ಗಿಡ ಗೆಳೆತನ ಮೂಡಿಸಿದ ಧನಾತ್ಮಕ ಹೆಜ್ಜೆ
Team Udayavani, Oct 26, 2017, 9:48 AM IST
ಗಿಡ ಗೆಳೆತನದ ಸಂತಸವನ್ನು ಹಂಚುವ ತಾಣ “ಸಮೃದ್ಧಿ’ಗೆ ಬೀಜಾಂಕುರವಾಗಿ ಇಪ್ಪ ತ್ತೈದು ವರ್ಷ ಸಂದಿದೆ. ಕಳೆದ ಕಾಲು ಶತಮಾನದಲ್ಲಿ “ಸಮೃದ್ಧಿ’ಯ ಮೂಲಕ ನೇರವಾಗಿ ಮತ್ತು ಪರೋಕ್ಷವಾಗಿ ಗಿಡ ಗೆಳೆತನ ಬೆಳೆದಿದೆ. ಅಪೂರ್ವ ತಳಿಗಳ ವಿನಿಮಯ ಆಗಿದೆ. ಜ್ಞಾನದ ಹಂಚಿಕೆಯಾಗಿದೆ. ಸದ್ದು ಗದ್ದಲವಿಲ್ಲದೆ ಕೃಷಿ ಮತ್ತು ಕೃಷಿಕರ ಸ್ನೇಹಿಯಾಗಿರುವ “ಸಮೃದ್ಧಿ’ಯು ರಜತದ ಈಗ ಹೆಜ್ಜೆಯೂರಿದೆ. ಪ್ರತೀ ಊರಿನಲ್ಲೂ ಇಂತಹ ಸಂತಸ ಹಂಚುವ ತಾಣ ಬರಲಿ ಬಂಟ್ವಾಳ ತಾಲೂಕಿನ ಪುಣಚ ಮಲ್ಯದಲ್ಲಿ “ಹಲಸು ಸ್ನೇಹಿ ಕೂಟ’ದ ಹೆಗಲೆಣೆಯ ತರಕಾರಿ ಹಬ್ಬ. ಶಂಕರನಾರಾಯಣ ಭಟ್ಟರು ಹಬ್ಬದ ಹಿನ್ನೆಲೆಯಲ್ಲಿ ವೀಕ್ಷಕರಿಗಾಗಿ ಹೆಚ್ಚೇ ತರಕಾರಿ ಬೆಳೆಸಿದ್ದರು. ಸಿಕ್ಕಿಂ ಮೂಲದ ಕಿವಾನೋ ತರಕಾರಿ ಚಪ್ಪರದ ಸುತ್ತ ಆಸಕ್ತರ ಗುಂಪನ್ನು ಕಿವಾನೋ ಮೋಡಿ ಮಾಡಿತ್ತು. ಬೀಜಕ್ಕಾಗಿ, ಸಸಿಗಾಗಿ ಬೇಡಿಕೆ. ಹಬ್ಬದ ಬಳಿಕ ಮಲ್ಯ ಭಟ್ಟರಿಗೆ ದೂರವಾಣಿಗಳ ಮಾಲೆ. ಆಸಕ್ತರಿಗೆ ಯಥಾಸಾಧ್ಯ ಕಿವಾನೋ ಹಂಚಿದ್ದರು. ಅಂದಿನ ತರಕಾರಿ ಹಬ್ಬವು ತರಕಾರಿಗಳ ಮಾಹಿತಿಗಳೊಂದಿಗೆ ಗಿಡ-ಗೆಳೆತನದ ಆಶಯವನ್ನೂ ಹೊಂದಿತ್ತು.
