ಅವರನ್ನೂ ಮನುಷ್ಯರಂತೆ ಕಾಣಬೇಕು
Team Udayavani, Oct 28, 2017, 1:27 PM IST
ಮಂಗಳಮುಖಿಯರಿಗೆ ಮೀಸಲಾತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಚಿಂತನೆ ನಡೆಸುತ್ತಿರುವುದು ದಶಕಗಳಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ಈ ಸಮುದಾಯದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸಕಾರಾತ್ಮಕ ನಡೆ. ಮಂಗಳಮುಖಿಯರಿಗಾಗಿ ಪ್ರತ್ಯೇಕ ನೀತಿಯೊಂದನ್ನು ರಚಿಸಲು ಸರಕಾರ ಮುಂದಾಗಿದ್ದು, ಈ ಪ್ರಯತ್ನ ಸಫಲವಾದರೆ ಮುಂಗಲಮುಖೀಯರಿಗಾಗಿಯೇ ಪ್ರತ್ಯೇಕ ನೀತಿ ರಚಿಸಿದ ಮೊದಲ ರಾಜ್ಯವೆಂಬ ಹಿರಿಮೆಗೆ ಕರ್ನಾಟಕ ಪಾತ್ರವಾಗಲಿದೆ. ಒಂದು ಕಾಲದಲ್ಲಿ ಸಮಾಜದ ಅಂಗವಾಗಿ ಗೌರವದ ಬಾಳುವೆ ನಡೆಸುತ್ತಿದ್ದ ಮಂಗಳಮುಖೀಯರು ಈಗ ಭಿಕ್ಷುಕರಾಗಿ ಬದಲಾಗಿದ್ದಾರೆ.
ಇಷ್ಟರತನಕ ಮಂಗಳಮುಖಿಯರು ತಮ್ಮನ್ನು ಪುರುಷ ಅಥವಾ ಮಹಿಳೆ ಎಂದೇ ನಮೂದಿಸಿಕೊಳ್ಳಬೇಕಿತ್ತು. ಆದರೆ ಸುಪ್ರೀಂ ಕೋರ್ಟ್ 2014ರಲ್ಲೇ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ಮಂಗಳಮುಖಿಯರನ್ನು ತೃತೀಯ ಲಿಂಗಿಗಳೆಂದು ಪರಿಗಣಿಸಲು ಆದೇಶಿಸಿದೆ. ಅಂತೆಯೇ ಅವರ ಸಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಅವರನ್ನು ಇತರ ಹಿಂದುಳಿದ ವರ್ಗದವರೆಂದು ಪರಿಗಣಿಸಲು ಹೇಳಿದೆ. ಇದರಿಂದಾಗಿ ಇತರ ಹಿಂದುಳಿದ ವರ್ಗದವರಿಗೆ ಸಿಗುವ ಎಲ್ಲ ಸೌಲಭ್ಯಗಳು ಮಂಗಳಮುಖೀಯರಿಗೆ ಸಿಗಬೇಕು. ಆದರೆ ಸುಪ್ರೀಂ ಕೋರ್ಟಿನ ಆದೇಶ ಇನ್ನೂ ಪರಿಣಾಮಕಾರಿಯಾಗಿ ಪಾಲನೆಯಾಗಿಲ್ಲ. ಅವರಿಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತ್ಯೇಕ ಶೌಚಾಲಯ ನಿರ್ಮಿಸುವುದು, ಅವರ ವೈದ್ಯಕೀಯ ಅಗತ್ಯಗಳನ್ನು ಈಡೇರಿಸಲು ಪ್ರತ್ಯೇಕ ಇಲಾಖೆ ರಚಿಸುವುದು ಇತ್ಯಾದಿ ಅಂಶಗಳು ಸುಪ್ರೀಂ ಕೋರ್ಟಿ ಆದೇಶದಲ್ಲಿವೆ. ಕೇಂದ್ರ ಸರಕಾರ ಕೂಡ ಮಂಗಳಮುಖೀಯರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಅವರು ಇತರರಂತೆ ಸಾಮಾನ್ಯ ಜೀವನ ನಡೆಸಲು ಅನುಕೂಲವಾಗುವಂತೆ ಸಾಮಾಜಿಕ ಭದ್ರತೆ ಮತ್ತು ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ತೃತೀಯ ಲಿಂಗಿಗಳ ಹಕ್ಕುಗಳ ಸಂರಕ್ಷಣೆ ಕಾಯಿದೆಯನ್ನು ರಚಿಸಿದೆ. ರಾಜ್ಯಸಭೆಯಲ್ಲಿ ಅಂಗೀಕೃತಗೊಂಡಿರುವ ಈ ಕಾಯಿದೆಗೆ ಇನ್ನೂ ಲೋಕಸಭೆಯ ಅಂಗೀಕಾರದ ಮುದ್ರೆ ಬಿದ್ದಿಲ್ಲ. ಸಂವಿಧಾನ ಎಲ್ಲ ಪ್ರಜೆಗಳಿಗೆ ಜಾತಿ, ಮತ, ಧರ್ಮ, ಲಿಂಗ ತಾರತಮ್ಯವಿಲ್ಲದೆ ಸಮಾನತೆ, ಸ್ವಾತಂತ್ರ್ಯ, ಅಭಿವ್ಯಕ್ತಿ ಮತ್ತಿತರ ಹಕ್ಕುಗಳನ್ನು ನೀಡಿದ್ದರೂ ಮಂಗಳಮುಖೀಯರು ಮಾತ್ರ ಈ ಹಕ್ಕುಗಳಿಂದ ವಂಚಿತರಾಗುತ್ತಿರುವುದು ಸರಿಯಲ್ಲ.
