ಸುಕೃತಾ ಎಂಬ ಮಂಡ್ಯ ಗರ್ಲ್!ಅಗ್ನಿಕನ್ಯೆಯ ಹಗೆ ಮತ್ತು ನಗೆ
Team Udayavani, Oct 23, 2017, 4:13 PM IST
ನೀವು ಧಾರಾವಾಹಿ ನೋಡುವುದರಲ್ಲಿ ಆಸಕ್ತಿ ಹೊಂದಿರುವವರಾಗಿದ್ದರೆ ಈ ಹುಡುಗಿಯ ಮುಖಪರಿಚಯ ನಿಮಗೆ ಬೇಗನೇ ಆಗುತ್ತದೆ. ಅದರಲ್ಲೂ “ಅಗ್ನಿಸಾಕ್ಷಿ’ ಧಾರಾವಾಹಿಯನ್ನು ನೀವು ತಪ್ಪದೇ ನೋಡುವ ಸೀರಿಯಲ್ ಲವರ್ ಆಗಿದ್ದರೆ ಈ ಹುಡುಗಿಯ ನಟನೆ, ಪಾತ್ರದ ಹೆಸರು ಎಲ್ಲವೂ ಈಗ ನಿಮ್ಮ ತಲೆಯಲ್ಲಿ ರಿವೈಂಡ್ ಆಗುತ್ತಿರುತ್ತದೆ. ಯೆಸ್, ನೀವು ಕಿರುತೆರೆಯಲ್ಲಿ ನೋಡಿ ಮೆಚ್ಚಿಕೊಂಡ ಹುಡುಗಿಯೇ ಈ ಸುಕೃತಾ ನಾಗ್. ಸದ್ಯ ಪ್ರಸಾರವಾಗುತ್ತಿರುವ “ಅಗ್ನಿಸಾಕ್ಷಿ’ ಧಾರಾವಾಹಿಯ ಅಂಜಲಿ ಪಾತ್ರ ಮಾಡುತ್ತಿರುವ ಸುಕೃತಾ ಈಗ ಸಿನಿಮಾಕ್ಕೂ ಎಂಟ್ರಿಕೊಟ್ಟಿದ್ದಾರೆ. ಅನ್ಯಾಯವನ್ನು ಪ್ರತಿಭಟಿಸುತ್ತಾ, ಅನ್ಯಾಯ ಬಗೆದವರನ್ನು ಶಿಕ್ಷಿಸಬೇಕು, ಅವರಿಗೆ ಬುದ್ಧಿ ಕಲಿಸಬೇಕೆನ್ನುತ್ತಾ ಅಣ್ಣಂದಿರ ಮುದ್ದಿನ ತಂಗಿಯಾಗಿ ಆ ಧಾರಾವಾಹಿಯಲ್ಲಿ ನಟಿಸುತ್ತಿರುವ ಸುಕೃತಾಗೆ ಅದರಿಂದ ಒಳ್ಳೆಯ ಮೈಲೇಜ್ ಸಿಕ್ಕಿದ್ದಂತೂ ಸುಳ್ಳಲ್ಲ.
ಕಿರುತೆರೆಯವರು ಸಿನಿಮಾಕ್ಕೆ ಬರೋದು, ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದವರು ನಾಯಕಿಯಾಗೋದು ನಡೆಯುತ್ತಲೇ ಬಂದಿದೆ. ಹೀಗೆ ಬಂದವರಲ್ಲಿ ಅನೇಕರು ಕ್ಲಿಕ್ ಆಗಿ ಇವತ್ತು ಕನ್ನಡ ಚಿತ್ರರಂಗದ ಬೇಡಿಕೆ ನಟ-ನಟಿಯಾಗಿದ್ದಾರೆ ಕೂಡಾ. ಈಗ ಆ ಸಾಲಿಗೆ ಹೊಸ ಸೇರ್ಪಡೆ ಸುಕೃತಾ ನಾಗ್. ಅಲ್ಲಿಗೆ ಅಗ್ನಿಸಾಕ್ಷಿಯ ಇಬ್ಬರು ನಾಯಕಿಯರು ಕೂಡಾ ಸಿನಿಮಾ ಪ್ರವೇಶಿಸಿದಂತಾಗಿದೆ. “ಅಗ್ನಿಸಾಕ್ಷಿ’ಯ ಸನ್ನಿಧಿ ಪಾತ್ರದಲ್ಲಿ ಮಿಂಚುತ್ತಿರುವ ವೈಷ್ಣವಿ ಈಗಾಗಲೇ ನಾಯಕಿಯಾಗಿ ಎಂಟ್ರಿಕೊಟ್ಟಾಗಿದೆ. ಈಗ ಸುಕೃತಾ ನಾಗ್ ಸರದಿ. “ಹಗೆ’ ಎಂಬ ಹೊಸಬರ ಸಿನಿಮಾವೊಂದರಲ್ಲಿ ಸುಕೃತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತ ಕೂಡಾ ನಡೆದು ಹೋಗಿದೆ. ಚಿತ್ರೀಕರಣಕ್ಕೆ ಹೊರಡಲು ಅಣಿಯಾಗಿರುವ ಈ ಚಿತ್ರದಲ್ಲಿ ಸುಕೃತಾಗೆ ಒಳ್ಳೆಯ ಪಾತ್ರ ಕೂಡಾ ಸಿಕ್ಕಿದೆಯಂತೆ.
