ದಯವಿಟ್ಟು ಗಮನಿಸಿ
Team Udayavani, Oct 20, 2017, 11:15 AM IST
“ದಯವಿಟ್ಟು ಗಮನಿಸಿ’ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಸದ್ದು ಮಾಡುತ್ತಿರುವ ಸಿನಿಮಾ. ಟ್ರೇಲರ್, ಹಾಡು ಮೂಲಕ ಸುದ್ದಿಯಾಗಿರುವ ಸಿನಿಮಾ ಇಂದು ತೆರೆಕಾಣುತ್ತಿದೆ. ರೋಹಿತ್ ಪದಕಿ ಈ ಸಿನಿಮಾದ ನಿರ್ದೇಶಕರು. ಬದುಕಿನ ಸೂಕ್ಷ್ಮ ಅಂಶಗಳನ್ನು ದಯವಿಟ್ಟು ಗಮನಿಸಿ ಎನ್ನಲು ಹೊರಟಿರುವ ರೋಹಿತ್, ತಮ್ಮ ಸಿನಿಮಾ ಬಗ್ಗೆ ಇಲ್ಲಿ ಮಾತನಾಡಿದ್ದಾರೆ …
1.ನಿಮಗೆ ಇಲ್ಲಿ ಪುಸ್ತಕ ಓದುವ ಅನುಭವ ಸಿಗುತ್ತದೆ.
2.ಕನ್ನಡದ ಸೊಗಡಿರುವ ಮಧುರವಾದ ಹಾಡುಗಳಿವೆ.
3. ಬದುಕಲ್ಲಿ ಕಾಣಿಸುವ ಅಂಶಗಳನ್ನು ತೆರೆಮೇಲೆ ನೋಡಬಹುದು.
4. ಯೋಚನೆಗೆ ಹಚ್ಚುವ, ನಿಮ್ಮನ್ನು ಕಾಡುವ ವಿಷಯಗಳಿವೆ.
5. ಒಳ್ಳೆಯ ತಾರಾಗಣವಿದೆ. ಸೊಗಸಾದ ಅಭಿನಯ ನೋಡಬಹುದು.
ಒಬ್ಬ ಸಾಮಾನ್ಯ ಪ್ರೇಕ್ಷಕ “ದಯವಿಟ್ಟು ಗಮನಿಸಿ’ ಚಿತ್ರವನ್ನು ಯಾಕೆ ನೋಡಬೇಕು ಎಂಬ ಪ್ರಶ್ನೆಗೆ ನಿರ್ದೇಶಕ ರೋಹಿತ್ ಪದಕಿ ಕೊಡುವ ಐದು ಕಾರಣಗಳಿವು. ಇಷ್ಟು ಹೇಳಿದ ಮೇಲೆ ನಿಮಗೆ ಒಂದು ಕುತೂಹಲ ಹುಟ್ಟಬಹುದು, “ದಯವಿಟ್ಟು ಗಮನಿಸಿ’ಯಲ್ಲಿ ಅಂಥದ್ದೇನಿದೆ, ಯಾವ ವಿಚಾರದೊಂದಿಗೆ ಸಿನಿಮಾ ಮಾಡಿದ್ದಾರೆಂದು. ನಿರ್ದೇಶಕ ರೋಹಿತ್ ಪದಕಿ ಹೇಳುವಂತೆ, ಇದು ನಮ್ಮ -ನಿಮ್ಮ ಬದುಕಿನ ಕಥೆ, ದಿನ ನಿತ್ಯ ನಮ್ಮ ಜೀವನದಲ್ಲಿ ನಡೆಯುವ ಅಂಶಗಳನ್ನು ಸಿನಿಮಾ ರೂಪದಲ್ಲಿ ಪೋಣಿಸಲಾಗಿದೆ.
“ಇದು ನಮ್ಮ ಬದುಕಿನ ಸುತ್ತ ಸಾಗುವ ಸಾಗುವ ಸಿನಿಮಾ. ನಮ್ಮ ಜೀವನವನ್ನು ರಿವೈಂಡ್ ಮಾಡುವ ಪ್ರಯತ್ನ ಎಂದರೂ ತಪ್ಪಲ್ಲ. ನಮ್ಮ ಜೀವನದಲ್ಲಿ ನಾವು ಗಮನಿಸದೇ ಇರುವ ಅಂಶಗಳನ್ನು ಗಮನಕ್ಕೆ ತರುವ ಪ್ರಯತ್ನ ಇಲ್ಲಿ ಮಾಡಲಾಗಿದೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ಪದಕಿ. ಮೊದಲೇ ಹೇಳಿದಂತೆ ಇದು ಬದುಕು, ದಿನನಿತ್ಯದ ಜೀವನದ ಬಗೆಗಿನ ಸಿನಿಮಾವಾದ್ದರಿಂದ ಚಿತ್ರೀಕರಣವನ್ನೂ ಅಷ್ಟೇ ನೈಜವಾಗಿ ಮಾಡಲಾಗಿದೆಯಂತೆ.
