ನಿಯಮವಿದ್ದರೂ ಪೆಟ್ರೋಲ್ ಬಂಕ್‌ಗಳಲ್ಲಿ ಶೌಚಾಲಯ ವ್ಯವಸ್ಥೆಯಿಲ್ಲ
Team Udayavani, Nov 4, 2017, 12:54 PM IST
ಮಹಾನಗರ: ಮಂಗಳೂರು ನಗರ ಸೇರಿದಂತೆ ದೇಶದೆಲ್ಲೆಡೆ ಈಗ ‘ಸ್ವಚ್ಛ ಭಾರತ’ ಅಭಿಯಾನ ಪ್ರಗತಿಯಲ್ಲಿದೆ. ಆದರೆ, ಈ ಕನಸು ನಿಜವಾಗಿಯೂ ನನಸಾಗಬೇಕಾದರೆ, ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ -ನೈರ್ಮಲ್ಯ ಕಾಪಾಡಲು ಪೆಟ್ರೋಲ್ ಬಂಕ್‌ಗಳ ಪಾತ್ರವೂ ಹೆಚ್ಚಿನದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಪೆಟ್ರೋಲಿಯಂ ಸಚಿವಾಲಯದ ನಿಯಮಾನುಸಾರ ಪೆಟ್ರೋಲ್ ಬಂಕ್‌ಗೆ ಪರವಾನಗಿ ನೀಡಬೇಕಾದರೆ, ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆ ಕಲ್ಪಿಸಿರ ಬೇಕಾದದ್ದು ಕಡ್ಡಾಯ. ಆದರೆ, ನಿಯಮ ಪಾಲನೆಯ ವಾಸ್ತವಾಂಶವನ್ನು ತಿಳಿಯಲು ಸುದಿನ ಹೋದಾಗ ಕಂಡದ್ದೇ ಬೇರೆ.
ಒಂದೆಡೆ ಈ ನಿಯಮ ಬಹುಪಾಲು ಜನಸಾಮಾನ್ಯರಿಗೆ ಗೊತ್ತಿಲ್ಲ. ಮತ್ತೂಂದೆಡೆ ಕೆಲವು ಪೆಟ್ರೋಲ್ ಬಂಕ್ ಆಡಳಿತ ತಾವು ನಿರ್ಮಿಸಿದ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ನೀಡಲೂ ಹಿಂದೇಟು ಹಾಕುತ್ತಿವೆ. ನಗರಾಭಿವೃದ್ಧಿ ಸಚಿವಾಲಯ ‘ಪೆಟ್ರೋಲ್ ಬಂಕ್‌ಗಳಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಶೌಚಾಲಯ ನಿರ್ಮಾಣ ಕಡ್ಡಾಯ’ ಎಂಬ ಸುತ್ತೋಲೆ ಹೊರಡಿಸಿದರೂ ಹಲವೆಡೆ ಇದು ಪಾಲನೆಯಾಗುತ್ತಿಲ್ಲ. ಒಂದುವೇಳೆ, ಬಂಕ್ ಮಾಲಕರಿಂದ ಇದಕ್ಕೆ ಬೆಂಬಲ-ಉತ್ತೇಜನ ದೊರೆತರೆ ಕಡಲನಗರಿ ಸ್ವಚ್ಛತೆಯಲ್ಲಿ ಮತ್ತಷ್ಟು ಸಾಧನೆ ಮಾಡಬಹುದು.
ಈ ಮಧ್ಯೆ, ತಮ್ಮ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಿಸಿ ಕೇವಲ ಗ್ರಾಹಕರಲ್ಲದೇ, ಸಾರ್ವಜನಿಕರಿಗೆ ಬಳಸಲು ನೀಡಬೇಕೆಂದು ನಗರದಲ್ಲಿನ ಎಲ್ಲಾ ಪೆಟ್ರೋಲ್ ಬಂಕ್‌ಗಳಿಗೆ ಮಹಾನಗರ ಪಾಲಿಕೆ ಕಟ್ಟು ನಿಟ್ಟಿನ ಆದೇಶವನ್ನು ನೀಡಿದೆ. ಈ ಹಿಂದೆ ಕೇಂದ್ರ ಸರಕಾರವೂ ಅಧಿಸೂಚನೆ ಹೊರಡಿಸಿತ್ತು. ಆದರೆ, ಈ ಯಾವ ಆದೇಶವೂ ಬಳಕೆಯಾಗುತ್ತಿಲ್ಲ ಎಂಬುದೇ ವಾಸ್ತವ.