ಅಡಿಕೆ ಪತ್ರಿಕೆಯು ಗಿಡ ಗೆಳೆತನಕ್ಕೆ ಶ್ರೀಕಾರ ಬರೆದ ಕೃಷಿ ಮಾಧ್ಯಮ. ತೊಂಬತ್ತರ ಆರಂಭದಲ್ಲಿ ಅಡಿಕೆಯ ಸಮೃದ್ಧಿ. ಬೆಲೆಯೂ ಜಿಗಿದಿತ್ತು. ತೋಟಗಳು ವಿಸ್ತಾರವಾಗಿದ್ದುವು. ಬದುಕಿನ ಹಣ್ಣು, ಗಿಡಗಳ ಸಹಜಾಸಕ್ತಿಗೆ ಮಸುಕಾಯಿತು. ನಡುವೆ ತರಕಾರಿ, ಹಣ್ಣು, ಹೂವು, ಸಸ್ಯಗಳ ಆಸಕ್ತಿ ಹತ್ತಿಸಿಕೊಂಡ ಕೃಷಿಕರಿದ್ದರು. ಅವರೊಳಗೆ ಸಂವಹನದ ಕೊಂಡಿ ಬೆಸೆದಿರಲಿಲ್ಲ. ಎಲ್ಲರನ್ನೂ ಸೇರಿಸಿ ಗಿಡ ಗೆಳೆತನದ ಸಂತಸವನ್ನು ಹಂಚುವ ತಾಣ “ಸಮೃದ್ಧಿ’ಗೆ ಬೀಜಾಂಕುರ. 11 ಸೆಪ್ಟೆಂಬರ್ 1993ರಂದು ಮೂಡುಬಿದಿರೆಯ ಹಣ್ಣು ಕೃಷಿಕ ಡಾ| ಎಲ್.ಸಿ. ಸೋನ್ಸ್‌ರಿಂದ ಶುಭಚಾಲನೆ. ಸ್ಥಾಪಕ ಅಧ್ಯಕ್ಷ ಸೇಡಿಯಾಪು ಜನಾರ್ದನ ಭಟ್. ಕಾರ್ಯದರ್ಶಿ ಪೆಲಪ್ಪಾರು ವೆಂಕಟ್ರಮಣ ಭಟ್.
“ಸಮೃದ್ಧಿ’ಯ ವ್ಯಾಪ್ತಿ ಪುತ್ತೂರು ಆಸುಪಾಸು. ನಿರಂತರ ಸಂಪರ್ಕದ ಉದ್ದೇಶ. ವ್ಯಾಪ್ತಿ ಮಾತ್ರ ಹಿರಿದು. ಆಲಂಕಾರಿಕ ಹೂ, ಸಸ್ಯಗಳು, ಹಣ್ಣಿನ ಮರಗಳು, ಔಷಧೀಯ ಗಿಡಗಳು, ತರಕಾರಿ ಬೀಜಗಳ ವಿನಿಮಯಗಳಿಗೆ ಮೊದಲಾದ್ಯತೆ. ಜತೆಗೆ ಮಾಹಿತಿ ಕೂಡ. ಇಪ್ಪತ್ತೈದು ವರುಷಗಳಲ್ಲಿ “ಸಮೃದ್ಧಿ’ ಮೂಲಕ ವಿನಿಮಯವಾದ ಬೀಜ, ಗಿಡಗಳ ಸಂಖ್ಯೆ ಅಗಣಿತ. ದೂರದೂರಿನ ತಳಿಗಳಿಂದು ತೋಟದಲ್ಲಿ ಫಲ ಕೊಡುತ್ತಿದ್ದರೆ ಅದರ ಹಿಂದೆ ಸಮೃದ್ಧಿಯ ಹೆಸರು ಹೊಸೆದಿರಲೇಬೇಕು.
ತಿಂಗಳಿಗೊಂದು ಸಭೆ. ಸದಸ್ಯತನವನ್ನು ಪಾವತಿಸಿದ ಸದಸ್ಯರು. ಸಭೆಗೆ ಬರುವಾಗ ಗಿಡ, ಬೀಜಗಳನ್ನು ತಂದು ಹಂಚುವಿಕೆ. ಸಂಸ್ಥೆಯ ಚಟುವಟಿಕೆಗಾಗಿ ಬೀಜಗಳಿಗೆ ಕಿಂಚಿತ್ ಶುಲ್ಕ. “”ತಂತಮ್ಮ ಐಟಂ ತೋರಿಸುವಲ್ಲಿ, ಹಂಚುವಲ್ಲಿ ಪೈಪೋಟಿಯಿತ್ತು. ಯಾರು ಯಾವ ಗಿಡ ತಂದರು ಎನ್ನುವುದರಲ್ಲಿ ಆಸಕ್ತಿ, ಕುತೂಹಲ. ಒಂದು ಸಭೆ ಮುಗಿದರೆ ಸಾಕು, ಮುಂದಿನ ಸಭೆಗಾಗಿ ಕಾಯುವಂತಹ ವಾತಾವರಣವಿತ್ತು” ನೆನಪಿಸುತ್ತಾರೆ, ಆರಂಭದಿಂದಲೇ ಸಮೃದ್ಧಿಯೊಂದಿಗಿದ್ದ ಎಡಂಬಳೆ ಸತ್ಯನಾರಾಯಣ.
