ಕರಾವಳಿಯ ಏಳು ಮಂದಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ


Team Udayavani, Oct 31, 2017, 9:34 AM IST

31-4.jpg

ಮಂಗಳೂರು/ಉಡುಪಿ: ನಾಡಿನ ಸಾಧಕರಿಗೆ ರಾಜ್ಯ ಸರಕಾರ ನೀಡುವ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಕರಾವಳಿಯ ಏಳು ಜನ ಸಾಧಕರನ್ನು 2017ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನೃತ್ಯಗುರು ಉಳ್ಳಾಲ ಮೋಹನ ಕುಮಾರ್‌
ಉಳ್ಳಾಲ: ಪಂದನಲ್ಲೂರು ಭರತನಾಟ್ಯ ಪರಂಪರೆಯ ಹಿರಿಯ ನೃತ್ಯಗುರು, ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾತಿಲಕ ಉಳ್ಳಾಲ ಮೋಹನ ಕುಮಾರ್‌ ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಮಂಗಳೂರಿನ ಮಾಸ್ಟರ್‌ ವಿಟಲ್‌ ಅವರಿಂದ ನೃತ್ಯದ ಆರಂಭಿಕ ಶಿಕ್ಷಣ ಪಡೆದು ಕೇರಳದ ತ್ರಿಪುಣ ತುರೈ ದಿವಂತಗ ರಾಜನ್‌ ಅಯ್ಯರ್‌ ಅವ ರಲ್ಲಿ ನೃತ್ಯ ಶಿಕ್ಷಣ ಮುಂದುವರಿಸಿದ್ದರು. ತಮಿಳುನಾಡಿನ ಪ್ರಸಿದ್ಧ ಭರತ ನಾಟ್ಯ ಗುರು ಅಭಿನಯ ಶಿರೋಮಣಿ ದಿ| ರಾಜರತ್ನಂ ಪಿಳ್ಳೆ ಅವರಿಂದ ಪಂದ ನಲ್ಲೂರು ಶೈಲಿಯ ಭರತನಾಟ್ಯ ಶಿಕ್ಷಣ ಪಡೆದ ಬಳಿಕ ಉಳ್ಳಾಲದ ಕೊಲ್ಯದಲ್ಲಿ 1957ರಿಂದ “ನಾಟ್ಯನಿಕೇತನ’ ನೃತ್ಯ ಕೇಂದ್ರ ಪ್ರಾರಂಭಿಸಿ ಗುರುಶಿಷ್ಯ ಪರಂಪರೆ ಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಾಸ್ತ್ರೀಯ ನೃತ್ಯ ಶಿಕ್ಷಣವನ್ನು ನೀಡುವ ಮೂಲಕ ಅನೇಕ ಶಿಷ್ಯ ಪರಂಪರೆಯನ್ನು ಬೆಳೆಸಿದ ಕೀರ್ತಿ ಅವರದ್ದು.

ಸಾಧನೆಗೆ ಸಂದ ಪ್ರಶಸ್ತಿಗಳು
ಮೋಹನ ಕುಮಾರ್‌ ಅವರ ಭರತನಾಟ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ 1985ರಲ್ಲಿ ಕರ್ನಾಟಕ ಸರಕಾರದ ನೃತ್ಯ ಅಕಾಡೆಮಿಯ ನೃತ್ಯ ಪುರಸ್ಕಾರ, 1992ರಲ್ಲಿ  ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ “ಕರ್ನಾಟಕ ಕಲಾತಿಲಕ ಪ್ರಶಸ್ತಿ’, 2012ರಲ್ಲಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ “ಶಾಂತಲಾ ನಾಟ್ಯ ಪ್ರಶಸ್ತಿ’, 1989ರಲ್ಲಿ  ಸಾರ್ವಜನಿಕವಾಗಿ ನಾಟ್ಯಮೋಹನ ಬಿರುದಿನೊಂದಿಗೆ ಹುಟ್ಟೂರ ಸಮ್ಮಾನ ಸಹಿತ ಹಲವು ಪ್ರಶಸ್ತಿ, ಬಿರುದು ಸಮ್ಮಾನಗಳು ಸಂದಿವೆ. ಕಳೆದ 60 ವರ್ಷಗಳಿಂದ ಪಂದನಲ್ಲೂರು ಶೈಲಿಯ ಭರತನಾಟ್ಯವನ್ನು ಅನೇಕ ವಿದ್ಯಾರ್ಥಿಗಳಿಗೆ ಕಲಿಸಿಕೊಟ್ಟಿದ್ದು ದೇಶ-ವಿದೇಶದಲ್ಲಿ ನನ್ನ  ಶಿಷ್ಯಂದಿರು ನೃತ್ಯ ಶಿಕ್ಷಣ ಮುಂದುವರಿಸಿದ್ದಾರೆ. ಜಿಲ್ಲೆಯಲ್ಲಿ ಶೇ. 95ರಷ್ಟು ನನ್ನ ಶಿಷ್ಯರೇ ಈ ನೃತ್ಯ ಪರಂಪರೆಯನ್ನು ಮುಂದುವರಿಸಿದ್ದಾರೆ. ಶಾಂತಲಾ ಪ್ರಶಸ್ತಿಗಿಂತ ಮುಂಚೆಯೇ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕಿತ್ತು. ಆದರೆ ತಡವಾಗಿಯಾದರೂ ಗುರುತಿಸಿರುವುದು ಸಂತಸ ತಂದಿದೆ ಎಂದು ಉಳ್ಳಾಲ ಮೋಹನ ಕುಮಾರ್‌ ತಿಳಿಸಿದ್ದಾರೆ.

