ಆಂಧ್ರದ ಕನ್ನಡ ಶಾಲೆ, ಸೇರದಿರಲಿ ಮೂಲೆ..!
Team Udayavani, Nov 7, 2017, 11:22 AM IST
ಪ್ರತಿ ವರ್ಷದಂತೆ ಈ ಬಾರಿಯ ರಾಜ್ಯೋತ್ಸವದ ಸಂದರ್ಭದಲ್ಲಿ ನಾಡು, ನುಡಿಯ ಏಳ್ಗೆಗಳು, ಸಮಸ್ಯೆಗಳ ಬಗ್ಗೆ ಸಹಜವಾಗಿ ಚರ್ಚೆಗಳಾದವು-ಆಗುತ್ತಿವೆ. ರಾಜ್ಯದೊಳಗೇ ಹಲವಾರು ಸಮಸ್ಯೆಗಳು ಕನ್ನಡಿಗರನ್ನು, ಕನ್ನಡ ನಾಡನ್ನು ಕಾಡುತ್ತಿದ್ದು ಅವುಗಳ ನಿವಾರಣೆಗೆ ಕರ್ನಾಟಕ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಆದರೆ ಇದರ ಜತೆಯಲ್ಲೇ, ಇತರ ರಾಜ್ಯಗಳ ಗಡಿ ಭಾಗಗಳಲ್ಲಿ ಕನ್ನಡಿಗರು ಅನುಭವಿಸುತ್ತಿರುವ ಅನಾಥ ಪ್ರಜ್ಞೆಯ ಸಮಸ್ಯೆಯೂ ಈಗ ಅಗಾಧವಾಗಿ ಬೆಳೆದಿದೆ. ಇವುಗಳಲ್ಲಿ ಪ್ರಮುಖವಾದುದು ಗಡಿಭಾಗಗಳಲ್ಲಿರುವ ಕನ್ನಡದ ವಿದ್ಯಾರ್ಥಿಗಳ, ಅಲ್ಲಿನ ಕನ್ನಡ
ಶಾಲೆಗಳ ಸಮಸ್ಯೆಗಳು.
ಸೌಲಭ್ಯ ವಂಚಿತ ಸ್ಥಿತಿ ಅನುಭವಿಸುತ್ತಿರುವ ಕರ್ನಾಟಕದ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು,ಕೇರಳಗಳ ಗಡಿಗಳಲ್ಲಿರುವ ಕನ್ನಡಿಗರಿಗೆ ಕೊಂಚ ಕರ್ನಾಟಕ ಸರ್ಕಾರದ ವಾತ್ಸಲ್ಯ, ಸೌಲಭ್ಯಗಳು ಸಿಕ್ಕಿವೆಯಾದರೂ, ಆಂಧ್ರಪ್ರದೇಶದೊಳಗಿನ ಕನ್ನಡ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇಂಥ ಸೌಲಭ್ಯ ಈವರೆಗೆ ಸಿಕ್ಕಿಲ್ಲ. ಈ ಬಗ್ಗೆ ಕರ್ನಾಟಕ ಸರ್ಕಾರದ ಗಮನ ಹರಿಸುವುದು ಇಂದಿನ
ಅವಶ್ಯಕತೆಗಳಲ್ಲೊಂದಾಗಿದೆ.
1956ರ ನವೆಂಬರ್‌ನಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ಅನೇಕ ವರ್ಷಗಳು ಕಳೆದ ನಂತರವೂ ಕರ್ನಾಟಕ-ಆಂಧ್ರಪ್ರದೇಶದ ಎರಡೂ ಗಡಿಗಳಲ್ಲಿ ತೆಲುಗನ್ನಡಿಗರು (ತೆಲುಗು-ಕನ್ನಡ ಎರಡೂ ಭಾಷೆ ಮಾತನಾಡಬಲ್ಲವರು) ಸಹಜವಾಗಿಯೇ ಇದ್ದಾರೆ. ಇವರಲ್ಲಿ ಅನೇಕರು ಕನ್ನಡ ಮೂಲದವರೇ ಆಗಿದ್ದು, ಕನ್ನಡವನ್ನು ಅಪ್ಪಟವಾಗಿ ಪ್ರೀತಿಸುವವರಾಗಿದ್ದಾರೆ. ಇವರಲ್ಲಿ ಕನ್ನಡ ಭಾಷೆ ಮಾತ್ರವಲ್ಲ, ಆಚಾರ-ವಿಚಾರ, ಸಂಸ್ಕೃತಿಯೂ ನೆಲೆನಿಂತಿದೆ. ಈ ಎಲ್ಲರೂ ಅತ್ಯಂತ ಆಪ್ತತೆಯಿಂದ ತಮ್ಮ ಮಕ್ಕಳನ್ನು ಈ ಭಾಗದಲ್ಲಿರುವ ಕನ್ನಡ ಶಾಲೆಗಳಿಗೇ ಸೇರಿಸುತ್ತಾರೆ.
