ಸ್ವಾಮಿ ದೇವನೆ ಲೋಕಪಾಲನೆ…
Team Udayavani, Oct 18, 2017, 4:30 PM IST
ಸ್ವಾಮಿ ದೇವನೆ ಲೋಕಪಾಲನೆ…
ತೇ ನಮೋಸ್ತು ನಮೋಸ್ತು ತೇ…
ಸರ್ವಕಾಲದ ಶ್ರೇಷ್ಠಗೀತೆಗೆ ನಮಸ್ಕಾರ.!
ಸೆಪ್ಟಂಬರ್ ಎಂದಾಕ್ಷಣ ನೆನಪಾಗುವುದು ಶಿಕ್ಷಕರ ದಿನಾಚರಣೆ. ಅದರ ಹಿಂದೇಯೇ ನೆನಪಿಗೆ ಬರುವುದು ಸ್ಕೂಲ್ ಮಾಸ್ಟರ್ ಸಿನಿಮಾ. ಇದು, ರಾಷ್ಟ್ರಪತಿಗಳ ಪದಕ ಪಡೆದ ಮೊದಲ ಕನ್ನಡ ಚಿತ್ರ. ಮೃತ್ತಿಯಿಂದ ಸ್ಕೂಲ ಮಾಸ್ಟರ್ ಆಗಿದ್ದು ನಂತರ ನಟ, ನಿರ್ಮಾಪಕ, ನಿರ್ದೇಶಕನಾಗಿ ಬದಲಾದ ಬಿ.ಆರ್.ಪಂತಲು ಅವರು, ತಮ್ಮ ಶಿಕ್ಷಕ ವೃತ್ತಿಯ ಪ್ರಸಂಗಗಳನ್ನು ಸೇರಿಸಿಕೊಂಡು ಸ್ಕೂಲ್ ಮಾಸ್ಟರ್‌ಗೆ ಕಥೆ ಬರೆದರು. ಎಂದೆಂದೂ ರಿಟೈರ್x ಆಗದ ಸ್ಕೂಲ್ ಮಾಸ್ಟರ್ ಎಂಬ ಸಾರ್ವಜನಿಕ ಅಭಿಪ್ರಾಯವೇ ಈ ಸಿನಿಮಾಕ್ಕೆ ಸಿಕ್ಕಿದ ಅತಿದೊಡ್ಡ ಪ್ರಶಸ್ತಿ.
ಚಿತ್ರ: ಸ್ಕೂಲ್ ಮಾಸ್ಟರ್
ಗೀತರಚನೆ: ಸೋಸಲೆ ಅಯ್ನಾ ಶಾಸ್ತ್ರಿ ಮತ್ತು ಕಣಗಾಲ್ ಪ್ರಭಾಕರಶಾಸ್ತ್ರಿ
ಸಂಗೀತ: ಟಿ.ಜಿ. ಲಿಂಗಪ್ಪ
ಗಾಯನ: ಟಿ.ಜಿ. ಲಿಂಗಪ್ಪ, ಎ.ಪಿ. ಕೋಮಲ, ರಾಣಿ ಮತ್ತು ಇತರರು
ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತು ತೇ
ಪ್ರೇಮದಿಂದಲಿ ನೋಡು ನಮ್ಮನು ತೇ ನಮೋಸ್ತು ನಮೋಸ್ತು ತೇ ||ಪ||
ದೇವದೇವನೆ ಹಸ್ತಪಾದಗಳಿಂದಲೂ ಮನದಿಂದಲೂ
ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೆ ||1||
ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನ
ಮನೆಯ ಮಕ್ಕಳ ಐಕ್ಯಗಾನವ ಲಾಲಿಸೈ ಪರಿಪಾಲಿಸೈ ||2||
ಕನ್ನಡ ಚಿತ್ರರಂಗ ಎಂದೆಂದೂ ಮರೆಯಲಾಗದಂಥ ಚಿತ್ರಗಳನ್ನು ನೀಡಿದವರು ಬಿ.ಆರ್. ಪಂತಲು ಮತ್ತು ಕಣಗಾಲ್ ಪ್ರಭಾಕರಶಾಸ್ತ್ರಿ. ಕನ್ನಡದ ಶ್ರೇಷ್ಠ ಚಿತ್ರಗಳಲ್ಲಿ ಒಂದಾಗಿರುವ ‘ಸ್ಕೂಲ್ ಮಾಸ್ಟರ್’ ಸಿನಿಮಾವನ್ನೂ, ಮೂರ್‍ನಾಲ್ಕು ದಶಕಗಳ ಕಾಲ ಕರ್ನಾಟಕದ ಎಲ್ಲ ಶಾಲೆಗಳಲ್ಲಿ ಪ್ರಾರ್ಥನಾಗೀತೆಯಾಗಿದ್ದ ಸ್ವಾಮಿದೇವನೆ ಲೋಕಪಾಲನೆ… ಗೀತೆಯನ್ನೂ ನೆನಪು ಮಾಡಿಕೊಂಡಾಗ ಈ ಇಬ್ಬರೂ ಮಹನೀಯರ ಸಾಧನೆ ಮತ್ತು ಕೊಡುಗೆಯನ್ನೂ ಸ್ಮರಿಸಲೇಬೇಕು.
