ನಾಳೆ ನಿನ್ನ ಕಣ್ಣ ಬಣ್ಣದಲಿ ಕಾಮನಬಿಲ್ಲು ಮೂಡಲಿ
Team Udayavani, Nov 7, 2017, 11:38 AM IST
ನಿನ್ನ ನೆನಪುಗಳೊಂದಿಗೇ ನಾನು ಬದುಕಿಬಿಟ್ಟೆ ಎಂಬುದು ನಿಜ. ಆದರೆ, ಮತ್ತೆ ನಿನ್ನನ್ನು ಬಯಸಿ ಸನಿಹ ಬರುವಂಥ ಚೈತನ್ಯನನ್ನೊಳಗೆ ಜೊತೆಯಾಗಲೇ ಇಲ್ಲ. ನಿನ್ನ ಹಳೆಯ ಮಾತುಗಳ ನಿಷ್ಠುರತೆ ನನ್ನನ್ನು ಮೌನಕ್ಕೆ ದೂಡಿತ್ತು…
ಇಷ್ಟ ದೇವತೆ,
ಈಗಷ್ಟೇ ನಿನ್ನ ನೋಡಿದೆ. ಎದೆಯಲೊಂದು ನೆನಪ ಬೆಳಕಿನ ಬಿರುಗಾಳಿ ಸದ್ದೇ ಮಾಡದೆ, ಎದ್ದೆನೋ ಬಿದ್ದೆನೋ ಎನ್ನುವಂತೆ ಕಣೆಪ್ಪೆ ಮಿಟುಕಿಸುವಷ್ಟು ಗ್ಯಾಪಿನಲ್ಲಿ, ನೂರಾರು ವ್ಯಾಟ್‌ನ ಒಂಟಿ ಬಲ್ಬಿನ ಹೊಳಪಿನಂತೆ ಮಿಂಚಿ ಮರೆಯಾಯ್ತು. ಎದೆಯ ಶ್ವಾಸ ಚೀಲಗಳಿಗೆ ಎಷ್ಟೇ ಪ್ರಾಣವಾಯು ಎಳೆದುಕೊಂಡರೂ, ಒಂದು ಗುಕ್ಕೂ ನಿಲುಕದೆ ಎಂಥದ್ದೋ ಚಡಪಡಿಕೆ. ಅದೆಷ್ಟೋ ದಿನ ನೀ ಸಿಗಬಹುದೆಂಬ ಭ್ರಮೆಯಲ್ಲಿ ಕಾಯುತ್ತಿದ್ದೆ.
ಆಗೆಲ್ಲ ನೀನು ನಿರಾಸೆ ಮಾಡಿದ್ದೇ ಹೆಚ್ಚು. ಅಂತರಾಳದ ಭಾವಗಳಿಗೆ, ಮಾತುಗಳ ರಂಗನ್ನಾಗಲಿ, ಅಕ್ಷರಗಳ ಬಣ್ಣವನ್ನಾಗಲಿ ಕೊಟ್ಟು ನಿವೇದನೆಯ ಹಾದಿಯನ್ನು ಹುಡುಕಿಕೊಳ್ಳುವುದು ನನ್ನಿಂದ ಸಾಧ್ಯವಾಗಲೇ ಇಲ್ಲ. ಒಳಗೊಳಗೇ ಗೆಳೆತನದ ಗಡಿ ದಾಟಲಾಗದ ತಳಮಳವೇ ಕೊನೆಗೆ ಗೆಲ್ಲುತ್ತಿತ್ತು. ನಿನ್ನೊಂದಿಗೆ ಮಾತಾಡುವಾಗೆಲ್ಲಾ ನಾನು ಕಲ್ಪನಾ ಲೋಕದ ಗಗನದತ್ತ ಹೊರಟರೆ, ನೀನು ವಾಸ್ತವದ ನೆಲದತ್ತ ಇಳಿಯುತ್ತಿದ್ದೆ.
