ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಪಟಾಕಿ ನಿಷಿದ್ಧ
Team Udayavani, Oct 19, 2017, 1:03 PM IST
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದ ಜತೆಗೆ ಸುರಕ್ಷತೆಯಿಂದ ಆಚರಿಸುವಂತೆ ಮನವಿ ಮಾಡಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಪಟಾಕಿ ಸಿಡಿಸುವುದನ್ನು ನಿಷೇಧಿಸಿದೆ. ದೀಪಾವಳಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ.
ಆದರೆ ಪಟಾಕಿ ಸಿಡಿಸುವಾಗ ಸುರಕ್ಷತೆಗೆ ಗಮನ ನೀಡದ ಕಾರಣ ಅವಘಡಗಳು ಸಂಭವಿಸುತ್ತಿವೆ. ಪಟಾಕಿ ಸಿಡಿಸುವುದರಿಂದ ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿ ಜತೆಗೆ ಬೆಂಕಿ ಅವಘಡ ಸಂಭವಿಸುತ್ತಿದ್ದು, ಇದನ್ನು ತಡೆಗಟ್ಟಲು ಎಲ್ಲರೂ ಸಹಕರಿಸಬೇಕು ಎಂದು ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಮನವಿ ಮಾಡಿದ್ದಾರೆ.
ನಗರ ಪ್ರದೇಶಗಲ್ಲಿ ವಾಯು ಮಾಲಿನ್ಯ ಪ್ರಮಾಣ ಅಪಾಯಕಾರಿ ಮಟ್ಟಕ್ಕೆ ಏರಿಕೆ ಯಾಗ ದಂತೆ ಎಚ್ಚರ ವಹಿಸ ಬೇಕಾದ ಜವಾಬ್ದಾರಿಯೂ ನಾಗರಿಕರ ಮೇಲಿದೆ. ವಾಯು- ಶಬ್ದ ಮಾಲಿನ್ಯ, ತ್ಯಾಜ್ಯದಿಂದ ಮಕ್ಕಳು, ವಯೋವೃದ್ಧರು, ರೋಗಿಗಳು, ಶಿಶುಗಳು ಆರೋಗ್ಯ ಸಮಸ್ಯೆಗಳಿಗೆ ಸಿಲುಕಲಿದ್ದಾರೆ.
ಕಿವುಡುತನ, ಹೃದಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುವುದನ್ನುಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಕೋರಿದ್ದಾರೆ. ದೀಪಗಳನ್ನು ಬೆಳಗಿಸಿ ಹಬ್ಬ ಆಚರಿಸುವತ್ತ ಎಲ್ಲರೂ ಚಿತ್ತ ಹರಿಸಬೇಕು. ಹೆಚ್ಚು ಶಬ್ದಕಾರಕ, ವಾಯು ಮಾಲಿನ್ಯ ಕಾರಕವಲ್ಲದ ಪಟಾಕಿಗಳನ್ನು ಸಿಡಿಸುವತ್ತ ಗಮನ ಹರಿಸಬೇಕು.
ಹಬ್ಬದ ಆಚರಣೆ ನಂತರ ಉತ್ಪತ್ತಿಯಾಗುವ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಸ್ಥಳೀಯ ಸಂಸ್ಥೆಗಳಿಗೆ ನೀಡುವ ಮೂಲಕ ನಮ್ಮ ನಗರದ ಸ್ವತ್ಛತೆ ಕಾಪಾಡಿಕೊಳ್ಳಬೇಕು. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯೊಳಗೆ ಪಟಾಕಿ ಸಿಡಿಸುವುದು, ಧ್ವನಿವರ್ಧಕ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.
ನಗರದ 69 ಮೈದಾನಗಳಲ್ಲಿ ಪಟಾಕಿ ಮಳಿಗೆ
ಬೆಂಗಳೂರು: ನಗರದ 69 ಮೈದಾನಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ವಿವೇಕ್‌ನಗರದ ಸುತ್ತಮುತ್ತಲ ಪ್ರದೇಶದಲ್ಲಿ ಪಟಾಕಿ ಮಳಿಗೆ ತೆರೆಯಲು ಅವಕಾಶ ನೀಡುವಂತೆ ಬಿಬಿಎಂಪಿಗೆ ನಿರ್ದೇಶಿಸುವಂತೆ ಪಟಾಕಿ ಮಾರಾಟಗಾರರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಹೈಕೋರ್ಟ್‌ಗೆ ಈ ಮಾಹಿತಿ ನೀಡಿದರು.