ಹೃದಯ ಭಾಗದಲ್ಲೇ ಅಧೋಗತಿ
ನಗರದ ಹೃದಯ ಭಾಗವಾದ ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣ ಬಳಿಯ ಪೆಟ್ರೋಲ್ ಬಂಕ್ ಕಥೆ ಇದು. ಜನನಿಬಿಡ
ಪ್ರದೇಶವಾದ ಇಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅದರಲ್ಲಿ ಅನೇಕ ವಾಹನಗಳು ಇಂಧನ ತುಂಬಿಸಲು ಇಲ್ಲಿಗೆ ಬರುತ್ತವೆ.ಆದರೆ ಈ ಪೆಟ್ರೋಲ್ ಬಂಕ್ ನಲ್ಲಿ ಸೂಕ್ತ ಶೌಚಾಲಯದ ವ್ಯವಸ್ಥೆಯಿಲ್ಲ.ಇಕ್ಕಟ್ಟಾದ ಜಾಗದಲ್ಲಿ ಈ ಬಂಕ್ ಇದೆ. ಹೆಸರಿಗಷ್ಟೇ ಚಿಕ್ಕದೊಂದು ಶೌಚಾಲಯವಿದ್ದರೂ ಅದನ್ನು ಉಪಯೋಗಿಸುವ ಭಾಗ್ಯ ಯಾರಿಗೂ ಇಲ್ಲ. ಅಂದರೆ, ಇಲ್ಲಿಯವರೆಗೆ ಅದನ್ನು ಸಾರ್ವಜನಿಕರ ಬಳಕೆಗೆ ಕೊಟ್ಟ ಪ್ರಸಂಗವೇ ಇಲ್ಲ ಎನ್ನುತ್ತಾರೆ ಸ್ಥಳೀಯರು. ಇಲ್ಲಿಯ ಸಿಬಂದಿ,’ಕೆಲವು ತಿಂಗಳಿನಿಂದ ಶೌಚಾಲಯ ಬಳಕೆಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಸಾರ್ವಜನಿಕರ ಬಳಕೆಗೆ ನೀಡುತ್ತಿಲ್ಲ’ ಎನ್ನುತ್ತಾರೆ.
ಅದೇ ರೀತಿ, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಂತೂರು ವೃತ್ತದಿಂದ ಕೂಳೂರು ಕಡೆಗೆ ಹೋಗುವ ದಾರಿಯಲ್ಲಿ ಅನೇಕ ಪೆಟ್ರೋಲ್ ಬಂಕ್‌ಗಳು ಇವೆ. ಇವುಗಳಲ್ಲಿ ಕೆಲವೆಡೆ ಮಾತ್ರ ಶೌಚಾಲಯ ವ್ಯವಸ್ಥೆಯಿದೆ. ಆದರೆ, ಎಲ್ಲ ಕಡೆ ಗ್ರಾಹಕರಿಗೆ ಮೀಸಲಾಗಿದ್ದು, ಇತರೆ ಸಾರ್ವಜನಿಕರು ಬಳಸದಂತೆ ನಿರ್ಬಂಧಿಸಲಾಗಿದೆ.
ಶೌಚಾಲಯವಿದೆ; ನೀರಿಲ್ಲ
ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ನಿಯಮ ಪಾಲನೆ ಕೇವಲ ಕಾಟಾಚಾರಕ್ಕೆ ಎಂಬಂತಿದೆ. ಕೆಲವಡೆ ಶೌಚಾಲಯಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಶೌಚಾಲಯದ ಒಳಗೆ ಬಕೆಟ್‌ಗಳನ್ನೂ ಇಟ್ಟಿಲ್ಲ. ಕೆಲವು ಶೌಚಾಲಯದ ನಿರ್ವಹಣೆ ತೀರಾ ಕಳಪೆಯಾಗಿದೆ. ಇನ್ನೂ ಕೆಲವೆಡೆ ಹಾಕಿದ ಬೀಗ ತೆಗೆದೇ ಇಲ್ಲ.
