ಸುಮಿತ್ರಾ ಎಂಬ ರಂಗಭೂಮಿ ಪ್ರತಿಭೆ
Team Udayavani, Oct 26, 2017, 3:21 PM IST
ಗುರುಪ್ರಸಾದ್ ನಿರ್ದೇಶನದಲ್ಲಿ “ಡೈರೆಕ್ಟರ್ ಸ್ಪೆಷಲ್’ ಎಂಬ ಸಿನಿಮಾ ಬಂದಿತ್ತು. ಒಂದಷ್ಟು ವಿಭಿನ್ನ ಮನಸ್ಥಿತಿಯ ಪಾತ್ರಗಳನ್ನು ಒಟ್ಟು ಸೇರಿಸಿ ಮಾಡಿದ ಸಿನಿಮಾವದು. ಅದರಲ್ಲಿನ ಒಬ್ಬೊಬ್ಬರದ್ದು ಒಂದೊಂದು ತರಹದ ಪಾತ್ರ. ಅದರಲ್ಲೊಬ್ಬ ತಂಗಿ ಇರುತ್ತಾಳೆ. ಮೇಲ್ನೊಟಕ್ಕೆ ತುಂಬಾ ಸಾಫ್ಟ್. ಆದರೆ ಅಣ್ಣ ಬೆನ್ನು ಹಾಕಿದ ಕೂಡಲೇ ಈಕೆಯ ನಿಜ ಗುಣ ಬಿಚ್ಚಿಡುತ್ತಾಳೆ. ಹೀಗೆ ಮೊದಲ ಸಿನಿಮಾದಲ್ಲೇ ಗುರುತಿಸಿಕೊಂಡ ಆ ನಟಿ ಸುಮಿತ್ರಾ. “ಡೈರೆಕ್ಟರ್ ಸ್ಪೆಷಲ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಸುಮಿತ್ರಾಗೆ ಆ ಸಿನಿಮಾ ಒಳ್ಳೆಯ ಹೆಸರು ತಂದುಕೊಟ್ಟಿದ್ದು ಸುಳ್ಳಲ್ಲ. ಹೋದಲ್ಲೆಲ್ಲಾ ಜನ ಗುರುತಿಸಲ ಆರಂಭಿಸುವ ಮೂಲಕ ಸುಮಿತ್ರಾ ಖುಷಿ ಖುಷಿಯಾಗಿ ಓಡಾಡುತ್ತಿದ್ದಾರೆ. ಸುಮಿತ್ರಾ ಮೂಲತಃ ಮಂಡ್ಯದ ಹುಡುಗಿ. ಆದರೆ ಬೆಂಗಳೂರಿನಲ್ಲೇ ನೆಲೆಸಿರುವುದರಿಂದ ನೀವು ಬೆಂಗಳೂರು ಹುಡುಗಿ ಎಂದು ಕರೆಯಲಡ್ಡಿಯಿಲ್ಲ.
ಎಲ್ಲಾ ಓಕೆ, “ಡೈರೆಕ್ಟರ್ ಸ್ಪೆಷಲ್’ ಸಿನಿಮಾದ ನಂತರ ನಾವು ಆ ಹುಡುಗಿಯನ್ನು ಎಲ್ಲೂ ನೋಡಿಲ್ಲವಲ್ಲ ಎಂದು ನೀವು ಕೇಳಬಹುದು. ಅದು ಕೂಡಾ ಸರಿ. ಏಕೆಂದರೆ ಆ ಚಿತ್ರ ಬಂದು ಎರಡು ವರ್ಷ ಕಳೆದರೂ ಸುಮಿತ್ರಾ ಮಾತ್ರ ಬೇರೆ ಯಾವುದೇ ಸಿನಿಮಾ ಮಾಡಿಲ್ಲ. ಅಷ್ಟೆಲ್ಲಾ ಸುದ್ದಿಯಾದ ಆ ಸಿನಿಮಾದಲ್ಲಿ ನಟಿಸಿದ ಸುಮಿತ್ರಾಗೆ ಬೇರೆ ಅವಕಾಶಗಳು ಬರಲಿಲ್ಲವೇ ಎಂದು ನೀವು ಕೇಳಬಹುದು. ಖಂಡಿತಾ ಬಂತು, ಆದರೆ ಸುಮಿತ್ರಾ ಅವ್ಯಾವುದನ್ನು ಒಪ್ಪಿಕೊಳ್ಳಲಿಲ್ಲವಂತೆ. ಕಾರಣ ಎಜುಕೇಶನ್. ಸಿನಿಮಾದ ಜೊತೆಗೆ ಎಜುಕೇಶನ್ ಕೂಡಾ ಮುಖ್ಯ. ಅದನ್ನು ಮುಗಿಸಿಕೊಂಡು ಬಿಟ್ಟರೆ ಆ ನಂತರ ಆರಾಮವಾಗಿ ಸಿನಿಮಾ ಮಾಡುತ್ತಿರಬಹುದೆಂಬ ನಿರ್ಧಾರಕ್ಕೆ ಬಂದ ಸುಮಿತ್ರಾ ಈಗ ಎಜುಕೇಶನ್ ಮುಗಿಸಿದ್ದಾರೆ. “ನನಗೆ ಸಿನಿಮಾದ ಜೊತೆಗೆ ಓದು ಕೂಡಾ ಮುಖ್ಯ. ಹಾಗಾಗಿ, “ಡೈರೆಕ್ಟರ್ ಸ್ಪೆಷಲ್’ ನಂತರ ಯಾವುದೇ ಸಿನಿಮಾ ಮಾಡಲಿಲ್ಲ. ಅನೇಕ ಆಫರ್‌ಗಳು ಬಂದಿದ್ದಂತೂ ಸುಳ್ಳಲ್ಲ. ಈಗ ಓದು ಮುಗಿದಿದೆ. ಮತ್ತೆ ಸಿನಿಮಾದಲ್ಲಿ ನಟಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಖುಷಿಯ ವಿಚಾರವೆಂದರೆ “ಡೈರೆಕ್ಟರ್ ಸ್ಪೆಷಲ್’ ಚಿತ್ರದ ನನ್ನ ಪಾತ್ರವನ್ನು ಜನ ಇವತ್ತಿಗೂ ನೆನಪಿನಲ್ಲಿಟ್ಟಿದ್ದಾರೆ. ಹೋದಲ್ಲೆಲ್ಲಾ ಆ ಪಾತ್ರದ ಮೂಲಕ ಗುರುತಿಸುತ್ತಿದ್ದಾರೆ’ ಎಂಬುದು ಸುಮಿತ್ರಾ ಮಾತು.
ರಂಗಭೂಮಿಯ ಹುಡುಗಿ
ಸಿನಿಮಾಕ್ಕೆ ಬರುವ ಮುಂಚೆ ನಟನೆ ಕಲಿಯಬೇಕು, ಏಕಾಏಕಿ ಬಂದು ಕ್ಯಾಮರಾ ಮುಂದೆ ನಿಲ್ಲೋದು ಸರಿಯಲ್ಲವೆಂದು ಬಹುತೇಕ ಹೊಸಬರು ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆ ನಂತರ ಸಿನಿಮಾಕ್ಕೆ ಬರುತ್ತಾರೆ. ಸುಮಿತ್ರಾ ಕೂಡಾ ರಂಗಭೂಮಿಯಿಂದಲೇ ಬಂದವರು. “ಅಭಿನಯ ತರಂಗ’ದಲ್ಲಿ ನಟನಾ ತರಬೇತಿ ಪಡೆದು, ಆ ನಂತರ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹೀಗಿರುವಾಗಲೇ ಸುಮಿತ್ರಾಗೆ ಕಿರುತೆರೆಯಿಂದ ಅವಕಾಶ ಬರುತ್ತದೆ. ನಟನೆಗೆ ಯಾವುದಾದರೇನು ಎಂದುಕೊಂಡ ಸುಮಿತ್ರಾ ನೇರವಾಗಿ ಕಿರುತೆರೆ ಪ್ರವೇಶಿಸುತ್ತಾರೆ. “ಚಿಕ್ಕಮ್ಮ’, “ಕೃಷ್ಣ ರುಕ್ಮಿಣಿ’ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಸುಮಿತ್ರಾ ನಟಿಸಿದ್ದಾರೆ. ಅವೆಲ್ಲವೂ ಅವರಿಗೆ ನಟನೆಯ ಅನುಭವ ನೀಡುವ ಮೂಲಕ ಅವರ ಭರವಸೆಯನ್ನು ಹೆಚ್ಚಿಸಿದವಂತೆ. “ಅಭಿನಯ ತರಂಗದಲ್ಲಿ ನಟನೆಯ ಮೂಲ ಅಂಶಗಳನ್ನು ತಿಳಿದುಕೊಂಡೆ. ಅನೇಕ ನಾಟಕಗಳನ್ನು ಮಾಡಿದ್ದು ಸಿನಿಮಾ, ಧಾರಾವಾಹಿಯಲ್ಲಿ ನಟಿಸುವಾಗ ಸಹಾಯವಾಯಿತು. ಏಕಾಏಕಿ ಬಂದು ಕ್ಯಾಮರಾ ಮುಂದೆ ನಿಲ್ಲುತ್ತಿದ್ದರೆ ಖಂಡಿತಾ ನಾನು ತಬ್ಬಿಬ್ಟಾಗುತ್ತಿದ್ದೆ. ಆದರೆ ಅಭಿನಯ ತರಂಗದಿಂದ ಆ ಭಯ ದೂರವಾಯಿತು. ಸಿನಿಮಾ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾಗ ನನಗೆ ಮೊದಲು ಧಾರಾವಾಹಿಯ ಅವಕಾಶ ಬಂತು. ಎಲ್ಲಾ ಧಾರಾವಾಹಿಗಳಲ್ಲೂ ಜನ ಗುರುತಿಸುವಂತಹ ಪಾತ್ರಗಳೇ ಸಿಕ್ಕಿದವು. ಕಿರುತೆರೆಯಲ್ಲಿ ನಟಿಸುತ್ತಾ ಒಂದಷ್ಟು ಅನುಭವ ಆದರೆ, ಸಿನಿಮಾಕ್ಕೂ ಸಹಾಯವಾಗುತ್ತದೆಂದುಕೊಂಡು ಒಪ್ಪಿಕೊಂಡೆ. ಅದು ಒಳ್ಳೆಯ ಅನುಭವ ಕೊಟ್ಟಿದ್ದು ಸುಳ್ಳಲ್ಲ. ಪಾತ್ರಕ್ಕೆ ಹೇಗೆ ತಯಾರಾಗಬೇಕು, ಯಾವ ಸಂದರ್ಭದಲ್ಲಿ ಹೇಗೆ ನಟಿಸಬೇಕು … ಹೀಗೆ ಅನೇಕ ಅಂಶಗಳನ್ನು ನಾನು ಕಲಿತೆ. ಅದಕ್ಕಿಂತ ಹೆಚ್ಚಾಗಿ ಜನ ನನ್ನನ್ನು ಗುರುತಿಸಲಾರಂಭಿಸಿದರು. ಹೋದಲ್ಲೆಲ್ಲಾ ನೀನು ಆ ಧಾರಾವಾಹಿಯಲ್ಲಿ ನಟಿಸಿದ ಹುಡುಗಿಯಲ್ವಾ ಎಂದು ಕೇಳುವ ಮೂಲಕ ಅವರ ಪ್ರೀತಿ ತೋರಿಸುತ್ತಿದ್ದರು. ಆಗ ತುಂಬಾ ಖುಷಿಯಾಗುತ್ತಿತ್ತು’ ಎನ್ನುವುದು ಸುಮಿತ್ರಾ ಮಾತು. ಧಾರಾವಾಹಿಯಲ್ಲಿ ನಟಿಸುತ್ತಿದ್ದಾಗಲೇ ಸುಮಿತ್ರಾಗೆ ಸಿಕ್ಕಿದ್ದು “ಡೈರೆಕ್ಟರ್ ಸ್ಪೆಷಲ್’. ನಿರ್ದೇಶಕ ಗುರುಪ್ರಸಾದ್ ಚಿತ್ರದ ಒಂದು ತಂಗಿ ಪಾತ್ರಕ್ಕಾಗಿ ಹುಡುಕುತ್ತಿದ್ದಾಗ ಅವರ ಕಣ್ಣಿಗೆ ಬಿದ್ದಿದ್ದು ಸುಮಿತ್ರಾ. ಕರೆದು ಅವಕಾಶ ಕೂಡಾ ಕೊಡುತ್ತಾರೆ. ಸುಮಿತ್ರಾ ಕೂಡಾ ಅವರ ನಂಬಿಕೆಯಂತೆ ಕೊಟ್ಟ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಸಿನಿಮಾ ಬಿಡುಗಡೆಯಾಗಿ ಎರಡು ವರ್ಷ ಕಳೆದರೂ ಸುಮಿತ್ರಾ ಅವರನ್ನು ಜನ ಆ ಪಾತ್ರದ ಮೂಲಕ ಗುರುತಿಸುತ್ತಿದ್ದಾರಂತೆ. “ನಿಜ ಹೇಳಬೇಕೆಂದರೆ ಆ ಪಾತ್ರದಿಂದ ಚಿತ್ರರಂಗದಲ್ಲೂ ಜನ ನನ್ನನ್ನು ಗುರುತಿಸುತ್ತಿದ್ದಾರೆ. ಏಕೆಂದರೆ ಅದು ಎರಡು ಶೇಡ್‌ನೊಂದಿಗೆ ಸಾಗುವ ಪಾತ್ರವಾಗಿತ್ತು. ಮೇಲ್ನೋಟಕ್ಕೆ ಮುಗ್ಧವಾಗಿ ಇರುವ ಪಾತ್ರ, ತನ್ನದೇ ಲೆಕ್ಕಾಚಾರದೊಂದಿಗೆ ಇರುತ್ತಿತ್ತು. ಮೊದಲ ಸಿನಿಮಾದಲ್ಲೇ ಇಂತಹ ಪಾತ್ರ ಸಿಕ್ಕಿದ್ದು ಹಾಗೂ ರಂಗಾಯಣ ರಘು ಸೇರಿದಂತೆ ಅನುಭವಿ ನಟರೊಂದಿಗೆ ನಟಿಸಲು ಅವಕಾಶ ಸಿಕ್ಕ ಖುಷಿ ನನಗಿದೆ. ಇವತ್ತಿಗೂ ಆ ಪಾತ್ರದ ಮೂಲಕ ನನ್ನನ್ನು ಗುರುತಿಸುತ್ತಿದ್ದಾರೆ’ ಎಂದು ತಮ್ಮ ಮೊದಲ ಸಿನಿಮಾದ ಬಗ್ಗೆ ಹೇಳುತ್ತಾರೆ.
ಅವಕಾಶ
ಶಿಕ್ಷಣ ಮುಗಿಸಿಕೊಂಡಿರುವ ಸುಮಿತ್ರಾ ಈಗ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಗ್ಯಾಪ್‌ನ ನಂತರ ಮತ್ತೆ ಬರುತ್ತಿರುವುದರಿಂದ ಡ್ಯಾನ್ಸ್ ಸೇರಿದಂತೆ ಒಂದಷ್ಟು ತಯಾರಿ ಮಾಡಿಕೊಂಡೇ ಬರುತ್ತಿದ್ದಾರೆ. ಈಗಾಗಲೇ ಒಂದಷ್ಟು ಅವಕಾಶಗಳು ಸುಮಿತ್ರಾ ಅವರನ್ನು ಹುಡುಕಿ ಬರುತ್ತಿವೆ. ಅದರಲ್ಲಿ ತೆಲುಗು ಕೂಡಾ ಇದೆ. “ಒಂದಷ್ಟು ಅವಕಾಶಗಳು ಬರುತ್ತಿರುವುದಂತೂ ನಿಜ. ಯಾವುದನ್ನೂ ಈಗಲೇ ಹೇಳುವಂತಿಲ್ಲ. ಏಕೆಂದರೆ ಮಾತುಕತೆಯ ಹಂತದಲ್ಲಿರುವಾಗಲೇ ಹೇಳ್ಳೋದು ಸರಿಯಾಗಲ್ಲ. ಜೊತೆಗೆ ತೆಲುಗು ಸಿನಿಮಾವೊಂದರಿಂದಲೂ ಅವಕಾಶ ಬಂದಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ, ತೆಲುಗು ಸಿನಿಮಾವೊಂದರಲ್ಲಿ ನಟಿಸಲಿದ್ದೇನೆ. ಅದು ಬಿಟ್ಟರೆ ಕನ್ನಡದ ಕೆಲವು ಸಿನಿಮಾಗಳಿಂದಲೂ ಆಫರ್ ಇದೆ’ ಎಂದು ತಮಗೆ ಬರುತ್ತಿರುವ ಅವಕಾಶಗಳ ಬಗ್ಗೆ ಹೇಳುತ್ತಾರೆ ಸುಮಿತ್ರಾ.
