸುಧ ಅವರನ್ನು ಹಾಕಿ ಸಿನಿಮಾ ತೆಗೆದೆ ಅದೇ “ನೀ ತಂದ ಕಾಣಿಕೆ’. ಮೊದಲ ಪ್ರೊಜೆಕ್ಷನ್ ಹಾಕಿದೆ. ಪ್ರದರ್ಶಕರು, ವಿತರಕು ದ್ವಾರಕೀಶ್ ನೀವು ಕೇಳಿದ ರೇಟ್ ಕೊಡ್ತೀವಿ ಸಿನಿಮಾ ಕೊಡಿ ಅಂತ ಒಳ್ಳೇ ಆಫರ್ ಕೊಟ್ಟರು. ನಾನು ಕೊಡಲಿಲ್ಲ. ಆದರೆ, ಸಿನಿಮಾ ಗೋವಿಂದ ಆಯ್ತು.
ಏನ್ಮಾಡಬೇಕು? ಯಾರಿಗೂ ಗೊತ್ತಿರೋದಿಲ್ಲ. ಕೇಳಿದ ರೇಟ್ ಪ್ರದರ್ಶಕರು, ವಿತರಕರು. ತೋರಿಸು ಕೊಡ್ತೀವಿ ಅಂದ್ರು. ನಾನು ಯಾರಿಗೂ ಕೊಡಲ್ಲ ಅಂದೆ. ಒಳ್ಳೇ ಆಫರ್ ಮಾಡಿದರು. ನಾನು ಧಿಮಾಕು ಮಾಡಿಕೊಂಡು ಕೊಡಲಿಲ್ಲ. ಆದರೆ, ಸಿನಿಮಾ ಏನಾಯ್ತುಗೊತ್ತಾ? ಗೋವಿಂದ ಗೋವಿಂದ? ಯಾರೇ ಆಗಲಿ, ಈ ಚಿತ್ರ ಓಡುತ್ತೆ ಅಂತ ಅಂದುಕೊಂಡು ಸಿನಿಮಾ ಮಾಡೋಕೆ ಸಾಧ್ಯವಿಲ್ಲ. ಜನರು ಇಷ್ಟಪಟ್ಟರೆ ಮಾತ್ರ ಸಕ್ಸಸ್ ಸಾಧ್ಯ.
ದರ್ಬಾರು ನಡೆಸಿದವನು ಜಾರಿಬಿದ್ದೆ
ಚಿತ್ರರಂಗದಲ್ಲಿ ಸೋಲು-ಗೆಲುವು ಕಂಡಿದ್ದೇನೆ. ಎಷ್ಟೋ ಸಲ, ಸೋತಾಗ ಈ ಇಂಡಸ್ಟ್ರಿ ಸಹವಾಸವೇ ಬೇಡ ಅನಿಸಿದ್ದುಂಟು. ಹಾಗಂತ ನನಗೆ ಶನಿವಾರ ಅನಿಸಿದರೆ, ಸೋಮವಾರ ಸಿನಿಮಾ ಮಾಡಿದ್ದೂ ಉಂಟು. ಸೋತಾಗ ಹತಾಶೆಗೊಂಡು ಬೇಕಾದಷ್ಟು ಸಲ, ಹಾಗನಿಸಿದ್ದುಂಟು, ಹಾಗೇ ಸಿನಿಮಾ ಮಾಡಿದ್ದೂ ಹೌದು. ನಾನು ನನ್ನನ್ನು ಚೆನ್ನಾಗಿ ಕಂಡುಕೊಂಡಿದ್ದು ನಿರ್ದೇಶಕನಾಗಿ. ಯಾಕೆಂದರೆ, ಕಥೆ, ಪಾತ್ರ ಎಲ್ಲವೂ ನಿರ್ದೇಶಕನ ಕೈಯಲ್ಲಿದೆ.