ಪ್ರಶಸ್ತಿ ಸರಸ್ವತಿಗೆ ಸಮರ್ಪಿಸುತ್ತೇನೆ: ವೈದೇಹಿ
ಉಡುಪಿ: 2017ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಲ್ಲಿ ಉಡುಪಿಯ ಸಾಹಿತಿ ವೈದೇಹಿ ಅವರು ಆಯ್ಕೆಯಾಗಿದ್ದಾರೆ. 

ರಾಜ್ಯೋತ್ಸವ ಪ್ರಶಸ್ತಿ ನನಗೆ ಅಕ್ಷರ ಲೋಕದಿಂದ ಬಂದಿರುವ ಪ್ರಶಸ್ತಿ. ನನ್ನ ಊರು, ಅಪ್ಪ-ಅಮ್ಮ, ನನ್ನ ಗಂಡ, ಹಿರಿಯ ಲೇಖಕಿಯರು, ಪಿ. ಲಂಕೇಶ್‌, ಕೆ.ವಿ. ಸುಬ್ಬಣ್ಣ ಅವರೆಲ್ಲರನ್ನು ನೆನಪಿಸಿಕೊಂಡು ಪ್ರಶಸ್ತಿಯನ್ನು ಸರಸ್ವತಿ ಮಾತೆಗೆ ಅರ್ಪಿಸುತ್ತೇನೆ ಎಂದು ಉದಯವಾಣಿಗೆ ತಿಳಿಸಿದ್ದಾರೆ. ಕುಂದಾಪುರ ಕನ್ನಡದ ಸಂವೇದನಾಶೀಲತೆಗೆ ಸಂದ ಗೌರವ ಈ ಪ್ರಶಸ್ತಿ. ಕೇವಲ ವ್ಯಕ್ತಿಯಾಗಿ ಅಲ್ಲ ಅನೇಕರ ಪ್ರತಿನಿಧಿಯಾಗಿ  ಸ್ವೀಕರಿಸು ತ್ತೇನೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗುವ ಬಗ್ಗೆ ನನಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಟಿ.ವಿ.ಯಲ್ಲಿ ನೋಡುವಾಗಲೇ ಗೊತ್ತಾಯಿತು ಎಂದು ತಿಳಿಸಿದರು. 

ವೈದೇಹಿ ಅವರು ಉಡುಪಿ ಜಿಲ್ಲೆಯ ಕುಂದಾಪುರದ ಐರೋಡಿ ಯವರು. ಕುಂದಾಪುರದ ಭಂಡಾರ್ಕಾರ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಅನೇಕ ಸಣ್ಣಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ, ಪ್ರಬಂಧ ಹೀಗೆ ವಿವಿಧ ಪ್ರಕಾರಗಳಲ್ಲಿ ಇವರ ಸಾಹಿತ್ಯ ಮೂಡಿಬಂದಿದೆ. ಅನೇಕ ಬರಹಗಳು ವಿವಿಧ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 

ಪ್ರಶಸ್ತಿಗಳು: ವೈದೇಹಿ ಅವರ ಕ್ರೌಂಚ ಪಕ್ಷಿಗಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಲ್ಲಿನಾಥನ ಧ್ಯಾನ ಕೃತಿಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಅಸ್ಪ ƒಶ್ಯರು ಕೃತಿಗೆ ಎಂ.ಕೆ. ಇಂದಿರಾ ಪುರಸ್ಕಾರ, ಹಗಲು ಗೀಚಿದ ನೆಂಟ ಕೃತಿಗೆ ಹೊಸದಿಲ್ಲಿಯ ಕಥಾ ಪುರಸ್ಕಾರ ಸೇರಿದಂತೆ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಪ್ರಶಸ್ತಿ, ಗೀತಾ ದೇಸಾಯಿ ದತ್ತಿನಿಧಿ ಪುರಸ್ಕಾರ ಮೊದಲಾದ ಪ್ರಶಸ್ತಿಗಳಿಗೆ ಅವರು ಪುರಸ್ಕೃತರಾಗಿದ್ದಾರೆ. 