ವಿಚಾರಣೆ ವೇಳೆ ವಾದ ಮಂಡಿಸಿದ ಸರ್ಕಾರಿ ವಕೀಲ ಕಿರಣ್‌ಕುಮಾರ್, ಹೈಕೋರ್ಟ್ ನಿರ್ದೇಶನದ ಹಿನ್ನೆಲೆ ಸುರಕ್ಷತೆ ಸೃಷ್ಟಿಯಿಂದ ಬಿಬಿಎಂಪಿ ಈಗಾಗಲೇ ಪಟಾಕಿ ಮಳಿಗೆಗಳನ್ನು ತೆರೆಯಲು 69 ಮೈದಾನಗಳನ್ನು ಗುರುತಿಸಿದೆ. ಲಕ್ಕಿ ಡ್ರಾ ಮೂಲಕ ಮಾರಾಟಗಾರರಿಗೂ ಅನುಮತಿ ನೀಡಿದೆ. ಈ ಹಂತದಲ್ಲಿ ಅರ್ಜಿದಾರರ ಮನವಿ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರ ಮನವಿ ಸ್ವೀಕರಿಸಿ ನಿಯಮಗಳ ಅನ್ವಯ ಯಾವುದಾದರೂ ಮೈದಾನದಲ್ಲಿ ಮಳಿಗೆ ತೆರೆಯಲು ಅವಕಾಶವಿದ್ದರೆ ಪರಿಗಣಿಸಿ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.
ಮೆಜೆಸ್ಟಿಕ್‌ನಲ್ಲಿ ದೀಪಾವಳಿ ಪ್ರಯಾಣಿಕರ ಜನಜಂಗುಳಿ
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ಮಂಗಳವಾರ ರಾತ್ರಿ ಭಾಗಶಃ ಬೆಂಗಳೂರು ಖಾಲಿ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಸೇರಿದಂತೆ ನಗರದ ಪ್ರಮುಖ ಬಸ್ ನಿಲ್ದಾಣಗಳು ಜನಜಂಗುಳಿಯಿಂದ ತುಂಬಿತುಳುಕುತ್ತಿದ್ದವು.
ರಾಜ್ಯದ ವಿವಿಧೆಡೆ ಹಾಗೂ ನೆರೆ ರಾಜ್ಯಗಳತ್ತ ಹಬ್ಬಕ್ಕೆ ತೆರಳಲು ಸಂಜೆಯಿಂದಲೇ ಪ್ರಯಾಣಿಕರು ಹೊರಟುನಿಂತರು. ಇದರಿಂದ ನಗರದ ಬಹುತೇಕ ಎಲ್ಲ ರಸ್ತೆಗಳು ಹತ್ತಿರದ ಪ್ರಮುಖ ಬಸ್ ನಿಲ್ದಾಣಗಳನ್ನು ಕೂಡುತ್ತಿದ್ದವು. ಇದರಿಂದ ಎಂದಿಗಿಂತ ಹೆಚ್ಚು ಸಂಚಾರದಟ್ಟಣೆ ಉಂಟಾಗಿತ್ತು.
ಮಳೆ ಬಿಡುವು ನೀಡಿದ್ದರಿಂದ ಸಂಜೆಯಿಂದಲೇ ಮೆಜೆಸ್ಟಿಕ್, ಶಾಂತಿನಗರ, ವಿಜಯನಗರ, ಮೈಸೂರು ರಸ್ತೆಯ ಸ್ಯಾಟಲೈಟ್, ಯಶವಂತಪುರ, ಪೀಣ್ಯ ಬಸ್ ನಿಲ್ದಾಣಗಳಿಗೆ ತಂಡೋಪ ತಂಡವಾಗಿ ಪ್ರಯಾಣಿಕರ ಬರುತ್ತಿದ್ದರು. ಇನ್ನು ಮೆಜೆಸ್ಟಿಕನ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಂತೂ ಪ್ಲಾಟ್‌ಫಾರಂಗೆ ಬಂದುನಿಲ್ಲುವ ರೈಲುಗಳ ಮೇಲೆ ಪ್ರಯಾಣಿಕರು ಅಕ್ಷರಶಃ ಮುಗಿಬೀಳುತ್ತಿದ್ದುದು ಸಾಮಾನ್ಯವಾಗಿತ್ತು.
ಅಲ್ಲದೆ, ಆನಂದರಾವ್ ವೃತ್ತ, ಮೌರ್ಯ ವೃತ್ತ, ಶೇಷಾದ್ರಿರಸ್ತೆ, ಕೆ.ಜಿ. ರಸ್ತೆ, ಯಶವಂತಪುರ, ಶಾಂತಿನಗರ, ವಿಜಯನಗರ, ಜಯನಗರ ಮತ್ತಿತರ ಸ್ಥಳಗಳಲ್ಲಿ ಖಾಸಗಿ ಬಸ್ ಏಜೆನ್ಸಿಗಳ ಕಚೇರಿಗಳ ಎದುರು ಪ್ರಯಾಣಿಕರ ದೊಡ್ಡ ದಂಡು ನಿಂತಿತ್ತು. ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮೂರು ಟರ್ಮಿನಲ್‌ಗಳಲ್ಲೂ ಪ್ರಯಾಣಿಕರು ಭರ್ತಿಯಾಗಿದ್ದರು.
ಸಂಜೆಯಿಂದಲೇ ಮೆಜೆಸ್ಟಿಕ್ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ನಿಯಂತ್ರಣಕ್ಕಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿತ್ತು. ಸಂಚಾರಿ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹರಸಾಹಸಪಟ್ಟರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.