ಜಪಾನ್ ಫಲಿತಾಂಶಕ್ಕೆ ಜಗತ್ತು ಬದಲಿಸುವ ಶಕ್ತಿ
Team Udayavani, Oct 30, 2017, 11:28 AM IST
ಅಂತಾರಾಷ್ಟ್ರೀಯ ವಿಚಾರವನ್ನು ದೇಶಿಯವಾಗಿ ಹೇಗೆ ತಿರುಗಿಸಿಕೊಳ್ಳಬಹುದು ಎನ್ನುವುದಕ್ಕೆ ಜಪಾನ್ ಪಿಎಂ ಸಾಕ್ಷಿ. ಅಲ್ಲಿಯ ಚುನಾವಣೆ ಭಾರತ, ಪಾಕಿಸ್ತಾನ, ನೇಪಾಳ ಸೇರಿದಂತೆ ದಕ್ಷಿಣ ಏಷ್ಯಾದ್ಯಂತ ಸರ್ಕಾರಿ ಮಟ್ಟದಲ್ಲಿ ಪ್ರಭಾವಳಿಯ ತರಂಗ ಸೃಷ್ಟಿಸಿದ್ದಂತೂ ಸತ್ಯ. ಜನಸಾಮಾನ್ಯರ ಮಟ್ಟದಲ್ಲಿ ಅಲ್ಲದಿದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ದೊಡ್ಡದೇ.
“ಪ್ರಬಲ ನಾಯಕತ್ವ ಪ್ರದರ್ಶಿಸುತ್ತೇನೆ ಮತ್ತು ದೇಶ ಎದುರಿಸುತ್ತಿರುವ ಆತಂಕದ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸುತ್ತೇನೆ’ ಹೀಗೆಂದು 2017ರ ಸೆ.25ರಂದು ಹೇಳಿದ್ದು ಜಪಾನ್ ಪ್ರಧಾನಿ ಶಿಂಜೋ ಅಬೆ. ಅದೇ ಸಂದರ್ಭದಲ್ಲಿ ಉತ್ತರ ಕೊರಿಯಾ ವಿಶ್ವದ ರಾಷ್ಟ್ರಗಳ ಮನವಿ, ಎಚ್ಚರಿಕೆಯನ್ನೂ ಮೀರಿ ಜಪಾನ್ ಅನ್ನು ದಾಟಿ ಅಮೆರಿಕದ ಜಲಗಡಿಯ ವರೆಗೆ ಕ್ಷಿಪಣಿ ಹಾರಿಸಿತ್ತು. ಅದಾಗಿ ಕೆಲವೇ ಗಂಟೆಗಳಲ್ಲಿ ಅಬೆ ಈ ಮಾತನ್ನು ಹೇಳಿದ್ದರು. ಅದಕ್ಕೆ ಸರಿಯಾಗಿ ಸಂಸತ್‌ನ ದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಅನ್ನು ವಿಸರ್ಜಿಸಿದ್ದರು. ಈಗ ಅಲ್ಲಿ ಚುನಾವಣೆ ಮುಗಿದಿದೆ. ಅಬೆ ನೇತೃತ್ವದ ಲಿಬರಲ್ ಡೆಮಾಕ್ರಾಟಿಕ್ ಪಕ್ಷ ಮೈತ್ರಿಕೂಟ ಭರ್ಜರಿ ಜಯ ಗಳಿಸಿದೆ. ಕುಶಾಗ್ರಮತಿಯಾಗಿರುವ ಅಬೆ, ಜಪಾನ್ ರಾಜಕೀಯದಲ್ಲಿ ಗೆದ್ದಿದ್ದಾರೆ. ಅದು ಕೇವಲ ಅವರ ಆತಂರಿಕ ವಿಚಾರ ಮಾತ್ರವಲ್ಲ. 2019ರಲ್ಲಿ ನಮ್ಮ ದೇಶದಲ್ಲಿ ನಡೆಯುವ ಲೋಕಸಭೆ ಚುನಾವಣೆ, 2018ರಲ್ಲಿ ನಡೆಯುವ ಪಾಕಿಸ್ತಾನ, 2018 ಮತ್ತು 2019ರ ಸಂಧಿಯ ಕಾಲದಲ್ಲಿ ನಡೆಯುವ ಬಾಂಗ್ಲಾದೇಶ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ. ಅಷ್ಟೇ ಏಕೆ ಉಗ್ರರಿಗೆ ಬೆಂಬಲ ನೀಡುವ ಪಾಕಿಸ್ತಾನ ಮತ್ತು ಕಿಂ ಜಾಂಗ್ ಉನ್‌ಗೆ ಕುಮ್ಮಕ್ಕು ನೀಡುವ ದಕ್ಷಿಣ ಏಷ್ಯಾದ ಪ್ರಬಲ ರಾಷ್ಟ್ರ ಚೀನಾಕ್ಕೂ ಎಚ್ಚರಿಕೆಯ ಗಂಟೆಯಾಗಲಿದೆ. ಇನ್ನು ಉತ್ತರ ಕೊರಿಯಾಕ್ಕಂತೂ ಪ್ರಬಲ ಸೂಚನೆಯೇ ಎನ್ನುವುದರಲ್ಲಿ ದೂಸ್ರಾ ಮಾತೇ ಇಲ್ಲ.
ಮೊತ್ತಮೊದಲಿಗೆ ಜಪಾನ್ ಚುನಾವಣೆ ನಮ್ಮ ದೇಶದ ಮೇಲೆ ಹೇಗೆ ಪರಿಣಾಮ ಬೀರೀತು ಎನ್ನುವುದನ್ನು ಗಮನಿಸೋಣ. ಮೊದಲಾಗಿ ಗಮನಿಸಬೇಕಾದ ಅಂಶವೆಂದರೆ ಸೆಪ್ಟೆಂಬರ್‌ನಲ್ಲಿ ಅಹಮದಾಬಾದ್‌ಗೆ ಜಪಾನ್ ಪ್ರಧಾನಮಂತ್ರಿ ಅಬೆ ಭೇಟಿ ನೀಡಿದ್ದ ಸುದ್ದಿ, ಫೋಟೋ ಆ ದೇಶದ ಅಷ್ಟೂ ಪತ್ರಿಕೆಗಳಲ್ಲಿ ಆದ್ಯತೆಯಲ್ಲಿ ಪ್ರಕಟಗೊಂಡಿತು. ಎರಡು ದಿನಗಳ ಪ್ರವಾಸ ಮುಕ್ತಾಯಗೊಂಡು ಟೋಕಿಯೋ ತಲಪುತ್ತಿದ್ದಂತೆಯೇ ಅಬೆ ಸಂಸತ್ ವಿಸರ್ಜಿಸಿ ಚುನಾವಣೆ ಘೋಷಣೆ ಮಾಡಿದ್ದರು. ಮುತ್ಸದ್ದಿತನವೆಂದರೆ ಅದು.
ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆಗಿಂತ ಲಿಬರಲ್ ಡೆಮಾಕ್ರಾಟಿಕ್ ಪಕ್ಷ ನೇತೃತ್ವದ ಮೈತ್ರಿಕೂಟದ ಸರ್ಕಾರದ ಪ್ರಮುಖ ಸಚಿವರು, ನಾಯಕರ ವಿರುದ್ಧ ಅವ್ಯವಹಾರ ನಡೆಸಿದ ಆರೋಪಗಳು ಕೇಳಿಬಂದಿದ್ದವು. ಅಷ್ಟೇ ಏಕೆ ಸ್ವತಃ ಪ್ರಧಾನಿ ಅಬೆ ಅವರ ಪತ್ನಿ ವಿರುದ್ಧ ಜಪಾನ್ ಸರ್ಕಾರಕ್ಕೆ ಸೇರಿದ ಜಮೀನನ್ನು ಶಿಕ್ಷಣ ಸಂಸ್ಥೆಯೊಂದಕ್ಕೆ ಅತ್ಯಲ್ಪ ಮೊತ್ತಕ್ಕೆ ನೀಡುವಲ್ಲಿ ಪ್ರಭಾವ ಬೀರಿದ್ದಾರೆಂಬ ಗುರುತರ ಆರೋಪಗಳು ಕೇಳಿ ಬಂದಿದ್ದವು. ನಿಗದಿತವಾಗಿ ಚುನಾವಣೆ ನಡೆಯಬೇಕಾಗಿದ್ದದ್ದು 2018ರಲ್ಲಿ. ಅದೇನೇ ಇರಲಿ ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆ ನೆಪದಲ್ಲಿ ಚುನಾವಣೆ ಘೋಷಿಸಿ, ಅದರಲ್ಲಿಯೂ ಗೆದ್ದಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಅಬೆ ಪ್ರಧಾನಿಗಳ ಮಟ್ಟದಲ್ಲಿ ಮಾತ್ರವಲ್ಲ, ವೈಯಕ್ತಿಕವಾಗಿಯೂ ಅತ್ಯಂತ ಆಪ್ತರು. ಬಲಪಂಥೀಯ ಪ್ರತಿಪಾದಕರು. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿನ ಪ್ರಮುಖ ಯೋಜನೆಗಳಲ್ಲಿ ಜಪಾನ್ ಕಂಪನಿಗಳ ಹೂಡಿಕೆಯೇ ಹೆಚ್ಚು. ಇನ್ನು ಪ್ರಧಾನಿಯಾದ ಬಳಿಕ ಆ ಮಿತ್ರತ್ವ ಮುಂದುವರಿದಿದೆ. 2019ರ ಚುನಾವಣೆಯಲ್ಲಿ ನೇರವಾಗಿ ನಮ್ಮ ದೇಶದ ಜನಸಾಮಾನ್ಯರ ಮೇಲೆ ಅದು ಗೋಚರವಾಗದೇ ಇದ್ದರೂ ಒಂದು ಹಂತಕ್ಕೆ ಅದರ ಪ್ರಭಾವಳಿ ಇದ್ದೇ ಇರುತ್ತದೆ.
ದೇಶದ ಅರ್ಥ ವ್ಯವಸ್ಥೆಯಲ್ಲಿ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಹಲವು ಕ್ರಮಗಳು ಅಬೆ ಕೈಗೊಂಡ ಯೋಜನೆಗಳಿಂದ ಸ್ಫೂರ್ತಿ ಪಡೆದಿದ್ದು ಸುಳ್ಳೇನಲ್ಲ. ಜಪಾನ್‌ನಲ್ಲಿ ವಯೋ ವೃದ್ಧರೇ ಹೆಚ್ಚಾಗಿದ್ದುದರಿಂದ ಅಬೆ ಯುವಜನರನ್ನು ಕೇಂದ್ರೀಕರಿಸಿ ಹಲವು ಯೋಜನೆಗಳನ್ನು ಜಾರಿಗೆ ತಂದು ಗೆದ್ದಿದ್ದರು. ಅದರಿಂದ ಸ್ಫೂರ್ತಿಪಡೆದ ನಮ್ಮ ಪ್ರಧಾನಿ ಯುವಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಗಳು, ಮೇಕ್ ಇನ್ ಇಂಡಿಯಾ ಅನ್ವಯ ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಿ ಉದ್ಯೋಗ ಸೃಷ್ಟಿಗೆ ಹಲವು ಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ಜನಸಂಖ್ಯೆಯಲ್ಲಿ ಅದರಲ್ಲಿಯೂ ಯುವ ಜನರತ್ತ ಹೆಚ್ಚಿನ ಗಮನ ಹಾಲಿ ಕೇಂದ್ರ ಸರ್ಕಾರದ ಮೇಲೆ ಇದೆ.
