ನೂರಾರು ಕೋಟಿ ಸೆಸ್ ಬಾಕಿ: ಗ್ರಂಥಾಲಯ ಅಭಿವೃದ್ಧಿ ಕುಂಠಿತ
Team Udayavani, Nov 3, 2017, 12:45 PM IST
ಬೆಂಗಳೂರು: ಬಿಬಿಎಂಪಿ ಸೇರಿದಂತೆ ನಾಡಿನ ಎಲ್ಲ ಸ್ಥಳೀಯ ಸಂಸ್ಥೆಗಳು ಗ್ರಂಥಾಲಯ ಇಲಾಖೆಗೆ ಸೇರಬೇಕಾದ ನೂರಾರು ಕೋಟಿ ರೂ. ಸೆಸ್ ಬಾಕಿ ಉಳಿಸಿಕೊಂಡಿದ್ದು, ಗ್ರಂಥಾಲಯ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂದು ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಆರೋಪಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಗುರುವಾರ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ಚನ್ನಪಟ್ಟಣದ ಪಲ್ಲವ ಪ್ರಕಾಶನ ಸಂಸ್ಥೆಗೆ ಅತ್ಯುತ್ತಮ ಪ್ರಕಾಶನ ಸಂಸ್ಥೆಗೆ ನೀಡುವ “ಅಂಕಿತ ಪುಸ್ತಕ ಪುರಸ್ಕಾರ’ ಪ್ರದಾನ ಮಾಡಿ ಮಾತನಾಡಿದರು.
ಸಾರ್ವಜನಿಕರು ಕಟ್ಟುವ ಕಂದಾಯದಲ್ಲಿ ಗ್ರಂಥಾಲಯ ಸೇರಿದಂತೆ ವಿವಿಧ ಇಲಾಖೆಗಳ ಸೆಸ್ ಕೂಡ ಸೇರಿದೆ. ಬೆಂಗಳೂರು ಮಹಾನಗರ ಪಾಲಿಕೆಯೊಂದೇ ಸುಮಾರು 60ರಿಂದ 70 ಕೋಟಿ ರೂ. ಗ್ರಂಥಾಲಯ ಸೆಸ್ ಪಾವತಿಸಬೇಕಿದೆ. ಆದರೆ, ಅದನ್ನು ನೀಡದೆ ವಿವಿಧ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ಅಭಿವೃದ್ಧಿ ಕುಂಠಿತ: ಇದೇ ರೀತಿ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳು, ಪುರಸಭೆ, ಪಟ್ಟಣ ಪಂಚಾಯತ್, ನಗರಸಭೆಗಳು ನೂರಾರು ಕೋಟಿ ರೂ.ಸೆಸ್ ಬಾಕಿ ಉಳಿಸಿಕೊಂಡಿವೆ. ಇದರಿಂದ ಓದುಗ ಸಂಸ್ಕೃತಿಗೆ ಪೂರಕವಾಗಿರುವ ಗ್ರಂಥಾಲಯಗಳ ಅಭಿವೃದ್ಧಿ ಕುಂಠಿತವಾಗುತ್ತಿದೆ. ಸರ್ಕಾರ ಈ ಬಗ್ಗೆ ಕ್ರಮಕೈಗೊಂಡು ಗ್ರಂಥಾಲಯಗಳಿಗೆ ಸೆಸ್ ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಒಳ್ಳೆಯ ಪುಸ್ತಕಗಳನ್ನು ಓದುಗರಿಗೆ ಒದಗಿಸುವ ಜವಾಬ್ದಾರಿ ಲೇಖಕರಷ್ಟೇ ಪ್ರಕಾಶಕರಿಗೂ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರಾಚೀನ ಕನ್ನಡ ಸಾಹಿತ್ಯವನ್ನು ತಪ್ಪು ತಪ್ಪಾಗಿ ಓದುವ, ಇಲ್ಲವೇ ತೆಗೆದು ಹಾಕುವಂತ ಕೆಲಸವನ್ನು ಪ್ರಾಧ್ಯಾಪಕರೇ ಮಾಡುತ್ತಿದ್ದಾರೆ. ವಿದ್ವತ್ ಕ್ಷೇತ್ರದಲ್ಲಿ ಇಂತಹ ಬೆಳವಣಿಗೆ ಅಪಾಯಕಾರಿ.
ಈ ಕುರಿತು ಹಳೆಗನ್ನಡ ಇಲ್ಲವೇ ಪ್ರಾಚೀನ ಕನ್ನಡ ಸಾಹಿತ್ಯ ಓದುವ, ಅರ್ಥ ಮಾಡಿಕೊಳ್ಳುವ ಮತ್ತು ಬೋಧಿಸುವುದರ ಕುರಿತು ವಿಶ್ವವಿದ್ಯಾಲಯಗಳು ಪ್ರಾಧ್ಯಾಪಕರಿಗೆ ತರಬೇತಿ ನೀಡುವುದು ಒಳ್ಳೆಯದು ಎಂದು ಸಲಹೆ ನೀಡಿದರು. ಅಧ್ಯಾಪಕರು ಕೈತುಂಬ ಸಂಬಳ ಪಡೆಯುವಾಗ ಪುಸ್ತಕಗಳನ್ನು ಖರೀದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಕಾಶಕರಿಗೆ ಒತ್ತಾಸೆಯಾಗಲಿ: ಪ್ರಕಾಶಕರು ಪುಸ್ತಕ ಪ್ರಕಟಿಸಿ ಸಂಕಷ್ಟದಲ್ಲಿ ಇರುತ್ತಾರೆ. ಅವರಿಗೆ ಆಸರೆಯಾಗಬೇಕಾದ ಸರ್ಕಾರ ಖರೀದಿಯನ್ನೇ ನಿಲ್ಲಿಸಿದಾಗ ಪ್ರಕಾಶಕರಿಗೆ ನಷ್ಟವಾಗುತ್ತದೆ. ಕನ್ನಡಿಗರಿಗೆ ಇನ್ನೂ ಓದುವ ಗುಣ ಬಂದಿಲ್ಲ. ಅವರು ಹೆಚ್ಚು ಹೆಚ್ಚು ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುವುದನ್ನು ಅಭ್ಯಾಸ ಮಾಡಿಕೊಳ್ಳುವ ಅಗತ್ಯವಿದೆ. ಹಾಗೆಯೇ ಸರ್ಕಾರ ಪ್ರಕಾಶಕರಿಗೆ ಒತ್ತಾಸೆಯಾಗಬೇಕು ಎಂದು ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.