ಶರಾಬ್ ಕಾ ದಂಧಾ; ಸಬ್‌ಸೆ ಗಂದಾ
Team Udayavani, Oct 30, 2017, 10:01 AM IST
ರಾಯಚೂರು: ರಾಜ್ಯದ ಮೂಲೆಮೂಲೆಯಿಂದ ಆಗಮಿಸಿದ ಮಹಿಳೆಯರು. ಎಪಿಎಂಸಿ ಆವರಣದ ನೆಲವೇ ಆಸನ. ಶರಾಬ್ ಕಾ ದಂಧಾ ಸಬ್‌ಸೆ ಗಂದಾ ಎಂದು ಏಕಕಾಲಕ್ಕೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಸಹಸ್ರಾರು ಕಂಠಗಳು. ಮದ್ಯ ನಿಷೇಧ ಆಂದೋಲನ ಕರ್ನಾಟಕದಿಂದ ರಾಜ್ಯದಲ್ಲಿ ಮದ್ಯ ನಿಷೇಧಿ ಸಲು ಆಗ್ರಹಿಸಿ ನಗರದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಂಡ ರಾಜ್ಯಮಟ್ಟದ ಸಮಾವೇಶದ ದೃಶ್ಯಗಳಿವು.
ಯುವತಿಯರು ಡೋಲು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಮದ್ಯದ ಬಾಟಲಿಗಳನ್ನು ಒಡೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಮೇಧಾ ಪಾಟ್ಕರ್, ರಾಜ್ಯ ಸರ್ಕಾರದ ಬೊಕ್ಕಸ ತುಂಬಲು ಮದ್ಯವೇ ಬೇಕಿಲ್ಲ. ಅದರಿಂದ ಜನರ ಕಲ್ಯಾಣ ಮಾಡುವುದಾದರೆ ಅಂಥ ಅಭಿವೃದ್ಧಿ ಬೇಕಿಲ್ಲ. ಸರ್ಕಾರ ಮದ್ಯ ನಿಷೇಧಿ ಸುವ ಮೂಲಕ ಬೀದಿ ಪಾಲಾಗುತ್ತಿರುವ ಲಕ್ಷಾಂತರ ಕುಟುಂಬಗಳನ್ನು ರಕ್ಷಿಸಲಿ ಎಂದು ಆಗ್ರಹಿಸಿದರು.
ಈಗಾಗಲೇ ತಮಿಳುನಾಡು, ಕೇರಳ, ಬಿಹಾರ ಸೇರಿ ಹಲವು ರಾಜ್ಯದಲ್ಲಿ ಮದ್ಯ ನಿಷೇಧಿಸಿದ್ದು, ಆರ್ಥಿಕ ಪ್ರಗತಿ ಕಾಣುತ್ತಿವೆ. ಅದೇ ಮಾದರಿಯಲ್ಲಿ ಇಲ್ಲೂ ಮದ್ಯ ನಿಷೇಧವಾಗಬೇಕು. ಅಲ್ಲಿವರೆಗೂ ಹೋರಾಟ ನಿಲ್ಲುವುದಿಲ್ಲ. ರಾಜ್ಯದಲ್ಲಿ ಮದ್ಯ ಮಾರಾಟದಿಂದ 18 ಸಾವಿರ ಕೋಟಿಗೂ ಅಧಿಕ ಆದಾಯ ಬರುತ್ತಿದೆ. ಈ ಹಣ ಬಡವರ ಶ್ರಮವಾಗಿದೆ. ಸರ್ಕಾರದ ಇಂಥ ನೀತಿಯಿಂದ ಕುಟುಂಬಗಳು ಬೀದಿ ಪಾಲಾಗುತ್ತಿವೆ ಎಂದು ದೂರಿದರು.