“ಇಡೀ ಸಿನಿಮಾವನ್ನು ನೈಜವಾಗಿ ಚಿತ್ರೀಕರಿಸಿದ್ದೇವೆ. ಅನಾವಶ್ಯಕವಾಗಿ ಯಾವುದೇ ಪಾತ್ರವನ್ನಾಗಲೀ, ಲೊಕೇಶನ್‌ನ್ನಾಗಲೀ ತುರುಕಿಲ್ಲ. ಕಥೆ ಏನು ಬೇಡುತ್ತೋ ಅದನ್ನಷ್ಟೇ ಕೊಟ್ಟಿದ್ದೇವೆ’ ಎನ್ನುತ್ತಾರೆ. “ದಯವಿಟ್ಟು ಗಮನಿಸಿ’ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಚಿತ್ರದ ಬಗ್ಗೆ ರೋಹಿತ್‌ಗೆ ಪದಕಿಗೆ ವಿಶ್ವಾಸವಿದೆ. ಆ ವಿಶ್ವಾಸಕ್ಕೆ ಕಾರಣ ಈಗಾಗಲೇ ಸಿಕ್ಕ ವಿಮರ್ಶೆಗಳು. ಹೌದು, “ದಯವಿಟ್ಟು ಗಮನಿಸಿ’ ಚಿತ್ರ ಈಗಾಗಲೇ ಆಸ್ಟ್ರೇಲಿಯಾದಲ್ಲಿ ಪ್ರೀಮಿಯರ್ ಆಗಿದೆ.
ಸಿನಿಮಾ ನೋಡಿದವರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆಯಂತೆ. “ಸಿಡ್ನಿಯಲ್ಲಿ ಸಿನಿಮಾ ಪ್ರದರ್ಶನವಾಗಿದೆ. ಸಿನಿಮಾ ನೋಡಿದವರು ಫೋನ್ ಮಾಡುತ್ತಿದ್ದಾರೆ, ಸಿನಿಮಾ ನೋಡಿ ಹೊರಬಂದಾಗ ತುಂಬಾ ಕಾಡುತ್ತೆ, ನಮ್ಮನ್ನು ಚಿಂತನೆಗೆ ಹಚ್ಚುತ್ತೆ ಎಂಬ ಮಾತುಗಳನ್ನು ಹೇಳುತ್ತಿದ್ದಾರೆ. ಸಹಜವಾಗಿಯೇ ಸಿನಿಮಾದ ಬಗ್ಗೆ ವಿಶ್ವಾಸವಿದೆ’ ಎನ್ನುವುದು ಪದಕಿ ಮಾತು. ಚಿತ್ರದ ಟೈಟಲ್ “ದಯವಿಟ್ಟು ಗಮನಿಸಿ’. ಕಥೆಗೂ ಟೈಟಲ್‌ಗೂ ಏನು ಸಂಬಂಧ ಎಂದರೆ, ದೊಡ್ಡ ಸಂಬಂಧವಿದೆ ಎನ್ನುತ್ತಾರೆ.
“ಸಾಮಾನ್ಯವಾಗಿ ರೈಲ್ವೇ ಸ್ಟೇಶನ್, ಬಸ್ ಸ್ಟೇಶನ್ ಅಥವಾ ತುಂಬಾ ಜನ ಸೇರುವ ಜಾಗದಲ್ಲಿ ಯಾವುದೇ ಅನೌನ್ಸ್‌ಮೆಂಟ್ ಆಗಲೀ, ಮೊದಲಿಗೆ ಆರಂಭವಾಗೋದು “ದಯವಿಟ್ಟು ಗಮನಿಸಿ …’ ಎಂದು. ಇಲ್ಲೂ ಅಷ್ಟೇ ಜೀವನದಲ್ಲಿ ನಮಗೆ ಗೊತ್ತಿರದಂತಹ, ನಮ್ಮ ಗಮನಕ್ಕೆ ಬಾರದಂತಹ ಅಂಶಗಳನ್ನು ಗಮನಿಸಿ ಎಂಬುದನ್ನು ಹೇಳುತ್ತಿದ್ದೇವೆ. ಹಾಗಾಗಿ, ಟೈಟಲ್ ಕೂಡಾ ಸೂಕ್ತವಾಗುತ್ತದೆ’ ಎನ್ನುತ್ತಾರೆ. ಚಿತ್ರ ನಾಲ್ಕು ಟ್ರ್ಯಾಕ್‌ಗಳಲ್ಲಿ ಸಾಗುತ್ತದೆ. ಒಂದು ಕಥೆ, ಮೂರು ಉಪಕಥೆ.
