ಸಮರ್ಪಿತ ಕಲಾಯಾನಕ್ಕೆ ರಾಜ್ಯೋತ್ಸವ ಬಾಗಿನ
Team Udayavani, Nov 3, 2017, 12:47 PM IST
ಎರಡು ವರುಷಗಳಾದವು. ಕಲ್ಲಡ್ಕ ಸನಿಹ ದೇವಿ ಮಹಾತ್ಮೆ ಆಟ. ಶಿವರಾಮ ಜೋಗಿಯವರ ಮತ್ತು ಶೀನಪ್ಪ ರೈಯವರ ಮಧು-ಕೈಟಭ ಜತೆಗಾರಿಕೆ. ಇಬ್ಬರಲ್ಲೂ ಪಾತ್ರಗಳು ಮೈಮೇಲೆ ಬಂದಿದ್ದುವು! ವಯಸ್ಸನ್ನು ಮರೆತ ಅಭಿವ್ಯಕ್ತಿ. ಪ್ರೇಕ್ಷಕರ ಜತೆ ಸಹಕಲಾವಿದರೂ ಬೆರಗು. ಎಪ್ಪತ್ತು ಮೀರಿದ ವಯೋಮಾನವನ್ನು ಪಾತ್ರಗಳು ಮರೆಸಿದ್ದುವು. ಇಬ್ಬರೂ ಮರೆತಿದ್ದರು! ಅನುಭವ ಕಟ್ಟಿಕೊಡುವ ರಂಗದ ಘಟನೆಗಳ ಹಿಂದೆ ಇಂತಹ ಬೆರಗುಗಳು ಸುತ್ತುತ್ತಿರುತ್ತವೆ. ಅಲ್ಲಿರುವುದು ಅಪ್ಪಟ ಯಕ್ಷಗಾನ ಮಾತ್ರ.
ಶಿವರಾಮ ಜೋಗಿ (76)ಯವರ ರಂಗಕಸುಬಿಗೆ ಆರು ದಶಕದ ಹೊಳಪು. ಹದಿನೈದನೇ ವರುಷದಲ್ಲಿ ಬಣ್ಣದ ಬದುಕಿಗೆ ಶ್ರೀಕಾರ. ಕೂಡ್ಲು, ಮೂಲ್ಕಿ ಮೇಳದಿಂದ ಗೆಜ್ಜೆಯ ಹೆಜ್ಜೆ. ಸುರತ್ಕಲ್ ಮೇಳವೊಂದರಲ್ಲೇ ನಲುವತ್ತು ತಿರುಗಾಟ. ಎಡನೀರು, ಹೊಸನಗರ ಮೇಳಗಳಲ್ಲಿ ವ್ಯವಸಾಯ. ಈ ವರುಷದಿಂದ ಹನುಮಗಿರಿ ಮೇಳ.
ಯಕ್ಷಗಾನವನ್ನು ನಂಬಿದ ಸುದೀರ್ಘ ದುಡಿಮೆಯ ಕಲಾ ಯಾನ. ಯಕ್ಷಗಾನದಲ್ಲಿ ದೊಡ್ಡ ಹೆಜ್ಜೆಯೂರಿದ ಉದ್ಧಾಮರೆಲ್ಲರ ಜತೆ ಪಾತ್ರ ನಿರ್ವಹಿಸಿದ ಹಿರಿಮೆ. ಅವರೆಲ್ಲರ ಜತೆಗಾರಿಕೆಯ ಪ್ರಭಾವದಿಂದ ದಟ್ಟ ಅನುಭವ. ಪಕ್ವವಾದ ಬೌದ್ಧಿಕತೆ. ಬಾಲ ಪಾತ್ರದಿಂದ ಖಳ ಪಾತ್ರದವರೆಗೆ ಬೆಳೆಯಲು ಹಿರಿಯರ ಮೇಲ್ಪಂಕ್ತಿ. ಕಲಿಕೆಯ ಮೊದಲಕ್ಷರದಿಂದ ಮೇಲೆದ್ದು ಬಂದ ಕಲಾ ಗಾರಿಕೆ. ಒಂದು ಕಾಲಘಟ್ಟದ ರಂಗಬದುಕಿನ ದನಿ.
