ಜಿಲ್ಲಾ ಧಾರ್ಮಿಕ ದತ್ತಿ ಇಲಾಖೆ ದೇವಾಲಯಗಳ ನೌಕರರ ಒಕ್ಕೂಟದ ಸಭೆ
Team Udayavani, Oct 26, 2017, 3:03 PM IST
ನಗರ: ಹಿಂದಿನ ಕಾಯಿದೆಗಳನ್ನೇ ಇಂದು ಕೂಡ ಜಾರಿಗೆ ತಂದರೆ ನೌಕರರಿಗೆ ನ್ಯಾಯ ಸಿಗುವುದಿಲ್ಲ. ಬದಲಾಗಿ ಕಾಯಿದೆಗಳಿಗೆ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ತೊಡಿಕ್ಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ ದಿವಾಕರ ರೈ ಹೇಳಿದರು.
ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ದ.ಕ. ಜಿಲ್ಲಾ ಧಾರ್ಮಿಕ ದತ್ತಿ ಇಲಾಖಾ ದೇವಾಲಯಗಳ ನೌಕರರ ಒಕ್ಕೂಟದ ವತಿಯಿಂದ ಸಭೆ ನಡೆಸಿ, ಬಳಿಕ ಮನವಿ ನೀಡಲಾಯಿತು.
ನೌಕರರ ಕನಿಷ್ಠ ವೇತನ ಪರಿಷ್ಕರಣೆ, ಅರ್ಹತೆಗೆ ತಕ್ಕಂತೆ ಭಡ್ತಿ ನೀಡಬೇಕು, ಅಂದಿನ ಕಾಯಿದೆಗಳ ತಿದ್ದುಪಡಿ ಸೇರಿದಂತೆ ಹಲವು ಆವಶ್ಯಕತೆಗಳ ಬಗ್ಗೆ ಧಾರ್ಮಿಕ ಪರಿಷತ್ ಸದಸ್ಯರ ಗಮನಕ್ಕೆ ತರುವ ಅಗತ್ಯವಿದೆ. ಪ್ರಮುಖ ಕಾಯಿದೆಗಳ ತಿದ್ದುಪಡಿ ಮಾಡಿ ಅವುಗಳನ್ನು ಸಾರ್ವಜನಿಕ ಸಭೆ ನಡೆಸಿ ಮುಜರಾಯಿ ಸಚಿವರ ಮೂಲಕ ಸಾರ್ವಜನಿಕವಾಗಿ ಪ್ರಕಟಿಸುವ ಔದಾರ್ಯವನ್ನು ತೋರಬೇಕು ಎಂದರು.
ಹೊಸ ಕಾಯಿದೆ ಜಾರಿಗೆ ಒತ್ತಡ
ಮನವಿಗೆ ಸ್ಪಂದಿಸಿ ಮಾತನಾಡಿದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ ಜಗನ್ನಿವಾಸ ರಾವ್, ಮುಜರಾಯಿ ಇಲಾಖೆ
ಯ ವ್ಯಾಪ್ತಿಗೊಳಪಟ್ಟ ದೇವಸ್ಥಾನ ಹಾಗೂ ಅಲ್ಲಿನ ಸಿಬಂದಿ ಸಮಸ್ಯೆ ಪರಿಹರಿಸಲು ಈಗಿರುವ ಕಾಯಿದೆಗಳ ತಿದ್ದುಪಡಿಯಿಂದ ಅಸಾಧ್ಯ. ಇದಕ್ಕೆ ಹೊಸ ಕಾಯಿದೆ ಜಾರಿಯಿಂದ ಮಾತ್ರ ಪರಿಹಾರ ಸಾಧ್ಯ. ಇದಕ್ಕಾಗಿ ಆರು ಹೊಸ ಕಾಯಿದೆಗಳನ್ನು ತರುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಒತ್ತಡ ಹಾಕಲಾಗಿದೆ ಎಂದರು.
ದುರುಪಯೋಗ ತಡೆಗೆ ಹೋರಾಟ
ಆದಾಯಕ್ಕೆ ತಕ್ಕಂತೆ ದೇವಾಲಯಗಳನ್ನು ವಿಭಾಗಿಸಲು ತಿಳಿಸಲಾಗಿದೆ. ದೇವಸ್ಥಾನಗಳಿಗೆ ಬರುವ ಹಣ ದೇವಸ್ಥಾನಗಳಿಗೆ ವಿನಿಯೋಗವಾಗಬೇಕು. ಎಲ್ಲ ದೇವಸ್ಥಾನಗಳ ನೌಕರರಿಗೂ ಸಮಾನ ವೇತನ ನೀಡುವುದು ಅಸಾಧ್ಯ. ದೇವಸ್ಥಾನದ ಹಣ ಅನಾವಶ್ಯಕವಾಗಿ ದುರುಪಯೋಗ ಆಗುವುದನ್ನು ತಡೆಯಲು ಹೋರಾಟ ಮಾಡುತ್ತೇನೆ ಎಂದರು.