ಅನಿವಾಸಿ ಉದ್ಯಮಿ ರೊನಾಲ್ಡ್‌  ಕುಲಾಸೊ
ಮಂಗಳೂರು: ರಾಜ್ಯ ಮಟ್ಟದ 2017ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಹೊರನಾಡು ವಿಭಾಗದಲ್ಲಿ ಆಯ್ಕೆಯಾಗಿರುವ ಖ್ಯಾತ ಅನಿವಾಸಿ ಉದ್ಯಮಿ ದುಬಾೖಯ ರೊನಾಲ್ಡ್‌ ಕುಲಾಸೊ ಅವರು ಮೂಲತಃ ಮಂಗಳೂರಿನ ಮೂಡಬಿದಿರೆ ಸಮೀಪದ ಹೊರಬೆಟ್ಟುವಿನ ಕುಲಾಸೊ ಕುಟುಂಬದವರು.

1975ರಲ್ಲಿ ಒಮಾನ್‌ನಲ್ಲಿ 8 ಕೊಲ್ಲಿ ರಾಷ್ಟ್ರಗಳಿಗೆ ಮತ್ತು ಐರೋಪ್ಯ ದೇಶ ಗಳಿಗೆ ಅಕೌಂಟೆಂಟ್‌ ಆಗಿ ವೃತ್ತಿ ಜೀವನವನ್ನು ಆರಂಭಿಸಿದ್ದರು. ಕ್ರಮೇಣ ಮುಖ್ಯ ಲೆಕ್ಕಾಧಿಕಾರಿ ಮತ್ತು ಆಡಳಿತ ಹಾಗೂ ಹಣಕಾಸು ನಿಯಂತ್ರಣಾಧಿಕಾರಿ ಹುದ್ದೆಗೇರಿದ್ದರು. ಆಥೆನ್ಸ್‌, ಗ್ರೀಸ್‌, ಜರ್ಮನಿಯ ಮ್ಯಾನೆಸ್‌ಮಾನ್‌, ಮಿಲಾನೊ ದೇಶದ ಸೈಪ್‌ಮೊಫ್‌, ಇಟೆಲಿ ದೇಶಗಳಲ್ಲಿನ ಪೆಟ್ರೋ ರಿಫೈನರಿ, ಗ್ಯಾಸ್‌ ಸಂಸ್ಕರಣಾಗಾರ, ಟೌನ್‌ಶಿಪ್‌, ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಒಳಗೊಂಡ 3 ಬಹುರಾಷ್ಟ್ರೀಯ ಕಾರ್ಪೊರೇಟ್‌ ಸಂಸ್ಥೆಗಳ ಸಮೂಹದ ಕಮರ್ಷಿಯಲ್‌ ಸಿಇಒ ಆಗಿ ಕಾರ್ಯ ನಿರ್ವಹಿಸಿದ್ದರು. ಈ ವೈವಿಧ್ಯ ಅನುಭವವು ಅವರಿಗೆ ಯಶಸ್ವೀ ಉದ್ಯಮಿಯಾಗಲು ನೆರವಾಗಿತ್ತು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಹಾಲಿವುಡ್‌ ಟೌನ್‌, ಸ್ವಿಸ್‌ ಟೌನ್‌, ಓವಲ್‌ ರೀಫ್‌ ಟೌನ್‌ಶಿಪ್‌ಗ್ಳನ್ನು ಅಭಿವೃದ್ಧಿ ಪಡಿಸಿದ್ದಲ್ಲದೆ 5 ಪಂಚತಾರಾ ಹೊಟೇಲ್‌ಗ‌ಳನ್ನು, ಕ್ಲರ್ಕ್‌ ಎಕೊಟಿಕಾ  ರೆಸಾರ್ಟ್‌ ಸ್ಥಾಪಿಸಿದ್ದಾರೆ. ಸಾಮಾಜಿಕವಾಗಿ ಜಾತಿ ಭೇದವಿಲ್ಲದೆ ಅನೇಕ  ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸಿದ್ದಾರೆ. ಮಂಗಳೂರಿನ ಮೂಡ ಬಿದಿರೆ  ಯಲ್ಲಿ  ಆದರ್ಶ ನಗರ ಕಾಲನಿ ನಿರ್ಮಿಸಿದ್ದಾರೆ. ಮಂಗಳೂರಿನಲ್ಲಿ  ಮದ್ಯ ವರ್ಜನ ಶಿಬಿರಗಳಿಗೆ ಪ್ರೋತ್ಸಾಹ ನೀಡಿದ್ದಲ್ಲದೆ ಲಿಂಕ್‌ ಕೌನ್ಸೆಲಿಂಗ್‌ ಮತ್ತು ಡಿ- ಅಡಿಕ್ಷನ್‌ ಸೆಂಟರ್‌ ಹಾಗೂ 60 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಫ್ರೇಜರ್‌ ಟೌನ್‌ ಪೊಲೀಸ್‌ ಠಾಣೆಗೆ ಆಧುನಿಕ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಕೊಟ್ಟಿದ್ದಾರೆ. 

