ಮೋದಿ ಸರಕಾರಕ್ಕೆ ಜೀವ ದ್ರವ್ಯ: ಉದ್ದಿಮೆ ಸ್ನೇಹಿ ಅಂಕ ಜಿಗಿತ
Team Udayavani, Nov 2, 2017, 9:48 AM IST
ವಿಶ್ವ ಬ್ಯಾಂಕ್‌ನ ಉದ್ದಿಮೆ ಸ್ನೇಹಿ ರಾಷ್ಟ್ರಗಳ ಅಂಕಪಟ್ಟಿಯಲ್ಲಿ ಭಾರತ ಒಂದೇ ವರ್ಷದಲ್ಲಿ 30 ಅಂಕಗಳ ಜಿಗಿತ ಸಾಧಿಸಿರುವುದು ಸಂಭ್ರಮಿಸಬೇಕಾದ ವಿಚಾರ. ನೋಟು ರದ್ದು ಮತ್ತು ಜಿಎಸ್‌ಟಿಯಿಂದ ದೇಶದ ಆರ್ಥಿಕತೆಗೆ ಹೊಡೆತ ಬಿದ್ದಿದೆ ಎಂದು ವಾದಿಸುತ್ತಿರುವವರಿಗೆ ವಿಶ್ವಬ್ಯಾಂಕ್ ವರದಿ ಸರಿಯಾದ ಉತ್ತರ ನೀಡಿದೆ. ಒಟ್ಟು 190 ದೇಶಗಳಲ್ಲಿರುವ ಉದ್ದಿಮೆ ಸ್ನೇಹಿ ವಾತಾವರಣವನ್ನು ಅಭ್ಯಾಸ ಮಾಡಿ ವಿಶ್ವಬ್ಯಾಂಕ್ ಅಂಕಗಳನ್ನು ನೀಡುತ್ತದೆ. ಕಳೆದ ವರ್ಷ 130ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ 100ನೇ ಸ್ಥಾನಕ್ಕೆ ಜಿಗಿದಿದೆ.
ಇದೇ ಮೊದಲ ಬಾರಿಗೆ ಭಾರತ ವಿಶ್ವಬ್ಯಾಂಕ್ ರ್‍ಯಾಂಕಿಂಗ್‌ನಲ್ಲಿ 100ರ ಒಳಗಿನ ಸ್ಥಾನ ಪಡೆದುಕೊಂಡಿದೆ ಎನ್ನುವುದು ಗಮನಾರ್ಹ ಅಂಶ. ಕಳೆದ ವರ್ಷದ ರ್‍ಯಾಂಕಿಂಗ್‌ನಲ್ಲಿ 131ರಿಂದ 130ಕ್ಕೆ ಜಿಗಿದು ಬರೀ ಒಂದು ಅಂಕದ ಸಾಧನೆಯಷ್ಟೇ ಮಾಡಲು ಸಾಧ್ಯವಾಗಿತ್ತು. ಭಾರತ ಹೊರತುಪಡಿಸಿದರೆ ಏಶ್ಯಾದಲ್ಲಿ 100ರೊಳಗಿನ ಸ್ಥಾನದಲ್ಲಿರುವ ಚೀನ ಮತ್ತು ಭೂತಾನ್ ಮಾತ್ರ. ಈ ಎರಡು ದೇಶಗಳು ಕ್ರಮವಾಗಿ 78 ಮತ್ತು 75ನೇ ಸ್ಥಾನದಲ್ಲಿವೆ. ಸದ್ಯಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗಿರುವ ಚೀನಕ್ಕಿಂತ ನಾವು ಹೆಚ್ಚು ದೂರದಲ್ಲಿಲ್ಲ. ಅತಿ ಪ್ರಮುಖ ಸುಧಾರಣೆಗಳಲ್ಲಿ ಭಾರತ ಅತ್ಯುತ್ತಮ ಸಾಧನೆ ಮಾಡಿದೆ.