ಆದರೆ, ಹೆತ್ತವರ ನಿರೀಕ್ಷೆಗೆ ತಕ್ಕಂತೆ ಇಲ್ಲಿನ ಕನ್ನಡ ಶಾಲೆಗಳು ಇಲ್ಲದಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.
ಹಿಂದಿನ ಆಂಧ್ರಪ್ರದೇಶದ ಗಡಿ ಜಿಲ್ಲೆಗಳಾದ ಮೆಹಬೂಬ್ ನಗರ, ಮೆದಕ್, ಹೈದರಾಬಾದ್, ಅನಂತಪುರಂ, ಕರ್ನೂಲುಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಕನ್ನಡ ಶಾಲೆಗಳಿವೆ. ಇವತ್ತಿಗೂ ಆಂಧ್ರದ ಗಡಿಯಂಚಿನ ಭಾಗಗಳಲ್ಲಿ ಕನ್ನಡ ಜೀವಂತವಾಗಿದೆ ಎನ್ನಲು ಈ ಶಾಲೆಗಳಲ್ಲಿ ಸುಮಾರು 1600 ಮಕ್ಕಳು ಓದುತ್ತಿರುವುದೇ ಸಾಕ್ಷಿ.
ಇದೀಗ, ಆಂಧ್ರ ವಿಭಜನೆ ನಂತರ ಆಂಧ್ರಪ್ರದೇಶಕ್ಕೆ ಸೇರಿದ ಎರಡು ಗಡಿ ಜಿಲ್ಲೆಗಳಾದ ಕರ್ನೂಲು, ಅನಂತಪುರಂ ಜಿಲ್ಲೆಗಳಲ್ಲಿ ಸುಮಾರು 65ಕ್ಕೂ ಹೆಚ್ಚು ಕನ್ನಡ ಶಾಲೆಗಳು ಇವೆ. ಈ ಹಿಂದಿದ್ದ ಹಲವಾರು ಶಾಲೆಗಳು ಸರ್ಕಾರದ ನಿರ್ಲಕ್ಷ್ಯದಿಂದಲೇ ಮುಚ್ಚಲ್ಪಟ್ಟಿವೆ. ಕನ್ನಡ ಶಾಲೆಗಳು ಎಂಬ ಆ ಸರ್ಕಾರಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಅನೇಕ ಶಾಲೆಗಳು ಅವಸಾನದ ಅಂಚಿನಲ್ಲಿವೆ. ಈಗಿರುವ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳ ವರ್ಗಾವಣೆ, ಬಡ್ತಿಗಾಗಿ ಈಗ ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ.
ಇಂಥ ಸಂದರ್ಭದಲ್ಲಿ ಈ ಕನ್ನಡ ಶಾಲೆಗಳಿಗೆ, ಅಲ್ಲಿನ ಸಿಬ್ಬಂದಿಗೆ ಹಾಗೂ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದ ನೈತಿಕ ಬೆಂಬಲ ಅತ್ಯಗತ್ಯವಾಗಿದೆ. ಹೊರರಾಜ್ಯದಲ್ಲಿದ್ದರೂ, ಇಲ್ಲಿ ಓದುವ ಮಕ್ಕಳ ಹಾಗೂ ಅವರನ್ನು ಕನ್ನಡ ಶಾಲೆಗಳಿಗೆ ಸೇರಿಸಿದ ಪಾಲಕರ ಅಭಿಮಾನ ಮುಕ್ಕಾಗಿಲ್ಲ. ಆದರೆ, ಇದನ್ನು ಕಾಪಾಡಿ ಪೋಷಿಸುವ ಇಚ್ಛಾಶಕ್ತಿ ಆಂಧ್ರ ಸರ್ಕಾರಕ್ಕೆ ಇಲ್ಲ. ಹಾಗಾಗಿ, ಕಾನೂನಾನ್ಮಕವಾಗಿ ಕರ್ನಾಟಕ ಸರ್ಕಾರ ತನಗೆ ಸಾಧ್ಯವಿರುವ ವ್ಯಾಪ್ತಿಯಲ್ಲಿ ಕನ್ನಡ ಶಾಲೆಗಳ ಜತೆಗೆ ಸಂಪರ್ಕ ಸಾಧಿಸಬೇಕು.
