ಜಿಎಸ್‌ಟಿಯ ಪ್ರತಿಷ್ಠೆ ನೆಲ ಕಚ್ಚುವ ಅಪಾಯ
Team Udayavani, Oct 27, 2017, 10:13 AM IST
ಒಂದೆಡೆ ಅತ್ತ ಅಮೆರಿಕದ ವ್ಯಾಪಾರ ಲೋಕ ಹೇಗೆ ಆ್ಯಪ್ ಆಧರಿತ ಸೇಲ್ಸ್ ಮಾಡಬೇಕು ಅಥವಾ ಯಾವ ಹೊಸ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಬೇಕು ಎಂದು ತಲೆಕೆಡಿಸಿಕೊಂಡಿದ್ದರೆ, ಇತ್ತ ಪಾಪ ಭಾರತೀಯ ಬ್ಯುಸಿನೆಸ್‌ಮೆನ್‌ಗಳು ಜಿಎಸ್‌ಟಿ ರಿಟರ್ನ್ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ತಲೆಕೆರೆದುಕೊಳ್ಳುತ್ತಿದ್ದಾರೆ.
ನಿಜ ಹೇಳುತ್ತೇನೆ. ಇದನ್ನು ಬರೆಯುವ ವೇಳೆಗೆ ನನ್ನ ತಲೆ ಚಿಟ್ಟುಹಿಡಿ ದುಬಿಟ್ಟಿತು. ನಾನು ಕಳೆದ ಒಂದು ಗಂಟೆಯಿಂದ ಜಿಎಸ್‌ಟಿ ರಿಟರ್ನ್ ಫೈಲಿಂಗ್ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಲು ವಿನಿಯೋಗಿಸಿದ್ದೇನೆ. ಆದಾಗ್ಯೂ ನಾನು ಬ್ಯಾಂಕಿಂಗ್ ಕ್ಷೇತ್ರದಿಂದಲೇ ಬಂದವನು, ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವೀಧರನಾಗಿರುವವನು, ಒಂದು ದಶಕಕ್ಕೂ ಹೆಚ್ಚು ಕಾಲ ಇನ್ವೆಸ್ಟ್‌ಮೆಂಟ್ ಬ್ಯಾಂಕ್‌ನಲ್ಲಿ ಕೆಲಸ ಮಾಡಿದ್ದೇನೆ ಮತ್ತು ಕಂಪನಿಗಳಿಗಾಗಿ ವರ್ಷಕ್ಕೆ ಸಾವಿರಾರು ರಿಪೋರ್ಟ್‌ಗಳನ್ನು ವಿಶ್ಲೇಷಣೆ ಮಾಡಿಕೊಟ್ಟಿದ್ದೇನೆ. ಹೀಗಿದ್ದರೂ ಈಗಲೂ ನಾನು ಜಿಎಸ್‌ಟಿ ರಿಟರ್ನ್ ಫೈಲಿಂಗ್ ವಿಚಾರದಲ್ಲಿ ಗೊಂದಲದಲ್ಲಿಯೇ ಇದ್ದೇನೆ. ದೇಶದ ಯಾವುದೇ ಆರ್ಥಿಕ ವಿಶೇಷಜ್ಞನನ್ನು ಕೇಳಿ ನೋಡಿ, ಅವರು ನನ್ನ ಮಾತಿಗೆ ಸಹಮತಿ ನೀಡುತ್ತಾರೆ. ಸರಕು ಮತ್ತು ಸೇವಾ ತೆರಿಗೆಯ ಒಗಟು ಎಷ್ಟು ಕಗ್ಗಂಟಾಗಿದೆಯೆಂದರೆ ಇದು ದೇಶದ ತೆರಿಗೆದಾರರ ಮೇಲೆ ಅಧಿಕಾರ ವರ್ಗ ಮಾಡುತ್ತಿರುವ ಕ್ರೂರ ಜೋಕ್ ಎನಿಸುತ್ತಿದೆ. ಆದರೆ ದೇಶದ ಲಕ್ಷಾಂತರ ವ್ಯವಹಾರಗಳಿಗೆ, ನೌಕರಿಗಳಿಗೆ ಅಪಾಯ ಎದುರಾಗಿರುತ್ತಿರಲಿಲ್ಲ ಎಂದರೆ ನಿಸ್ಸಂಶಯವಾಗಿಯೂ ಈ ಜೋಕ್ ಖುಷಿಕೊಡುತ್ತಿತ್ತೇನೋ?!