ಮದ್ಯ ಮಾರಾಟ ಸರ್ಕಾರಗಳೊಂದಿಗೆ ತಳುಕು ಹಾಕಿಕೊಂಡಿದೆ. ಹೀಗಾಗಿ ಸರ್ಕಾರ ಮದ್ಯ ಉತ್ಪಾದನಾ ಸಂಸ್ಥೆಗಳಿಗೆ ಕೋಟ್ಯಂತರ ರೂ. ಹಣಕಾಸಿನ ನೆರವು ನೀಡುತ್ತಿವೆ. ವಿದೇಶದಿಂದ ಬರುವ ಹಣದಿಂದ ದೇಶದ ಪ್ರಗತಿ ಸಾಧ್ಯವಿಲ್ಲ. ಇಲ್ಲಿನ ಸಂಪತ್ತು ದೋಚುವ ಅಂಥ ದೇಶಗಳಿಂದ ನಮ್ಮ ಪ್ರಗತಿ ಸಾಧ್ಯವಿಲ್ಲ. ಮದ್ಯ ನಿಷೇಧಿಸಿದರೆ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ. ಇದರ ವಿರುದ್ಧ ಎಲ್ಲ ಮಹಿಳೆಯರು ಅಹಿಂಸಾತ್ಮಕ ಹೋರಾಟ ನಡೆಸಬೇಕು. ಮದ್ಯ ಕುಡಿದು ಬರುವವರರನ್ನು ಮನೆಯೊಳಗೆ ಸೇರಿಸದಿರಿ ಎಂದು ಕರೆ ನೀಡಿದರು.
ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರ್ ನೀಡಿದ ಸಂವಿಧಾನದ ಹಕ್ಕುಗಳ ಪರಿಪಾಲನೆ ಮಾಡಬೇಕಾದರೆ, ಸರ್ಕಾರಗಳು ಮದ್ಯ ನಿಷೇಧಿಸಬೇಕು. ಮಹಾತ್ಮ ಗಾಂಧಿ , ಮಹ್ಮದ್ ಪೈಗಂಬರ್, ವರ್ಧಮಾನ್ ಮಹಾವೀರ್, ಬಸವಣ್ಣರಂಥ ಶರಣರೇ ಮದ್ಯ ನಿಷೇಧದ ವಿರುದ್ಧ ಧ್ವನಿ ಎತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ ಗಮನಿಸಿ, ಚುನಾವಣೆ ಸಮೀಪಿಸುತ್ತಿದ್ದು, ಮದ್ಯ ನಿಷೇಧ ಘೋಷಣೆ ಮಾಡಿ ಎಂದು ಒತ್ತಾಯಿಸಿದರು. ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜಕೀಯ ಪಕ್ಷಗಳು ಮದ್ಯನಿಷೇಧಿಸುವ ಘೋಷಣೆ ಮಾಡಬೇಕು. ಅಂಥ ಪಕ್ಷಗಳಿಗೆ ನಮ್ಮ ಮತ ನೀಡುತ್ತೇವೆ ಎಂದು ಜನ ಎಚ್ಚರಿಕೆ ನೀಡಬೇಕು. ಇದಕ್ಕಾಗಿ ಜನಜಾಗೃತಿ ಮಾಡಲಾಗುತ್ತಿದೆ ಎಂದರು.
ಅನೇಕ ವರ್ಷಗಳಿಂದಲೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ ರಾಷ್ಟ್ರದ ಮಹಾನ್ ನಾಯಕರು ಮದ್ಯ ನಿಷೇಧಿಸುವ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರತಿ ಮಹಿಳೆ ಮಧ್ಯ ನಿಷೇಧ ಹೋರಾಟಕ್ಕೆ ಸಹಕರಿಸಬೇಕು. ಇದರಿಂದ ಕುಟುಂಬದ ಸ್ವಾಸ್ಥ್ಯ ವಾತಾವರಣ ಸೃಷ್ಟಿಸಲು ಸಹಕಾರಿ ಎಂದರು. ಪ್ರಗತಿಪರ ಚಿಂತಕ ಇಲಕಲ್‌ನ ಲಾಲ್ ಹುಸೇನ್ ಕಂದಗಲ್ ಮಾತನಾಡಿ, ಉತ್ತಮ ರಾಜ್ಯ ನಿರ್ಮಾಣವಾಗಬೇಕಾದರೆ ಮದ್ಯ ನಿಷೇಧ ಆಗಲೇಬೇಕು. ಇದಕ್ಕಾಗಿ ನಿರಂತರ ಹೋರಾಟದ ಅಗತ್ಯವಿದೆ ಎಂದರು.