ಇಲ್ಲಿ ಮೂರು ಕಥೆಗಳನ್ನು ರೋಹಿತ್ ಪದಕಿ ಬರೆದಿದ್ದರೆ, ಇನ್ನೊಂದು ಜಯಂತ್ ಕಾಯ್ಕಿಣಿಯವರ ಕಥೆಯನ್ನು ಬಳಸಿಕೊಂಡಿದ್ದಾರೆ. ಜಯಂತ್ ಕಾಯ್ಕಿಣಿ ಅವರ “ತೂಫಾನ್ ಮೇಲ್’ ಪುಸ್ತಕದ ಸಣ್ಣ ಕಥೆಯೊಂದು ನಿರ್ದೇಶಕ ರೋಹಿತ್ ಪದಕಿ ಅವರಿಗೆ ಇಷ್ಟವಾಗಿದೆ. “ಕನ್ನಡಿ ಇಲ್ಲದ ಊರಲ್ಲಿ’ ಎಂಬ ಉಪಕಥೆಯ ಒನ್‌ಲೈನ್ ಇಟ್ಟುಕೊಂಡು ಚಿತ್ರೀಕರಿಸಿದ್ದಾರಂತೆ ರೋಹಿತ್ ಪದಕಿ. ಚಿತ್ರ ನಾಲ್ಕು ಟ್ರ್ಯಾಕ್‌ಗಳಲ್ಲಿ ಸಾಗಿದರೂ ಅಂತಿಮವಾಗಿ ಎಲ್ಲಾ ಪಾತ್ರಗಳು ಮುಖಾಮುಖೀಯಾಗುತ್ತವೆ.
ಅದಕ್ಕೊಂದು ಕಾರಣವಿದೆ ಎನ್ನುತ್ತಾರೆ ಪದಕಿ. ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ರಘು ಮುಖರ್ಜಿ, ರಾಜೇಶ್ ನಟರಂಗ, ಸಂಯುಕ್ತಾ ಹೊರನಾಡು, ವಸಿಷ್ಠ, ಸಂಗೀತಾ ಭಟ್, ಸುಕೃತಾ ವಾಗ್ಲೆ, ಪೂರ್ಣಚಂದ್ರ ಮೈಸೂರು, ಅವಿನಾಶ್, ಪ್ರಕಾಶ್ ಬೆಳವಾಡಿ ಸೇರಿದಂತೆತ ಅನೇಕರು ನಟಿಸಿದ್ದಾರೆ. ಒಂದೊಂದೇ ಟ್ರ್ಯಾಕ್‌ಗಳನ್ನು ಚಿತ್ರೀಕರಿಸುತ್ತಿದ್ದರಿಂದ ದೊಡ್ಡ ತಾರಾಬಳಗವನ್ನು ನಿಭಾಹಿಸೋದು ಕಷ್ಟವಾಗಲಿಲ್ಲ ಎನ್ನುತ್ತಾರೆ.
ಚಿತ್ರದ ಕಥೆ ಹಾಗೂ ಅದರ ಪೋಷಣೆ ಹೊಸ ತರಹದಿಂದ ಕೂಡಿರುವುದರಿಂದ ಜನ ಈ ಸಿನಿಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ರೋಹಿತ್ ಪದಕಿಗಿದೆ. “ಇತ್ತೀಚೆಗೆ “ಆಟಗಾರ’ ಸೇರಿದಂತೆ ಒಂದಷ್ಟು ವಿಭಿನ್ನ ಸಿನಿಮಾಗಳನ್ನು ಜನ ಸ್ವೀಕರಿಸಿದ್ದಾರೆ. ಒಂದು ಸಾರಿ, ಸಿನಿಮಾ ಚೆನ್ನಾಗಿದೆ ಎಂಬುದು ಗೊತ್ತಾದರೆ, ಜನ ಆ ಸಿನಿಮಾಗಳನ್ನು ಕೈ ಬಿಡೋದಿಲ್ಲ. ನಮಗೂ ಅದೇ ವಿಶ್ವಾಸವಿದೆ’ ಎನ್ನುವುದು ರೋಹಿತ್ ಪದಕಿ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.