ಅನೇಕ ಪ್ರಶಸ್ತಿಗಳು ಬಂದಿದ್ದು, 2017 ಜುಲೈನಲ್ಲಿ ಟೌಮ್ಸ್‌ ನೌ ಗ್ಲೋಬಲ್‌ ಎನ್‌ಆರ್‌ಐ ಪ್ರಶಸ್ತಿ ಲಭಿಸಿತ್ತು.

ಯಾವ ಕರ್ಮಕ್ಕಂತೆ ಪ್ರಶಸ್ತಿ?: ಡಾ| ಶಾನುಭಾಗ್‌
ಉಡುಪಿ: “ನಾನು ಯಾವುದಕ್ಕಾಗಿ ಹೋರಾಟ ನಡೆಸುತ್ತಿದ್ದೇನೋ ಆ ನ್ಯಾಯ ಸಿಗದೆ ಆರು ಜನರು ಮೃತಪಟ್ಟಿದ್ದಾರೆ. ಇನ್ನೂ 50-60 ಜನ ಹಿರಿಯ ನಾಗರಿಕರು ಆದೇಶಪತ್ರ ಹಿಡಿದುಕೊಂಡು ಅನುಷ್ಠಾನಕ್ಕಾಗಿ ಕಾಯುತ್ತಿದ್ದಾರೆ. ನಾನು ಯಾವ “ಕರ್ಮ’ಕ್ಕಾಗಿ ರಾಜ್ಯೋತ್ಸವ ಪ್ರಶಸ್ತಿ ಪಡೆಯುವುದು?’ – ಇದು ಮಾನವ ಹಕ್ಕುಗಳ ಹೋರಾಟಗಾರ ಡಾ| ರವೀಂದ್ರನಾಥ ಶಾನುಭಾಗ್‌ ಅವರ ಪ್ರಶ್ನೆ. 

ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗುವಾಗ ಅವರು ಕುಂದಾ ಪುರ ತಾಲೂಕು ಸಬ್ಲಾಡಿಯ ಭುಜಂಗ ಶೆಟ್ಟಿ ಮತ್ತಿತರ ಹಿರಿಯ ನಾಗರಿಕರ ಪ್ರಕರಣಗಳನ್ನು ಕಚೇರಿಯಲ್ಲಿ ಕುಳಿತು ಆಲಿಸುತ್ತಿದ್ದರು. ಪತ್ರಕರ್ತರು ಪ್ರಶಸ್ತಿಗೆ ಸಂಬಂಧಿಸಿ ಪ್ರತಿಕ್ರಿಯೆ ಕೇಳಲು ಕರೆ ನೀಡಿದರೆ ಅವರು ಕರೆ ಸ್ವೀಕರಿಸುವ ಸ್ಥಿತಿಯಲ್ಲಿರಲಿಲ್ಲ. ಬಹಳ ಹೊತ್ತಿನ ಅನಂತರ ಮತ್ತೆ ಕರೆ ನೀಡಿದಾಗ ಅವರು “ನಾನೀಗ ಕುಂದಾಪುರದ ಸಹಾಯಕ ಕಮಿಷನರ್‌ ಅವರಲ್ಲಿಗೆ ಹೋಗುತ್ತಿದ್ದೇನೆ. ಈ 90 ವರ್ಷದ ಮುದುಕರಿಗೆ ನ್ಯಾಯ ಕೊಡಿಸುವುದೋ? ಪ್ರಶಸ್ತಿ ತೆಗೆದುಕೊಳ್ಳುವುದೋ? ಒಂದು ವೇಳೆ ನಾನು ಪ್ರಶಸ್ತಿ ತೆಗೆದುಕೊಂಡರೆ ಸತ್ತವರ ಆತ್ಮಗಳಿಗೆ ಏನು ಅನ್ನಿಸಬಹುದು?’ ಎಂದು ವಿಷಾದದಿಂದ ಪ್ರಶ್ನಿಸಿದರು. 

“ನಾನು ಈಗಷ್ಟೇ ಪ್ರಶಸ್ತಿ ಸುದ್ದಿ ಕೇಳಿದೆ. ಈ ಕುರಿತು ನನ್ನನ್ನು ಯಾರೂ ಕೇಳಲಿಲ್ಲ. ಅಧಿಕೃತವಾಗಿ ನನಗೆ ಪ್ರಶಸ್ತಿ ಬಗ್ಗೆ ಮಾಹಿತಿ ಬಂದಿಲ್ಲ. ಎಷ್ಟೋ ಹಿರಿಯ ನಾಗರಿಕರ ಪರವಾಗಿ ಸಹಾಯಕ ಕಮಿಷನರ್‌ ಆದೇಶ ಮಾಡಿದ್ದರೂ ಆದೇಶ ಪಾಲನೆ ಆಗುತ್ತಿಲ್ಲ. ಉದಾಹರಣೆಗೆ ಮಂಗಳೂರಿನ ಪ್ರಮೀಳಾ ಮಿರಾಜRರ್‌ ಅವರ ಪರವಾಗಿ ಅವರಿಗೆ ಮನೆ ಬಿಡಿಸಿಕೊಡಲು ಸಹಾಯಕ ಕಮಿಷನರ್‌ ಆದೇಶ ಮಾಡಿ ಮೂರೂವರೆ ವರ್ಷವಾಗಿದೆ. ನಾನು ಪ್ರಶಸ್ತಿ ತೆಗೆದುಕೊಂಡರೆ ಇವರೆಲ್ಲರಿಗೂ ಅವಮಾನ ಮಾಡಿದಂತಾಗುತ್ತದೆ. ನನಗೆ ಲಕ್ಷವೂ ಒಂದೇ, ಕೋಟಿಯೂ ಒಂದೇ. ನಾನಿನ್ನೂ ನಿರ್ಧಾರ ಮಾಡಿಲ್ಲ. ಸೂಕ್ತ ಉತ್ತರವನ್ನು ಅಧಿಕೃತ ಮಾಹಿತಿ ಬಂದ ಬಳಿಕ ಕೊಡುವೆ’ ಎಂದು ಶಾನುಭಾಗ್‌ ತಿಳಿಸಿದರು. 