ಚಿತ್ರದುರ್ಗದ ಸಿರಿಗೆರೆ ಶ್ರೀ ತರಳುಬಾಳು ಸಂಸ್ಥಾನದ ಶ್ರೀ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬೀದರನ ಬಸವ ಸೇವಾ ಪ್ರತಿಷ್ಠಾನದ ಡಾ| ಗಂಗಾಬಿಕಾ ಅಕ್ಕ ಮಾತನಾಡಿದರು. ಆಳಂದ ಮಹಿಳಾ ಹೋರಾಟಗಾರ್ತಿ ಸಿಸ್ಟರ್ ಟೀನಾ, ಶಾಸಕ ಬಿ.ಆರ್.ಪಾಟೀಲ, ರಾಘವೇಂದ್ರ ಕುಷ್ಟಗಿ, ಅಭಯ್, ಸೈಯ್ಯದ್ ಹಫೀಜುಲ್ಲಾ, ಜೆ.ಬಿ.ರಾಜು, ಎಂ.ಆರ್ .ಬೇರಿ, ವಿದ್ಯಾ ಪಾಟೀಲ ಸೇರಿ ಇತರರಿದ್ದರು.
ಬೃಹತ್ ರ್ಯಾಲಿ: ನಂತರ ಬೃಹತ್ ರ್ಯಾಲಿ ನಡೆಸಿದ ಕಾರ್ಯಕರ್ತರು, ನಗರದ ಪ್ರಮುಖ ರಸ್ತೆಗಳ ಮೂಲಕ ಅಂಬೇಡ್ಕರ್ ವೃತ್ತದವರೆಗೆ ರ್ಯಾಲಿ ನಡೆಸಿದರು. ನಂತರ ವಿವಿಧ ಪಕ್ಷಗಳ ಜಿಲ್ಲಾಧ್ಯಕ್ಷರಿಗೆ ಮನವಿ ಸಲ್ಲಿಸಿ ಮದ್ಯ ನಿಷೇಧಕ್ಕೆ ಆಗ್ರಹಿಸಲಾಯಿತು.
ಗಿಜಿಗಿಡುತ್ತಿದ್ದ ಎಪಿಎಂಸಿ ಮದ್ಯ ನಿಷೇಧ ಆಂದೋಲನಕ್ಕೆ ಆಗ್ರಹಿಸಿ ಎಪಿಎಂಸಿಯಲ್ಲಿ ನಡೆದ ರಾಜ್ಯಮಟ್ಟದ ಬೃಹತ್ ಸಮಾವೇಶದಲ್ಲಿ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಜನ ಪಾಲ್ಗೊಂಡಿದ್ದರು. ಕಾರ್ಯಕ್ರಮ ನಿಗದಿಗಿಂತ ಎರಡು ಗಂಟೆ ತಡವಾಗಿ ಶುರುವಾಯಿತು. ಪರಿಣಾಮ ಜನರ ತಾಳ್ಮೆ ಮಿತಿ ಮೀರಿದ್ದರಿಂದ ಮಹಿಳೆಯರು ಎದ್ದು ತೆರಳಲು ಶುರು ಮಾಡಿದರು. ಇದರಿಂದ ಆಯೋಜಕರು ಕೆಳಗೆ ಕೂಡುವಂತೆ ಮನವಿ ಮಾಡಿದರು. ಕುಳಿತರೂ ತಮ್ಮೊಳಗೆ ಗುಸುಗುಸು ಎನ್ನುತ್ತಿದ್ದರಿಂದ ಆವರಣ ಗಿಜಿಗಿಡುವಂತಾಗಿತ್ತು