ಮಂಡ್ಯದ ಹುಡುಗಿಯ ಸಿನಿಜರ್ನಿ
ಸುಕೃತಾ ಮೂಲತಃ ಮಂಡ್ಯದ ಹುಡುಗಿ. ಹಾಗಂತ ಆಕೆ ಮಂಡ್ಯದಲ್ಲೇ ಬೆಳೆದವಳು ಎನ್ನುವಂತಿಲ್ಲ. ಮೂಲ ಮಂಡ್ಯವಾದರೂ ಸುಕೃತಾ ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿ. ಸುಮಾರು ಒಂಭತ್ತು ವರ್ಷಗಳಿಂದ ಮನರಂಜನಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸುಕೃತಾಗೆ ಸಿನಿಮಾ ಕ್ಷೇತ್ರವಷ್ಟೇ ಹೊಸದು. ಕಿರುತೆರೆ ಹೊಸದಲ್ಲ. “ಕಾದಂಬರಿ’, “ಶಿವಲೀಲಾ’, “ಮಹಾಭಾರತ’ ಧಾರಾವಾಹಿಗಳಲ್ಲಿ ನಟಿಸಿರುವ ಸುಕೃತಾ ಈಗ “ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಬಿಝಿಯಾಗಿದ್ದಾರೆ. ಹಾಗೆ ನೋಡಿದರೆ ಸುಕೃತಾಗೆ ಹೆಸರುಕೊಟ್ಟ, ಜನ ಗುರುತಿಸುವಂತೆ ಮಾಡಿದ ಧಾರಾವಾಹಿ ಕೂಡಾ “ಅಗ್ನಿಸಾಕ್ಷಿ’ ಎಂದರೆ ತಪ್ಪಲ್ಲ. ಅದನ್ನು ಸುಕೃತಾ ಕೂಡಾ ಒಪ್ಪಿಕೊಳ್ಳುತ್ತಾರೆ. “ಅಗ್ನಿಸಾಕ್ಷಿ’ ಧಾರಾವಾಹಿ ನನಗೆ ಒಳ್ಳೆಯ ಹೆಸರು ಕೊಟ್ಟಿದ್ದು ಸುಳ್ಳಲ್ಲ. ಅಂಜಲಿ ಪಾತ್ರವನ್ನು ಜನ ಇಷ್ಟಪಟ್ಟಿದ್ದಾರೆ. ಹೋದಲ್ಲೆಲ್ಲ ಆ ಪಾತ್ರದ ಮೂಲಕವೇ ಗುರುತಿಸುತ್ತಿದ್ದಾರೆ’ ಎನ್ನುವುದು ಸುಕೃತಾ ಮಾತು.
ಅಂದಹಾಗೆ, ಸುಕೃತಾ ಒಳ್ಳೆಯ ಡ್ಯಾನ್ಸರ್ ಕೂಡಾ. ಹಾಗೆ ನೋಡಿದರೆ ಸುಕೃತಾ ಬಣ್ಣದ ಲೋಕ, ಮನರಂಜನಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದ್ದು ಡ್ಯಾನ್ಸರ್ ಆಗಿ. ಇಲ್ಲಿವರೆಗೆ ಸಾಕಷ್ಟು ಶೋಗಳನ್ನು ನೀಡಿರುವ ಸುಕೃತಾ “ಡ್ಯಾನ್ಸಿಂಗ್ ಸ್ಟಾರ್’ನಲ್ಲೂ ಸ್ಪರ್ಧಿಸಿದ್ದಾರೆ. ರವಿಚಂದ್ರನ್, ಪ್ರಿಯಾಮಣಿ ಹಾಗೂ ಮಯೂರಿಯವರ ಮೆಚ್ಚುಗೆ ಪಡೆದ ಖುಷಿ ಕೂಡಾ ಸುಕೃತಾಗಿದೆ.