ಆಂಧ್ರ ಪ್ರದೇಶ ಸರ್ಕಾರದ ಜತೆ ಮಾತುಕತೆ ನಡೆಸಬೇಕು, ಹೊರ ರಾಜ್ಯಗಳ ಕನ್ನಡ ವಿದ್ಯಾರ್ಥಿಗಳ ವ್ಯಾಸಂಗ ಹಾಗೂ ಅವರ ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬೇಕು, ಹೊರ ರಾಜ್ಯಗಳಲ್ಲಿ ಭಾಷಾ ಅಲ್ಪಸಂಖ್ಯಾತರಾಗಿರುವ ಕನ್ನಡಿಗರಿಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಸೌಲಭ್ಯಗಳು ಸಿಗುವಂತೆ ಮಾಡುವುದು ಇಂದಿನ ಜರೂರತ್ತಾಗಿದೆ.
ಈ ಹಿಂದೆ, 2014ರಲ್ಲಿ ನೆರೆ ರಾಜ್ಯದ ಗಡಿಭಾಗದಲ್ಲಿರುವ ಕನ್ನಡ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಬೇಕಾದ ಪಠ್ಯ ಪುಸ್ತಕವನ್ನು ಕರ್ನಾಟಕ ಸರ್ಕಾರ ಉಚಿತವಾಗಿ ಸರಬರಾಜು ಮಾಡಬೇಕು ಎಂದು ಜಿ.ಒ. ಆದೇಶಿಸಿದೆ. ಅದು ಸಕಾಲದಲ್ಲಿ ತಲುಪುತ್ತಿಲ್ಲ. ಈ ಬಗ್ಗೆ ಕರ್ನಾಟಕ ಸರ್ಕಾರ ಕ್ರಮ ಕೈಗೊಳ್ಳಬೇಕು. ಕರ್ನಾಟಕ ಸರ್ಕಾರದಿಂದ ಸಿಗಬೇಕಾದ ಸಹಾಯಗಳನ್ನು
ಹೀಗೆ ಪಟ್ಟಿ ಮಾಡಬಹುದಾಗಿದೆ:
*ಈಗಾಗಲೇ, ಕೇರಳ, ಮಹಾರಾಷ್ಟ್ರ ಗಡಿ ಭಾಗದ ವಿದ್ಯಾರ್ಥಿಗಳನ್ನು ತನ್ನ ಗೆಜೆಟ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳೆಂದು ಪರಿಗಣಿಸಿ ಅವರಿಗೆ ಸೌಲಭ್ಯಗಳನ್ನು ಕರ್ನಾಟಕ ಸರ್ಕಾರ ನೀಡುತ್ತಿದೆ. ಆದರೆ, ಆಂಧ್ರ ಪ್ರದೇಶದ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಕ್ಕಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಉನ್ನತ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಸೇರಿದಂತೆ ಇತರ ಸಾರಿಗೆ ಸಂಬಂಧಿ ಪ್ರಯೋಜನ ಕೊಡಬೇಕು.
*ಕರ್ನಾಟಕದಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡಿಗ ವಿದ್ಯಾರ್ಥಿಗಳಿಗೆ ಸಿಗುವ ವಿದ್ಯಾರ್ಥಿ ವೇತನ, ಬೈಸಿಕಲ್, ಸಮವಸ್ತ್ರ ಮುಂತಾದ ಸೌಲಭ್ಯಗಳು ಗಡಿನಾಡಿನಲ್ಲಿ ಕಲಿಯುತ್ತಿರುವ ಈ ಕನ್ನಡ ಮಕ್ಕಳಿಗೆ ಸಿಗುವಂತಾಗಬೇಕು.