ಸರಕಾರದ ನಿಯಮದ ಪ್ರಕಾರ ಯಾವುದೇ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರ ಹೊರತಾಗಿಯೂ ಮಹಿಳೆಯರಿಗೆ, ಪುರುಷರಿಗೆ ಮತ್ತು ಅಂಗವಿಕಲರಿಗೆ ಪ್ರತ್ಯೇಕವಾದ ಶೌಚಾಲಯವನ್ನು ನಿರ್ಮಿಸಬೇಕು. ಅದರಂತೆ ಕೆಲ ಪೆಟ್ರೋಲ್ ಬಂಕ್‌ಗಳಲ್ಲಿ ಒಂದೇ ಶೌಚಾಲಯಕ್ಕೆ ಮಹಿಳೆಯರಿಗೆ ಮತ್ತು ಪುರುಷರಿಗೆಂದು ಪ್ರತ್ಯೇಕ ನಾಮಫಲಕ ಅಳವಡಿಸಲಾಗಿದೆಯಷ್ಟೆ.
ಅಧಿನಿಯಮ ಏನು ಹೇಳುತ್ತೆದೆ?
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಬಯಲು ಮಲವಿಸರ್ಜನೆ ಮುಕ್ತ ನಗರಗಳನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಕೇಂದ್ರ ನಗರಾಭಿವೃದ್ಧಿ ಶೌಚಾಲಯವು ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ, ಎಲ್ಲ ಪೆಟ್ರೋಲ್ ಬಂಕ್‌ಗಳಲ್ಲಿ ಕಡ್ಡಾಯವಾಗಿ ಮಹಿಳೆಯರಿಗೆ, ಪುರುಷರಿಗೆ ಮತ್ತು ಅಂಗವಿಕಲರಿಗೆ ಪ್ರತ್ಯೇಕವಾದ ಶೌಚಾಲಯವನ್ನು ನಿರ್ಮಿಸಬೇಕು. ಅಲ್ಲದೆ ಈ ಶೌಚಾಲಯವನ್ನು ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು. ಒಂದು ವೇಳೆ ನಿಯಮವನ್ನು ಗಾಳಿಗೆ ತೂರಿದರೆ ಮೊದಲ ಹಂತದಲ್ಲಿ 15 ಸಾವಿರ ಬಳಿಕ 20 ಸಾವಿರ ರೂ., 30 ಸಾವಿರ ರೂ. ದಂಡ ವಿಧಿಸಬಹುದು. ಅನಂತರವೂ ನಿಯಮ ಪಾಲಿಸದಿದ್ದರೆ ಪರವಾನಿಗೆ ರದ್ದುಗೊಳಿಸುವ ಅಧಿಕಾರ ಸರಕಾರಕ್ಕಿದೆ.
ಎಲ್ಲೆಲ್ಲಿ ರಿಯಾಲಿಟಿ ಚೆಕ್
ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಪಡೀಲ್‌ನಿಂದ ಪಣಂಬೂರು ನಡುವಣ ಕೂಳೂರು ಜನತಾ ಪೆಟ್ರೋಲ್ ಬಂಕ್, ರಿಲಾಯನ್ಸ್ ಪೆಟ್ರೋಲ್ ಬಂಕ್, ಜೆಬಿ ಹೈವೇ ಸರ್ವಿಸ್ ಪೆಟ್ರೋಲ್ ಬಂಕ್, ನಂತೂರು ನಗರದ ಪೆಟ್ರೋಲ್ ಬಂಕ್‌ಗಳಲ್ಲಿ ಮತ್ತು ನಗರ ವ್ಯಾಪ್ತಿಯ ಮಲ್ಲಿಕಟ್ಟೆ ಪೆಟ್ರೋಲ್‌ಬಂಕ್, ಪಂಪ್‌ವೆಲ್ ಪೆಟ್ರೋಲ್ ಬಂಕ್, ಬಲ್ಮಠದ ಭಾರತ್ ಮತ್ತು ಎಚ್‌ಪಿ ಪೆಟ್ರೋಲ್ ಬಂಕ್, ಸ್ಟೇಟ್‌ಬ್ಯಾಂಕ್‌ನಲ್ಲಿನ ಪೆಟ್ರೋಲ್ ಬಂಕ್, ಪಿವಿಎಸ್ ಬಳಿ ಮತ್ತು ಕಾಪಿಕಾಡ್ ಜಂಕ್ಷನ್ ಬಳಿ ಇರುವಂತಹ ಪೆಟ್ರೋಲ್ ಬಂಕ್‌ಗಳಲ್ಲಿ ರಿಯಾಲಿಟಿ ಚೆಕ್ ನಡೆಸಿತ್ತು.
