ಸೈಲೆನ್ಸ್ ಪ್ಲೀಸ್
Team Udayavani, Oct 30, 2017, 11:47 AM IST
ಭಾರೀ ಸದ್ದನ್ನು ಕೇಳಿದರೆ ಕಿರಿಕಿರಿಯಾಗುವುದು ಸಹಜ. ಮೊದಲೇ ಪ್ಲಾನ್ ಮಾಡಿಕೊಂಡು ಮುಂದುವರಿದರೆ ಶಬ್ದಮಾಲಿನ್ಯದಿಂದ ದೂರವಿರುವಂಥ ಮನೆಯನ್ನು ಹೊಂದಲು ಸಾಧ್ಯವಿದೆ.
ಪಟಾಕಿಗಳು ದೀಪಾವಳಿ ಸಂತೋಷದ ಜೊತೆಗೆ ಒಂದಲ್ಲ ಒಂದು ರೀತಿಯಲ್ಲಿ ಒಂದಷ್ಟು ಕಿರಿಕಿರಿಯನ್ನು ಉಂಟುಮಾಡಿದ್ದು ಸುಳ್ಳಲ್ಲ. ದೊಡ್ಡದೊಡ್ಡ ಪಟಾಕಿ ಹೊಡೆದಾಗ ಮಜ ಎಂದೆನಿಸಿದರೂ ನಡುರಾತ್ರಿ ಜೋರು ಶಬ್ದ ಕೇಳಿ ಬೆಚ್ಚಿಬಿದ್ದಾಗ ಈ ಪಟಾಕಿ ಸಹವಾಸ ಸಾಕಪ್ಪ ಸಾಕು ಎಂದೆನಿಸುತ್ತದೆ. ಹಾಗಾಗಿ ನಾವು ಮನೆ ಕಟ್ಟುವಾಗ ಶಬ್ದ ಮಾಲಿನ್ಯದಿಂದ ರಕ್ಷಣೆ ಪಡೆಯಲು ಸ್ವಲ್ಪವಾದರೂ ಮುಂಜಾಗರೂಕತೆ ವಹಿಸಬೇಕಾಗುತ್ತದೆ.
ಶಬ್ದ ಎಂದರೆ
ಬೆಳಕು ನೇರವಾಗಿ ಮಾತ್ರ ಸಾಮಾನ್ಯವಾಗಿ ಚಲಿಸುವ ಗುಣ ಹೊಂದಿದ್ದರೆ ಶಬ್ದ ಹಾಗಲ್ಲ. ಅದು ಎರಡು ರೀತಿಯಲ್ಲಿ ಚಲಿಸಬಲ್ಲದು. ಮೊದಲನೆಯದಾಗಿ ಬೆಳಕಿನಂತೆ ನೇರವಾಗಿ ಹರಡುವುದರ ಜೊತೆಗೆ ನೀರಿನಲ್ಲಿ ಅಲೆಗಳಂತೆ “ಪ್ರಶರ್’ -ಶಬ್ದಶಕ್ತಿ ಗಾಳಿಯಲ್ಲಿ ಒತ್ತಡದ ಅಲೆಗಳನ್ನು ಉಂಟು ಮಾಡುವುದರ ಮೂಲಕವೂ ಪ್ರಸರಿಸಬಲ್ಲದು. ಹಾಗಾಗಿ ನಾವು ಶಬ್ದದ ಅಲೆಗಳ ನೇರ ಮಾರ್ಗವನ್ನು ನಿಯಂತ್ರಿಸಿದರೆ, ಅದು ಸುತ್ತಿ ಬಳಸಿ, “ಹೋದೆಯಾ ಪಿಶಾಚಿ ಅಂದರೆ, ಬಂದೆ ಗವಾಕ್ಷೀಲಿ ಅಂತ ಪಕ್ಕದಿಂದಲೂ ನುಸುಳಬಲ್ಲದು. ಹಾಗಾಗಿ ನಾವು ಹೇಗೆ ನಿಯಂತ್ರಣಯನ್ನು ಮಾಡಿದರೂ, ಅದು ಶಬ್ದ ತರಂಗದ ನೇರ ಹಾಗೂ ಇತರೆ ಮಾರ್ಗದ ಮೂಲಕ ಮನೆಯೊಳಗೆ ನುಸುಳದಂತೆ ನೋಡಿಕೊಳ್ಳಬೇಕು. ಕೆಲವೊಮ್ಮೆ ಕಿಟಕಿಗಳನ್ನು ಮುಚ್ಚಿದರೂ ಶಬ್ದ ಹೇಗೋ ಒಳಗೆ ಬಂದುಬಿಡುತ್ತದೆ. ಹೀಗಾಗಲು ಮುಖ್ಯ ಕಾರಣ- ಕಿಟಕಿಯ ಗಾಜು ಇಲ್ಲವೇ ಮರದ ಚೌಕಟ್ಟು ಅದುರಿದರೆ, ಈ ಅದುರುವಿಕೆಯ ಮೂಲಕವೂ ಶಬ್ದ ತರಂಗಗಳು ಮರು ಸೃಷ್ಟಿ ಪಡೆದು ಒಳಾಂಗಣದಲ್ಲಿ ತಲ್ಲಣ ಉಂಟುಮಾಡಬಲ್ಲವು!