* ಆಂಧ್ರ ಸರ್ಕಾರದ ಸಹಯೋಗದೊಂದಿಗೆ, ಹತ್ತನೇ ತರಗತಿ ಮುಗಿಸುವ ಈ ವಿದ್ಯಾರ್ಥಿಗಳಿಗೆ ಗಡಿಭಾಗಗಳಲ್ಲೇ ಉನ್ನತ ಶಿಕ್ಷಣ ಮುಂದುವರಿಸಲು ಅನುಕೂಲವಾಗುವಂತೆ ಪದವಿ ಪೂರ್ವ, ಪದವಿ, ಐಟಿಐ, ಡಿಪ್ಲೋಮಾ ಮುಂತಾದ ವಿದ್ಯಾಸಂಸ್ಥೆಗಳನ್ನು ಕೊಡಬೇಕು. ಬಿ.ಎಡ್, ಡಿಎಡ್ ಎಂಎಡ್ ಸಂಸ್ಥೆಗಳನ್ನು ಸ್ಥಾಪಿಸಲು ಮುಂದಾಗಬೇಕು.
*ಗಡಿನಾಡ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಶೇ. 5ರಷ್ಟು ಮೀಸಲಾತಿ ಇದೆ. ಇದು ಕರ್ನಾಟಕದ ಎಲ್ಲಾ ಕಾಲೇಜುಗಳಲ್ಲಿ ಸಮರ್ಥವಾಗಿ ಅನುಷ್ಠಾನಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು.
*ಹೊರರಾಜ್ಯಗಳ ಕನ್ನಡ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉದ್ಯೋಗದಲ್ಲಿ ಶೇ. 5ರಷ್ಟು ಮೀಸಲಾತಿಯನ್ನು ಈಗಾಗಲೇ ನೀಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಈ ವರ್ಗದ ವಿದ್ಯಾರ್ಥಿಗಳು ಹೆಚ್ಚಾಗಿದ್ದು ಪೈಪೋಟಿ ಹೆಚ್ಚುತ್ತಿರುವ ಕಾರಣ ಈ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು.
* ಇತರೆ ರಾಜ್ಯಗಳಲ್ಲಿ ಓದುತ್ತಿರುವ ಕನ್ನಡ ವಿದ್ಯಾರ್ಥಿಗಳ ಜಾತಿ ಮೀಸಲಾತಿ ಮಾನದಂಡಗಳು ಆಯಾ ರಾಜ್ಯಗಳ ನಿಯಮಗಳಿಗೆ ಸಂಬಂಧಪಟ್ಟಂತೆ ಬೇರೆ ಬೇರೆಯಾಗಿರುತ್ತವೆ. ಆದ್ದರಿಂದ, ಇತರೆ ರಾಜ್ಯಗಳಲ್ಲಿ ಓದಿದ ಕನ್ನಡ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಉದ್ಯೋಗ
ಪಡೆಯುವಾಗ ಕೇಳಲಾಗುವ ಜಾತಿ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರಗಳಿಂದ ವಿನಾಯ್ತಿ ನೀಡಬೇಕು.
*ಕನ್ನಡಿಗರ ಮಕ್ಕಳು ಆರ್ಥಿಕ ತೊಂದರೆಗಳಿಂದಾಗಿ ಶಿಕ್ಷಣ ತೊರೆಯುವಂತಾಗಿ ಅಂಥ ಮಕ್ಕಳು ಬಾಲಕಾರ್ಮಿಕರಾಗುತ್ತಿದ್ದಾರೆ. ಆ ಮಕ್ಕಳ ಡ್ರಾಪ್ ಔಟ್ ತಪ್ಪಿಸಲು ಸರ್ಕಾರ ವಿಶಿಷ್ಠ ಕಾರ್ಯಯೋಜನೆ ರೂಪಿಸಬೇಕಿದೆ.
* ಕನ್ನಡ ಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅಲ್ಲಿನ ಕನ್ನಡಿಗರ ಆತ್ಮವಿಶ್ವಾಸ ಹೆಚ್ಚಿಸಲು ಕಾರ್ಯಕ್ರಮಗಳನ್ನು ರೂಪಿಸಬೇಕು.
*62ನೇ ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಾದರೂ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಮನವಿ.
ಗಿರಿಜಾಪತಿ,
ಶಿಕ್ಷಕರು, ಡಿ.ಹಿರೇಹಾಳ್ (ಆಂಧ್ರಪ್ರದೇಶ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.