ಸರಕು ಮತ್ತು ಸೇವಾ ತೆರಿಗೆಯ ಪ್ರಕ್ರಿಯೆಯನ್ನು ತಾಂತ್ರಿಕವಾಗಿ ಎಷ್ಟೊಂದು ಜಟಿಲಗೊಳಿಸಲಾಗಿದೆಯೆಂದರೆ, ದೇಶದ ಪ್ರತಿಯೊಬ್ಬ ಉದ್ಯಮಿಯೂ ಅನುಭವಿ ಆರ್ಥಿಕತಜ್ಞನೆಂದೂ ಮತ್ತು ಉದ್ಯಮಿಗಳಿಗೆ ಪ್ರತಿ ತಿಂಗಳೂ ಜಿಎಸ್‌ಟಿ ಫಾರ್ಮ್ನ ಒಗಟು ಬಿಡಿಸುವುದನ್ನು ಬಿಟ್ಟು ಮಾಡಲು ಬೇರೆ ಕೆಲಸಬೊಗಸೆ ಇಲ್ಲವೆಂದು ಭಾವಿಸಿದಂತಿದೆ. ಈ ಕಾರಣಕ್ಕಾಗಿಯೇ ಒಂದೆಡೆ ಅತ್ತ ಅಮೆರಿಕದ ವ್ಯಾಪಾರ ಲೋಕ ಹೇಗೆ ಆ್ಯಪ್ ಆಧರಿತ ಸೇಲ್ಸ್ ಮಾಡಬೇಕು ಅಥವಾ ಯಾವ ಹೊಸ ತಂತ್ರ ಜ್ಞಾನದ ಮೇಲೆ ಹೂಡಿಕೆ ಮಾಡಬೇಕು ಎಂದು ತಲೆಕೆಡಿಸಿಕೊಂಡಿದ್ದರೆ, ಇತ್ತ ಪಾಪ ಭಾರತೀಯ ಬ್ಯುಸಿನೆಸ್‌ಮೆನ್‌ಗಳು ಜಿಎಸ್‌ಟಿ ರಿಟರ್ನ್ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ತಲೆಕೆರೆದುಕೊಳ್ಳುತ್ತಿದ್ದಾರೆ. ಅಸಹಾಯಕ ಉಪ ಯೋಗಕರ್ತರನ್ನು ಕೇರ್ ಮಾಡದೇ, ಕಸ್ಟಮರ್‌ಗಳ ಬಗ್ಗೆ ಕ್ಯಾರೇ ಎನ್ನದೇ ಕರ ವಿಶೇಷಜ್ಞರು ಹೇರುವ ಅನಗತ್ಯ ಹೊರೆಗೆ ನಿಜಕ್ಕೂ ಇದೊಂದು ಅತ್ಯುತ್ತಮ ಉದಾಹರಣೆ. ತೆರಿಗೆದಾರರಿಗೆ ಅನುಕೂಲ ಮಾಡಿಕೊಡುವುದು ತಮ್ಮ ಉದ್ದೇಶ ಎಂದು ಕರ ವಿಭಾಗ ಹೇಳುತ್ತಲೇ ಇರುತ್ತದೆ. ಆದರೆ ಪ್ರತಿಬಾರಿಯೂ ಒಂದು ವಿಷಯ ಸ್ಪಷ್ಟವಾಗುತ್ತದೆ, ಅದರ ಗಮನ ಜನರ ಮೇಲಂತೂ ಇರುವುದಿಲ್ಲ, ಬದಲಾಗಿ ತನ್ನ ಮೇಲೆಯೇ ಇರುತ್ತದೆ. ಇದು ಕರ ಇಲಾಖೆಯ ಪ್ರೊಸೆಸ್ ಡಿಸೈನ್ ಗಮನಿಸಿದರೂ ಸ್ಪಷ್ಟವಾಗುತ್ತದೆ. ಆ ಡಿಸೈನ್ ಅನ್ನು ಅರ್ಥಮಾಡಿಕೊಳ್ಳಲು ನಿಮಗೆ ಅರ್ಥಶಾಸ್ತ್ರದಲ್ಲಿ ಶ್ರೇಷ್ಠ ಪಾಂಡಿತ್ಯ ಬೇಕೇ ಬೇಕು. ಈ ಕಾರಣಕ್ಕಾಗಿಯೇ ಜಿಎಸ್‌ಟಿ ಬಹಳ ವೇಗವಾಗಿ ಜನಪ್ರಿಯತೆ ಕಳೆದುಕೊಳ್ಳುತ್ತಿರುವುದನ್ನು ನೋಡಿ ಆಶ್ಚರ್ಯವೇನೂ ಆಗದು. ಜಿಎಸ್‌ಟಿಯ ಜಟಿಲತೆ ನಿಜಕ್ಕೂ ದೌರ್ಭಾಗ್ಯಪೂರ್ಣವಾದದ್ದು. ಏಕೆಂದರೆ ಇದಕ್ಕೆ ವಾಸ್ತವದಲ್ಲಿ ದೇಶವನ್ನು ಬದಲಿಸುವ ಸಾಮರ್ಥಯವಿದೆ.
ಸರ್ಕಾರಿ ವರ್ತನೆಯಿಂದ ಉದ್ಭವವಾದ ಕೆಲವು ಬಾಲಿಶ ಸಂಗತಿ ಗ ಳಿಂದಾಗಿ ಇಡೀ ಜಿಎಸ್‌ಟಿ ಕಾರ್ಯಕ್ರಮವೇ ಶಾಶ್ವತವಾಗಿ ಹೆಸರುಕೆಡಿ ಸಿಕೊಳ್ಳುವ ಅಪಾಯವನ್ನು ಎದುರಿಸುತ್ತಿದೆ. ಒಂದೇ ಒಂದು ಆಶಾಕಿರಣ ವೆಂದರೆ ಜಿಎಸ್‌ಟಿ ಕೌನ್ಸಿಲ್ ನಿರಂತರವಾಗಿ ಸಭೆಗಳನ್ನು ನಡೆಸುತ್ತಾ ಪೂರ್ಣ ಪ್ರಕ್ರಿಯೆಗಳ ವಿಶ್ಲೇಷಣೆ ಮಾಡುತ್ತಿರುವುದು. ಏನಿಲ್ಲವೆಂದರೂ ಜಿಎಸ್‌ಟಿಯ ಬಗ್ಗೆ ಫೀಡ್‌ಬ್ಯಾಕ್ ತೆಗೆದುಕೊಳ್ಳುವ ಇಚ್ಛೆಯಂತೂ ಕಾಣಿಸುತ್ತಿದೆ. ಜಿಎಸ್‌ಟಿಯು ಜನರು ಮತ್ತು ವ್ಯಾಪಾರ ರಂಗದ ಮೇಲೆ ಹೇಗೆ ಪ್ರಭಾವ ಬೀರುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಜಿಎಸ್‌ಟಿ ಕೌನ್ಸಿಲ್‌ಗೆ ಇಚ್ಛೆಯಿದೆ ಎಂದು ಅನಿಸುತ್ತಿರುವುದರಿಂದ ಈ ಕಾಯ್ದೆಯ ಪ್ರತಿಷ್ಠೆ ಮತ್ತು ಭಾರತೀಯ ಅರ್ಥವ್ಯವಸ್ಥೆಯನ್ನು ಉಳಿಸಲು ಕೆಲವು ಸಲಹೆಗಳನ್ನು ಕೊಡಬಯಸುತ್ತೇನೆ.
