ಮನೆಗಳ್ಳರ ಹಾವಳಿಗೆ ಬಿದ್ದಿಲ್ಲ ಬ್ರೇಕ್
Team Udayavani, Oct 20, 2017, 12:03 PM IST
ಬೆಂಗಳೂರು: ರಾಜಧಾನಿಯಲ್ಲಿ ಅಪರಾಧ ಕೃತ್ಯಗಳ ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಬೀಟ್ ವ್ಯವಸ್ಥೆ ಜಾರಿಗೊಳಿಸಿದ್ದರೂ ಮನೆಗಳ್ಳರ ಹಾವಳಿ ಮಾತ್ರ ನಿಂತಿಲ್ಲ. ಅದರಲ್ಲೂ ರಾತ್ರಿ ವೇಳೆ ಬೀಗ ಹಾಕಿರುವ ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳ ಪ್ಲ್ರಾಟ್‌ಗಳಲ್ಲಿ ಕಳವು ಪ್ರಕರಣಗಳು ಹೆಚ್ಚಾಗಿವೆ. ಸಿ.ಸಿ.ಟಿವಿ ಕ್ಯಾಮೆರಾ, ಖಾಸಗಿ ಭದ್ರತೆವುಳ್ಳ ಅತಿ ಗಣ್ಯರು ವಾಸಿಸುವ ಸದಾಶಿವನಗರ ಹಾಗೂ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲೂ ಚೋರರು ತಮ್ಮ ಕೈಚಳಕ ತೋರುತ್ತಿದ್ದು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ.
ಐಎಎಸ್ ಅಧಿಕಾರಿ ಸುಭೋದ್‌ಯಾದವ್ ವಾಸವಿದ್ದ ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಾಜಮಹಲ್ ಮಹಲ್ ವಿಲಾಸ್ ಬಡಾವಣೆಯ ಮನೆ ಹಾಗೂ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಯ ಸಿಇಓ ಬಂಗಲೆಯಲ್ಲಿ ನಡೆದ ಕಳವು ಇದಕ್ಕೆ ಉದಾಹರಣೆ. ಮನೆಗಳ್ಳರು ಹಗಲಿಗಿಂತ ರಾತ್ರಿಯನ್ನೇ ಕಳವು ಮಾಡಲು ಆಯ್ಕೆ ಮಾಡಿಕೊಳ್ಳುತ್ತಿದ್ದು, ಅದಕ್ಕೂ ಮುನ್ನ ಹಗಲಿನ ವೇಳೆ ತಿರುಗಾಟ ನಡೆಸಿ ಯಾವ ಮನೆ ಬೀಗ ಹಾಕಲಾಗಿದೆ.
ಮನೆ ಮಾಲೀಕರು ಊರಿಗೆ ಹೋಗಿದ್ದಾರೆಯೇ? ಇಲ್ಲವೇ? ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿ ನಂತರ ಕಳವು ಮಾಡುತ್ತಿದ್ದಾರೆ. ಕೆಲವೊಮ್ಮೆ ಮನೆಗಳ್ಳರು ಕಾರ್ಮಿಕರ ಸೋಗಿನಲ್ಲಿ ಬೀಗ ಹಾಕಿರುವ ಮನೆಗಳ ಮಾಲೀಕರು ಹೊರ ಊರಿಗೆ ಹೋಗಿರುವ ಬಗ್ಗೆ ನೆರೆ ಹೊರೆಯವರಿಂದ ಮಾಹಿತಿ ಪಡೆಯುತ್ತಾರೆ ಎಂಬುದೂ ಕೆಲವೊಂದು ಪ್ರಕರಣಗಳ ತನಿಖೆಯಲ್ಲಿ ತಿಳಿದು ಬಂದಿದೆ.
ಕಳೆದ ಐದು ವರ್ಷಗಳ ಮನೆಗಳವು ಪ್ರಕರಣಗಳ ಅಂಕಿ-ಅಂಶಗಳ ಮೇರೆಗೆ ಈ ವರ್ಷ ಮನೆಗಳವು ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಗಸ್ತು ವ್ಯವಸ್ಥೆ ಹೆಚ್ಚಿಸಿ, ಹೊಯ್ಸಳ ವಾಹನಗಳ ತಿರುಗಾಟ ಹೆಚ್ಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದು ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಈ ಮಧ್ಯೆ, ನಗರದಲ್ಲಿ ನಡೆಯುವ ಮನೆಗಳವು ಕೃತ್ಯಗಳಲ್ಲಿ ಬಹುತೇಕ ಸ್ಥಳೀಯ ಆರೋಪಿಗಳೇ ಭಾಗಿಯಾಗಿರುತ್ತಾರೆ. ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯಗಳಿಂದ ಬರುವ ಕಳ್ಳರ ಗ್ಯಾಂಗ್‌ಗಳು ತಾವು ಟಾರ್ಗೆಟ್ ಮಾಡಿಕೊಂಡ ಮನೆಗಳನ್ನು ಕಳವು ಮಾಡಿ ಸದ್ದಿಲ್ಲದೆ ಎಸ್ಕೇಪ್ ಆಗುತ್ತಾರೆ.
ಅದರಲ್ಲೂ ಸರಣಿ ರಜೆ ಸಂದರ್ಭದಲ್ಲೇ ಅತಿ ಹೆಚ್ಚು ಮನೆಗಳವು ಪ್ರಕರಣಗಳು ವರದಿಯಾಗುತ್ತಿದ್ದು, ಅಂತಹ ಸಂದರ್ಭದಲ್ಲಿ ಪೊಲೀಸ್ ಠಾಣೆಗಳಲ್ಲಿ ಹೆಚ್ಚು ದೂರುಗಳು ದಾಖಲಾಗುತ್ತಿವೆ. ಕಳೆದ ತಿಂಗಳು ವಿಜಯ ದಶಮಿ ಹಬ್ಬದ ಸಾಲು ರಜೆಗಳ ಅವಧಿಯಲ್ಲಿ ನಗರದಲ್ಲಿ ಸಾಕಷ್ಟು ಹೆಚ್ಚು ಕಡೆ ಮನೆಗಳ್ಳತನ ನಡೆದಿತ್ತು.