ಇದು 2019ರ ಚುನಾವಣೆಯಲ್ಲಿ ಬಿಜೆಪಿಗೆ ಧನಾತ್ಮಕ ಪರಿಣಾಮ ತಂದುಕೊಡುವುದಂತೂ ನಿಶ್ಚಿತ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಷ್ಟ್ರ ಮಟ್ಟದ ಯೋಜನೆಗಳಲ್ಲಿ ಜಪಾನ್ ಹೂಡಿಕೆ ಹೆಚ್ಚಿದೆ. ಅದಕ್ಕೊಂದು ಉತ್ತಮ ಉದಾಹರಣೆ ಬುಲೆಟ್ ಟ್ರೈನ್ ಯೋಜನೆಯಲ್ಲಿ ಜಪಾನ್‌ನ ಶಿಂಕಾನ್‌ಸೆನ್ ಬುಲೆಟ್ ಟ್ರೈನ್ ಯೋಜನೆಯ ತಂತ್ರಜ್ಞಾನವನ್ನು ಭಾರತಕ್ಕೆ ನೀಡಲು ಒಪ್ಪಿಕೊಂಡದ್ದು. ಇಷ್ಟು ಮಾತ್ರವಲ್ಲದೆ, ಜಪಾನ್ ಸರ್ಕಾರದ ಕೌಶಲ್ಯಾಭಿವೃದ್ಧಿ ಯೋಜನೆಯನ್ವಯ ಮೂರು ಲಕ್ಷ ಯುವಜನರನ್ನು ಕೆಲಸದ ಸಂದರ್ಭದಲ್ಲಿಯೇ ತರಬೇತಿ ನೀಡುವ ಯೋಜನೆಯನ್ವಯ ಕಳುಹಿಸಲಾಗುತ್ತದೆ. ಇಂಥವುಗಳು ಯುವಜನರ ಮನಸ್ಸುಗಳನ್ನು ಮತಗಳನ್ನಾಗಿ ಪರಿವರ್ತಿಸುವ ಶಕ್ತಿ ಇದೆ.
ಇನ್ನು ನೆರೆಯ ರಾಷ್ಟ್ರಗಳ ಜತೆ ವಿಶೇಷವಾಗಿ ಪಾಕಿಸ್ತಾನ ಮತ್ತು ಚೀನಾ ಜತೆಗಿನ ಸಂಬಂಧ ಸುಧಾರಿಸಿಕೊಳ್ಳುವಲ್ಲಿ ಅಥವಾ ಆ ಎರಡು ರಾಷ್ಟ್ರಗಳು ನಮ್ಮ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಸುವ ಕುತ್ಸಿತ ಯೋಜನೆಗಳ ವಿರುದ್ಧ ಸೆಟೆದು ನಿಲ್ಲಲು ಈ ಚುನಾವಣೆಯ ಫಲಿತಾಂಶ ಸಹಕಾರಿಯಾಗಲಿದೆ. ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿನ ದ್ವೀಪಗಳ ಮತ್ತು ಐತಿಹಾಸಿಕ ಕಾಲಘಟ್ಟದಲ್ಲಿನ ಭೂಭಾಗಗಳ ವಿಚಾರವಾಗಿ ಎರಡೂ ರಾಷ್ಟ್ರಗಳ ನಡುವೆ ಆಗಾಗ ಶೀತಲ ಸಮರ ನಡೆಯುತ್ತಿದೆ. ಭಾರತದ ಜತೆ ಹೇಗಿದ್ದರೂ ಒಂದಲ್ಲ ಒಂದು ವಿಚಾರದಲ್ಲಿ ತಗಾದೆಯುವುದು ಇದ್ದೇ ಇದೆ. ಜತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪುನಾರಚನೆಯಾಗಿ ಅದರಲ್ಲಿ ಶಾಶ್ವತ ಸ್ಥಾನಮಾನ ಪಡೆಯುವ ನಿಟ್ಟಿನಲ್ಲಿ ಚೀನಾದ ಪ್ರಾಬಲ್ಯ ಮೆಟ್ಟಿ ನಿಲ್ಲಲು ಜಪಾನ್ ನೆರವು ಬೇಕು. ದಕ್ಷಿಣ ಏಷ್ಯಾದಲ್ಲಿ ಚೀನಾ ಯಾವುದೇ ರೀತಿಯಲ್ಲಿ ಪ್ರಬಲ ಶಕ್ತಿಯಾಗುವುದು ಅಮೆರಿಕಕ್ಕೆ ಬೇಕಾಗಿಲ್ಲ. ಏಕೆಂದರೆ ಅದು ಪಾಕಿಸ್ತಾನಕ್ಕೆ ಯಾವತ್ತೂ ಬೆಂಬಲ ನೀಡುತ್ತದೆ. ಹೀಗಾಗಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತಕ್ಕೆ ಜಪಾನ್‌ನ ಬೆಂಬಲ ಬೇಕು. ಏಕೆಂದರೆ ಅಮೆರಿಕಕ್ಕೆ ಯಾವತ್ತೂ ವಿಶ್ವದ ರಾಷ್ಟ್ರಗಳು ಅದರ ಹೇಳಿಕೆಯಲ್ಲಿಯೇ ಇರಬೇಕೆಂದು ಬಯಸುತ್ತದೆ.
ಪ್ರಧಾನಿ ಮೋದಿ ಪೂರ್ವದತ್ತ ನೋಟ (ಲುಕ್ ಈಸ್ಟ್ )ಎಂಬ ಹೊಸ ಮಾದರಿಯ ರಾಜತಾಂತ್ರಿಕತೆ ಪ್ರತಿಪಾದಿಸಿದ್ದರಿಂದ ಮುಂದಿನ ಎಂಟು ವರ್ಷಗಳ ಕಾಲ ದಕ್ಷಿಣ ಏಷ್ಯಾ ವಲಯದಲ್ಲಿ ಪ್ರಬಲ ಮೈತ್ರಿಕೂಟ ಉದಯಿಸಿದಂತಾಗುತ್ತದೆ. ಇನ್ನುಳಿದಂತೆ ಬಾಂಗ್ಲಾದೇಶ ಮತ್ತು ನೇಪಾಳಗಳ ಮೇಲೆ ಪ್ರಭಾವಳಿ ವಿಸ್ತರಿಸಿದರೂ ಹೇಳುವಂಥ ಪರಿಣಾಮವೇನೂ ಉಂಟಾಗಲಾರದು.
ಈಗಾಗಲೇ ಭಾರತ, ಅಮೆರಿಕ ಮತ್ತು ಜಪಾನ್ ಈ ಮೂರು ರಾಷ್ಟ್ರಗಳು ಕೈಗೊಳ್ಳುವ ತ್ರಿಪಕ್ಷೀಯ ಸಮರಾಭ್ಯಾಸಕ್ಕೂ ಇನ್ನಷುc ಹೆಚ್ಚಿನ ಬಲ ಬರಲಿದೆ. ಇನ್ನು ದಕ್ಷಿಣ ಕೊರಿಯಾ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿಲ್ಲಿ ಮಾತನಾಡುವುದಿದ್ದರೆ ಈಗಾಲೇ ಕಾರ್ಯಪ್ರವೃತ್ತರಾಗಿರುವ ಶಿಂಜೋ ಅಬೆ ಜಪಾನ್‌ನ ಸೇನಾ ಬಲದ ವೃದ್ಧಿಯನ್ನು ಮಾಡಲು ಉತ್ಸುಕರಾಗಿದ್ದಾರೆ. ಉತ್ತರ ಕೊರಿಯಾ ಅಧ್ಯಕ್ಷ ಕಿಂ ಜಾಂಗ್ ಉನ್ ಕೈಗೊಂಡಿರುವ ಹೈಡ್ರೋಜನ್ ಬಾಂಬ್ ಪರೀಕ್ಷೆ, ಕ್ಷಿಪಣಿ ಪರೀಕ್ಷೆಗಳ ವಿರುದ್ಧ ಕ್ರುದ್ಧಗೊಂಡಿರುವ ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳ ಜತೆಗೂಡಿ ಕಠಿಣಾತಿಕಠಿಣ ಕ್ರಮಕ್ಕೆ ಜಪಾನ್ ಮುಂದಾಗಿದೆ.