ಜಿಲ್ಲಾ ಒಕ್ಕೂಟದ ಅಧ್ಯಕ್ಷ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀಧರ ಆಚಾರ್ಯ, ಉಪಾಧ್ಯಕ್ಷ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜಯ ಕುಮಾರ್ ಶೆಟ್ಟಿ, ಮಂಗಳೂರು ಶ್ರೀ ಮಂಗಳಾದೇವಿ ದೇವಸ್ಥಾನದ ಮಚ್ಚೇಂದ್ರನಾಥ, ಜತೆ ಕಾರ್ಯದರ್ಶಿಗಳಾದ ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಉದಯ ಕುಮಾರ್, ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಅರುಣ್ ಕುಮಾರ್, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದೇವಿದಾಸ ಅಮೀನ್, ಸಂಘಟನ ಕಾರ್ಯದರ್ಶಿಗಳಾದ ಕುಡುಪು ಅನಂತ ಪದ್ಮನಾಭ ದೇವಸ್ಥಾನದ ಉಮಾನಾಥ, ತೊಡಿಕ್ಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆನಂದ ಕೆ.ಎಲ್., ಖಜಾಂಚಿ ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಹೇಮಚಂದ್ರ, ಬಪ್ಪನಾಡು ದೇವಸ್ಥಾನದ ಶಿವಶಂಕರ ವರ್ಮ, ಪುತ್ತೂರು ದೇವಸ್ಥಾನದ ಜಗದೀಶ್, ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಒಕ್ಕೂಟದ ಕಾರ್ಯದರ್ಶಿ ಸುಧಾಕರ ಅವರು ಸ್ವಾಗತಿಸಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ಯಾಮ ವಂದಿಸಿದರು. ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ತೀರ್ಥ ಪ್ರಸಾದ್ ಅವರು ಕಾರ್ಯಕ್ರಮ ನಿರೂಪಿಸಿದರು.
ತಿದ್ದುಪಡಿ ಮಾಡುವಂತೆ ಮನವಿ
ನೌಕರರ ವೇತನ ಪರಿಷ್ಕರಣೆ, ದೇವಾಲಯಗಳ ಮಾದರಿ ಹುದ್ದೆಗಳು, ನೌಕರರಿಗೆ ಅನ್ವಯವಾಗುವ ರಜಾನಿಯಮಾವಳಿ, ನೌಕರರಿಗೆ ನೀಡುವ ಸೇವಾಂತ ಪ್ರಯೋಜನ ಅನ್ವಯಿಸುವಂತೆ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳ ಮತ್ತು ಧರ್ಮದಾಯ ದತ್ತಿಗಳ ಅಧಿ ನಿಯಮ 1997 ಮತ್ತು 2002ರ ನಿಯಮ 8,910,15 ಮತ್ತು 16ಕ್ಕೆ ಸೂಕ್ತ ತಿದ್ದುಪಡಿ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದು ದಿವಾಕರ ರೈ ಹೇಳಿದರು.
ಡ್ರೆಸ್ ಕೋಡ್‌ಗೆ ಚಿಂತನೆ
ದೇವಸ್ಥಾನಗಳಿಗೆ ಬರುವ ಸಂದರ್ಭ ಕೆಲವರ ವೇಷ ಭೂಷಣ ಅಸಹ್ಯ ಹುಟ್ಟಿಸುತ್ತಿದೆ. ಆದ್ದರಿಂದ ವಸ್ತ್ರ ಸಂಹಿತೆ ಕಾಯಿದೆ ಜಾರಿಗೆ ತರುವ ಅಗತ್ಯವಿದೆ ಎಂದು ಚರ್ಚಿಸಲಾಯಿತು. ಈ ಬಗ್ಗೆ ಮುಜರಾಯಿ ಸಚಿವರ ಗಮನಕ್ಕೂ ತರಲಾಗಿದೆ. ಕೂಡಲೇ ಆದೇಶ ಜಾರಿಯಾಗುವ ಸಾಧ್ಯತೆ ಇದೆ ಎಂದು ಜಗನ್ನಿವಾಸ್ ರಾವ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.