ಈ ವರ್ಷ ಇದುವರೆಗೂ 1452ಕ್ಕೂ ಅಧಿಕ ಮನೆಗಳವು ಪ್ರಕರಣಗಳು ನಡೆದಿದ್ದು, ಈ ಪೈಕಿ ಸಾವಿರಕ್ಕೂ ಅಧಿಕ ಪ್ರಕರಗಳು ರಾತ್ರಿ ಸಮಯದಲ್ಲಿಯೇ ನಡೆದಿವೆ. ಹೀಗಾಗಿ, ದೀಪಾವಳಿ ಪ್ರಯುಕ್ತ ಸರಣಿ ರಜೆ ಇರುವುದರಿಂದ ಮೂರ್‍ನಾಲ್ಕು ದಿನಗಳ ಕಾಲ ನಗರದ ಎಲ್ಲ ಪೊಲೀಸ್‌ಠಾಣಾ ವ್ಯಾಪ್ತಿಗಳಲ್ಲಿ ಗಸ್ತು ಹೆಚ್ಚಿಸಲಾಗಿದೆ.
ಹಗಲು ಸ್ಕೆಚ್ ರಾತ್ರಿ ದರೋಡೆ!
ಬೀಗ ಹಾಕಿರುವ ಮನೆ, ಪ್ಲ್ರಾಟ್ ಗುರುತಿಸಲು ಮನೆಗಳ್ಳರು ಕೆಲಸ ಮಾಡುವವರ ಸೋಗಿನಲ್ಲಿ ತಿರುಗಾಡಿ ಮಾಹಿತಿ ಸಂಗ್ರಹಿಸುತ್ತಾರೆ. ಸ್ಟೌ ರಿಪೇರಿ, ಚಾಕು ಸಾಣೆ ಹಿಡಿಯುವುದು, ಸೇಲ್ಸ್‌ಮ್ಯಾನ್ ಸೇರಿದಂತೆ ವಿವಿಧ ಸೋಗಿನಲ್ಲಿ ಬಡವಾಣೆಗಳನ್ನು ಸುತ್ತುವ ಕಳ್ಳರ ತಂಡಗಳು, ಒಂಟಿ ಮನೆಗಳು, ಎರಡು ಮೂರು ದಿನಗಳಿಂದ ಮನೆಮುಂದೆ ರಂಗೋಲಿ ಹಾಕದಿರುವುದು,
ದಿನಪತ್ರಿಕೆಗಳು ಮನೆಯ ಗೇಟ್‌ನಲ್ಲಿಯೇ ಬಿದ್ದಿರುವುದು, ಸಿಸಿಟಿವಿ ಅಳವಡಿಕೆ ಇಲ್ಲದಿರುವ ಮನೆಗಳನ್ನೇ ಗುರುತು ಹಾಕಿಕೊಂಡು ಅಂತಹ ಮನೆಯಲ್ಲಿ ಮಾಲೀಕರು ಇಲ್ಲ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಬಳಿಕ ಸಲೀಸಾಗಿ ರಾತ್ರಿವೇಳೆ ಕಳವು ಮಾಡಿಕೊಂಡು ಹೋಗುತ್ತಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ .
ಸಾರ್ವಜನಿಕರು ಏನು ಮಾಡಬೇಕು?
-ಸಾಧ್ಯವಾದಷ್ಟು ಮನೆಯ ಮುಂದೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು
– ಮನೆಯ ಹೊರಗಡೆ ಹೋಗುವ ಮುನ್ನ ನೆರೆಹೊರೆಯವರಿಗೆ ತಿಳಿಸಿರುವುದು
– ಮನೆಗೆ ಬೀಗ ಹಾಕುವುದಕ್ಕಿಂತ ಡೋರ್‌ಲಾಕ್ ಹೆಚ್ಚು ಬಳಸುವುದು
– ಸಾಧ್ಯವಾದರೇ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡುವುದು
– ಅಪರಿಚಿತರ ಜೊತೆ ವೈಯಕ್ತಿಕ ಮಾಹಿತಿ ಹಂಚಿಕೊಳ್ಳದಿರುವುದು
ನಗರದಲ್ಲಿ ರಾತ್ರಿ ವೇಳೆ ನಡೆಯುವ ಮನೆಗಳ್ಳತನ, ದರೋಡೆ ಅಪರಾಧ ಪ್ರಕರಣಗಳು ನಡೆಯದಂತೆ ನಿಗಾವಹಿಸಲು ಗಸ್ತು ಪೊಲೀಸರ ಕರ್ತವ್ಯನಿರ್ವಹಣೆಯಿರುತ್ತದೆ. ಅಲ್ಲದೆ ಮತ್ತಷ್ಟು ಪರಿಣಾಮಕಾರಿಯಾಗಿ ಆಯಾವಲಯದ ಡಿಸಿಪಿಗಳಿಗೆ ಸೂಚಿಸಲಾಗಿದೆ.
-ಟಿ ಸುನೀಲ್‌ಕುಮಾರ್, ನಗರ ಪೊಲೀಸ್ ಆಯುಕ್ತ
* ಮಂಜುನಾಥ್ ಲಘುಮೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.