ಬಹುಮುಖ ವ್ಯಕ್ತಿತ್ವ, ಬಹುಮುಖಿ ಹೋರಾಟ
ಮೂಲತಃ ಫಾರ್ಮಾಸುಟಿಕಲ್‌ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಡಾ| ಶಾನುಭಾಗರು, ಕಾನೂನು ಕಾಲೇಜಿನಲ್ಲಿಯೂ ತರಗತಿ ನಡೆಸಿದವರು, ಮಣಿಪಾಲದಲ್ಲಿ ದೈಹಿಕ ಶಿಕ್ಷಣವನ್ನೂ ಬೋಧಿಸಿದವರು. ಇನ್ನೊಂದೆಡೆ ಪರಿಸರ ಹೋರಾಟವನ್ನು ನಡೆಸಿದ ಡಾ|ಶಾನುಭಾಗರು ಎಂಡೋಸಲ್ಫಾನ್‌ನಂತಹ ಹಲವು ಪರಿಸರ ವಿರೋಧಿ ಚಟುವಟಿಕೆಗಳ ವಿರುದ್ಧ ಕಾನೂನು ಹೋರಾಟ ನಡೆಸಿ ತಾರ್ಕಿಕ ಅಂತ್ಯವನ್ನು ಮುಟ್ಟಲು ಶ್ರಮಿಸಿದವರು. ಕೊರಗ ಸಮುದಾಯದ ಅಕ್ಕು ಮತ್ತು ಲೀಲಾ ಅವರಿಗೆ ಬರಬೇಕಾದ ಹಣದ ಬಗ್ಗೆ ಸರ್ವೋಚ್ಚ ನ್ಯಾಯಾಲಯದವರೆಗೂ ಹೋಗಿ ವಾದಿಸಿ ಗೆದ್ದ ಛಲದಂಕಮಲ್ಲ ಡಾ|ಶಾನುಭಾಗರು, ಸದಾ ಕಾನೂನಾತ್ಮಕ ಹೋರಾಟದಲ್ಲಿಯೇ ನಿರತರು. 

ಅಂಕಣ ಜಾಗೃತಿ
ಹಲವು ವರ್ಷ “ಉದಯವಾಣಿ’ಯಲ್ಲಿ “ಬಹುಜನ ಹಿತಾಯ’ ಅಂಕಣ ದಲ್ಲಿ ಲೇಖನಗಳನ್ನು ಬರೆದಿದ್ದರು. ಬಸೂÅರು ಬಳಕೆದಾರರ ವೇದಿಕೆ ಮೂಲಕ ಜನೋಪಯೋಗಿ ಪ್ರಕರಣಗಳನ್ನು ಕೈಗೆತ್ತಿಕೊಂಡು ಜನಹಿತ ಕಾಪಾಡಿದ ಅವರು, ಪ್ರಸ್ತುತ ಮಾನವ ಹಕ್ಕುಗಳ ಸಂರಕ್ಷಣಾ ಪ್ರತಿಷ್ಠಾನದ ಮೂಲಕ ಹಿರಿಯ ನಾಗರಿಕರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಸ್ವಂತ ಖರ್ಚಿನಲ್ಲಿ ಸಂಚರಿಸಿ ಜನಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. 