ಮೊದಲಿಗೆ ಪಂತಲು ಅವರ ಚರಿತೆಯನ್ನು ತಿಳಿಯೋಣ. ಬಡಗೂರು ರಾಮಕೃಷ್ಣ ಪಂತಲು ಎಂಬುದು, ಬಿ.ಆರ್.ಪಂತಲು ಅವರ ಹೆಸರಿನ ಪೂರ್ಣರೂಪ. ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲೂಕಿನಲ್ಲಿದೆ ಬಡಗೂರು ಗ್ರಾಮ. ಇದು ಒಂದು ಕಡೆ ಆಂಧ್ರ, ಇನ್ನೊಂದು ಕಡೆ ತಮಿಳುನಾಡು ರಾಜ್ಯಗಳ ಗಡಿಯೂ ಆಗಿರುವುದರಿಂದ ಬಾಲ್ಯದಲ್ಲಿಯೇ ಕನ್ನಡ, ತೆಲುಗು, ತಮಿಳು ಭಾಷೆಗಳನ್ನು ಕಲಿತಿದ್ದರು ಪಂತಲು.
ಪಂತಲು ಅವರ ತಂದೆ ವೆಂಕಟಾಚಲಯ್ಯ. ಸಾಹಿತ್ಯ, ಸಂಗೀತ ಮತ್ತು ನೃತ್ಯದಲ್ಲಿ ಅವರಿಗೆ ಅಪಾರ ಆಸಕ್ತಿಯಿತ್ತು. ಊರಿನಲ್ಲಿ ಆಗಾಗ ನಾಟಕಗಳನ್ನು ಆಡಿಸುತ್ತಿದ್ದರು. ನಾಟಕದ ಪುಸ್ತಕ ಮತ್ತು ನಾಟಕ ಕಲಿಸುವ ಮೇಷ್ಟ್ರು ಮನೆಯಲ್ಲೇ ಇದ್ದಮೇಲೆ ಕೇಳಬೇಕೆ? ಪಂತಲು ಅವರು ತೀರಾ ಸಹಜ ಎನ್ನುವಂತೆ ನಾಟಕಗಳ ಹಿಂದೆ ಬಿದ್ದರು. ಅಭಿನಯ, ನಾಟಕ ರಚನೆ, ನಿರ್ದೇಶನದಲ್ಲಿ ಪಳಗಿದರು. ಮುಂದೆ ಎಸ್ಸೆಸ್ಸೆಲ್ಸಿವರೆಗೆ ಶಿಕ್ಷಣ ಪಡೆದು, ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡರು.
ಹುಟ್ಟು ಕಲಾವಿದರಾಗಿದ್ದ ಪಂತಲು, ಶಾಲೆಯಲ್ಲಿ ಪಾಠ ಮಾಡಿದ್ದಕ್ಕಿಂತ ಮಕ್ಕಳಿಗೆ ನಾಟಕ ಕಲಿಸಿದ್ದೇ ಹೆಚ್ಚು… ಹೀಗೇ ಒಂದು ದಿನ ಅವರು ನಾಟಕ ಕಲಿಸುತ್ತಿದ್ದಾಗಲೇ ವಿದ್ಯಾ ಇಲಾಖೆಯ ಅಧಿಕಾರಿಗಳು ಇನ್‌ಸ್ಪೆಕ್ಷನ್‌ಗೆ ಬಂದರು. ಪಾಠ ಮಾಡುವ ಬದಲು ಮಕ್ಕಳಿಗೆ ನಾಟಕ ಕಲಿಸುತ್ತಿದ್ದ ಪಂತಲು ಅವರನ್ನು ಕಂಡು ಕೆಂಡಾಮಂಡಲವಾದರು. ಇದು ಸರಿಯಲ್ಲವೆಂದೂ, ಮತ್ತೂಮ್ಮೆ ಹೀಗೆ ಮಾಡಿದರೆ ಸೇವೆಯಿಂದ ವಜಾ ಮಾಡಬೇಕಾಗುತ್ತದೆ ಎಂದೂ ನೋಟಿಸ್ ಜಾರಿ ಮಾಡಿದರು.