ಕಳೆದ ಕಾಲು ಶತಮಾನದಲ್ಲಿ “ಸಮೃದ್ಧಿ’ಯ ಮೂಲಕ ನೇರವಾಗಿ ಮತ್ತು ಪರೋಕ್ಷವಾಗಿ ಗಿಡ ಗೆಳೆತನ ಬೆಳೆದಿದೆ. ಅಪೂರ್ವ ತಳಿಗಳ ವಿನಿಮಯ ಆಗಿದೆ. ಜ್ಞಾನದ ಹಂಚಿಕೆಯಾಗಿದೆ. ಬನಾರಸ್ ನೆಲ್ಲಿ ಆಗಷ್ಟೇ ಸುದ್ದಿ ಮಾಡಿತ್ತು. ದೊಡ್ಡ ಗಾತ್ರದ ನೆಲ್ಲಿಕಾಯಿ ಮಾರುಕಟ್ಟೆಯಲ್ಲಿ ಗಮನ ಸೆಳೆಯುತಿತ್ತು. ಪರಸ್ಪರ ಮುಖಾಮುಖೀಯಾದಾಗಲೆಲ್ಲ ನೆಲ್ಲಿಯ ಗಾತ್ರ, ರುಚಿಯ ಸುತ್ತ ಮಾತುಕತೆ. ಆಗ ಸಮೃದ್ಧಿಯ ಕಾರ್ಯದರ್ಶಿ ಕೈಂತಜೆ ಶ್ರೀಧರ ಭಟ್. ಅವರು ಪ್ರವಾಸ ಹೋಗಿದ್ದಾಗ ಉತ್ತರ ಪ್ರದೇಶದ ಫೈಜಾಬಾದಿನಿಂದ ತಮಗಾಗಿ ಎರಡು ಬನಾರಸ್ ನೆಲ್ಲಿ ಗಿಡಗಳನ್ನು ತಂದಿದ್ದರು.
ಈ ಸುದ್ದಿ ಹಲವರ ಕಿವಿಯರಳಿಸಿತ್ತು. ಪ್ರೀತಿಯ ಒತ್ತಾಯ. ಕೈಂತಜೆಯವರು ಬನಾರಸ್ ರೈಲನ್ನೇರಿದರು. ಗಿಡಗಳನ್ನು ತಂದರು. ವಿನಿಮಯವಾದುವು. ನೆಲ್ಲಿಯ ಗಿಡಗಳಿಗೆ ಪ್ರತ್ಯೇಕ ಆರೈಕೆ! ಸಮೃದ್ಧಿಯು ಅಂದು ಪ್ರಯತ್ನ ಮಾಡದೇ ಇರುತ್ತಿದ್ದರೆ ಬನಾರಸ್ ನೆಲ್ಲಿ ತಳಿಯು ಜಿಲ್ಲೆಗೆ ಬರಲು ತಡವಾಗುತ್ತಿತ್ತು. ಅಲ್ಲಿಯಷ್ಟು ಕಾಯಿ ಕೊಡುವುದಿಲ್ಲ ಎನ್ನುವುದು ಬೇರೆ ಮಾತು. ಐದು ವರುಷದ ಹಿಂದೆ ಕೈಂತಜೆಯವರು ಸಿಹಿನೇರಳೆಯ ತಳಿಗಳನ್ನೂ ತಂದರು. ನಮ್ಮೂರಿಗೆ ಅದು ಹೊಂದಿಕೆಯಾಗಲು ತ್ರಾಸ ಪಟ್ಟಿತ್ತು! ಲಕ್ನೋದ ಕೇಂದ್ರೀಯ ಸಮಶೀತೋಷ್ಣ ತೋಟಗಾರಿಕಾ ಕೇಂದ್ರವು ಇದನ್ನು ಅಭಿವೃದ್ಧಿ ಮಾಡಿತ್ತು. ಹೊಸದರ ಹುಡುಕಾಟದಿಂದಾಗಿ ಪ್ರವಾಸ ನಿರಂತರ. ಕಾಯ-ಕಷ್ಟಗಳು