ಭಾಷಣ ತರ್ಜುಮೆ ಸಮಾವೇಶದಲ್ಲಿ ಭಾಗವಹಿಸಿದ್ದು, ಬಹುತೇಕರು ಅನಕ್ಷರಸ್ಥ ಮಹಿಳೆಯಾಗಿದ್ದರಿಂದ ಮೇಧಾ ಪಾಟ್ಕರ್ ಭಾಷಣ ಬಹುತೇಕರಿಗೆ ಅರ್ಥವಾಗಲಿಲ್ಲ. ಘೋಷಣೆ ಕೂಗಿದಾಗ ಒಂದೇ ಜೋರಾಗಿ ಕೂಗುತ್ತಿದ್ದರೂ ನಂತರ ತಮ್ಮೊಳಗೆ ಮಾತನಾಡುತ್ತಿದ್ದರು. ಇದನ್ನರಿತ ಆಯೋಜಕರು ಭಾಷಣ ತರ್ಜುಮೆ ಮಾಡಿ ಕನ್ನಡದಲ್ಲಿ ಹೇಳಿದರು. ಮೇಧಾ ಪಾಟ್ಕರ್ ಮಾತನಾಡಿದ ನಂತರ ಅದನ್ನು ಮಲ್ಲಿಗೆ ಎನ್ನುವವರು ಕನ್ನಡದಲ್ಲಿ ಭಾಷಾಂತರಿಸಿದರು. ಕಾರ್ಯಕ್ರಮದಲ್ಲಿ ಇಬ್ಬರು ವಿದೇಶಿ ಯುವತಿಯರು ಪಾಲ್ಗೊಂಡು ಗಮನ ಸೆಳೆದರು. ಸ್ವೀಡನ್ ದೇಶದ ಅವರು, ಪಿಎಚ್‌ಡಿ ಮಾಡಲು ಆಗಮಿಸಿದ್ದು, ಇಂಥ ಕಾರ್ಯಕ್ರಮಗಳಲ್ಲಿ
ಪಾಲ್ಗೊಳ್ಳುತ್ತಾರೆ ಎಂದು ಆಯೋಜಕರು ತಿಳಿಸಿದರು
ರಾಜ್ಯ ಸರ್ಕಾರದಿಂದಲೇ ಮದ್ಯ ಮಾಫಿಯಾ: ಮೇಧಾ ಪಾಟ್ಕರ್
ರಾಯಚೂರು: ರಾಜ್ಯದಲ್ಲಿ ಸರ್ಕಾರ ಮದ್ಯ ಮಾರಾಟವನ್ನು ಮಾಫಿಯಾ ರೀತಿಯಲ್ಲಿ ನಡೆಸುತ್ತಿದ್ದು, ಅದಕ್ಕೆ ಸಂಪೂರ್ಣ ಕಡಿವಾಣ ಹಾಕುವ ಅನಿವಾರ್ಯತೆ ಎದುರಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಹಾಗೂ ನಶಾ ಮುಕ್ತ ಭಾರತ್ ಆಂದೋಲನದ ಮುಖ್ಯಸ್ಥೆ ಮೇಧಾ ಪಾಟ್ಕರ್ ಅಭಿಪ್ರಾಯಪಟ್ಟರು. ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮದ್ಯ ಮಾರಾಟದಿಂದ ಬರುವ ಹಣದಿಂದ ಶಿಕ್ಷಣ, ಆರೋಗ್ಯ ಸೇವೆ ನೀಡುತ್ತಿದೆ ಎಂದು ಗರ್ವದಿಂದ ಹೇಳಿಕೊಳ್ಳುತ್ತಿದೆ. ಆದರೆ, ಅದೆಷ್ಟೋ ದಲಿತ, ಶ್ರಮಿಕ ಕುಟುಂಬಗಳು ಇಂದು ಮದ್ಯವ್ಯಸನದಿಂದ ಬೀದಿ ಪಾಲಾಗುತ್ತಿವೆ. ಮದ್ಯ ಸೇವನೆಯಿಂದ ದೇಶದಲ್ಲಿ ಪ್ರತಿ ವರ್ಷ
10 ಲಕ್ಷ ಕುಟುಂಬಗಳು ಬೀದಿ ಪಾಲಾಗುತ್ತಿವೆ.