ಸುಮಿತ್ರಾಗೆ ಯಾವ ತರಹದ ಪಾತ್ರ ಇಷ್ಟ ಎಂದು ನೀವು ಕೇಳಿದರೆ ಎಲ್ಲಾ ನಟಿಯರಂತೆ, ಜನ ಗುರುತಿಸುವಂತಹ ಚಾಲೆಂಜಿಂಗ್ ಆದ ಪಾತ್ರ ನನಗೆ ತುಂಬಾ ಇಷ್ಟ ಎಂಬ ಉತ್ತರ ಬರುತ್ತದೆ. ಒಂದು ದೊಡ್ಡ ಗ್ಯಾಪ್‌ನ ನಂತರ ಚಿತ್ರರಂಗಕ್ಕೆ ರೀ ಎಂಟ್ರಿಕೊಡುವವರಿಗೆ ಒಂದು ಆಸೆ ಇರುತ್ತದೆ. ಒಳ್ಳೆಯ ಸಿನಿಮಾದ ಜೊತೆಗೆ ವಿಭಿನ್ನವಾದ ಪಾತ್ರ ಸಿಗಬೇಕೆಂದು. ಅಂತಹ ಆಸೆ ಸುಮಿತ್ರಾಗೂ ಇದೆ. ಹಾಗಂತ ಅದೇ ಬೇಕು ಇದೇ ಬೇಕು ಎನ್ನುತ್ತಾ ಸುಮಿತ್ರಾ ಕೂರುವುದಿಲ್ಲವಂತೆ. ತನಗೆ ಇಷ್ಟವಾದ ಪಾತ್ರವಾದರೆ ಸಾಕು ಎನ್ನುತ್ತಾರೆ. “ನನಗೆ ಒಳ್ಳೆಯ ಪಾತ್ರ ಮುಖ್ಯ. ತೆರೆಮೇಲೆ ಹತ್ತು ನಿಮಿಷ ಬಂದು ಹೋದರೂ ಜನ ಅದನ್ನು ಗುರುತಿಸುವಂತಿರಬೇಕು. ಡೈರೆಕ್ಟರ್ ಸ್ಪೆಷಲ್ ಸಿನಿಮಾದ ಪಾತ್ರವನ್ನು ಜನ ಗುರುತಿಸುತ್ತಿದ್ದಾರೆ. ಅದೇ ರೀತಿ ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದ್ದೇನೆ. ನನಗೆ ಚಿತ್ರರಂಗದಲ್ಲಿ ಒಳ್ಳೆಯ ಕಲಾವಿದೆಯಾಗಿ ಬೆಳೆಯಬೇಕೆಂಬ ಆಸೆ ಇದೆ. ಹಾಗಾಗಿ ಸಹಜವಾಗಿಯೇ ಒಳ್ಳೆಯ ಹಾಗೂ ನನ್ನ ನಟನೆಗೆ ಅವಕಾಶವಿರುವ ಪಾತ್ರಗಳ ನಿರೀಕ್ಷೆಯಲ್ಲಿದ್ದೇನೆ. ಈಗ ಶಿಕ್ಷಣ ಮುಗಿದಿದೆ. ಇನ್ನು ಮುಂದೆ ಬಣ್ಣದ ಲೋಕದಲ್ಲೇ ಮುಂದುವರೆಯುತ್ತೇನೆ’ ಎನ್ನುವುದು “ಡೈರೆಕ್ಟರ್ ಸ್ಪೆಷಲ್’ ಹುಡುಗಿಯ ಮಾತು.
ಬರಹ: ರವಿಪ್ರಕಾಶ್ ರೈ; ಚಿತ್ರಗಳು: ಸಂಗ್ರಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Result: ಮಹಾರಾಷ್ಟ್ರದಲ್ಲಿ ಎನ್ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.