ಇತ್ತೀಚೆಗಿನ ದಿನಗಳಲ್ಲಿ ಮಂಗಳಮುಖಿಯರ ಅಭಿವೃದ್ಧಿಗಾಗಿ ಕೆಲ ಕೆಲಸಗಳಾಗುತ್ತಿವೆ ಮತ್ತು ಸಮಾಜವೂ ಅವರು ಕುರಿತು ಹೊಂದಿರುವ ದೃಷ್ಟಿಕೋನವನ್ನು ಬದಲಾಯಿಸಿಕೊಂಡಿದೆ ಎನ್ನುವುದು ತುಸು ಸಮಾಧಾನ ಕೊಡುವ ವಿಚಾರ. ಕೇರಳ, ತಮಿಳುನಾಡು ಸರಕಾರಗಳು ಮಂಗಳಮುಖೀಯರಿಗಾಗಿ ಹಲವು ಕಾರ್ಯಕ್ರಮಗಳನ್ನು ಪ್ರಾರಂಭಿಸಿವೆ. ಅದರಲ್ಲೂ ಕೇರಳ ಸರಕಾರ ಅವರಿಗಾಗಿ ಪ್ರತ್ಯೇಕ ಶಾಲೆಯನ್ನೇ ಪ್ರಾರಂಭಿಸಿದೆ. ಕೊಚ್ಚಿ ಮೆಟ್ರೊದಲ್ಲಿ ಅವರಿಗೆ ನೌಕರಿ ನೀಡಲಾಗಿದೆ. ಇದರ ಬೆನ್ನಿಗೆ ಚೆನ್ನೈ ಮೆಟ್ರೊ ಕೂಡ ಅವರನ್ನು ನೌಕರಿಗೆ ನೇಮಿಸಿಕೊಂಡಿದೆ. ಮಂಗಳಮುಖಿಯರಿಗೆ ಬಿಪಿಎಲ್ ಕಾರ್ಡ್ ನೀಡಿದ ಹಿರಿಮೆ ಒಡಿಶಾ ರಾಜ್ಯಕ್ಕೆ ಸಲ್ಲಬೇಕು. ಕೆಲವು ಮಂಗಳಮುಖೀಯರು ಬಿಪಿಎಲ್ ಕಾರ್ಡ್ ಬಳಸಿ ಬ್ಯಾಂಕ್‌ಗಳಿಂದ ಸಾಲ ಪಡೆದುಕೊಂಡು ಸೊದ್ಯೋಗ ಪ್ರಾರಂಭಿಸಿ ಗೌರವದ ಬದುಕು ನಡೆಸುತ್ತಿದ್ದಾರೆ. ಕೇಂದ್ರ ಸರಕಾರವೂ ಕಳೆದ ವರ್ಷ ಮಂಗಳಮುಖೀಯರು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಆಯ್ಕೆಯ ಶೌಚಾಲಯಗಳನ್ನು ಉಪಯೋಗಿಸಲು ಅವಕಾಶ ಕೊಡಬೇಕೆಂದು ಆದೇಶಿಸಿರುವುದು ಅವರನ್ನು ಸಬಲೀಕರಣಗೊಳಿಸುವ ಇನ್ನೊಂದು ಉಪಕ್ರಮ. ಮಂಗಳಮುಖೀಯರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಯೇ ಶೌಚಾಲಯದ್ದು. ಗಂಡೂ ಅಲ್ಲದ ಹೆಣ್ಣೂ ಅಲ್ಲದ ಅವರನ್ನು ಬಹುತೇಕ ಸಾರ್ವಜನಿಕ ಶೌಚಾಲಯಗಳಿಂದ ಹೊರಗಟ್ಟಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಆದೇಶಕ್ಕೆ ಮಹತ್ವವಿದೆ. ಮೈಸೂರು ನಗರದಲ್ಲಿ ಮಾತ್ರ ಮಂಗಳಮುಖೀಯರಿಗಾಗಿ ಪ್ರತ್ಯೇಕ ಶೌಚಾಲಯದ ಸ್ಥಾಪನೆಯಾಗಿದೆ. ಬರೀ ಕಾನೂನಿನ ಮೂಲಕ ಮಂಗಳಮುಖಿಯರ ಅಭಿವೃದ್ಧಿ ಸಾಧ್ಯವಿಲ್ಲ. ಸಮಾಜದ ಮನೋಧರ್ಮವೂ ಬದಲಾಗುವುದು ಅಗತ್ಯ. ಮಂಗಳಮುಖೀಯರನ್ನು ಕೀಳಾಗಿ ನೋಡುವ ದೃಷ್ಟಿಕೋನ ಬದಲಾಗಬೇಕು. ಅವರನ್ನ ತಮ್ಮಂತೆಯೇ ಮನುಷ್ಯರು ಎಂದು ಭಾವಿಸುವುದು ಅಗತ್ಯ. ಮಕ್ಕಳಿಗೆ ಬಾಲ್ಯದಲ್ಲೇ ಮಂಗಳಮುಖೀಯರ ಬಗ್ಗೆ ಅರಿವು ಮೂಡಿಸಬೇಕು. ಅಂತೆಯೇ ಮಂಗಳಮುಖೀಯರು ತಮ್ಮ ದೈಹಿಕ ನ್ಯೂನತೆಯನ್ನು ಜನರಿಗೆ ಕಿರುಕುಳ ನೀಡಲು ಬಳಸಿಕೊಳ್ಳದೆ ಸಮಾಜದ ಮುಖ್ಯವಾಹಿನಿಯೊಂದಿಗೆ ಬೆರೆಯಲು ಮನಃಪೂರ್ವಕವಾಗಿ ಪ್ರಯತ್ನಿಸಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.