ಮದ್ಯ ಮಾರಾಟ ರಾಜಕಾರಣದೊಂದಿಗೆ ತಳಕು ಹಾಕಿಕೊಂಡಿದ್ದು, ಅದರ ನಿರ್ನಾಮಕ್ಕೆ ಆಂದೋಲನ ಅಗತ್ಯವಾಗಿದೆ ಎಂದರು. ವಿವಿಧ ರಾಜ್ಯಗಳಲ್ಲಿ ಈಗಾಗಲೇ ಮದ್ಯ ಮಾರಾಟ ನಿಷೇಧಿಸಿದ್ದು, ಅದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ಈ ಚುನಾವಣೆಯಲ್ಲಿ ಮದ್ಯ ನಿಷೇಧಿಸುವವರಿಗೆ ಓಟು ಹಾಕುತ್ತೇವೆ ಎಂಬ ಸಂಕಲ್ಪ ಮಾಡಿದಾಗ ಅದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಬಹುದು. ಮದ್ಯ ಮಾರಾಟದ ವಿರುದ್ಧ ಮಹಿಳೆಯರು ಹಾಗೂ ಸಂಘಟನೆಗಳು ನಡೆಸುತ್ತಿರುವ ಹೋರಾಟ ಶ್ಲಾಘನೀಯ. ರಾಷ್ಟ್ರ ಮಟ್ಟದಲ್ಲಿ ಇಂಥ ಆಂದೋಲನ ನಡೆದಿದೆ. ರಾಜ್ಯದಲ್ಲಿ ಮಾದಕ ವಸ್ತುಗಳ ಉತ್ಪಾದನೆ, ಮಾರಾಟ ಸಂಪೂರ್ಣ ಸ್ಥಗಿತಗೊಳ್ಳಬೇಕು. ಬಿಹಾರದಲ್ಲಿ ಮದ್ಯ ಮಾರಾಟ ನಿಷೇಧಿಸಿದ ಮೇಲೆ ಆರ್ಥಿಕ ಸ್ಥಿತಿ ಸುಧಾರಿಸಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಮದ್ಯ ನಿಷೇಧಿಸಬೇಕು. ಯಾವ ಪಕ್ಷ ಮದ್ಯ ನಿಷೇಧಿಸುವ ಸಂಕಲ್ಪ ತೊಡುವುದೋ ಅದಕ್ಕೆ ಬೆಂಬಲ ನೀಡಬೇಕು ಎಂದರು.
ಜನರಿಗೆ ಸಮಸ್ಯೆಯೊಡ್ಡುವ ಕಾನೂನುಗಳನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆ. ಮೊದಲು ಅಂಥ ಕಾನೂನು ಸುಧಾರಣೆ ಮಾಡಬೇಕು. ಸರ್ಕಾರದ ನೀತಿಗಳಿಂದಾಗಿಯೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಇಂದು ಮದ್ಯವ್ಯಸನಿಗಳು ಕೂಡ ಅಂಥದ್ದೇ ನೀತಿಗಳಿಂದ ಸಾಯುತ್ತಿದ್ದಾರೆ. ಸರ್ಕಾರವೇ ಜನರ ಕೊಲೆ ಮಾಡುತ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ವಿಚಾರವಾದಿಗಳ ಹತ್ಯೆಯಾಗುತ್ತಿರುವುದು ಮದ್ಯದಿಂದ ಎಂದರೆ ತಪ್ಪಾಗಲಿಕ್ಕಿಲ್ಲ.
ಮೇಧಾ ಪಾಟ್ಕರ್, ಸಾಮಾಜಿಕ ಹೋರಾಟಗಾರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.