ಇದರಿಂದ ನೊಂದ ಪಂತಲು ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ಕಲಾಸೇವೆಯಲ್ಲಿಯೇ ಬದುಕುವ ದಾರಿ ಹುಡುಕಲು ಬೆಂಗಳೂರಿಗೆ ಬಂದರು. ಸ್ಕೂಲ್ ಮಾಸ್ಟರ್ ಆಗಿದ್ದ ಪಂತಲು, ಸಾಂಸ್ಕೃತಿಕ ಲೋಕಕ್ಕೆ ಎಂಟ್ರಿ ಕೊಟ್ಟದ್ದು ಹೀಗೆ. ಅದು ಕಂಪನಿ ನಾಟಕಗಳ ಅಬ್ಬರದ ಕಾಲ. ನಾಟಕ ಆಡಿ ಮತ್ತು ಆಡಿಸಿ ಅಭ್ಯಾಸವಿದ್ದುದರಿಂದ ಪಂತಲು ಅವರಿಗೆ ಅವಕಾಶಗಳು ಬೇಗನೆ ಸಿಕ್ಕವು. ಈ ಸಂದರ್ಭದಲ್ಲೇ ಅಂದಿನ ಜನಪ್ರಿಯ ನಾಟಕ ‘ಸಂಸಾರ ನೌಕೆ’ಯು ಚಲನಚಿತ್ರವಾದಾಗ, ಪಂತಲು ಕೂಡ ಅದರಲ್ಲಿ ಒಂದು ಪಾತ್ರ ನಿರ್ವಹಿಸಿದರು.
ಮುಂದೆ ‘ರಾಧಾರಮಣ’ ಸಿನಿಮಾದಲ್ಲಿ ನಟಿಸುವಾಗ ಅಂದಿನ ಖ್ಯಾತ ನಟಿ ಎಂ.ವಿ. ರಾಜಮ್ಮನವರ ಪರಿಚಯವಾಗಿ, ಅದು ಪ್ರೇಮಕ್ಕೂ ತಿರುಗಿ, ಮದುವೆಯಲ್ಲಿ ಕೊನೆಗೊಂಡಿತು. ರಾಜಮ್ಮ-ಪಂತಲು ಅವರ ದಾಂಪತ್ಯದ ಜೊತೆಜೊತೆಗೇ ಶುರುವಾದದ್ದು ಪದ್ಮಿನಿ ಪಿಚ್ಚರ್ ಸಂಸ್ಥೆ. ಆನಂತರದಲ್ಲಿ ಒಂದೊಂದೇ ಸಿನಿಮಾಗಳು ತೆರೆಗೆ ಬಂದವು. 1958ರಲ್ಲಿ, ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಕನ್ನಡ ಚಿತ್ರರಂಗದ ಬೆಳ್ಳಿಹಬ್ಬದ ಸಮಾರಂಭ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದವರು ಡಿ.ವಿ.ಜಿ. ಅವರು ಮಾತಾಡುತ್ತಾ- ಈ ಆಚರಣೆಯ ನೆನಪು ಶಾಶ್ವತವಾಗಿ ಉಳಿಯಬೇಕೆಂದರೆ ಒಂದು ಸ್ಮರಣೀಯ ಚಿತ್ರ ನಿರ್ಮಾಣವಾಗಬೇಕು ಎಂದರು. ಈ ಮಾತನ್ನೇ ಅಪ್ಪಣೆ ಎಂದು ಭಾವಿಸಿದ ಪಂತಲು, ಆನಂತರದಲ್ಲಿ ತಯಾರಿಸಿದ ಚಿತ್ರವೇ ಸ್ಕೂಲ್ ಮಾಸ್ಟರ್! ಶಿಕ್ಷಕರಾಗಿ ತಾವು ಪಡೆದ ಅನುಭವವನ್ನೇ ಜೊತೆಗಿಟ್ಟುಕೊಂಡು, ಅದೇ ಸಂದರ್ಭದಲ್ಲಿ ತೆರೆಕಂಡಿದ್ದ ಮರಾಠಿ ಚಿತ್ರ ‘ವೈಷ್ಣವಿ’ ಯಲ್ಲಿದ್ದ ಒಳ್ಳೆಯ ಅಂಶಗಳನ್ನೂ ತೆಗೆದುಕೊಂಡು ಕಥೆ ರೆಡಿ ಮಾಡಿದರು.
ಹೀಗೆ ತಯಾರಾದ ಸ್ಕೂಲ್ ಮಾಸ್ಟರ್ ಚಿತ್ರ, 25 ವಾರಗಳ ದಾಖಲೆ ಪ್ರದರ್ಶನ ಕಂಡಿತಲ್ಲದೆ ರಾಷ್ಟ್ರಪತಿಗಳ ರಜತ ಪದಕವನ್ನೂ ತನ್ನದಾಗಿಸಿಕೊಂಡಿತು. ಈ ಸಾಧನೆ ಮಾಡಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. “ಸ್ಕೂಲ್ ಮಾಸ್ಟರ್’ ಚಿತ್ರಕ್ಕೆ ಹೊನ್ನಕಲಶದಂತೆ ಇದ್ದುದೇ “ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತು ತೇ …’ ಗೀತೆಯ ಮೂಲ ರಚನೆಕಾರರು ಸೋಸಲೆ ಅಯ್ನಾಶಾಸ್ತ್ರಿ. ಅವರ ರಚನೆಯ ಗೀತೆಯಲ್ಲಿ 8ಕ್ಕೂ ಹೆಚ್ಚು ಚರಣಗಳಿವೆ.
