ಸರಳವಲ್ಲದ ಒಳಸುಳಿಗಳ ಸರ್ ಸರ್ ಸರಳ
Team Udayavani, Oct 28, 2017, 11:49 AM IST
ರಂಗಭೂಮಿಯ ನಟ, ನಿರ್ದೇಶಕ ಮಕರಂದ್ ದೇಶಪಾಂಡೆ ತಮ್ಮದೇ ರಚನೆ ಹಾಗು ನಿರ್ದೇಶನದ “ಸರ್ ಸರ್ ಸರಳ’ ನಾಟಕವನ್ನು ದೇಶದ ಹಲವೆಡೆ ಪ್ರದರ್ಶಿಸಿದ್ದಾರೆ. ಸರಿಸುಮಾರು ಈ ನಾಟಕಕ್ಕೆ 15 ವರ್ಷಗಳು ತುಂಬಿವೆ. ಇಷ್ಟೊಂದು ಹಳೇ ನಾಟಕ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಈಚೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ಪ್ರದರ್ಶನ ಕಂಡಿತು.
ಹಿಂದಿಯ ಕ್ಲಾಸಿಕ್‌ಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಈ ನಾಟಕ ರಚನೆಯ ಹಿಂದೆ ಮಕರಂದ್‌ರ ದರ್ಶನವಿದೆ; ಕಾಲಕ್ರಮದಲ್ಲಿ ಇದು ತಿದ್ದುಪಡಿಗಳಿಗೂ ಒಳಪಟ್ಟಿದೆ. ಮಕರಂದ್‌ರನ್ನು ಹೊರತುಪಡಿಸಿ ಉಳಿದ ನಟರೂ ಈ ಅಂತರಲ್ಲಿ ಬದಲಾಯಿಸಿದ್ದಾರೆ. ಮಕರಂದ್ ಇಲ್ಲಿ ತಂತ್ರಗಾರಿಕೆಗೆ ಒತ್ತು ನೀಡಲು ಮುಂದಾಗಿಲ್ಲ.
ರಂಗದ ಪರಿಕರಗಳನ್ನು ಬದಲಾಯಿಸಿ ಬೇರೆ ಬೇರೆ ದೃಶ್ಯಗಳನ್ನು ಕಾಣಿಸುವ ಸಾಧ್ಯತೆಯ ಕಡೆಗೂ ಯೋಚಿಸಿಲ್ಲ. ಕೇವಲ ನೆರಳು ಬೆಳಕಿನ ಆಟದಲ್ಲಿ ಭೂತ ಮತ್ತು ವರ್ತಮಾನದ ಸಂಗತಿಗಳನ್ನು ಕಟ್ಟಿಕೊಡುವುದರಲ್ಲಿ ತಂತ್ರಗಾರಿಕೆಯನ್ನು ಸೀಮಿತಗೊಳಿಸಕೊಂಡಂತೆ ಇತ್ತು. ಒಂದು ಮನೆಯ ಒಳಾಂಗಣದಲ್ಲಿ ಬದುಕು, ಭಾವನೆ, ತಾಕಲಾಟ, ಸಂಘರ್ಷ, ಕವಿತ್ವ, ಆಂತರಿಕ ಬೇಗುದಿ ಈ ಎಲ್ಲ ಸ್ತರಗಳನ್ನು ಯಾವ ಉದ್ವೇಗವಿಲ್ಲದೆ ಕಟ್ಟುತ್ತಾ ಹೋದರು.
ಈ ಸಂಯಮಕ್ಕೆ ಒಗ್ಗಿಕೊಳ್ಳುವುದಕ್ಕೆ ಕೆಲ ಸಮಯ ಬೇಕು. ಯಾಕೆಂದರೆ, ನಾಟಕದ ಗತಿಯಲ್ಲಿ ಆತುರವಿಲ್ಲ. ಪ್ರತಿಯೊಂದು ಎಳೆಯೂ ಇಲ್ಲಿ ನಿಧಾನವಾಗಿ ಬಿಚ್ಚಿಕೊಳ್ಳುತ್ತವೆ. ಸಂಬಂಧಗಳು ಹೇಗೆ ಸುಳಿ ತಿರುಗಲು ಆರಂಭಿಸಿವೆ ಎನ್ನುವುದು ಈ ನಾಟಕ ಕೇಂದ್ರ ವಸ್ತು. ಮತ್ತೆ ಇಲ್ಲಿ ಅನೇಕ ಪಾತ್ರಗಳು ಪ್ರವೇಶಿಸಿ ಗೊಂದಲಗೊಳಿಸುವುದಿಲ್ಲ.
ಮೊದಲರ್ಧ ಮೂರೇ ಪಾತ್ರಗಳು ತಮ್ಮ ಸ್ವಭಾವಗಳನ್ನು ಕಾಣಿಸುತ್ತ ಬೇರು ಬಿಡಲು ಆರಂಭಿಸುತ್ತವೆ. ಉಳಿದರ್ಧದಲ್ಲಿ ಒಂದೇ ಒಂದು ಪಾತ್ರದ ಪ್ರವೇಶ; ಅದು ಪೂರ್ವಾರ್ಧವನ್ನು ಕೆಣಕಲು ಅನುವು ಮಾಡಿಕೊಡುತ್ತದೆ. ಇಷ್ಟಕ್ಕೂ ಇಲ್ಲಿನ ಸಂಬಂಧಗಳು ತುಂಬಾ ಸರಳ ಅನಿಸಬಹುದು; ನಿರೂಪಣೆ ಮತ್ತೂ ಬಾಲಿಶ ಮತ್ತು ಮಂದಗತಿಯದ್ದು ಅನಿಸಬಹುದು. ಹೆಚ್ಚು ತಾತ್ವಿಕ ಪ್ರಶ್ನೆಗಳನ್ನೇನೂ ಈ ನಾಟಕ ಎತ್ತುವುದಿಲ್ಲ. ಆದರೆ, ನಿಶ್ಯಬ್ದದಲ್ಲಿ ಕಲಕಲು ಆರಂಭಿಸುತ್ತದೆ.