ಸೇನಾ ಕಾರ್ಯಾಚರಣೆ ನಡೆಸಲೋಸುಗ ತಮ್ಮ ದೇಶದಲ್ಲಿ ಜನಾಭಿಪ್ರಾಯ ಪಡೆದುಕೊಳ್ಳಲು ಮುಂದಾಗಿದ್ದಾರೆ. ಅದರಲ್ಲಿ ಯಶಸ್ವಿಯಾದರೆ ದೇಶದ ಸಂವಿಧಾನದಲ್ಲಿ ಬದಲಾವಣೆ ತರಬೇಕು. 1947ರಲ್ಲಿ ಅನುಷ್ಠಾನಕ್ಕೆ ಬಂದ ಆ ದೇಶದ ಸಂವಿಧಾನದಲ್ಲಿ ಮೊದಲ ಬಾರಿಗೆ ತಿದ್ದುಪಡಿ ತಂದು, ಅದರಲ್ಲಿನ 9ನೇ ವಿಧಿಗೆ ಬದಲು ಮಾಡಬೇಕಾಗುತ್ತದೆ. 1947ರ ಸಂವಿಧಾನ ಅಂಗೀಕರಿಸಿ ಏಳು ವರ್ಷಗಳ ಬಳಿಕ ಸೆಲ್ಫ್ ಡಿಫೆನ್ಸ್ ಫೋರ್ಸ್ (ಎಸ್‌ಡಿಎಫ್) ಅನ್ನು ರಚಿಸಿಕೊಂಡಿತ್ತು. ಇನ್ನು ಅಬೆ ಅವರ ಆದ್ಯತೆ ಏನೆಂದರೆ ಕುಸಿಯುತ್ತಿರುವ ದೇಶದ ಜನಸಂಖ್ಯೆಯನ್ನು ವೃದ್ಧಿಸುವ ಭಾರಿ ಸವಾಲಿನ ಕೆಲಸ ಅವರ ನೇತೃತ್ವದ ಸರ್ಕಾರಕ್ಕೆ ಇದೆ.
ಅಬೆ ಅವರ ಚುನಾವಣೆಯ ಗೆಲುವಿಗೆ ಪೂರಕವಾಗಿ ನ.5-7 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ. ಈಗಾಗಲೇ ಉತ್ತರ ಕೊರಿಯಾ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳದೆ ಬೇರೆ ದಾರಿ ಇಲ್ಲವೆಂದು ಅಧ್ಯಕ್ಷ ಟ್ರಂಪ್ ಘೋಷಣೆ ಮಾಡಿದ್ದಾರೆ. ಹೀಗಾಗಿ, ಅವರ ಜಪಾನ್ ಪ್ರವಾಸದ ವೇಳೆ ಈ ಬಗ್ಗೆ ಸರಿಯಾದ ರೀತಿಯ ದಿಕ್ಕು ಕಾಣಲಿದೆ. ಜತೆಗೆ ಚೀನಾ ಕೂಡ ಪರಿಸ್ಥಿತಿ ಇಲ್ಲವೆಂದು ಅರಿತುಕೊಂಡು ಜಪಾನ್ ಶಾಂತಿಯುತ ಮಾರ್ಗದ ಮೂಲಕ ಎಲ್ಲ ವಿವಾದಗಳ ಬಗ್ಗೆ ಪರಿಹಾರ ಕಂಡುಕೊಳ್ಳ ಬೇಕು ಎಂದು ಪ್ರತಿಪಾದಿಸಿದೆ. ಏಕೆಂದರೆ ಈ ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯ ಯಾವತ್ತೂ ಎಣ್ಣೆಸೀಗೆ ಕಾಯಿಯೇ. ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತರ ಕೊರಿಯಾ ಅಧ್ಯಕ್ಷ ಕಿಂ ಜಾಂಗ್ ಉನ್ ಅವರನ್ನು ಖಂಡಿಸುತ್ತಿದ್ದರೆ, ಚೀನಾ ಮಾತ್ರ ಅದಕ್ಕೆ ಬೆಂಬಲವಾಗಿಯೇ ಮಾತನಾಡುತ್ತದೆ. ತೀರಾ ಕೆಲ ದಿನಗಳ ಹಿಂದಷ್ಟೇ ಅಮೆರಿಕ ನೇತೃ ತ್ವದ ಮೈತ್ರಿಕೂಟದ ಒತ್ತಡದ ಮೇಲೆ ಜವಳಿ ಉತ್ಪನ್ನಗಳ ಮತ್ತು ತೈಲೋ ತ್ಪನ್ನಗಳ ರಫ್ತಿನ ಮೇಲೆ ನಿಯಂತ್ರಣ ಹೇರಿದೆ ಚೀನಾ ಸರ್ಕಾರ.