ಮೋದಿ ಸರಕಾರ ಬಂದ ಬಳಿಕ ಉದ್ಯಮ ವಲಯದಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ ಎನ್ನುವುದು ಒಪ್ಪಿಕೊಳ್ಳಬೇಕಾದ ವಿಚಾರ. ಪ್ರತಿ ವರ್ಷ ರ್‍ಯಾಂಕಿಂಗ್‌ನಲ್ಲಿ ಸುಧಾರಣೆ ಯಾಗುತ್ತಿರುವುದೇ ಇದಕ್ಕೆ ಸಾಕ್ಷಿ. 2014ರಲ್ಲಿ ನಮ್ಮ ರ್‍ಯಾಂಕಿಂಗ್ 142 ಆಗಿತ್ತು. ದಿವಾಳಿತನ ಪ್ರಕ್ರಿಯೆ, ತೆರಿಗೆ ಸುಧಾರಣೆ, ಉದ್ದಿಮೆ ಸ್ಥಾಪನೆ, ಸಂಪನ್ಮೂಲ ಮತ್ತು ಮೂಲಸೌಕರ್ಯ ಒದಗಣೆ ಈ ಮುಂತಾದ ಕ್ಷೇತ್ರ ಗಳಲ್ಲಿ ನಿಯಮಗಳನ್ನು ಸರಳ ಮತ್ತು ಕ್ಷಿಪ್ರಗೊಳಿಸಿರುವುದು ಭಾರತದ ದೈತ್ಯ ನೆಗೆತಕ್ಕೆ ಕಾರಣ. 15 ವರ್ಷಗಳ ಹಿಂದೆ ಭಾರತದಲ್ಲಿ ಹೊಸ ಉದ್ದಿಮೆಯೊಂದನ್ನು ಸ್ಥಾಪಿಸಲು 127 ದಿನ ಹಿಡಿಯುತ್ತಿತ್ತು. ಈ ಅವಧಿಯೀಗ 30 ದಿನಕ್ಕಿಳಿದಿದೆ. ಅಂತೆಯೇ ನಿಯಮಗಳನ್ನು ಸಾಕಷ್ಟು ಸರಳಗೊಳಿಸಲಾಗಿದ್ದು, ಸ್ಥಳೀಯ ಉದ್ಯಮಿಗಳು 12 ಪ್ರಕ್ರಿಯೆಗಳನ್ನು ಅನುಸರಿಸಿದರೆ ಸಾಕಾಗುತ್ತದೆ. ಒಟ್ಟಾರೆಯಾಗಿ 122 ಸುಧಾರಣೆಗಳನ್ನು ಜಾರಿಗೊಳಿಸಿದ್ದೇವೆ ಎಂದು ಸರಕಾರ ಹೇಳುತ್ತಿದೆ. ಈ ವರ್ಷವೇ ಇನ್ನೂ 90 ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿ ರ್‍ಯಾಂಕಿಂಗ್‌ನಲ್ಲಿ 50ನೇ ಸ್ಥಾನ ಪಡೆದುಕೊಳ್ಳುವ ಗುರಿಯಿರಿಸಿಕೊಳ್ಳಲಾಗಿದೆ. ಜಿಎಸ್‌ಟಿಯಲ್ಲಿರುವ ಕೆಲವೊಂದು ತೊಡಕುಗಳನ್ನು ನಿವಾರಿಸಿಕೊಂಡರೆ ಮುಂದಿನ ವರ್ಷ ರ್‍ಯಾಂಕಿಂಗ್‌ನಲ್ಲಿ ಇನ್ನಷ್ಟು ಮೇಲೇರುವುದು ಅಸಾಧ್ಯವಲ್ಲ. ಆದರೆ ಇದಕ್ಕಾಗಿ ಸರಕಾರ ಮತ್ತು ವಿಪಕ್ಷಗಳು ಪರಸ್ಪರ ಪೂರಕವಾಗಿ ಕೆಲಸ ಮಾಡಬೇಕಷ್ಟೆ. ಸುಧಾರಣಾ ಕ್ರಮಗಳು ಜಾರಿಯಾಗಬೇಕಿರುವುದು ಸಂಸತ್ತಿನಲ್ಲಿ. ಸಂಬಂಧಪಟ್ಟ ವಿಧೇಯಕಗಳು ಕ್ಷಿಪ್ರವಾಗಿ ಅನುಮೋ ದನೆ ಪಡೆದುಕೊಳ್ಳಲು ವಿಪಕ್ಷಗಳ ನೆರವು ಅನಿವಾರ್ಯ.