ಮಾರ್ಗೋಪಾಯಗಳು
ನಮಗೆ ಬೇಡವಾದ ಶಕ್ತಿ ಯಾವ ರೂಪದಲ್ಲಿದ್ದರೂ, ಅದನ್ನು ಹೀರಿಕೊಳ್ಳಬೇಕು ಇಲ್ಲವೇ ಪ್ರತಿಫಲಿಸುವಂತೆ ಮಾಡಬೇಕಾಗುತ್ತದೆ. ಇದಕ್ಕೆ ಶಬ್ದವೂ ಹೊರತಲ್ಲ. ನಾವು ಹೊರಗಿನ ಸದ್ದು ನೇರವಾಗಿ ಒಳ ಪ್ರವೇಶಿಸದಂತೆ ಮಾಡಲು ಕಿಟಕಿ ಮುಚ್ಚುವುದು ಸರಳ ಉಪಾಯವಾಗಿದ್ದು, ಸಾಮಾನ್ಯವಾಗಿ ಪರಿಣಾಮಕಾರಿಯಾಗಿಯೂ ಇರುತ್ತದೆ. ಆದರೆ ಹೆಚ್ಚು ಹಾಗೂ ನಿರಂತರ ಶಬ್ದ ಇದ್ದಲ್ಲಿ, ಬರೀ ಕಿಟಕಿ ಮುಚ್ಚುವುದರಿಂದ ಪರಿಹಾರ ಸಿಗದೆ ಇರಬಹುದು. ಜೊತೆಗೆ, ನಾವು ಕಿಟಕಿ ಇಡುವುದೇ ಗಾಳಿ ಬೆಳಕು ಮನೆಯೊಳಗೆ ಧಾರಾಳವಾಗಿ ಪ್ರವೇಶಿಸಲಿ ಅಂತ. ಕಿಟಕಿ ಇಟ್ಟ ನಂತರೆ ಅದನ್ನು ಮುಚ್ಚಿಟ್ಟರೆ ಏನು ಪ್ರಯೋಜನ? ಹೇಳಿ ಕೇಳಿ ಮನೆ ಕಟ್ಟುವಾಗ ಅತಿ ದುಬಾರಿಯಾದ ವಸ್ತುಗಳಲ್ಲಿ ಕಿಟಕಿಗಳೂ ಒಂದು. ಹಾಗಾಗಿ ನಾವು ಅನಿವಾರ್ಯವಾಗಿ ಇತರೆ ವಿಧಾನಗಳಿಗೆ ಮೊರೆ ಹೋಗಬೇಕಾಗುತ್ತದೆ.
ಹೀರಿಕೊಳ್ಳುವ ಸಾಧನಗಳು
ಮನೆಯ ಒಳಗೆ ಹಾಗೂ ಹೊರಗೆ ಶಬ್ದ ಶಕ್ತಿಯನ್ನು ಹೀರಿಕೊಳ್ಳುವ ವಿನ್ಯಾಸ ಮಾಡುವ ಮೂಲಕ ನಾವು ಸಾಕಷ್ಟು ಶಾಂತತೆಯನ್ನು ಕಾಪಾಡಿಕೊಳ್ಳಬಹುದು. ಈಗ ಶಬ್ದ ನಿಯಂತ್ರಣಕ್ಕೆಂದೇ ಅನೇಕ ವಸ್ತುಗಳನ್ನು ತಯಾರಿ ಮಾಡಲಿಗಾದೆ ಅವೆಲ್ಲಾ ಮಾರುಕಟ್ಟೆಯಲ್ಲಿ ಲಭ್ಯ. ಇವು ಮುಖ್ಯವಾಗಿ ಟೊಳ್ಳು ವಸ್ತುಗಳಾಗಿದ್ದು, ಶಬ್ದದ ಅಲೆಗಳಲ್ಲಿನ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥಯವನ್ನು ಹೊಂದಿರುತ್ತವೆ. ಏರ್ ಟೈಟ್ ಕಾಂಕ್ರಿಟ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಕೆಯಲ್ಲಿದೆ. ಸಾಂಪ್ರದಾಯಿಕವಾಗಿ ಮರದ ಹೊದಿಕೆ- ಪ್ಯಾನಲಿಂಗ್ ಅಳವಡಿಸಿ, ಅದರ ಹಿಂದೆ ನಾನಾ ಮಾದರಿಯ ವಸ್ತುಗಳಿಂದ ತಯಾರಾದ ಅಕೊಸ್ಟಿಕ್ ಹಲಗೆಗಳನ್ನು ಬಳಸಲಾಗುತ್ತಿತ್ತು. ಸಾಮಾನ್ಯವಾಗಿ ಇವು ಮನೆಯ ಒಳಗೆ ಹೆಚ್ಚು ಬಳಕೆಯಲ್ಲಿದ್ದು, ಮನೆಯ ಹೊರಗಾದರೆ, ಸಿಮೆಂಟ್ ಆಧರಿಸಿದ ಲಘು ಭಾರದ ಬೋರ್ಡುಗಳು ಹೆಚ್ಚು ಸೂಕ್ತ.