ಅವು ಹಳಗನ್ನಡ ಹಾಗೂ ಕೆಲವು ಸಂಸ್ಕೃತ ಶಬ್ದಗಳಿಂದ ಕೂಡಿ ಸರಾಗವಾಗಿ ಹಾಡಲು ಕಷ್ಟ ಅನ್ನಿಸುವಂತಿವೆ. ಇದನ್ನು ಗಮನಿಸಿದ ಪಂತಲು, ಅಯ್ನಾ ಶಾಸ್ತ್ರಿಗಳ ರಚನೆಯ ಗೀತೆಯಲ್ಲಿ ಪಲ್ಲವಿ ಮತ್ತು ಮೊದಲ ಚರಣವನ್ನು ಉಳಿಸಿಕೊಂಡು ಅದಕ್ಕೆ ಹೊಸದಾಗಿ ಎರಡನೇ ಚರಣ ಸೇರಿಸುವ ಜವಾಬ್ದಾರಿಯನ್ನು ಗೀತರಚನೆಕಾರ ಕಣಗಾಲ್ ಪ್ರಭಾಕರಶಾಸ್ತ್ರಿ ಅವರಿಗೆ ವಹಿಸಿದರು. ಅದರಂತೆ ವಿಜಯ ವಿದ್ಯಾರಣ್ಯ ಕಟ್ಟಿದ… ಎಂಬ ಸಾಲುಗಳು ಪ್ರಭಾಕರ ಶಾಸ್ತ್ರಿಯವರು ರಚಿಸಿದಂಥವು ಎಂಬುದು ಹಿರಿಯರ ಮಾತು.
ಈ ಕಾರಣದಿಂದಲೇ, ಸ್ವಾಮಿದೇವನೆ… ಗೀತೆರಚನೆಕಾರರ ಕುರಿತು ಪ್ರಸ್ತಾಪವಾದಾಗ, ಸೋಸಲೆ ಅಯ್ನಾ ಶಾಸ್ತ್ರಿ ಹಾಗೂ ಕಣಗಾಲ್ ಪ್ರಭಾಕರಶಾಸ್ತ್ರಿ -ಇಬ್ಬರ ಹೆಸರನ್ನೂ ಉಲ್ಲೇಖೀಸುವ ಪರಿಪಾಠವಿದೆ. ಈ ಗೀತೆಗೆ, ಎ.ಪಿ. ಕೋಮಲ, ರಾಣಿ ಮತ್ತು ಇತರರೊಂದಿಗೆ ಸಂಗೀತ ನಿರ್ದೇಶಕ ಟಿ.ಜಿ. ಲಿಂಗಪ್ಪನವರೂ ದನಿಗೂಡಿಸಿದ್ದಾರೆ. (ಪದ್ಮಿನಿ ಪಿಕ್ಚರ್ ಸಂಸ್ಥೆಯ ಮೊದಲ ಸಿನಿಮಾದಿಂದ ಆ ಸಂಸ್ಥೆ ತಯಾರಿಸಿದ ಕಡೆಯ ಸಿನಿಮಾದವರೆಗೆ ಎಲ್ಲ ಚಿತ್ರಗಳಿಗೂ ಸಂಗೀತ ನಿರ್ದೇಶನ ಮಾಡಿದವರು ಟಿ.ಜಿ.ಲಿಂಗಪ್ಪ.
ಬಹುಶಃ ಇದೊಂದು ದಾಖಲೆ. ಒಂದು ಚಲನಚಿತ್ರ ನಿರ್ಮಾಣ ಸಂಸ್ಥೆ ಮತ್ತು ಒಬ್ಬ ಸಂಗೀತ ನಿರ್ದೆಶಕ ಈ ಮಟ್ಟದ ಬಾಂಧವ್ಯ ಹೊಂದಿದ್ದ ಉದಾಹರಣೆ ಮತ್ತೂಂದು ಸಿಗಲಾರದೇನೋ …) ಮೊದಲ ಎರಡು ಸಾಲುಗಳನ್ನು ಮಾತ್ರ ಗುರುಗಳು ಆರಂಭಿಸಿ ನಂತರ ಹಾಡು ಮುಂದುವರಿಸುವ ಜವಾಬ್ದಾರಿಯನ್ನು ವಿದ್ಯಾರ್ಥಿಗಳಿಗೆ ಬಿಟ್ಟುಕೊಡಲಾಗಿದೆ. ಆ ಮೂಲಕ, ಮಾರ್ಗವನ್ನು ತೋರಿಸುವುದಷ್ಟೇ ಗುರುವಿನ ಕೆಲಸ. ಆ ಪಥದಲ್ಲಿ ಮುನ್ನಡೆಯುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂಬ ಸಂದೇಶವನ್ನು ಇಲ್ಲಿ ಸಾರಲಾಗಿದೆ.
ಇಡೀ ಪ್ರಾರ್ಥನೆಯಲ್ಲಿ ಯಾವ ದೇವರ ಹೆಸರೂ ಇಲ್ಲ. ಹಾಗಾಗಿ, ಎಲ್ಲರೂ ಹಾಡಬಹುದಾದ, ಎಲ್ಲ ಕಡೆಯೂ ಸಲ್ಲಬಹುದಾದ ಪ್ರಾರ್ಥನೆ ಇದು.