ಸುರತ್ಕಲ್ ಮೇಳವು ಪೌರಾಣಿಕ ಪ್ರಸಂಗ ಗಳ ದೊಡ್ಡ ಚಾವಡಿ. ಅಗರಿ ಭಾಗವತರು, ಡಾ| ಶೇಣಿ, ದೊಡ್ಡ ಸಾಮಗರು, ತೆಕ್ಕಟ್ಟೆ, ಸಣ್ಣ ಸಾಮಗರು, ವಿಟ್ಲ ಜೋಷಿ, ಕ್ರಿಶ್ಚನ್ ಬಾಬು… ಹೀಗೆ ಹಲವಾರು ಹಿರಿಯರೊಂದಿಗೆ ಕಿರಿಯನಾಗಿ ಕಲಿತರು. ಹೆಚ್ಚು ಆವರಿಸಿದ್ದು ಶೇಣಿಯವರು. ಬಹುಶಃ ಅರ್ಥಗಾರಿಕೆಯ ಮೊದಲಕ್ಷರಕ್ಕೆ ಶೇಣಿಯವರೇ ಗುರು. ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಶೇಣಿಯೆಂಬ ಸಮುದ್ರದಿಂದ ಬೊಗಸೆ ನೀರು ಎತ್ತಿದರು. ಬೊಗಸೆಯ ಗಾತ್ರ ಸಣ್ಣದಾದರೂ ಅದರೊಳಗಿರುವುದು ಸಮುದ್ರದ ನೀರು ಎನ್ನುವ ಕೃತಜ್ಞತೆ ಸದಾ ಜಾಗೃತ.
ಸುರತ್ಕಲ್ ಮೇಳದ ಪ್ರಸಂಗಗಳೆಲ್ಲವೂ ಮೇಳಕ್ಕೆ ಹೇಗೆ ಹೆಸರು ತಂದಿದ್ದವೋ ಕಲಾವಿದರಿಗೂ ಅಷ್ಟೇ ಗೌರವ, ಮಾನ, ಕೀರ್ತಿ. ಮೇಳದ ಯಜಮಾನರಾದ ಕಸ್ತೂರಿ ಪೈ ಸಹೋದರರ ಆಪ್ತರಾದ ಜೋಗಿಯವರು ಮೇಳದ ಒಂದು ಭಾಗವೇ ಆಗಿದ್ದರು. ವಾಹನ ಚಾಲನೆಯಿಂದ ಉಸ್ತುವಾರಿ ತನಕ. ಅದು ಸಮರ್ಪಿತ ಮನಸ್ಸಿನ ಪ್ರತಿಫಲನ. ಮೇಳ ನಿಷ್ಠತೆಯ ಪ್ರತೀಕ. ಈ ರೀತಿಯ ದುಡಿಮೆಯಲ್ಲಿ ಬದ್ಧತೆಯ ಮೇಲ್ಮೆ.
“”ಮೇಳವು ಕಲಾವಿದರ ಪಾಲಿಗೊಂದು ಮನೆ. ಕಲಾವಿದರೆಲ್ಲರೂ ಕೂಡುಕುಟುಂಬದ ಸದಸ್ಯರಿದ್ದಂತೆ. ಮೇಳದ ದನಿಯೇ ಮನೆಯ ಯಜಮಾನ. ಅವರ ಮಾತೇ ಅಂತಿಮ” ಭಾಗವತ ಪದ್ಯಾಣ ಗಣಪತಿ ಭಟ್ಟರು ಹೇಳಿದ್ದರು. ಇದು ಸುರತ್ಕಲ್ ಮೇಳದ ಅರ್ಧ ಶತಮಾನದ ಯಶೋಯಾನದ ಗುಟ್ಟು. ಕಲಾವಿದರೆಲ್ಲರೂ ಮೇಳವನ್ನು ಪ್ರೀತಿಸುತ್ತಿದ್ದರು. ಜೋಗಿಯವರನ್ನು ಮಾತನಾಡಿಸಿದಾಗ ಇಂತಹ ಪ್ರೀತಿಯ ಮನಸ್ಸು ಅನಾವರಣಗೊಳ್ಳುತ್ತದೆ.
“ರಾಜಾ ಯಯಾತಿ’ ಪ್ರಸಂಗವು ಬಹುವಾಗಿ ಕಾಡಿದ ಪ್ರಸಂಗ. ಅದರಲ್ಲಿ ಜೋಗಿಯವರದು ಮೊದಲ ಭಾಗದ ಯಯಾತಿ. ಪುಂಡುವೇಷದಲ್ಲಿ ರಂಗಛಾಪನ್ನು ಸ್ಥಾಪಿಸುತ್ತಾ ಬಂದುದರಿಂದಲೇ ಇರಬೇಕು, ಯಯಾತಿಯ ಪ್ರವೇಶ ದಿಂದಲೇ ಪ್ರೇಕ್ಷಕರೊಳಗೆ ಪ್ರಸಂಗ ಇಳಿಯಲು ಆರಂಭವಾಗು ತ್ತದೆ. ಹದಗೊಂಡು ಪಕ್ವವಾದ ಪಾತ್ರ ವಿನ್ಯಾಸಗಳ ರಚನೆಗಳು ಸುರತ್ಕಲ್ ಮೇಳದ ಕೊಡುಗೆ. ಎಲ್ಲರೊಂದಿಗೆ ಬೆರೆಯುತ್ತಾ, ಅರ್ಥ-ವೇಷಗಳನ್ನು ನೋಡುತ್ತಾ, ಎಲ್ಲೂ ಅವರಂತಾಗದೆ ಸ್ವ-ರೂಪಿತವಾದ ಪಾತ್ರ ವೈಶಿಷ್ಟ್ಯವನ್ನು ಸ್ಥಾಪಿಸಿದ್ದಾರೆ.
“”ಸಾಧ್ವಿ ಸದಾರಮೆ, ಕಡುಗಲಿ ಕುಮಾರ ರಾಮ, ಬಪ್ಪನಾಡು ಕ್ಷೇತ್ರ ಮಹಾತ್ಮೆ, ಶನೀಶ್ವರ ಮಹಾತ್ಮೆ, ನಾಟ್ಯರಾಣಿ ಶಾಂತಲೆ, ಪಾಪಣ್ಣ ವಿಜಯ, ಸತಿ ಶೀಲವತಿ, ತುಳುನಾಡ ಬಲಿಯೇಂದ್ರ… ಪ್ರಸಂಗಗಳು ಸುರತ್ಕಲ್ ಮೇಳಕ್ಕೆ ತಾರಾಮೌಲ್ಯ ತಂದವುಗಳು. ಶೇಣಿಯವರ ನೆರಳಿನಲ್ಲಿ ಬೆಳೆದ ಶಿವರಾಮರ ಬಪ್ಪನ ಪಾತ್ರವು ವರ್ತಮಾನದಲ್ಲೂ ಪ್ರಸ್ತುತ. ಶೇಣಿಯವರನ್ನು ನೆನಪಿಸುವ ಅಭಿವ್ಯಕ್ತಿ. ಹಾಗಾಗಿ ಜೋಗಿಯವರು ಕಾಲಘಟ್ಟಗಳ ನಡುವಿನ ಸೇತು.
ಹಿರಣ್ಯಾಕ್ಷ, ರಕ್ತಬೀಜ, ಇಂದ್ರಜಿತು, ಭಾನುಕೋಪ, ಹಿರಣ್ಯಕಶ್ಯಪು, ರಾವಣ, ದುರ್ಜಯ… ಪಾತ್ರಗಳ ನಡೆ, ಅರ್ಥಗಾರಿಕೆಗಳಲ್ಲಿ ಭಿನ್ನ ಅಭಿವ್ಯಕ್ತಿ. ಕೆಲವೊಮ್ಮೆ ವಾಕ್ಯಗಳನ್ನು ಪೂರ್ಣ ಮಾಡುತ್ತಾ, ಕೆಲವೊಮ್ಮೆ ಅಲ್ಲಲ್ಲಿ ಅರ್ಧವಿರಾಮಗಳನ್ನು ಹಾಕಿಕೊಳ್ಳುತ್ತಾ, ಕೆಲವೊಮ್ಮೆ ಅಪೂರ್ಣ ಎಂದು ಭಾಸವಾಗುವ ಪದಪುಂಜಗಳ ಅರ್ಥಗಾರಿಕೆಯು ಜೋಗಿ ಶೈಲಿ ಎಂದೇ ಬಿಂಬಿತವಾಗಿದೆ. ತೀರಾ ಸರಳವಾಗಿ ಕಂಡರೂ ಅನುಕರಣೆಗೆ ಸಿಗದ ಪದಸರಣಿ, ವಾಕ್ಯಸರಣಿ. ಸಿಕ್ಕರೂ ಅದು ಜೋಗಿಶೈಲಿಯಿಂದ ಕಳಚಿಕೊಳ್ಳದಷ್ಟು ಬಂಧ.