1 ಸರಕು ಮತ್ತು ಸೇವಾ ತೆರಿಗೆಯ ದರಗಳು ಅಗತ್ಯಕ್ಕಿಂತಲೂ ಹೆಚ್ಚಿಗಿವೆ. ದರ ಏರುತ್ತಾ ಹೋದಂತೆ ಫಾರ್ಮ್ ಹಾಗೂ ಪ್ರಕ್ರಿಯೆಗಳೂ ಅಷ್ಟೇ ಜಟಿಲವಾಗುತ್ತವೆ ಮತ್ತು ಅಧಿಕಾರಿಗಳಿಗೆ ಮೂಗು ತೂರಿಸುವ ಅವಕಾಶವೂ ಹೆಚ್ಚು ಸಿಗುತ್ತದೆ. ಆದರೆ ಜಿಎಸ್‌ಟಿಯ ಉದ್ದೇಶ ಇದಕ್ಕೆ ತದ್ವಿರುದ್ಧವಲ್ಲವೇನು? ಇದರ ಬದಲು ಕೇವಲ ಒಂದೇ ಜಿಎಸ್‌ಟಿ ಮತ್ತು ವಿನಾಯಿತಿ ಪಡೆದ ವಸ್ತುಗಳ ಪಟ್ಟಿ ಇರಬೇಕು ಅಷ್ಟೆ. ಒಂದು ವೇಳೆ ನೀವು ದರಗಳಿಗಾಗಿ ಹಪಹಪಿಸುತ್ತಿದ್ದೀರಿ ಎಂದಾದರೆ ಎರಡು ಸ್ಲಾಬ್‌ಗಳು ಸಾಕು. ಇದಕ್ಕಿಂತ ಹೆಚ್ಚು ಬೇಡ.
2 ಜಿಎಸ್‌ಟಿಯ ದರಗಳು ಅಗತ್ಯಕ್ಕಿಂತ ಅಧಿಕವಿವೆ. ಶೇ 28ರ ಶ್ರೇಣಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ವಸ್ತುಗಳಿವೆ. ಇನ್ನು ಶೇ. 18 ಕೂಡಾ ಉಚ್ಚ ದರವೇ ಆಯಿತು. ಸದ್ಯಕ್ಕಂತೂ ನಿರ್ಮಾಣ ವಲಯದಲ್ಲಿ ಜಿಎಸ್‌ಟಿ ಕಡಿತದ ಲಾಭವನ್ನು ಗ್ರಾಹಕರಿಗಂತೂ ಕೊಡುತ್ತಿಲ್ಲ. ಕೆಲ ವರ್ಷಗಳವರೆಗೆ ಈ ಪರಿಸ್ಥಿತಿ ಹೀಗೇ ಮುಂದುವರಿಯಬಹುದೆನಿಸುತ್ತದೆ. ಈ ಕಾರಣಕ್ಕಾಗಿಯೇ ಇದರ ನಡುವಿನ ಅವಧಿಯಲ್ಲಿ ಜಿಎಸ್‌ಟಿ ದರಗಳಲ್ಲಿ ಬಹಳಷ್ಟು ಕಡಿತ ಮಾಡಬೇಕು. ಸರ್ಕಾರ ಒಂದು ವಿಷಯವನ್ನು ಗಮನಿಸಬೇಕು. ಆಯಕರ ಪಾವತಿಸಿದ ಮೇಲೂ, ಅಂದರೆ, ಕರ ಪಾವತಿಯ ನಂತರದ ಆದಾಯಕ್ಕೂ ಜಿಎಸ್‌ಟಿ ಅನ್ವಯವಾಗುತ್ತಿದೆ! ಈ ರೀತಿಯ ವಸೂಲಿ ಜನರಿಗೆ ಬೇಸರ ಮೂಡಿಸುತ್ತಿದೆ. ಹೀಗಾಗಿ ಎಲ್ಲಾ ವಸ್ತುಗಳ ಮೇಲೂ ಕೇವಲ 10 ಪ್ರತಿಶತ ಜಿಎಸ್‌ಟಿ ಇಡುವುದೇ ಒಳ್ಳೆಯದು. ಕೆಲ ವಸ್ತುಗಳ ಮೇಲೆ ಹೆಚ್ಚು ಮಾಡಬೇಕು ಎನಿಸಿದರೆ, ಹೆಚ್ಚೆಂದರೆ 15 ಪ್ರತಿಶತ ನಿಗದಿ ಮಾಡಬೇಕಷ್ಟೆ. ಅದಕ್ಕಿಂತ ಹೆಚ್ಚಲ್ಲ.