ಈ ವಿಚಾರದಲ್ಲಿ ರಾಜಕೀಯ ಬೇಧಭಾವಗಳನ್ನು ಬದಿಗಿಟ್ಟರೆ 50ನೇ ಸ್ಥಾನ ಅಸಾಧ್ಯವೇನಲ್ಲ. ಮುಂಬರುವ ಮಾರ್ಚ್‌ಗಾಗುವಾಗ ಕಟ್ಟಡ ನಿರ್ಮಾಣ ಅನುಮತಿ ನೀಡುವ ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್‌ಗೊಳಿಸಲು ಸರಕಾರ ಮುಂದಾಗಿದೆ. ಆಯ್ದ 500 ನಗರಗಳಲ್ಲಿ ಈ ಸೌಲಭ್ಯ ಜಾರಿಗೆ ಬರಲಿದ್ದು, ಇದು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡುವ ನಿರೀಕ್ಷೆಯಿದೆ. ಇದೇ ರೀತಿಯಲ್ಲಿ ಸಣ್ಣ ಹೂಡಿಕೆದಾರರ ಹಿತಾಸಕ್ತಿ ಸಂರಕ್ಷಿಸುವ ಮತ್ತು ವಿದೇಶಿ ಹೂಡಿಕೆಯನ್ನು ಪ್ರೋತ್ಸಾಹಿಸುವ ಹಲವು ಸುಧಾರಣಾ ಕ್ರಮಗಳ ಕುರಿತು ಚಿಂತನೆ ನಡೆಯುತ್ತಿದ್ದು ಇವುಗಳು ಕಾರ್ಯರೂಪಕ್ಕೆ ಬಂದರೆ ಆರ್ಥಿಕತೆ ಇನ್ನಷ್ಟು ಚೇತರಿಕೆ ಕಾಣಲಿದೆ. ಹಲವು ದೇಶೀಯ ಮತ್ತು ವಿದೇಶಿ ಕಂಪೆನಿಗಳು ಈ ಎರಡು ವರ್ಗವನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆ ಮಾಡಿ ಗೆದ್ದಿವೆ.
ಇದೇ ವೇಳೆ ನವ್ಯೋದ್ಯಮಗಳಿಗೆ ಇನ್ನಷ್ಟು ಉತ್ತೇಜನ ನೀಡುವ ಅಗತ್ಯವಿದೆ. ಹಲವು ನವ್ಯೋದ್ಯಮಗಳು ಶುರುವಾದ ಎರಡು-ಮೂರು ವರ್ಷಗಳಲ್ಲಿ ಮುಚ್ಚಿದ್ದರೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ವಿಲ್ಲ. ಏಕೆಂದರೆ ನವ್ಯೋದ್ಯಮಗಳು ಸದಾ ಈ ರಿಸ್ಕ್ ಹೊಂದಿರುತ್ತವೆ. ಎಲ್ಲ ದೇಶಗಳಲ್ಲೂ ಈ ರೀತಿ ಆಗುತ್ತದೆ. ಉದ್ದಿಮೆ ಸ್ನೇಹಿ ವಾತಾವರಣ ಹೆಚ್ಚೆಚ್ಚು ಹೂಡಿಕೆಯನ್ನು ಆಕರ್ಷಿಸುತ್ತದೆ. ಹೂಡಿಕೆ ಹೆಚ್ಚಿದಂತೆ ಆರ್ಥಿಕ ಚಟುವಟಿಕೆಗಳು ಹೆಚ್ಚಿ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಭಾರತಕ್ಕೆ ಸದ್ಯಕ್ಕೆ ತುರ್ತಾಗಿ ಬೇಕಾಗಿರುವುದು ಉದ್ಯೋಗಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Discipline: ಬದುಕಿನಲ್ಲಿ ಶಿಸ್ತಿರಲಿ
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.