ಕ್ಷಣಿಕ. ಒಂದೊಂದು ತಳಿಯ ಹಿಂದೆ ಒಂದೊಂದು ಕತೆ. “”ತಳಿಯೊಂದು ಪಡೆದವರ ಮನದಲ್ಲಿ ಕೊಟ್ಟವರ ಹೆಸರನ್ನು ಸದಾ ಹಸಿರಾಗಿ ಇಟ್ಟುಕೊಳ್ಳುತ್ತದೆ. ಮನಸ್ಸಿಗೆ ಬೇಸರ ಬಂದಾಗ ಒಬ್ಬ ಹಣ್ಣು ಪ್ರಿಯ ಗೆಳೆಯನ ತೋಟಕ್ಕೆ ಒಂದು ಗಂಟೆಯ ಭೇಟಿ ನೀಡಿದರೆೆ ಸಾಕು, ಮುದುಡಿದ ಮನಕ್ಕೆ ಮತ್ತೆ ಹುಮ್ಮಸ್ಸಿನ ಇಂಧನ. ನಮ್ಮ ಕೃಷಿಕರ ಗಿಡ-ಗೆಳೆತನದ ಉತ್ಸಾಹ, ಖರ್ಚು ಲೆಕ್ಕಹಾಕದೆ ಬೆಳೆಸಿ ನೋಡುವ, ಹತ್ತಿರದವರಿಗೆ ಹಂಚುವ ಗುಣ ದೊಡ್ಡದು. ಧನಾತ್ಮಕತೆಗೆ ಒಂದು ಒಳ್ಳೆಯ ಕೊಡುಗೆ.” ಎನ್ನುತ್ತಾರೆ ಪತ್ರಕರ್ತ ಶ್ರೀ ಪಡ್ರೆ. “ಸಮೃದ್ಧಿ’ಯು ಅವರ ಮೆದುಳ ಮರಿ.
ಯಾವುದೇ ನರ್ಸರಿಗೆ ಹೋಗಿ. ಕಸಿ ಗಿಡಗಳ ಭರಾಟೆಗೆ ಏರುಗತಿ. ಕಸಿ ಎನ್ನುವ ಪದ ಮನದೊಳಗೂ ಕಸಿಕಟ್ಟಿದೆ! ಒಂದು ಮಾವಿನ ಮರದಲ್ಲಿ ಹತ್ತಾರು ತಳಿಗಳು, ಒಂದು ಹಲಸಿನ ಮರದಲ್ಲಿ ಮೂರ್ನಾಲ್ಕು ತಳಿಗಳ ಹಣ್ಣುಗಳು – ಸಮೃದ್ಧಿಯ ಆರಂಭದ ಕಾಲಘಟ್ಟದಲ್ಲಿ ಈ ಸುದ್ದಿಯು ಸದ್ದು ಮಾಡಿತ್ತು. ಇದಕ್ಕಾಗಿಯೇ ಕಸಿ ಕಟ್ಟುವ ತರಬೇತಿಯ ಆಯೋಜನೆ. ಪುತ್ತೂರಿನ ಗೇರು ಸಂಶೋಧನಾ ಕೇಂದ್ರದ ವಿಜ್ಞಾನಿಗಳಿಂದ ಮಾಹಿತಿ. ತಂತಮ್ಮ ತೋಟದ ಮರವೇರಿ ಟಾಪ್‌ವರ್ಕಿಂಗ್ ಕಸಿ ವಿಧಾನದ ಪ್ರಯೋಗವನ್ನು ಮಾಡಿದವರೆಷ್ಟೋ ಮಂದಿ! ಮಾಪಲತೋಟ ಸುಬ್ರಾಯ ಭಟ್, ಶ್ಯಾಮಸುಂದರ ಗೇರುಕಟ್ಟೆ, ದಿ| ಕುಂಬಾಡಿ ವೆಂಕಟ್ರಮಣ ಭಟ್… ಅನುಭವಿಗಳ ಜ್ಞಾನವು ಒಂದೇ ಗಿಡದಲ್ಲಿ ಹಲವು ತಳಿಗಳ ಹಣ್ಣುಗಳನ್ನು ನೀಡುತ್ತಿವೆ!