ವ್ಯಂಗ್ಯಚಿತ್ರಕಾರ ಎಚ್‌.ಬಿ. ಮಂಜುನಾಥ್‌
ಉಡುಪಿ: ಹಿರಿಯ ವ್ಯಂಗ್ಯಚಿತ್ರಕಾರ ಎಚ್‌.ಬಿ. ಮಂಜುನಾಥ್‌ ಅವರು ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 
ಮೂಲತಃ ಉಡುಪಿ ಜಿಲ್ಲೆ ಕೊಕ್ಕರ್ಣೆ ಸೂರಾಲು ಸಮೀಪದ ಕಡಂಗೋಡು ಶ್ಯಾನುಭೋಗರ ಮನೆತನಕ್ಕೆ ಸೇರಿದ ಮಂಜುನಾಥ್‌ ಹುಟ್ಟಿದ್ದು, ಬೆಳೆದದ್ದು, ನೆಲೆಸಿದ್ದು ದಾವಣಗೆರೆಯಲ್ಲಿ. ಸುಮಾರು ನಾಲ್ಕು ದಶಕಗಳಿಂದ ವ್ಯಂಗ್ಯಚಿತ್ರಕಾರ ರಾಗಿ ಸೇವೆ ಸಲ್ಲಿಸುತ್ತಿದ್ದು, ಕನ್ನಡಪ್ರಭ, ಪ್ರಜಾ ವಾಣಿ, ಸಂಯುಕ್ತ ಕರ್ನಾಟಕ, ಸುಧಾ ಮೊದ ಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯ ಕ್ಷೇತ್ರ ದಲ್ಲಿಯೂ ಕೈಯಾಡಿಸಿರುವ ಮಂಜುನಾಥ್‌ ಅವರು ಛಾಯಾಚಿತ್ರಗ್ರಾಹಕರೂ ಹೌದು. ಪ್ರಸ್ತುತ ನಿವೃತ್ತ ಜೀವನ ನಡೆಸುತ್ತಿದ್ದಾರೆ. ನಾಡಿನ ವಿವಿಧೆಡೆ ಇವರ ವ್ಯಂಗ್ಯಚಿತ್ರ ಪ್ರದರ್ಶನಗಳು ನಡೆದಿವೆ.

ಯಕ್ಷ  ಕಲಾವಿದ ಬಳ್ಕೂರು ಕೃಷ್ಣ ಯಾಜಿ
ಕುಮಟಾ: ಬಳ್ಕೂರು ಕೃಷ್ಣ ಯಾಜಿ ಅವರು ಯಕ್ಷಗಾನ ಕಲಾವಿದರ ಪೈಕಿ ಮುಂಚೂಣಿಯ ಕಲಾವಿದ. ತನ್ನದೇ ಶೈಲಿಯಲ್ಲಿ ಪಾತ್ರಗಳಿಗೆ ಜೀವ ತುಂಬುವ ಯಾಜಿ ಅವರಿಗೆ ಸ್ವತಃ ಯಾಜಿಯವರೇ ಸಾಟಿ ಎಂಬ ಹೆಗ್ಗಳಿಕೆ ಅವರದು.

ಹೊನ್ನಾವರ ತಾಲೂಕಿನ ಬಳ್ಕೂರಿನಲ್ಲಿ 1956ರಲ್ಲಿ ಜನಿಸಿದ ಕೃಷ್ಣ ಯಾಜಿ ಪ್ರೌಢಶಿಕ್ಷಣ ಪಡೆದ ಬೆನ್ನಿಗೇ ಇಡಗುಂಜಿ ಮೇಳದಲ್ಲಿ ಗೆಜ್ಜೆ ಕಟ್ಟಿದವರು. ಅನಂತರ ಒಂದು ವರ್ಷ ಅಮೃತೇಶ್ವರಿ ಮೇಳದಲ್ಲಿ ತಿರುಗಾಟ ಮಾಡಿ 1975ರಲ್ಲಿ ಸಾಲಿಗ್ರಾಮ ಮೇಳ ಸೇರಿ, ಬಳಿಕ 8 ವರ್ಷ ಇಡಗುಂಜಿ ಮೇಳದಲ್ಲಿ ಕಲಾಸೇವೆ ಮಾಡಿದವರು. ಪುನಃ 1990ರಲ್ಲಿ ಸಾಲಿಗ್ರಾಮ ಮೇಳ ಸೇರಿದ್ದರು. ಯಕ್ಷಗಾನದ ತಿರುಗಾಟದಲ್ಲಿರುವಾಗಲೇ ಕುಮಟಾ ತಾಲೂಕಿನ ವಾಲಗಳ್ಳಿಯಲ್ಲಿ ನೆಲೆ ನಿಂತರು.