“ನನಗೆ ಡ್ಯಾನ್ಸ್ ಎಂದರೆ ತುಂಬಾ ಇಷ್ಟ. ಚಿಕ್ಕಂದಿನಿಂದಲೇ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಾ ಬಂದೆ. ಈಗಾಗಲೇ ಸಾಕಷ್ಟು ಶೋಗಳನ್ನು ನೀಡಿದ್ದು, ಎಲ್ಲಾ ಪ್ರಾಕಾರಗಳ ಶೋಗಳನ್ನು ನೀಡಿದ್ದೇನೆ’ ಎನ್ನುವುದು ಸುಕೃತಾ ಮಾತು. ಧಾರಾವಾಹಿಯಲ್ಲಿ ಬಿಝಿ ಇದ್ದರೂ ಸಮಯ ಸಿಕ್ಕಾಗ ಡ್ಯಾನ್ಸ್ ಶೋ ನೀಡುತ್ತಾರಂತೆ ಸುಕೃತಾ.
“ಹಗೆ’ಯ ಮೂಲಕ ಎಂಟ್ರಿ
ಸುಕೃತಾ ನಾಯಕಿಯಾಗಿ ಎಂಟ್ರಿಕೊಟ್ಟಿರುವ ಚಿತ್ರದ ಹೆಸರು “ಹಗೆ’. “ಹಗೆ’ ಅನ್ನುವ ಟೈಟಲ್ ಕೇಳಿದಾಕ್ಷಣ ಇದೊಂದು ಮಾಸ್ ಸಿನಿಮಾ, ಇದರಲ್ಲಿ ನಾಯಕಿಗೆ ಏನು ಕೆಲಸ ಎಂದು ನೀವು ಕೇಳಬಹುದು. ಆದರೆ, ಸುಕೃತಾ ಆ ಸಿನಿಮಾ ಒಪ್ಪಿಕೊಳ್ಳಲು ಕಾರಣ ಚಿತ್ರದ ಪಾತ್ರವಂತೆ. “ಪಾತ್ರ ತುಂಬಾ ಚೆನ್ನಾಗಿದೆ. ಸಿನಿಮಾದುದ್ದಕ್ಕೂ ಸಾಗಿಬರುವ ಪಾತ್ರವಾಗಿದ್ದು, ನಟನೆಗೆ ಅವಕಾಶವಿದೆ’ ಎನ್ನುತ್ತಾರೆ. ಸುಕೃತಾ ಒಪ್ಪಿಕೊಂಡ ಮೊದಲ ಸಿನಿಮಾ “ಹಗೆ’. ಹಾಗಂತ ಇದೇ ಮೊದಲ ಅವಕಾಶ ಎಂದುಕೊಂಡರೆ ತಪ್ಪು. ಸುಕೃತಾ ಧಾರಾವಾಹಿಗೆ ಎಂಟ್ರಕೊಟ್ಟ ದಿನದಿಂದಲೂ ಸಿನಿಮಾಗಳಿಂದ ಸಾಕಷ್ಟು ಅವಕಾಶಗಳು ಬರುತ್ತಿದ್ದವಂತೆ. ಆದರೆ, ಧಾರಾವಾಹಿಯಲ್ಲಿ ಒಂದಷ್ಟು ಅನುಭವವಾದ ನಂತರ ಸಿನಿಮಾಕ್ಕೆ ಎಂಟ್ರಕೊಟ್ಟರಾಯಿತು ಎಂದುಕೊಂಡ ಸುಕೃತಾ ಈಗ “ಹಗೆ’ ಸಿನಿಮಾ ಮೂಲಕ ಸಿನಿಲೋಕಕ್ಕೆ ಬಂದಿದ್ದಾರೆ. “ಹಗೆ’ ಹೊಸ ತಂಡ. ನಾಯಕಿಯಾಗಿ ಸುಕೃತಾ ಕೂಡಾ ಹೊಸಬರು. ಹೊಸಬರು ಸೇರಿದರೆ ಹೊಸ ಥರಾದ ಸಿನಿಮಾ ಬರುತ್ತದೆ ಮತ್ತು ಪರ್‌ಫಾರ್ಮೆನ್ಸ್‌ಗೂ ಅವಕಾಶ ಸಿಗುತ್ತದೆ ಎಂಬ ವಿಶ್ವಾಸವೂ ಸುಕೃತಾಗಿದೆ. ಬಹುತೇಕ ನಟಿಯರು ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಕೂಡಲೇ ಓದನ್ನು ಅರ್ಧದಲ್ಲೇ ನಿಲ್ಲಿಸುತ್ತಾರೆ. ಆದರೆ, ಸುಕೃತಾ ಧಾರಾವಾಹಿಯಲ್ಲಿ ಬಿಝಿಯಾಗಿದ್ದರೂ ಓದಿನಲ್ಲಿ ಹಿಂದೆ ಬೀಳಲಿಲ್ಲ. ಡಿಗ್ರಿ ಮುಗಿಸಿರುವ ಸುಕೃತಾ ಈಗ ಎಂಸಿಎ ಮಾಡುತ್ತಿದ್ದಾರೆ. “ಅತ್ತ ಕಡೆ ಆ್ಯಕ್ಟಿಂಗ್, ಇತ್ತ ಕಡೆ ಕಾಲೇಜು ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದೆ. ಹಾಗಾಗಿ, ನನ್ನ ಓದಿಗೆ ಯಾವುದೇ ಸಮಸ್ಯೆಯಾಗಲಿಲ್ಲ. ಈಗ ಎಂಸಿಎ ಮಾಡುತ್ತಿದ್ದೇನೆ. ನಟನೆಯ ಜೊತೆಗೆ ಎಜುಕೇಶನ್ ಕೂಡಾ ಮುಖ್ಯ’ ಎನ್ನುತ್ತಾರೆ ಸುಕೃತಾ.