ಪ್ಲಾಂಟ್ ಫ್ರೆಂಡ್‌ಶಿಪ್‌ಗೆ ಗೌರವ ತಂದ ಗುತ್ತಿಗಾರು ಸನಿಹದ ದಿ| ಕಾಂತಿಲ ವೆಂಕಟ್ರಮಣ ಜೋಷಿ – ಸಮೃದ್ಧಿಯ ಸ್ಥಾಪನಾ ಅಡಿಗಟ್ಟಿನ ಸ್ಥಂಭ. ಸಂಸ್ಥೆಯ ಹುಟ್ಟಿನಿಂದಲೇ ಜತೆಗಿದ್ದು ಸಸ್ಯಾಸಕ್ತಿಯನ್ನು ಹುಟ್ಟಿಸಿದವರು. ತಲೆತುಂಬಾ ಬೀಜ, ಸಸ್ಯಗಳ ಮಾಹಿತಿ ಜ್ಞಾನ. ಅದನ್ನು ಹಂಚುವುದರಲ್ಲಿ ಆನಂದ. ಜೋಶಿಯವರು ಸಭೆಗೆ ಬಂದಾಗ ಔಪಚಾರಿಕ ನಮಸ್ಕಾರ ಬಳಿಕ, ಮೊದಲ ನೋಟ ಕೈಚೀಲದತ್ತ! ಅದರೊಳಗೆ ಅಪರೂಪದ ಬೀಜವೋ ಸಸ್ಯವೋ ಅವಿತುಕೊಂಡಿರುತ್ತಿತ್ತು. ಅವರೊಮ್ಮೆ ಹೇಳಿದ್ದರು, “”ಇಂಥ ಹವ್ಯಾಸ ಇಟ್ಟುಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಿದ್ದೆ ಮಾಡಲು ಮಾತ್ರೆ ತೆಗೆದುಕೊಳ್ಳುವ ಪ್ರಮೇಯವಿಲ್ಲ.”
ಮಂತುಹುಳಿ, ಅಮಿcಕಾಯಿ, ಹನುಮಫಲ, ಭೀಮಫಲ, ಮುಳ್ಳುಸೀತಾಫಲ, ಹಾವು ಬದನೆ, ಬಂಟ ಕೇಪುಳು, ರುದ್ರಾಕ್ಷಿ, ಮೊಟ್ಟೆಮುಳ್ಳು, ಕರಿಯಾಲ ಹರಿವೆ, ಸಿಹಿದಾರೆಹುಳಿ… ಹೀಗೆ “ಸಮೃದ್ಧಿ’ ವ್ಯಾಪ್ತಿಯ ಪಟ್ಟಿ ಚಿಕ್ಕದಲ್ಲ. ಬಂಗ್ಲಾ ಬಸಳೆ, ಸೆಲೋಶಿಯಾ ಅಜೆಂಟಿಯಾ ಎಲೆ ತರಕಾರಿ ಗಿಡ, ಸನ್‌ಸೆಟ್ ಸೋಲೋಪಪ್ಪಾಯಿಗಳು ಕಡಲನ್ನು ಹಾರಿ ಬಂದಿವೆ. ಹೀಗೆ ಬಂದವುಗಳಲ್ಲಿ ಅರ್ಧದಷ್ಟು ಮಾತ್ರ ಉಳಿದಿರಬಹುದಷ್ಟೇ. ಸಮೃದ್ಧಿಗೆ ಬಂದು ಹೋದ ಹಲವು ತಳಿಗಳು ಅಜ್ಞಾತವಾಗಿವೆ. “”ಹೀಗೆ ಕಳೆದು ಹೋದವುಗಳಲ್ಲಿ ಸುಡುಕುಳಿ ಮೆಣಸು, ಮೊಟ್ಟೆಮುಳ್ಳುಸೌತೆಗಳನ್ನು ಹುಡುಕುತ್ತಿದ್ದೇನೆ” ಎಂದು ಹಿಮ್ಮಾಹಿತಿ ನೀಡಿದರು ಎಡಂಬಳೆ ಸತ್ಯನಾರಾಯಣ.