ತನ್ನ ಸುಂದರ ಶರೀರ ಹಾಗೂ ಶಾರೀರದಿಂದ ಎಲ್ಲ ವೇಷಗಳಿಗೂ ನ್ಯಾಯ ಒದಗಿಸು ತ್ತಿದ್ದ ಯಾಜಿ ಅವರು ಪುಂಡು ವೇಷಗಳಿಗೂ ಉತ್ತಮ ಹೊಂದಾಣಿಕೆ. ನವರಸಗಳ ಅಭಿನಯ, ಗಾಂಭೀರ್ಯ, ಗತ್ತುಗಾರಿಕೆ ಅವರಿಗೆ ವರದತ್ತ. ಕೆರೆಮನೆ ಶಿವರಾಮ ಹೆಗಡೆ, ದಿ| ಚಿಟ್ಟಾಣಿ ರಾಮಚಂದ್ರ ಹೆಗಡೆ, ಕೆರೆಮನೆ ಶಂಭು ಹೆಗಡೆ, ಜಲವಳ್ಳಿ, ಕೊಂಡದಕುಳಿ, ಶಿರಳಗಿ ಭಾಸ್ಕರ ಜೋಶಿ, ಯಲಗುಪ್ಪ , ಹಳ್ಳಾಡಿ ಮುಂತಾದ ಹಿರಿ-ಕಿರಿಯ ಎಲ್ಲ ಕಲಾವಿದರೊಂದಿಗೆ ಅಭಿನಯಿಸಿ ಮನ್ನಣೆ ಗಳಿಸಿದವರು. ಒಟ್ಟಾರೆ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬೆಳೆದಿರುವ ಬಳ್ಕೂರು ಕೃಷ್ಣ ಯಾಜಿ ಯಕ್ಷಗಾನ ಸದಾ ಗುರುತಿಸುವಂಥ ವ್ಯಕ್ತಿತ್ವದವರು.

ಪ್ರಶಸ್ತಿ – ಪುರಸ್ಕಾರ: ತಾವೇ ಸೃಷ್ಟಿಸಿಕೊಂಡಿರುವ ಯಾಜಿ ಯಕ್ಷಮಿತ್ರ ಮಂಡಳಿಯಡಿ 2012ರಿಂದ ಯಕ್ಷಗಾನದ ಅಶಕ್ತ ಕಲಾವಿದರನ್ನು ಗುರುತಿಸಿ ಯಾಜಿ ಯಕ್ಷಮಿತ್ರ ಪ್ರಶಸ್ತಿಯ ಜತೆಗೆ ಒಂದಷ್ಟು ಸಹಾಯವನ್ನೂ ನೀಡಿ ಗೌರವಿಸುತ್ತಿದ್ದಾರೆ. ಕಲಾಸೇವೆಯ ಜತೆಗೆ ಸಾಮಾಜಿಕ ಬದ್ಧತೆಯನ್ನೂ ಪ್ರದರ್ಶಿಸುತ್ತಿರುವ ಅವರಿಗೆ ಕೆ.ಎಸ್‌. ನಿಡಂಬೂರು ಪ್ರಶಸ್ತಿ, ಸಾಲಿಗ್ರಾಮ ಮೇಳದಿಂದ ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿ, ಗೌರವಗಳು ಸಂದಿವೆ.

ಯಕ್ಷ  ಕಲಾವಿದ ಶಿವರಾಮ ಜೋಗಿ ಬಿ.ಸಿ. ರೋಡು
ಬೆಳ್ತಂಗಡಿ: ಹನುಮಗಿರಿ ಮೇಳದ ಕಲಾವಿದ, ಯಕ್ಷಗಾನದ ಪಾರಂಪರಿಕ ಕೊಂಡಿಯ ಕಲಾವಿದರಾದ ಶಿವರಾಮ ಜೋಗಿ ಬಾಲ್ಯದಿಂದಲೇ ಯಕ್ಷಗಾನ ಕಲಿಕೆಯ ಸರ್ವಾಂಗವನ್ನು  ಆರ್ಜಿಸಿಕೊಂಡ ಅನುಭವಿ.

ಗುರುವಪ್ಪ ಜೋಗಿ-ಸೀತಮ್ಮ ದಂಪತಿಗೆ 1941ರಲ್ಲಿ ಜನಿಸಿದ ಜೋಗಿ ತಮ್ಮ 15ನೇ ಪ್ರಾಯದಲ್ಲಿ ಕೂಡ್ಲು ಮೇಳ ಸೇರಿ ಬಳಿಕ ಮೂಲ್ಕಿ, ಸುರತ್ಕಲ್‌ ಮೇಳ ಸೇರಿದರು. ಬಾಲಗೋಪಾಲ ವೇಷದಿಂದ ತೊಡಗಿ ಅನಂತರ ಪುಂಡು ವೇಷಗಳಲ್ಲಿ ಮಿಂಚಿ ಅಪಾರ ಹೆಸರು ಗಳಿಸಿ ಅಭಿಮನ್ಯು, ಲೀಲೆಯ ಕೃಷ್ಣ, ಬಭುವಾಹನ, ಕುಶ, ಚಂಡ, ಭಾರ್ಗವ ಮುಂತಾದ ಪಾತ್ರಗಳಲ್ಲಿ  ಸೈ ಎನಿಸಿದರು. ಬಳಿಕ ಯಯಾತಿ, ಕುಮಾರ ರಾಮ, ಇಂದ್ರಜಿತು, ಹಿರಣ್ಯಾಕ್ಷ, ಹಿರಣ್ಯಕಶಿಪು, ಕಂಸ, ರಾವಣ ಪಾತ್ರಗಳಲ್ಲಿ ಮಿಂಚಿದರು.