3 “ಎಷ್ಟು ಸುಖಭೋಗವೋ ಅಷ್ಟು ಟ್ಯಾಕ್ಸ್’ ಎನ್ನುವ ಮನಸ್ಥಿತಿಯನ್ನು ಮೊದಲು ಬಿಡಬೇಕು. ಎಸಿ ಇರುವ ಜಾಗಗಳು ಅಥವಾ ರೆಡಿಮೇಡ್ ವಸ್ತುಗಳನ್ನು “ವಿಲಾಸಿ’ ಎಂದು ಭಾವಿಸುವುದು ಅತ್ಯಂತ ಪುರಾತನ, ಅನಗತ್ಯ ಮತ್ತು ನಕಲಿ ಸಮಾಜವಾದದ ಧೋರಣೆ. ಈ ರೀತಿಯ ಮನಸ್ಥಿತಿಯನ್ನು ಮೊದಲು ಬಿಟ್ಟುಬಿಡಬೇಕು. ಏಕೆಂದರೆ ವ್ಯಕ್ತಿಯೊಬ್ಬ ತೆರಿಗೆ ಪಾವತಿಸಿದ ನಂತರ ತನಗೆ ಹೇಗೆ ಬೇಕೋ ಹಾಗೆ ಖರ್ಚು ಮಾಡುವ ಸ್ವಾತಂತ್ರ್ಯ ಹೊಂದಿರಬೇಕು. ಜಿಎಸ್‌ಟಿ ಕಡಿಮೆ ಬರಬೇಕು ಎನ್ನುವುದಕ್ಕಾಗಿ ನಾನು ಬೆವರು ಹರಿಸಲೇಬೇಕು ಎನ್ನುವುದು ನಿಯಮವೇನು?