ಪೌರಾಣಿಕ ಪ್ರಸಂಗಗಳಲ್ಲಿ ಪಾತ್ರ ನಿರ್ವಹಿಸುವ ಕಲಾವಿದರು ತುಳು ಪ್ರಸಂಗಗಳಲ್ಲಿ ಹಿಂಜರಿಯುತ್ತಾರೆ. ಅದು ತುಳು ಭಾಷೆಯ ಹಿಡಿತದ ಸಮಸ್ಯೆ. ತುಳುವಿನೊಂದಿಗೆ ಕನ್ನಡವನ್ನು ಬೆರೆಸಿ ಮಾತನಾಡುವುದು ತುಳುವಲ್ಲ. ನಮ್ಮ ವಾಹಿನಿಗಳ ರಸರುಚಿ ಕಾರ್ಯಕ್ರಮದಂತಾಗುತ್ತದೆ! ಭಾಷಾಸೌಂದರ್ಯಕ್ಕೆ ಪರ್ಯಾಯ ಪದ ರಾಮದಾಸ ಸಾಮಗರು. ಇವರ ಮತ್ತು ಹಿರಿಯ ಸಹ ಕಲಾವಿದರ ಅರ್ಥಗಾರಿಕೆಯ ಪ್ರಭಾವಗಳಿಂದಾಗಿ ಜೋಗಿಯವರ ತುಳು ಪ್ರಸಂಗಗಳ ಪಾತ್ರಗಳೆಲ್ಲವೂ ಮೆಚ್ಚುಗೆ ಪಡೆದುವು.
ಮೇಳದ ಔನ್ನತ್ಯದಿಂದ ಕಲಾವಿದರು ಬೆಳಗುವುದು ಒಂದು. ಕಲಾವಿದರ ಔನ್ನತ್ಯದಿಂದ ಮೇಳವು ವಿಜೃಂಭಿಸುವುದು ಇನ್ನೊಂದು. ಸುರತ್ಕಲ್ ಮೇಳದ ಯಶದ ಹಿಂದೆ ಕಲಾವಿದರ ಕೊಡುಗೆ ಅನನ್ಯ. ಇಲ್ಲಿ ಕೊಡುಗೆ ಎನ್ನುವುದಕ್ಕೆ ಮೇಳನಿಷ್ಠತೆಯೇ ಮಾನದಂಡ. ಮೇಳನಿಷ್ಠತೆಯು ಹೊಟ್ಟೆಪಾಡಿನದ್ದಲ್ಲ. ಅದು ಮನದ ಒಂದು ಸ್ಥಿತಿ. ಯಾರಲ್ಲಿ ಇಂತಹ ಸ್ಥಿತಿಯ ತೇವ ಆರುವುದಿಲ್ಲವೋ ಆತ ಕಲಾಯಾನದಲ್ಲಿ ಸೋಲುವುದಿಲ್ಲ. ಕಲೆಯೇ ಆತನ ಹೊಟ್ಟೆಯನ್ನು ತಂಪಾಗಿಸುತ್ತದೆ. ಜೋಗಿಯವರಲ್ಲಿರುವ ಮೇಳನಿಷ್ಠೆಯ ಸ್ವ-ಭಾವಗಳು ಎತ್ತರಕ್ಕೆ ಏರಿಸಿದೆ.
