ಹೃದಯಾರೋಗ್ಯಕ್ಕೆ 4 ಕೋಟಿ
Team Udayavani, Nov 5, 2017, 11:18 AM IST
ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಉಚಿತವಾಗಿ ಅಂಜಿಯೋ ಪ್ಲಾಸ್ಟ್ ಸ್ಪಂಟ್ಸ್ ಅಳವಡಿಕೆಗಾಗಿ ಎರಡು ಆಸ್ಪತ್ರೆಗಳಿಗೆ ಬಿಬಿಎಂಪಿಯಿಂದ ಅನುದಾನ ನೀಡಲಾಯಿತು.
ಶನಿವಾರ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಸಮ್ಮುಖದಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ 3.50 ಕೋಟಿ ರೂ. ಹಾಗೂ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 50 ಲಕ್ಷ ರೂ. ಅನುದಾನ ನೀಡಿದರು.
ಪಾಲಿಕೆಯ ವ್ಯಾಪ್ತಿಯಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವ ಬಡ ರೋಗಿಗಳು ಲಕ್ಷಾಂತರ ರೂ. ವೆಚ್ಚ ಮಾಡಲಾಗದೆ ತೊಂದರೆ ಅನುಭವಿಸವುದನ್ನು ತಪ್ಪಿಸಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಿಸಲಾಗಿತ್ತು. ಅದರಂತೆ ಉಚಿತ ಚಿಕಿತ್ಸೆ ನೀಡುವ ಸಂಬಂಧ ಬಿಬಿಎಂಪಿ ಶುಕ್ರವಾರ ಆಸ್ಪತ್ರೆಯ ಮುಖ್ಯಸ್ಥರ ಸಮ್ಮುಖದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ನಗರದ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶದಿಂದ ಬಿಬಿಎಂಪಿ ಬಜೆಟ್‌ನಲ್ಲಿ 4 ಕೋಟಿ ರೂ. ಘೋಷಿಸಲಾಗಿತ್ತು. ಅದರಂತೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.
2017-18ನೇ ಸಾಲಿನಲ್ಲಿ ನಗರದ 400 ಅರ್ಹ ಬಡ ಫಲಾನುಭವಿಗಳು ಯೋಜನೆ ಅಡಿ ಚಿಕಿತ್ಸೆ ಪಡೆಯಲಿದ್ದಾರೆ. ಇಂತಹ ಯೋಜನೆ ಜಾರಿಗೊಳಿಸಿದ ಸ್ಥಳೀಯ ಸಂಸ್ಥೆ ಎಂಬ ಹೆಗ್ಗಳಿಕೆ ಬಿಬಿಎಂಪಿ ಪಾತ್ರವಾಗಿದ್ದು, ಇತರೆ ರಾಜ್ಯಗಳ ಸ್ಥಳೀಯ ಸಂಸ್ಥೆಗಳು ಸಹ ಇಂತಹ ಕಾರ್ಯಕ್ರಮ ಜಾರಿಗೊಳಿಸುವ ಕುರಿತು ಪಾಲಿಕೆಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ವೇಳೆ ಸಚಿವ ಆರ್.ರೋಷನ್ ಬೇಗ್, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್, ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಸಿ.ಎಸ್.ಮಂಜುನಾಥ್ ಹಾಜರಿದ್ದರು.
ಫಲಾನುಭವಿಗಳು ಯಾರು?
ಅಶಕ್ತರು, ಅಸಹಾಯಕ ವೃದ್ಧರು, ಆರ್ಥಿಕವಾಗಿ ಹಿಂದುಳಿದವರು, ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ವಲಸೆ ಬಂದವರು, ಬೀದಿ ಬದಿ ವ್ಯಾಪಾರಿಗಳು, ಕಸ ಆಯುವವರು, ಅನಾಥರು, ನಿರ್ಗತಿಕರು, ಕೊಳಚೆ ಪ್ರದೇಶದ ನಿವಾಸಿಗಳು.
ಉಚಿತ ಚಿಕಿತ್ಸೆ ಪಡೆಯುವುದು ಹೇಗೆ?
-ಹೃದಯ ಸಂಬಂಧಿ ಚಿಕಿತ್ಸೆ ಪಡೆಯುವ ಕುರಿತು ವೈದ್ಯರಿಂದ ಪತ್ರ ಪಡೆಯಬೇಕು.
-ತಾವಿರುವ ವಾರ್ಡ್‌ನ ಪಾಲಿಕೆ ಸದಸ್ಯರಿಂದ ಶಿಫಾರಸ್ಸು ಪತ್ರ ಪಡೆದುಕೊಳ್ಳಬೇಕು.
-ಒಂದು ವಾರ್ಡ್‌ನಲ್ಲಿ 2 ರಿಂದ 3 ಜನರ ಚಿಕಿತ್ಸೆ ಸದಸ್ಯರು ಶಿಫಾರಸ್ಸು ಮಾಡಬಹುದು.
-ಎರಡು ಸ್ಪಂಟ್ಸ್‌ಗಳಿಗೆ ಬಿಬಿಎಂಪಿ ವತಿಯಿಂದ ಹಣ ನೀಡಲಾಗುತ್ತದೆ.
* ಒಂದು ಕರೋನರಿ/ಪೆರಿಪೆರಲ್ ಸ್ಟಂಟ್ಸ್ + ಕರೋನರಿ/ಪೆರಿಪೆರಲ್ ಅಂಜಿಯೋಪ್ಲಾಸ್ಟಿಗೆ 70 ಸಾವಿರ ರೂ.
* ಎರಡು ಕರೋನರಿ/ಪೆರಿಪೆರಲ್ ಸ್ಟಂಟ್ಸ್ + ಕರೋನರಿ/ಪೆರಿಪೆರಲ್ ಆಂಜಿಯೋಪ್ಲಾಸ್ಟಿಗೆ 90 ಸಾವಿರು ರೂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.