ಆ ಸಿನಿಮಾ ಓಡಿದರೆ ಮೊದಲು ಅವನಿಗೆ ಹೆಸರು ಬರುತ್ತೆ. ಹಾಗಾಗಿ ನಿರ್ದೇಶನ ನನಗಿಷ್ಟ. ನಿರ್ದೇಶಕ ಎಂಥದ್ದೇ ಚಿತ್ರ ಮಾಡಲಿ, ಮೊದಲ ಟಿಕೆಟ್ ಪಡೆದು ಒಳಗೆ ಹೋಗಿ ಚಿತ್ರ ನೋಡ್ತಾನಲ್ಲ, ಅವನಿಗೆ ಗೊತ್ತಿರುತ್ತೆ, ಈ ಚಿತ್ರ ಗೆಲ್ಲುತ್ತೋ, ಇಲ್ಲವೋ ಅಂತ. ಅಂತಾ ರಂಗದಲ್ಲಿ ನಾನು 55 ವರ್ಷ ಕಾಲ ಕಳೆದಿದ್ದೇನೆ. ಒಂದು ಮಾತಂತೂ ನಿಜ, ಸಿನಿಮಾದ ಗೆಲುವು ಗೊತ್ತಿಲ್ಲದ ಹುಟ್ಟು. ಆ ಹುಟ್ಟು ಗೊತ್ತಿದ್ದವನು ನಾಳೆಯೇ ಒಳ್ಳೆಯ ಸಿನಿಮಾ ಮಾಡುತ್ತಾನೆ.
ಒಳ್ಳೆಯ ಸಿನಿಮಾಗಳು ಸಕ್ಸಸ್‌ಫುಲ್ ಸಿನಿಮಾಗಳಲ್ಲ. ಸಕ್ಸಸ್‌ಫುಲ್ ಸಿನಿಮಾಗಳು ಒಳ್ಳೆಯ ಸಿನಿಮಾಗಳಲ್ಲ ಎಂಬ ಮಾತಿದೆ. ನಾನೊಬ್ಬನೇ ಅಲ್ಲ, ಪುಟ್ಟಣ್ಣಕಣಗಾಲ್, ಸಿದ್ದಲಿಂಗಯ್ಯ ಅಂತವರೇ ಕೊನೆ ಕೊನೆಯಲ್ಲಿ ತುಂಬಾ ಸಫರ್ ಪಟ್ಟವರು. ಈ ರಂಗದಲ್ಲಿ ಶೇ.100 ರಷ್ಟು ಮಾರ್ಕ್ಸ್ ತೆಗೆಯೋದು ಕಷ್ಟ. ಆಗೆಲ್ಲಾ ಚಿತ್ರ ಮಾಡೋರೆಲ್ಲ, ಮೊದಲು ಕುಳ್ಳನಿಗೆ ಒಂದ್ಸಲ ಕಥೆ ಹೇಳ್ರಪ್ಪ ಅನ್ನೋರು. ಅಂತಾ ಕುಳ್ಳ ಒಂದು ಹಂತದಲ್ಲಿ ಹಳ್ಳಕ್ಕೆ ಬಿದ್ದು ಬಿಟ್ಟ.
ಇದುವರೆಗೆ ಸಿನಿಮಾಗೆ ಹಾಕಿದ ಹಣ, ದುಡಿದ ಹಣ ಮತ್ತು ಕಳೆದ ಹಣ ಲೆಕ್ಕ ಹಾಕಲು ಹೋಗಿಲ್ಲ. ಅದು ಸಾಧ್ಯವೂ ಇಲ್ಲ. ಆಗೆಲ್ಲಾ, ಸಿನಿಮಾ ಅನೌನ್ಸ್ ಮಾಡುತ್ತಿದ್ದಂತೆಯೇ, ಪ್ರದರ್ಶಕರು, ವಿತರಕರು ಬಂದು, ಪೂಜೆ ತಟ್ಟೆಯಲ್ಲಿ ಕ್ಯಾಷ್ ಹಾಕೋರು. ಆಮೇಲೆ, ಫೋನ್ ಮಾಡಿ, ನನ್ನದು ಹತ್ತು ಸಾವಿರ, ನನ್ನದು 50 ಸಾವಿರ ಇದೆ ಅನ್ನೋರು. ಅಂತಹ ದರ್ಬಾರು ನಡೆಸಿದವನು ಅಷ್ಟೇ ಜೋರಾಗಿ ಜಾರಿಬಿದ್ದಿದ್ದೂ ಹೌದು.
ಬರಹ: ವಿಜಯ್ ಭರಮಸಾಗರ
ಚಿತ್ರಗಳು: ಮನು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhruva Sarja ಮಾರ್ಟಿನ್ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್ ಮೆಹ್ತಾ
Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…
Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ
ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ
ಸಾರ್ವಜನಿಕರೇ ಆನ್‌ಲೈನ್ ಆಮಿಷಕ್ಕೆ ಮಾರುಹೋಗದಿರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.