ಸುಕೃತಾಗೆ “ಹಗೆ’ ಸಿನಿಮಾ ಮೂಲಕ ಎಂಟ್ರಿಕೊಟ್ಟರೂ ಸಿನಿಮಾ ಮೇಲೆ ಸಿನಿಮಾ ಮಾಡುವ ಆಸೆಯಿಲ್ಲ. ಎಲ್ಲಾ ನಟಿಯರಂತೆ ನಿಧಾನವಾಗಿಯಾದರೂ ಒಳ್ಳೆಯ ಸಿನಿಮಾಗಳ ಮೂಲಕ ಗುರುತಿಸಿಕೊಳ್ಳಬೇಕೆಂಬ ಆಸೆ ಇದೆ. ಸಿನಿಮಾ ಹಾಗೂ ಧಾರಾವಾಹಿ ಎರಡರಲ್ಲಿ ಯಾವುದು ನಿಮ್ಮ ಅಚ್ಚುಮೆಚ್ಚು ಎಂದರೆ ಸದ್ಯ ಸುಕೃತಾ ಎರಡೂ ಇಷ್ಟ ಎನ್ನುತ್ತಾರೆ. “ನನಗೆ ಹೆಸರು ಕೊಟ್ಟಿದ್ದು ಧಾರಾವಾಹಿ. ಅಲ್ಲಿ ನಟಿಸಿದ ಅನುಭವವಿದೆ. ಹಾಗಾಗಿ ಸದ್ಯ ಧಾರಾವಾಹಿಯೇ ಇಷ್ಟ. ಹಾಗಂತ ಸಿನಿಮಾ ಕಷ್ಟ ಎಂದಲ್ಲ, ಈಗಷ್ಟೇ ಎಂಟ್ರಿಕೊಡುತ್ತಿದ್ದೇನೆ. ಸಿನಿಮಾದ ಅನುಭವ ಇನ್ನಷ್ಟೇ ಆಗಬೇಕಿದೆ’ ಎನ್ನುವ ಸುಕೃತಾ ಮುಂದಿನ ಸಿನಿ ಹಾದಿ ಸುಗಮವಾಗಿರುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಬಣ್ಣದ ಲೋಕದ ಎಂಟ್ರಿ, ಸಿನಿಮಾ ನಟನೆಗೆ ಮನೆಯವರ ಸಂಪೂರ್ಣ ಬೆಂಬಲವಿದೆ ಎನ್ನಲು ಮರೆಯುವುದಿಲ್ಲ. “ಡ್ಯಾನ್ಸ್‌ನಿಂದ ಹಿಡಿದು ನನ್ನ ಪ್ರತಿ ಹಂತದಲ್ಲೂ ಮನೆಯವರ ಸಂಪೂರ್ಣ ಬೆಂಬಲ, ಪ್ರೋತ್ಸಾಹವಿದೆ. ಅವರ ಸಫೋರ್ಟ್ ಇಲ್ಲದೇ ಏನು ಮಾಡಲು ಸಾಧ್ಯವಿಲ್ಲ’ ಎನ್ನುವುದು ಸುಕೃತಾ ಮಾತು.
ಬರಹ: ರವಿಪ್ರಕಾಶ್ ರೈ; ಚಿತ್ರಗಳು: ಸಂಗ್ರಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.