4 ಇದು ನಿಜಕ್ಕೂ ಮಹತ್ವಾಕಾಂಕ್ಷಿ ಯೋಜನೆ ಎನ್ನುವುದು ನಿಜ. ಆದರೆ ಜಿಎಸ್‌ಟಿ ರಿಟರ್ನ್ಸ್ ನಿಜಕ್ಕೂ ಜಟಿಲವಾಗಿದೆ. ದೇಶದ ತೆರಿಗೆ ಅಧಿಕಾರಿಗಳು ಪ್ರತಿ ತಿಂಗಳೂ ಪ್ರತಿ ಬ್ಯುಸಿನೆಸ್‌ಮೆನ್‌ಗಳ ಪ್ರತಿಯೊಂದು ವಹಿವಾಟಿನ ಪ್ರತಿ ಇನ್‌ವಾಯಿಸ್‌ನ ಮೇಲೂ ಕಣ್ಣಿಟ್ಟು, ಅದರಿಂದ ಏಕತ್ರಿತವಾದ ಅಥವಾ ಪಾವತಿಸಲ್ಪಟ್ಟ ಜಿಎಸ್‌ಟಿಯನ್ನು ಜೋಡಿಸಲು ಬಯಸುತ್ತಿದೆ. ಇದು ತೆರಿಗೆ ವಿಭಾಗಕ್ಕೆ ಮಜಾ ಕೊಡಬಹುದು. ಆದರೆ ವ್ಯಾಪಾರ-ಉದ್ಯಮಿಗಳಿಗೆ ಈ ಪ್ರಕ್ರಿಯೆ ನಿಜಕ್ಕೂ ಜಟಿಲವಾದದ್ದು. ವ್ಯಾಪಾರ ನಡೆಸುತ್ತಿದ್ದರೂ ಕೆಲವರು ತಮ್ಮ ಇಡೀ ಜೀವನದಲ್ಲಿ ಇಂಥದ್ದನ್ನೆಲ್ಲ ಮಾಡಿರುವುದಿಲ್ಲ. ಈ ಕಾರಣಕ್ಕಾಗಿಯೇ ಜಿಎಸ್‌ಟಿಯ ಸಕಲ ಔಟ್‌ಫ್ಲೋ ಮತ್ತು ಇನ್‌ಫ್ಲೋವನ್ನು ನೋಡಿಕೊಂಡು ತ್ತೈಮಾಸಿಕ ಸ್ತರದಲ್ಲಿ ನೆಟ್‌ಫಿಗರ್ ಲೆಕ್ಕಹಾಕಿಬಿಡುವುದು ಒಳ್ಳೆಯದಲ್ಲವೇ (ಯಾವುದೇ ಬ್ಯುಸಿನೆಸ್ ಮಾಸಿಕ ರೀಫಂಡ್ ಬಯಸುತ್ತಿಲ್ಲ ಎಂದಾದರೆ)? ಗೂಗಲ್‌ನಲ್ಲಿ ಸಿಂಗಾಪುರದ ಜಿಎಸ್‌ಟಿಯ ಎಫ್-5 ಫಾರ್ಮ್ ಅನ್ನು ನೋಡಿ. ಇದು ನಿಜಕ್ಕೂ ಸರಳ ಫಾರ್ಮ್ ಆಗಿದ್ದು 14 ಬಾಕ್ಸ್‌ಗಳನ್ನು ತುಂಬಬೇಕಷ್ಟೆ. ನಮ್ಮಲ್ಲೂ ಪ್ರಕ್ರಿಯೆಯನ್ನು ಇಷ್ಟೇ ಆಸಾನುಗೊಳಿಸಬಹುದು.(ಅಂದಹಾಗೆ ಇರಲಿ ಎಂದು ಹೇಳುತ್ತಿದ್ದೇನೆ- ಸಿಂಗಾಪುರದಲ್ಲಿ ಜಿಎಸ್‌ಟಿ ದರ 7 ಪ್ರತಿಶತವಿದೆ!)