ಪೌರಾಣಿಕ ಪ್ರಸಂಗಗಳನ್ನು ಪಾತ್ರೋಚಿತವಾಗಿ ನಿರ್ವಹಿಸುವ ಕೆಲವೇ ಕಲಾವಿದರಲ್ಲಿ ಅವರು ಒಬ್ಬರು. ಭೀಷ್ಮ, ಹನುಮಂತ, ಕರ್ಣ, ನಕ್ಷತ್ರಿಕ, ಇಂದ್ರಜಿತು, ಶಿಶುಪಾಲ, ಕೌಂಡ್ಲಿಕ, ವಿಶ್ವಾಮಿತ್ರ, ಕೌಶಿಕ, ಋತುಪರ್ಣ, ವಾಲಿ, ರಾವಣ, ದೇವವ್ರತ, ಭೃಗು, ಶನೀಶ್ವರ, ಪಾಪಣ್ಣ ವಿಜಯದ ಚಂದ್ರಸೇನ ಪಾತ್ರಗಳಲ್ಲಿ ಜೋಗಿಯವರು ಮೆರೆದರು.

ಪುರಾಣಗಳ ಬಗೆಗಿನ ಜ್ಞಾನ, ಸ್ವರಸಂಚಾರದ ಮೂಲಕ ಮೋಡಿ ಮಾಡುವ ಕಂಚಿನ ಕಂಠ, ಉತ್ತಮ ಅಂಗಸೌಷ್ಠವ, ಶಾಸ್ತ್ರೀಯವಾದ ಯಕ್ಷಗಾನ ನಾಟ್ಯ, ಶ್ರುತಿಬದ್ಧ ಅರ್ಥಗಾರಿಕೆ, ಸಂಗೀತದ ಜ್ಞಾನ ಜೋಗಿ ಅವರನ್ನು ಒಬ್ಬ ಸಮರ್ಥ ಕಲಾವಿದನನ್ನಾಗಿಸಿತು.

ತುಳುಪ್ರಸಂಗಗಳಲ್ಲಿ ಕೋಟಿ, ಚೆನ್ನಯ, ದೇವು ಪೂಂಜ, ಕಾಂತಬಾರೆ, ಕೋರ್ದಬ್ಬು ಮುಂತಾದ ಪಾತ್ರಗಳನ್ನು ಮೌಲಿಕವಾಗಿ ತೆರೆದಿಟ್ಟರು. ಕಾಲ್ಪನಿಕ ತುಳು ಪ್ರಸಂಗಗಳಲ್ಲಿ ನಾಯಕ ಹಾಗೂ ಪ್ರತಿನಾಯಕ ಪಾತ್ರಗಳೆರಡನ್ನೂ ಪ್ರದರ್ಶಿಸಬಲ್ಲ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಧರ್ಮಪತ್ನಿ ಲತಾ ಹಾಗೂ ಪುತ್ರಿ ಸೌಮ್ಯಾ ಹಾಗೂ ಪುತ್ರ ಸುಮಂತ್‌ ರಾಜ್‌ ಅವರೊಂದಿಗೆ ಬಿ.ಸಿ.ರೋಡ್‌ನ‌‌ಲ್ಲಿ ವಾಸಿಸುತ್ತಿದ್ದಾರೆ.

ಪ್ರಶಸ್ತಿಗಳು: ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಡಾ| ಕೀಲಾರು ಪ್ರಶಸ್ತಿ, ಡಾ| ಶೇಣಿ ಪ್ರಶಸ್ತಿ, ಕುರಿಯ ಪ್ರಶಸ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಶಸ್ತಿ ಈಗಾಗಲೇ ಬಂದಿವೆ.

ಟಾಪ್ ನ್ಯೂಸ್

ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ

Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

Manmohan Singh: ಮನಮೋಹನ್‌ ಸಿಂಗ್‌ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್‌ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Kulur: ಗೈಲ್‌ ಪೈಪ್‌ಲೈನ್‌ ಕಾಮಗಾರಿ; ಹೆದ್ದಾರಿ ಕುಸಿತ

3

Surathkal: ಬೇಕು ವ್ಯವಸ್ಥಿತ ಒಳಚರಂಡಿ; ಸೋರುತ್ತಿರುವ ವೆಟ್‌ವೆಲ್‌ಗ‌ಳಿಂದ ಮಾಲಿನ್ಯ

2

Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು

National Mourning: Postponement of Mangaluru Beach Festival

National Mourning: ಮಂಗಳೂರಿನ ಬೀಚ್‌ ಉತ್ಸವ ಮುಂದೂಡಿಕೆ

5

Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ;‌ ಪ್ರಕರಣ ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ

Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ

4

Kulur: ಗೈಲ್‌ ಪೈಪ್‌ಲೈನ್‌ ಕಾಮಗಾರಿ; ಹೆದ್ದಾರಿ ಕುಸಿತ

3

Surathkal: ಬೇಕು ವ್ಯವಸ್ಥಿತ ಒಳಚರಂಡಿ; ಸೋರುತ್ತಿರುವ ವೆಟ್‌ವೆಲ್‌ಗ‌ಳಿಂದ ಮಾಲಿನ್ಯ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.