ನಶಿಸಿಹೋಗುತ್ತಿರುವ ಸ್ಥಳೀಯ ಬೀಜಗಳನ್ನು, ಸಸ್ಯ ಸಂಪನ್ಮೂಲಗಳನ್ನು ಹುಡುಕಿ, ಸಂಗ್ರಹಿಸಿ ಬೆಳೆಸಿ, ಹಂಚಿ ಅಭಿವೃದ್ಧಿ ಪಡಿಸಲೋಸುಗ ಹುಟ್ಟಿಕೊಂಡಿತ್ತು, “ಸುಭಿಕ್ಷಾ ಬೀಜ ನಿಧಿ’. ಆ ಕಾಲಕ್ಕೆ ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘ, ಅಡಿಕೆ ಪತ್ರಿಕೆಯು ಪ್ರೋತ್ಸಾಹ ನೀಡಿತ್ತು. ನೆಕ್ಕಿಲ ರಾಮಚಂದ್ರರು ನಿರ್ವಹಣೆ ಮಾಡಿದ್ದರು. ಸಮೃದ್ಧಿಯ ಹೂರಣ ಗಿಡ-ಗೆಳೆತನವಾದರೂ ಈಚೆಗಿನ ವರುಷಗಳಿಂದ ದೂರದೂರಿಗೆ ಕೃಷಿ ಪ್ರವಾಸಗಳನ್ನು ಹೊಸೆದುಕೊಂಡಿದೆ.
“”ಬಹುಕಾಲದಿಂದ ಹುಡುಕುತ್ತಿದ್ದ ನೀರ್ಗುಜ್ಜೆ, ಕೆಂಪು ಅಲಸಂಡೆ “ಸಮೃದ್ಧಿ’ಯಿಂದ ಸಿಕ್ಕಿದ್ದು” ಎಂಬುದು ಕೃಷಿಕ ಎಡ್ವರ್ಡ್ ರೆಬೆಲ್ಲೋ ಅವರ ಸಂತಸ. “”ಪ್ರವಾಸ ಹೋದಾಗ ಕೃಷಿ ಜ್ಞಾನ ಪ್ರಾಪ್ತವಾಗಿದೆ. ಕಾನಕಲ್ಲಟೆ, ಗಾಸೀìನಿಯಾ ಕೋವಾ, ಎಣ್ಣೆತಾಳೆಯಂತಹ ಅಪರೂಪದ ಗಿಡಗಳು ನನ್ನ ತೋಟ ಸೇರಿವೆ” ಎನ್ನುತ್ತಾರೆ ಕೃಷಿಕ ಅರುಣ್ ಕುಮಾರ್ ರೈ ಆನಾಜೆ. ಹೀಗೆ ಒಬ್ಬೊಬ್ಬ ಸದಸ್ಯರಲ್ಲೂ ಇರುವ ಅನುಭವಗಳ ಬುತ್ತಿಯಲ್ಲಿ ಸಮೃದ್ಧಿಯ ದೊಡ್ಡ ಹೆಜ್ಜೆಯಿದೆ.
ಸದ್ದು ಗದ್ದಲವಿಲ್ಲದೆ ಕೃಷಿ ಮತ್ತು ಕೃಷಿಕರ ಸ್ನೇಹಿಯಾಗಿರುವ “ಸಮೃದ್ಧಿ’ಯು ರಜತದ ಹೆಜ್ಜೆಯೂರಿದೆ. ರಜತದ ಖುಷಿಯನ್ನು ಸುಳ್ಯ ತಾಲೂಕಿನ ಕೋಟೆಮುಂಡುಗಾರಿನ ಸೊಸೈಟಿಯ ಸಭಾಭವನದಲ್ಲಿ ಅಕ್ಟೋಬರ್ 29ರಂದು ಹಂಚಿಕೊಳ್ಳಲಿದೆ. ಪ್ರಕೃತ ಸಂಘದ ಅಧ್ಯಕ್ಷ ಭಾಸ್ಕರ್ ಆರ್.ಕೆ. ಬಾಳಿಲ. ಕಾರ್ಯದರ್ಶಿ ರಾಮ್‌ಪ್ರತೀಕ್ ಕರಿಯಾಲ. ಕೋಶಾಧಿಕಾರಿ ಎ.ಪಿ. ಸದಾಶಿವ. ಪದಾಧಿಕಾರಿಗಳ ಆಸನಕ್ಕೆ ಪೈಪೋಟಿ ಇಲ್ಲದಿರುವುದು “ಸಮೃದ್ಧಿ’ಯ ವಿಶೇಷ! ಪ್ರತೀ ಊರಿನಲ್ಲೂ ಇಂತಹ ಸಂತಸ ಹಂಚುವ ತಾಣ ಮೂಡಿ ಬರಲಿ.
ನಾ. ಕಾರಂತ ಪೆರಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.