ಹರಿದು ಬಂದ ಕಾಲಘಟ್ಟಗಳಿಗೆ ಜೋಗಿ ಸಾಕ್ಷಿಯಾಗುತ್ತಾರೆ. ಹಲವಾರು ಉದ್ಧಾಮರ ರಂಗಾಭಿವ್ಯಕ್ತಿಯ ಮನಸ್ಸಾಗಿದ್ದಾರೆ. ರಂಗಪಲ್ಲಟಗಳನ್ನು ನೋಡುತ್ತಾ, ಅದಕ್ಕೆ ಸಿಲುಕದೆ ನಿಜಾರ್ಥದ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ಮಾಗಿದ ಅನುಭವದ ಮುಂದೆ ಸೊಂಟತ್ರಾಣ, ವಯೋಮಾನ ಗೌಣ ಎನ್ನುವುದನ್ನು ಸ್ಥಾಪಿಸಿದ್ದಾರೆ, ಸ್ಥಾಪಿಸುತ್ತಿದ್ದಾರೆ.
ತಲೆಮಾರು ಬದಲಾಗಿದೆ. ಯುವಕರ ಪ್ರವೇಶವಾಗಿದೆ. ಯುವಕರ ಮಧ್ಯೆ ಜೋಗಿಯವರಿಗೆ ಯುವಕರಾಗುವ ಮನಸ್ಸಿದೆ. ಬೀಸುಹೆಜ್ಜೆಗಳು ತಾವೇ ನಿಯಂತ್ರಿತವಾಗಿವೆ. ಒಂದು ಕಾಲಘಟ್ಟದಲ್ಲಿ ಬೀಸುಹೆಜ್ಜೆಗಳಿಗೆ ಪ್ರಶಂಸೆ ಮಾಡಿದ ಪ್ರೇಕ್ಷಕ ಈಗ ಮೌನ. ಬದುಕಿನ ಮುಕ್ಕಾಲು ಭಾಗ ದಾಟಿದ್ದಾರೆ ಎನ್ನುವ ಮನಃಸ್ಥಿತಿ ಪ್ರೇಕ್ಷಕರಿಗೂ ಗೊತ್ತಿದೆ. ರಂಗಕ್ಕೂ ಗೊತ್ತಿದೆ. ಉತ್ಸಾಹದ ಮನೋವೇಗವೇ ವೇಗವನ್ನು ನಿಯಂತ್ರಿಸಿದೆ. ಇಂತಹ ಮನಃಸ್ಥಿತಿಯಲ್ಲೂ ಜೋಗಿಯವರ ವೇಷಗಳು ಯೌವನದತ್ತ ಇಣುಕುತ್ತಿರುತ್ತವೆ. ಚಿಕ್ಕ ಪಾತ್ರಗಳನ್ನು ನಿರ್ವಹಿಸಿದರೂ ಜೋಗಿಯಂತಹ ಹಿರಿಯರು ಬಣ್ಣದ ಮನೆಯಲ್ಲಿ ಬೇಕು, ಅದನ್ನು ರಂಗವೂ ಅಪೇಕ್ಷಿಸುತ್ತದೆ.
ಕಲಾವಿದ ಎಷ್ಟು ವರುಷ ಮೇಳದ ತಿರುಗಾಟ ಮಾಡಿದ ಎನ್ನುವ ಲೆಕ್ಕವು ಬಯೋಡಾಟ ಬರೆಯಲು ಆದೀತು! ಆದರೆ ಮಾಡಿದ ತಿರುಗಾಟದಲ್ಲಿ ಆತನೊಳಗೆ ಯಕ್ಷಗಾನವು ಎಷ್ಟು ಇಳಿದಿದೆ ಎನ್ನುವ ಲೆಕ್ಕಣಿಕೆಯಲ್ಲಿ ಸಾಧನೆಯು ಗೌಪ್ಯವಾಗಿ ಮುದುಡಿರುತ್ತದೆ. ಅದೀಗ ಚಿಪ್ಪಿನಿಂದ ಹೊರಬಂದಿದೆ. ರಾಜ್ಯ ಸರಕಾರದ ಕದ ತಟ್ಟಿದೆ. ರಾಜ್ಯೋತ್ಸವ ಪ್ರಶಸ್ತಿಯ ಬಾಗಿನ ತಂದುಕೊಟ್ಟಿದೆ.
ನಾ. ಕಾರಂತ ಪೆರಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.