ಉತ್ತರ ಕೊರಿಯಾದ ಉದ್ಧಟತನದಿಂದಾಗಿ ಈಗಾಗಲೇ ಮೂರನೇ ಪ್ರಪಂಚ ಮಹಾಯುದ್ಧ ಸಂಭವಿಸೀತೇ ಎಂಬ ಆತಂಕ ಶುರುವಾಗಿದೆ. ಒಂದಂತೂ ಸತ್ಯ. ಮೊದಲ ಮತ್ತು ಎರಡನೇ ಪ್ರಪಂಚ ಮಹಾಯುದ್ಧದ ಸಂಭವಿಸಿದ ಸಂದರ್ಭದಲ್ಲಿ ಇದ್ದ ವಿಶ್ವ ಈಗ ಅಲ್ಲ. ಕ್ಷಣಮಾತ್ರದಲ್ಲಿ ಎಲ್ಲಿ ಏನೇ ಆಗಲಿ. ಅದರ ಪ್ರತಿಕೂಲ ಪರಿಣಾಮ ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳ ಮೇಲೆ ಆಗಿಯೇ ಆಗುತ್ತದೆ. ಅಮೆರಿಕ ಏನಿದ್ದರೂ ತನ್ನ ಸ್ವಹಿತಾಸಕ್ತಿಯಿಂದ ವಿಶ್ವದ ವಿದ್ಯಮಾನಗಳನ್ನು ನೋಡುತ್ತಿರುವ ಹಿನ್ನೆಲೆಯಲ್ಲಿ ಜಪಾನ್‌ನ ಚುನಾವಣೆ ಫಲಿತಾಂಶ ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ. ಮಿಲಿಟರಿ ಕಾರ್ಯಾಚರಣೆ ಸಂಭವಿಸೀತೇ ಎಂದರೆ ಕೂಡಲೇ ಉತ್ತರ ಸಿಗಲಾರದು. ಹಾಗೆಂದುಕೊಂಡು ವಿಶ್ವದಲ್ಲಿ ಬಿಗುವಿನ ವಾತಾವರಣ ಹೆಚ್ಚುವುದಂತೂ ಖಚಿತ.
– ಸದಾಶಿವ ಖಂಡಿಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranji Trophy: ಭಾರತ ಕ್ರಿಕೆಟ್ ಘಟಾನುಘಟಿಗಳೆಲ್ಲಾ ರಣಜಿ ಕಣಕ್ಕೆ?
Bigg Boss: ಟಾಸ್ಕ್ ಮೂಲಕ ನಡೆಯಿತು ಮಿಡ್ ವೀಕ್ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್
Gundlupete: ಮಾರಾಟದ ಉದ್ದೇಶದಿಂದ ಗಾಂಜಾ ಗಿಡ ಬೆಳೆದವನ ಬಂಧನ
Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ
Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.