ಉದ್ಯಾನವನ ಬಳಸಿ
ಎಲ್ಲಕ್ಕಿಂತ ಮರಗಿಡಗಳು ಶಬ್ದ ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ರಸ್ತೆ ಬದಿಯ ಮರಗಳು ಗಾಢವಾದ ಎಲೆಗಳ ಕಿರೀಟವನ್ನು ಹೊಂದಿದ್ದಾಗ ಅಕ್ಕ ಪಕ್ಕದ ಮನೆಗಳಿಗೆ ವಾಹನಗಳಿಂದ ಉಂಟಾಗುವ ಶಬ್ದ ಮಾಲಿನ್ಯ ತಡೆಯಬಲ್ಲವು! ಹಾಗಾಗಿ ನಾವೂ ಕೂಡ ನಮ್ಮ ನಿವೇಶನದಲ್ಲಿ ಹಸಿರನ್ನು ಶಬ್ದ ನಿಯಂತ್ರಣಕ್ಕೆ ಗುರಾಣಿಯಂತೆ ಬಳಸಬಹುದು! ಹಸಿರ ಗೋಡೆಯನ್ನು ಬೆಳೆಸಬಹುದು. ಇತ್ತೀಚಿನ ದಿನಗಳಲ್ಲಿ ದಿಢೀರ್ ಎಂದು ಹಸಿರು ಗೋಡೆಗಳನ್ನು ಎಬ್ಬಿಸಲು ಸೂಕ್ತ ಪರಿಕರಗಳೂ ಲಭ್ಯವಾಗಿದ್ದು, ಹೆಚ್ಚು ಹೆಚ್ಚು ಜನಪ್ರಿಯವೂ ಆಗುತ್ತಿವೆ.
ಮನೆ ವಿನ್ಯಾಸದಲ್ಲಿ ಅಳವಡಿಕೆ
ಇನ್ನೊಂದು ವಿಷಯ ಗಮನಿಸಿ, ಕಿಟಕಿಗಳನ್ನು ನೇರವಾಗಿ ರಸ್ತೆಗೆ ಇಡದೆ, ಒಂದು ಕೋನದಲ್ಲಿ ಇರುವಂತೆ ಅಳವಡಿಸಿದರೆ, ಹೆಚ್ಚು ಸೌಂಡ್ ಪ್ರವೇಶಿಸಲು ಸಾಧ್ಯವಾಗದೆ ಮನೆ ಶಾಂತವಾಗಿರುತ್ತದೆ. ಇದೇ ರೀತಿಯಲ್ಲಿ ಮನೆಯ ಮುಂಬದಿಯ ಗೋಡೆಗಳು ರಸ್ತೆಗೆ ನೇರವಾಗಿ ಮುಖಾಮುಖೀಯಾಗಿರದೆ, ಒಂದು ಕೋನದಲ್ಲಿ ಇದ್ದರೂ ಕೂಡ, ರಸ್ತೆಯ ಹಾಗೂ ಇತರೆ ಸದ್ದು ಒಳಾಂಗಣವನ್ನು ಪ್ರವೇಶಿಸುವ ಸಾಧ್ಯತೆ ಕಡಿಮೆ ಇರುತ್ತದೆ.
“ಸಂತೆಯಲಿ ಮನೆಯ ಮಾಡಿ ಶಬ್ದಕ್ಕೆ ಅಂಜಿದರೆ ಎಂತಯ್ನಾ ಎಂಬ ಹಿರಿಯರ ಮಾತು’ ನಿಜವಾದರೂ, ಶಬ್ದ ಕಡಿಮೆ ಮಾಡಿ ಸಂತೆಯಲ್ಲಿ ಇದ್ದುಕೊಂಡೇ ಲಾಭ ಪಡೆಯುವುದರಲ್ಲಿ ತಪ್ಪೇನೂ ಇಲ್ಲ!
ಹೆಚ್ಚಿನ ಮಾತಿಗೆ ಫೋನ್ 98441 32826
ಆರ್ಕಿಟೆಕ್ಟ್ ಕೆ. ಜಯರಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.