ನಿರ್ವಹಣೆಗೆ ಸೆಸ್
ಪೆಟ್ರೋಲ್‌ಬಂಕ್‌ಗಳಲ್ಲಿನ ಶೌಚಾಲಯ ನಿರ್ವಹಣೆಗೆ ಗ್ರಾಹಕರ ಜೇಬಿಗೇ ಕತ್ತರಿ ಬೀಳುತ್ತಿದೆ. ಪೆಟ್ರೋಲ್ ದರದಲ್ಲಿ
ಸುಮಾರು 4 ರಿಂದ 6 ಪೈಸೆಯಷ್ಟು ಶೌಚಾಲಯ ನಿರ್ವಹಣೆಗೆ ದರ ಕಡಿತವಾಗುತ್ತದೆ. ಸರಾಸರಿಯಂತೆ ಒಂದು ಪೆಟ್ರೋಲ್‌ಬಂಕ್‌ನಲ್ಲಿ ತಿಂಗಳಿಗೆ 1 ಲಕ್ಷ 10 ಸಾವಿರ ಲೀಟರ್ ಪೆಟ್ರೋಲ್ ಮಾರಾಟವಾಗುತ್ತದೆ. ಇದರಿಂದ ಸುಮಾರು 8,500 ಸಾವಿರದಷ್ಟು ಹಣ ಶೌಚಾಲಯ ನಿರ್ವಹಣೆ ಕರವಾಗಿ ಸಂಗ್ರಹವಾಗುತ್ತದೆ. ಆದರೆ ಕೆಲವು ಪೆಟ್ರೋಲ್ ಬಂಕ್‌ಗಳು ಶೌಚಾಲಯ ನಿರ್ಮಿಸದೇ ಈ ಸಂಗ್ರಹಿತ ಹಣವನ್ನು ತಮ್ಮ ಉದ್ದೇಶಕ್ಕೆ ಬಳಸುತ್ತಿವೆ.
ಕಾನೂನು ಉಲ್ಲಂಸಿದರೆ ಕ್ರಮ
ಕಾನೂನನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಪಾಲಿಕೆ ವ್ಯಾಪ್ತಿಯ ಎಲ್ಲ ಪೆಟ್ರೋಲ್ ಬಂಕ್‌ಗಳು ಕಾನೂನನ್ನು ಪಾಲನೆ ಮಾಡಬೇಕು. ಒಂದುವೇಳೆ ಉಲ್ಲಂಸಿದರೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
– ಕವಿತಾ ಸನಿಲ್, ಮೇಯರ್
ನಿಯಮ ಒಪ್ಪಲು ಸಾಧ್ಯವಿಲ್ಲ
ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ತುಂಬಿಸಲು ಬರುವವರಿಗೆ ಶೌಚಾಲಯ ವ್ಯವಸ್ಥೆ ನೀಡಲು ನಮ್ಮ ಅಭ್ಯಂತರವಿಲ್ಲ. ಆದರೆ, ಸಾರ್ವಜನಿಕರ ಉಪಯೋಗಕ್ಕೆ ವಿರೋಧವಿದೆ. ನಿತ್ಯವೂ ನೂರಾರು ಮಂದಿ ಸಾರ್ವಜನಿಕರು ಬಂಕ್‌ಗಳಲ್ಲಿನ ಶೌಚಾಲಯವನ್ನು ಬಳಸಿದರೆ ನಿರ್ವಹಣೆ ಕಷ್ಟವಾಗುತ್ತದೆ. ಒಂದು ವೇಳೆ ಸರ್ಕಾರವೇ ಶೌಚಾಲಯದ ನಿರ್ವಹಣೆಗೆ ಸಿಬ್ಬಂದಿ ನಿಯೋಜಿಸಿದರೆ ಅಭ್ಯಂತರವಿಲ್ಲ. ಪೆಟ್ರೋಲ್ ಬಂಕ್‌ನಿಂದ ಉಚಿತವಾಗಿ ನೀರು, ವಿದ್ಯುತ್ ನೀಡಲಾಗುವುದು.
– ಸತೀಶ್ ಕಾಮತ್,
ಅಧ್ಯಕ್ಷರು, ಮಂಗಳೂರು-ಉಡುಪಿ, ಪೆಟ್ರೋಲ್ ಮಾಲಕರ ಸಂಘ
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
IPL Auction: ಸಂಪೂರ್ಣ ಐಪಿಎಲ್ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್
Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.