“ಸ್ಕೂಲ್ ಮಾಸ್ಟರ್’ ಚಿತ್ರದಲ್ಲಿ ಬಳಕೆಯಾದ ನಂತರ ಈ ಹಾಡು ಅದೆಷ್ಟು ಜನಪ್ರಿಯವಾಯಿತೆಂದರೆ, 1970ರ ದಶಕದಲ್ಲಿ ಈ ಹಾಡನ್ನು ರಾಜ್ಯದ ಬಹುಪಾಲು ಎಲ್ಲ ಶಾಲೆಗಳಲ್ಲೂ ‘ಪ್ರಾರ್ಥನಾ ಗೀತೆ’ಯಾಗಿ ಬಳಸಲಾಗುತ್ತಿತ್ತು. ಈ ಗೀತೆಯನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಒಟ್ಟಿಗೆ ಹಾಡುವುದನ್ನು ನೋಡಲೆಂದೇ ಹಳ್ಳಿಗಳ ಜನ ಶಾಲೆಗಳ ಬಳಿಗೆ ಬರುತ್ತಿದ್ದರು.
ಅಷ್ಟೇ ಅಲ್ಲ, ಮಗ್ಗಿ ಪುಸ್ತಕಗಳಲ್ಲಿ ಸತತ ಎರಡು ದಶಕಗಳ ಕಾಲ, ಎರಡನೇ ರûಾಪುಟದಲ್ಲಿ ಪ್ರಾರ್ಥನಾ ಗೀತೆ ಎಂಬ ಹೆಡ್ಡಿಂಗ್ ಹಾಕಿ- ಸ್ವಾಮಿದೇವನೆ… ಗೀತೆಯನ್ನು ಅಚ್ಚು ಹಾಕಲಾಗುತ್ತಿತ್ತು. ಈ ಮೊದಲೇ ವಿವರಿಸಿದಂತೆ, ಸಿನಿಮಾದ ಹಾಡಿನ ರೂಪದಲ್ಲಿ, ಶಾಲೆಯ ಪ್ರಾರ್ಥನೆಯಾಗಿ ನಾವೆಲ್ಲಾ ಕೇಳುವ ಸ್ವಾಮಿದೇವನೆ… ಗೀತೆಯ ಮೂರನೇ ಚರಣ ಬರೆದವರು ಕಣಗಾಲ್ ಪ್ರಭಾಕರಶಾಸ್ತ್ರಿ. ಗೀತೆರಚನೆಕಾರರಾಗಿ ಪ್ರಚಂಡ ಯಶಸ್ಸು ಕಂಡ ಶಾಸ್ತ್ರಿಗಳು ಸಿನಿಮಾದ ನಿರ್ಮಾಣ-ನಿರ್ದೇಶನದಲ್ಲೂ ಅದೃಷ್ಟ ಪರೀಕ್ಷಿಸಿದವರು.
ಅಲ್ಪಪ್ರಮಾಣದ ಯಶಸ್ಸನ್ನೂ ಕಂಡರು. ಸಿನಿಮಾ ನಿರ್ಮಾಣದ ವೇಳೆ ಯಾರಿಂದಲಾದರೂ ಸಣ್ಣ ತಪ್ಪಾದರೂ ಶಾಸ್ತ್ರಿಗಳಿಗೆ ಬಹುಬೇಗನೆ ಸಿಟ್ಟು ಬಂದುಬಿಡುತ್ತಿತ್ತು. ಈ ಸಿಟ್ಟಿನ ಕಾರಣದಿಂದಾಗಿಯೇ ಹೆಚ್ಚು ಸಿನಿಮಾಗಳನ್ನು ನಿರ್ಮಿಸಲು-ನಿರ್ದೇಶಿಸಲು ಅವರಿಗೆ ಸಾಧ್ಯವಾಗಲಿಲ್ಲ ಅನ್ನಬಹುದು. ಪ್ರಭಾಕರಶಾಸ್ತ್ರಿಗಳ ಸಿಟ್ಟು ಎಂಥಾದ್ದು ಎಂದು ವಿವರಿಸಲು ಒಂದು ಪ್ರಸಂಗವನ್ನು ಉದಾಹರಿಸಬಹುದು. ಪದ್ಮಿನಿ ಪಿಚ್ಚರ್ ಸಂಸ್ಥೆಯ ಮೊದಲ ಚಿತ್ರದಿಂದಲೂ ಪಂತಲು ಅವರೊಂದಿಗೆ ಚಿತ್ರಕಥೆ-ಸಂಭಾಷಣೆ-ಗೀತರಚನೆಯ ವಿಷಯದಲ್ಲಿ ಸಲಹೆ ನೀಡುತ್ತಾ, ತಪ್ಪುಗಳಾದಾಗ ಮುಲಾಜಿಲ್ಲದೆ ಖಂಡಿಸುತ್ತಾ ಇದ್ದವರು ಪ್ರಭಾಕರಶಾಸ್ತ್ರಿ.