5 ಒಟ್ಟಾರೆ ಹೇಳುವುದಾದರೆ, 1960ರ ಸಮಯದ ಮನಸ್ಥಿತಿಯಿಂದ ಮುಕ್ತಿಪಡೆಯಬೇಕು. ಅಂದರೆ 1) ಲಾಭವೆನ್ನುವುದು ಕೆಟ್ಟದು 2) ಎಲ್ಲಾ ವ್ಯಾಪಾರಗಳೂ ದ್ರೋಹ ಬಗೆಯುತ್ತವೆ, ಅವುಗಳನ್ನು ನಾವು ರೆಡ್‌ಹ್ಯಾಂಡ್ ಆಗಿ ಹಿಡಿಯುತ್ತೇವೆ. 3) ಬ್ಯುಸಿನೆಸ್ ನಡೆಸುವುದೆಂದರೆ ಅದೊಂದು ಕೆಲಸವೇ ಅಲ್ಲ, ಹೀಗಾಗಿ ಜನಕ್ಕೆ ಫ್ರೀ ಟೈಮ್ ಬಹಳ ಇರುತ್ತದೆ. ಅವರು ಆರಾಮಾಗಿ ಕುಳಿತು ರಿಟರ್ನ್ ತುಂಬಲಿ. 4) ನಾವು ಸರ್ಕಾರದಲ್ಲಿದ್ದೇವೆ ಹೀಗಾಗಿ ಎಲ್ಲಾ ಬ್ಯುಸಿನೆಸ್‌ಗಳೂ ನಮ್ಮ ಬೆರಳಿಗೆ ತಕ್ಕಂತೆ ಕುಣಿಯಬೇಕು: ನಾವು ತೆರಿಗೆ ಅಧಿಕಾರಿಗಳು ತೆರಿಗೆ ಕಳ್ಳರನ್ನು ಹಿಡಿಯುತ್ತಿದ್ದ ಬ್ರಿಟಿಷ್ ಕಾಲದ ಟ್ಯಾಕ್ಸ್ ಕಲೆಕ್ಟರ್‌ಗಳು…! ಭಾರತೀಯ ಬ್ಯುಸಿನೆಸ್ ಅನ್ನು ಗಾಯಗೊಳಿಸುವ ಅಗತ್ಯವಿದೆ ಯೇನು? ದೇಶದ ಖಾಸಗಿ ವಲಯ ನಮ್ಮ ಪ್ರಾಣವಾಯುವಾಗಿದೆ. ಈ ವಲಯವಿಲ್ಲವೆಂದರೆ ಭಾರತದ ಅದೆಷ್ಟೋ ಮನೆಗಳಲ್ಲಿ ಒಲೆಗಳು ಉರಿಯುತ್ತಿರಲಿಲ್ಲ.
ತೆರಿಗೆ ವಸೂಲಿ ಮಾಡಿ, ಆದರೆ ಅದು ತರ್ಕಬದ್ಧವಾಗಿರಬೇಕಲ್ಲವೇ? ಭಾರತೀಯ ಉದ್ಯಮಗಳ ಉಸಿರುಗಟ್ಟಿಸಬೇಡಿ. ಯಾವಾಗ ಜಿಎಸ್‌ಟಿಯ ಸುಧಾರಣೆಗಳು ಪೂರ್ಣವಾಗಿ ಲಾಗೂ ಆಗುತ್ತವೋ ಆಗ ಭಾರತ ಜಗತ್ತಿನಲ್ಲಿ ಹೆಚ್ಚು ಸ್ಪರ್ಧೆ ನಡೆಸಲು ಶಕ್ತವಾಗುತ್ತದೆ. ಈಗಂತೂ ಆಧುನಿಕ ಸುಧಾರಣೆಯಲ್ಲಿ ಪುರಾತನ ವರ್ತನೆಯನ್ನು ಕಲಸಿ ಗಜಿಬಿಜಿ ಮಾಡಲಾಗಿದೆ. ಈ ವರ್ತನೆ/ನಡೆ ಬದಲಾಗದಿದ್ದರೆ ಇಡೀ ಜಿಎಸ್‌ಟಿಯ ಪ್ರತಿಷ್ಠೆ ನೆಲ ಕಚ್ಚುವ ಅಪಾಯವಿದೆ. ಅಧಿಕಾರ ವರ್ಗ ಈ ನಿಟ್ಟಿನಲ್ಲಿ ಯೋಚಿಸಲಿ.ಆಗ ನಿಜಾರ್ಥದಲ್ಲಿ ಜಿಎಸ್‌ಟಿ ಸಫಲವಾಯಿತೆಂದು ಸಂಭ್ರಮಾಚರಣೆ ಮಾಡಬಹುದು.
ಚೇತನ್ ಭಗತ್, ಲೇಖಕ, ಮಾಜಿ ಬ್ಯಾಂಕರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.