ಪ್ರೊಫೆಸರ್ ಹಾಗು ತನ್ನ ಒಬ್ಬ ವಿದ್ಯಾರ್ಥಿ ಫಣಿ ಹಾಗು ವಿದ್ಯಾರ್ಥಿನಿ ಸರಳಳೊಂದಿಗೆ ಕವಿತ್ವ ಮತ್ತು ಬದುಕಿನ ವಾಸ್ತವಗಳಿಗೆ ಎದುರಾಗುತ್ತಾ, ಪಾಠ ಹೇಳುತ್ತಾ ಸಾಗುವುದು ಇಲ್ಲಿರುವ ಕಥೆ. ಆದರೆ ಸರಳ, ಪ್ರೊಫೆಸರ್‌ರೊಂದಿಗೆ ಒಂದು ಬಗೆಯ ಭಾವಸಂಬಂಧ ಬೆಳೆಸಿಕೊಳ್ಳುವುದನ್ನು ಸಹಿಸದ ಫಣಿ ಪ್ರೊಫೆಸರ್‌ರ ಜೊತೆಗೆ ಹಲವು ಸ್ತರಗಳಲ್ಲಿ ವಾದಕ್ಕೆ ಇಳಿಯುತ್ತಾನೆ.
ತಮಾಷೆಗಳಿಗೆ ಸಿಕ್ಕಿಕೊಳ್ಳುತ್ತಾನೆ. ಸರಳಾಳನ್ನು ಸುಪ್ತವಾಗಿ ಪ್ರೀತಿಸುತ್ತಿರುವ ಕಾರಣ, ಪ್ರೊಫೆಸರ್ ಅವರ ಪಾಠಕ್ರಮ ಮತ್ತು ಸಲುಗೆ ಅವನ ಗ್ರಹಿಕೆಗೆ ನಿಲುಕುವುದಿಲ್ಲ. ಗುರುಭಕ್ತಿ ಜೊತೆಗೆ ಅನುಮಾನವೂ ಇದೆ ಅವನಲ್ಲಿ. ಈ ಪ್ರೊಫೆಸರ್ ತಮ್ಮ ಬದುಕುಗಳನ್ನು ಆಕ್ರಮಿಸುತ್ತಿದ್ದಾನೆ ಎನಿಸುತ್ತಿರುತ್ತದೆ.
ಪ್ರೊಫೆಸರ್‌ಗೆ ಇದು ತಾತ್ವಿಕ ಪಾಠ; ಆದರೆ, ಉತ್ತರಾರ್ಧದ ಹೊತ್ತಿಗೆ ಸರಳಾಗೆ ಮದುವೆ ಆಗಿದೆ. ಪ್ರೊಫೆಸರ್ ಕಲಿಸಿದ ಕವಿತೆಗಳ ಪ್ರಭಾವದಿಂದ ಆಕೆ ಜಗತ್ತು ನೋಡುವ ಕ್ರಮ ಬದಲಾಗಿದೆ. ಜೊತೆಗೆ ಮದುವೆ ಮಾಡಿಕೊಂಡಿರುವ ಗಂಡ ಬೋರು ಅನಿಸಲಿಕ್ಕೆ ಆರಂಭಿಸಿದ್ದಾನೆ. ಪ್ರೊಫೆಸರ್ ಹೆಚ್ಚು ಆಪ್ತ ಅನಿಸಲು ಆರಂಭಿಸುತ್ತಾರೆ.
ನಾಟಕ ಈ ಹಂತ ತಲುಪಿದಾಗ ಪ್ರೊಫೆಸರ್‌ಗೆ ತಾನು ನಿಜಕ್ಕೂ ಅತಿಕ್ರಮಣ ಮಾಡಿದೆನೇನೊ ಅನಿಸಲು ಆರಂಭಿಸಿ ಸಂಘರ್ಷ ಆರಂಭವಾಗುತ್ತದೆ. ಇಂಥ ಒಳಸುಳಿಗಳು ಹೇರಳವಾಗಿದ್ದು ಚಿಂತನೆಗೆ ದೂಡುತ್ತವೆ. ಅವರವರ ನೆಲೆಗಳಲ್ಲಿ ಅವರವರು ಸರಿ ಅನಿಸುವಂತೆ ಮಾಡುವಷ್ಟರ ಮಟ್ಟಿಗೆ ಈ ನಾಟಕ ಶಕ್ತವಾಗಿದೆ. ನಾಲ್ಕೂ ಪಾತ್ರಗಳ ಅಭಿನಯ ಉತ್ತಮವಾಗಿತ್ತು.
* ಎನ್.ಸಿ. ಮಹೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.