“ಶ್ರೀಕೃಷ್ಣದೇವರಾಯ’ ಸಿನಿಮಾ ನಿರ್ದೇಶನ ಮಾಡುವಾಗ- ಕೃಷ್ಣದೇವರಾಯನಿಂದ ತಾಯೀ, ರಕ್ಷಕೀ, ಚಾಮುಂಡೇಶ್ವರಿ… ಎಂದು ಹೇಳಿಸಿದರೆ, ಆ ಸಂಭಾಷಣೆ ಮೈಸೂರು ಸೀಮೆಯ ಜನರಿಗೆ ತುಂಬಾ ಇಷ್ಟವಾಗಿ, ಅದೇ ಕಾರಣಕ್ಕೆ ಸಿನಿಮಾ ನೋಡಲು ಮೈಸೂರು ಸೀಮೆಯ ಜನ ಹೆಚ್ಚಾಗಿ ಬರುವ ಸಾಧ್ಯತೆ ಇದೆ ಎಂಬ ಯೋಚನೆ ಪಂತಲು ಅವರಿಗೆ ಬಂತು. ಅದನ್ನೇ ಶಾಸ್ತ್ರಿಗಳಿಗೂ ಹೇಳಿದರಂತೆ. ಆಗ ಶಾಸ್ತ್ರಿಗಳು- ಶ್ರೀಕೃಷ್ಣದೇವರಾಯ ವಿಜಯನಗರದ ಅರಸು.
ಆತ ತಿರುಪತಿ ತಿಮ್ಮಪ್ಪನ ಭಕ್ತ. ಹಂಪಿಯ ವಿರೂಪಾಕ್ಷನೇ ಆತನ ಆರಾಧ್ಯದೈವ. ವಾಸ್ತವ ಹೀಗಿರುವಾಗ, ಅವನಿಂದ- ತಾಯೇ ಚಾಮುಂಡೇಶ್ವರಿ ಎಂದು ಹೇಳಿಸಿದರೆ ಕೃತಕವಾಗುತ್ತದೆ ಮತ್ತು ಇತಿಹಾಸವನ್ನು ತಿರುಚಿದಂತೆಯೂ ಆಗುತ್ತದೆ. ಹಾಗಾಗಿ ಆ ಡೈಲಾಗ್ ಬರೆಯಲಾರೆ ಎಂದರಂತೆ. ಕಡೆಗೆ, ಆ ಡೈಲಾಗ್ ಬೇಕೇಬೇಕು ಎಂದು ಪಂತಲು ಅವರೂ, ಅದರ ಅಗತ್ಯವೇ ಇಲ್ಲ ಎಂದು ಪ್ರಭಾಕರಶಾಸ್ತ್ರಿಗಳೂ ಪಟ್ಟು ಹಿಡಿದರಂತೆ. ಕಡೆಗೆ, ಈ ಸಿನಿಮಾ ನಿರ್ಮಾಣಕ್ಕೆ ಬಂಡವಾಳ ಹೂಡಿರುವವನು ನಾನು.
ಹಾಗಾಗಿ ನನ್ನ ಮಾತು ನಡೆಯಬೇಕು ಎಂದರಂತೆ ಪಂತಲು. ಈ ಮಾತಿಂದ ಸಿಟ್ಟಿಗೆದ್ದ ಶಾಸ್ತ್ರಿಗಳು ನನ್ನ ಕೆಲಸದಲ್ಲಿ ಮಧ್ಯಪ್ರವೇಶ ಮಾಡುವುದನ್ನು ನಾನು ಸಹಿಸಲಾರೆ. ನಿಮ್ಮ ಸಂಸ್ಥೆಯೊಂದಿಗಿನ ಗೆಳೆತನಕ್ಕೆ ಗುಡ್‌ಬೈ ಎಂದು ಹೇಳಿ ಎದ್ದುಬಂದರಂತೆ… ಪ್ರಭಾಕರಶಾಸ್ತ್ರಿಗಳ ಕುರಿತು ಇದ್ದ ಇಂಥ ಕಥೆಗಳು ಒಂದೆರಡಲ್ಲ. ಸಿಟ್ಟಿನ ಕಾರಣಕ್ಕೇ “ಕನ್ನಡ ಚಿತ್ರರಂಗದ ದೂರ್ವಾಸ ಮುನಿ’ ಎಂದೂ ಅವರಿಗೆ ಹೆಸರಿತ್ತು. ಆದರೆ ಹಾಡು ಬರೆಯಲು ಕುಳಿತರೆಂದರೆ- ಅದ್ಭುತ, ಪರಮಾದ್ಭುತ ಎನಿಸುವಂಥ ಹಾಡುಗಳನ್ನೇ ಅವರು ರಚಿಸಿದರು. ಅದಕ್ಕೂ ಒಂದು ಉದಾಹರಣೆ ಬೇಕು ಅನ್ನುವುದಾದರೆ- ಒಲವೆ ಜೀವನ ಸಾûಾತ್ಕಾರ… ಅನ್ನಬಹುದು.
ಹಿಂದೆಯೇ, ಪ್ರಭಾಕರಶಾಸ್ತ್ರಿ ಎಂಬ ಪ್ರಚಂಡ ಪ್ರತಿಭೆಗೆ ನಮಸ್ಕಾರ. ಪಂತಲು ಎಂಬ ಮಹಾಮೇಧಾವಿಗೆ ಉದ್ಧಂಡ ನಮಸ್ಕಾರ ಎನ್ನುತ್ತ, ಮತ್ತೆಮತ್ತೆ ಸ್ವಾಮಿದೇವನೆ ಲೋಕಪಾಲನೆ… ಗೀತೆಯನ್ನು ನೆನಪು ಮಾಡಿಕೊಳ್ಳಬಹುದು. (ಮರೆತ ಮಾತು: ಪಂತಲು ಅವರ ಪದ್ಮಿನಿ ಪಿಚ್ಚರ್ ಸಂಸ್ಥೆ ತಯಾರಿಸಿದ “ಕಿತ್ತೂರು ಚೆನ್ನಮ್ಮ’ ಚಿತ್ರದಲ್ಲಿ ಕೂಡ “ಸ್ವಾಮಿದೇವನೆ ಲೋಕಪಾಲನೆ…’ ಗೀತೆಯನ್ನು, ಶಾಲೆಯ ಪ್ರಾರ್ಥನಾ ಗೀತೆಯಾಗಿ ಬಳಸಿಕೊಳ್ಳಲಾಗಿದೆ.)
ಶಾಸ್ತ್ರಿಗಳು ಅಂದ್ರೆ ಸುಮ್ನೆ ಅಲ್ಲ…
ಪ್ರಭಾಕರಶಾಸ್ತ್ರಿಗಳು ಹಠವಾದಿ. ಅಂದುಕೊಂಡದ್ದೆಲ್ಲ ಆಗಲೇಬೇಕು ಎನ್ನುತ್ತಿದ್ದ ಛಲದಂಕಮಲ್ಲ. ವರನಟ ರಾಜ್‌ಕುಮಾರ್ ಅವರಿಂದ ದ್ವಿಪಾತ್ರ ಮಾಡಿಸಬೇಕು ಎಂಬ ಯೊಚನೆ ಅವರಿಗೊಮ್ಮೆ ಬಂತು. ಮರುದಿನದಿಂದಲೇ “ಸತಿ-ಶಕ್ತಿ’ ಎಂಬ ಕಥೆಗೆ ರೂಪ ಕೊಟ್ಟು, ತಾವೇ ನಿರ್ದೇಶನದ ಹೊಣೆ ಹೊತ್ತು ಚಿತ್ರೀಕರಣ ಆರಂಭಿಸಿಯೇ ಬಿಟ್ಟರು. ಶೂಟಿಂಗ್ ಪೂರ್ಣಗೊಳ್ಳುವುದೇ ಅನುಮಾನ, ಅದು ಸಕ್ಸಸ್ ಆಗುವುದೂ ಅನುಮಾನ ಎಂದು ಹಲವರು ಕೊಂಕು ನುಡಿದರು. ಆದರೆ, ಶಾಸ್ತ್ರಿಗಳು ಇದ್ಯಾವುದಕ್ಕೂ ಕೇರ್ ಮಾಡಲಿಲ್ಲ. ನನ್ನ ಸಿನಿಮಾದ ಬಗ್ಗೆ ಏನೇ ಹೇಳುವುದಿದ್ದರೂ ನೇರವಾಗಿ ಬಂದು ಮಾತಾಡಲಿ. ಅದು ಬಿಟ್ಟು ಮರೆಯಲ್ಲಿ ನಿಂತು ಮಾತಾಡಿದರೆ ಏನುಪಯೋಗ ಎಂದು ಅಬ್ಬರಿಸಿದರು.
“ಸಾûಾತ್ಕಾರ’ ಸಿನಿಮಾದಲ್ಲಿ ಹಿಂದಿಯ ಪೃಥ್ವೀರಾಜ್ ಕಪೂರ್ ಅಭಿನಯಿಸಿದಾಗ, ನಿಮ್ಮ ಪಾತ್ರಕ್ಕೆ ನೀವೇ ಡಬ್ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು. ಆ ಸಿನಿಮಾದ ನಿರ್ದೇಶನ ಪುಟ್ಟಣ್ಣ ಕಣಗಾಲ್ ಅವರದ್ದಾದರೂ, ಆ ಚಿತ್ರದ ಸಂಭಾಷಣೆ ಹಾಗೂ ಗೀತೆರಚನೆಯ ಹೊಣೆ ಹೊತ್ತಿದ್ದ ಶಾಸ್ತ್ರಿಗಳು ಕನ್ನಡದ ಮೇಲಿನ ಅಭಿಮಾನದಿಂದ ಹಾಗೆ ಅಬ್ಬರಿಸಿದ್ದನ್ನು ಕಂಡು ಸ್ವತಃ ಪೃಥ್ವಿರಾಜ್ ಕಪೂರ್ ಅವರೇ ತಬ್ಬಿಬ್ಟಾಗಿದ್ದರು.
ಪವಾಡ ನಡೆಯುತ್ತೆ ಅಂದಿದ್ದರು!
ಪ್ರಭಾಕರಶಾಸ್ತ್ರಿಗಳು ಒಂದು ನಾಟಕ ಬರೆದಿದ್ದರು. ಅದೇ “ಪ್ರಚಂಡ ರಾವಣ’. ಹಳೆಗನ್ನಡ, ಹೊಸಗನ್ನಡದ ಮಾತುಗಳಿಂದಾಗಿ ಡೈಲಾಗ್ ಹೇಳುವುದೇ ಸ್ವಲ್ಪ ಕಷ್ಟ ಅನ್ನಿಸುತ್ತಿತ್ತು. ಹೀಗಿರುವಾಗ, ಸದಾನಂದ ಸಾಗರ್ ಎಂಬ ತರುಣನೊಬ್ಬ “ಪ್ರಚಂಡ ರಾವಣ’ ನಾಟಕವನ್ನು ಆ ಪಾತ್ರದ ಪರಕಾಯ ಪ್ರವೇಶ ಮಾಡಿದವನಂತೆ ಅದ್ಭುತವಾಗಿ ಅಭಿನಯಿಸುತ್ತಿದ್ದ. ಈ ಮಾತು ಅವರಿವರ ಮೂಲಕ ಶಾಸ್ತ್ರಿಗಳನ್ನೂ ತಲುಪಿತು.
ಅವರು, ಗುಟ್ಟಾಗಿ ಬಂದು ನಾಟಕ ನೋಡಿದರು. ನಾಟಕ ಮುಗಿಯುತ್ತಿದ್ದಂತೆಯೇ- ಗ್ರೀನ್ ರೂಂ ಪ್ರವೇಶಿಸಿ, ಸದಾನಂದ ಸಾಗರ್‌ನ ಬೆನ್ನುತಟ್ಟಿ, ನನ್ನ ಕಲ್ಪನೆಯ ರಾವಣನನ್ನು ನಿನ್ನಲ್ಲಿ ಕಂಡೆ. ನೀನಲ್ಲದೆ ಬೇರೆ ಯಾರಿಂದಲೂ ಈ ಪಾತ್ರವನ್ನು ಇಷ್ಟು ಚೆನ್ನಾಗಿ ನಿರ್ವಹಿಸಲು ಸಾಧ್ಯವಿಲ್ಲ. ನೀನು ರಂಗಭೂಮಿಯಲ್ಲಿ ಮಾತ್ರವಲ್ಲ, ಚಿತ್ರರಂಗದಲ್ಲೂ ಮೆರೆಯಬೇಕು ಎಂದರು. ಅಷ್ಟಕ್ಕೇ ಸುಮ್ಮನಾಗದೆ ಸಹೋದರ ಪುಟ್ಟಣ್ಣ ಕಣಗಾಲ್ ಅವರಿಗೂ ಈ ನಾಟಕ ಮತ್ತು ಪಾತ್ರಧಾರಿಯ ಬಗ್ಗೆ ಹೇಳಿ- ನಿನ್ನ ಹೊಸ ಸಿನಿಮಾ “ಮಲ್ಲಮ್ಮನ ಪವಾಡ’ದಲ್ಲಿ ಆ ಹುಡುಗನಿಗೆ ಒಂದು ಮುಖ್ಯ ಪಾತ್ರ ಕೊಡೋ ಪುಟ್ಟಾ.
ಸಿನಿಮಾ ಬಿಡುಗಡೆಯ ನಂತರ ಆ ಹುಡುಗನ ವಿಚಾರದಲ್ಲಿ ಖಂಡಿತ ಪವಾಡ ನಡೆದುಹೋಗುತ್ತೆ ಎಂದು ಭವಿಷ್ಯ ಹೇಳಿದ್ದರು. ಅಣ್ಣನ ಸಲಹೆಯಂತೆ ಗುಟ್ಟಾಗಿ ಹೋಗಿ, “ಪ್ರಚಂಡ ರಾವಣ’ ನಾಟಕ ನೋಡಿದ ಪುಟ್ಟಣ್ಣ, ಆ ನಾಟಕದ ಮುಖ್ಯ ಪಾತ್ರಧಾರಿಗೆ “ಮಲ್ಲಮ್ಮನ ಪವಾಡ’ದಲ್ಲಿ ಒಂದು ಪಾತ್ರ ಕೊಟ್ಟು, ಇಂದಿನಿಂದ ನಿನ್ನ ಹೆಸರು ವಜ್ರಮುನಿ ಅಂದರು! ಆನಂತರದಲ್ಲಿ ನಡೆದಿದ್ದೆಲ್ಲ ಇತಿಹಾಸ…
(ಪೂರಕ ಮಾಹಿತಿ: ಸಿ.ವಿ. ಶಂಕರ್, ಚಿದಂಬರ ಕಾಕತ್ಕರ್, ಎನ್.ಎಸ್.ಶ್ರೀಧರ ಮೂರ್ತಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.