ಯಾರೋ ಪ್ರೇಮಿಗಳ ವಿಷಯ ಬಂತೆಂದರೆ ಸರ್ರನೆ ಸಿಡುಕುತ್ತಿದ್ದೆ. ನಂಬಿಕೆಯಿಟ್ಟ ಅಪ್ಪ- ಅಮ್ಮನಿಗೆ ಇವರು ಎಷ್ಟೆಲ್ಲಾ ದ್ರೋಹ ಬಗೀತಾರಲ್ವಾ ಅಂತ ಸಿಟ್ಟಾಗುತ್ತಿದ್ದೆ. ಆಗ ನನ್ನೆಲ್ಲ ಉತ್ಕಟತೆಗೆ ತಣ್ಣೀರು ಬಿದ್ದು, ಸುಮ್ಮನೆ ನಿನ್ನ ಮಾತುಗಳಿಗೆಲ್ಲ ಹೂಂಗುಟ್ಟುತ್ತಾ, ಒಳಗೆ ಬಚ್ಚಿಟ್ಟುಕೊಂಡ ಗುಟ್ಟಿಗೆ ಮತ್ತೂಂದು ದಪ್ಪನೆ ಹೊದಿಕೆ ಹೊದಿಸಿ ಮುಚ್ಚಿಟ್ಟು ತೆಪ್ಪಗಾಗಿಬಿಡುತ್ತಿದ್ದೆ.
ಅದೆಷ್ಟು ಚೆಂದ ಗೆಳತಿ ನೀನು… ಬೆಟ್ಟದಷ್ಟು ಕೆಲಸದ ನಡುವೆ ನನಗಾಗಿ ಸಮಯ ಹೊಂದಿಸಿಕೊಂಡು ಬರುತ್ತಿದ್ದೆ. ಅಪ್ಪನ ಕೋಪ, ಅಮ್ಮನ ಕಾಳಜಿ, ಅಣ್ಣನ ಕಣ್ಗಾವಲು, ತಂಗಿಯ ಚೇಷ್ಟೆ, ಮನೆಯ ಪರಿಸ್ಥಿತಿ… ಅವರಿಗೆಲ್ಲ ಊರುಗೋಲಿನಂತ ನಿನ್ನ ಅವಶ್ಯಕತೆ. ಎಲ್ಲವನ್ನೂ ನನ್ನೆದುರು ತೆರೆದಿಟ್ಟು ಮ ನೆ ಯ ಎಲ್ಲ ರ ಪಾತ್ರ ಪರಿ ಚ ಯ ಮಾಡಿ ಕೊ ಡು ತ್ತಿ ದ್ದೆ. ಒಂದೇ ಒಂದು ಕ್ಷಣಕ್ಕೂ ನಿನ್ನ ಕಣ್ಣಲ್ಲಿ ಗೆಳೆತನದ ಬಣ್ಣ ಬದಲಾಗಲೇ ಇಲ್ಲ.
ನಿನ್ನಂಥ ಗೆಳತಿಯನ್ನು ಕಳಕೊಳ್ಳುವ ಮನಸ್ಸೂ ಆಗದೆ, ನನ್ನೊಳಗಿನ ಒಲವನ್ನು ಹೇಳಿ ಕೊ ಳ್ಳು ವ ದಾರಿಯೂ ಕಾಣದೆ, ವಿಚಿತ್ರ ನರಳಿಕೆಯಲ್ಲೇ “ಮತ್ತೆ ಸಿಗೋಣ’ ಅಂತಲೇ ಕಾಲೇಜಿನ ಕೊನೆಯ ದಿನ ದೂರಾಗಿ ಹೋದೆವು. ಅದಾಗಿ ಈಗ ವರ್ಷಗಳೇ ಕಳೆದಿವೆ. ನಿನ್ನ ನೆನಪುಗಳಲ್ಲೇ ಕಳೆದರೂ ಮತ್ತೆ ನಿನ್ನನ್ನು ಬಯಸಿ ಸನಿಹ ಬರುವಷ್ಟು ಚೈತನ್ಯ ನನ್ನೊಳಗೆ ಒಗ್ಗೂಡಲೇ ಇಲ್ಲ. ನನ್ನ ನೆನಪಿನ ಹಾಳೆಗಳ ಮೇಲೆ ನಿನ್ನ ನಿಲುವುಗಳು ನೆಲೆಯಾಗಿ ಹೋಗಿದ್ದವು.
ನಿನ್ನ ಹಳೇ ಮಾತುಗಳ ನಿಷ್ಠುರತೆ ನನ್ನನ್ನು ಮೌನಕ್ಕೆ ದೂಡಿ ಸಮಾಧಾನಿಸುತ್ತಲೇ ಬಂದಿತ್ತು. ಆದರೆ, ಇವತ್ತು ನಿನ್ನನ್ನು ನೋಡಿದ ಘಳಿಗೆಯಲ್ಲಿ, ಹೊಸತೊಂದು ವಸಂತ ಬಂದಂತೆ ಮನದ ಕೋಗಿಲೆ ಹಾಡಿದೆ. ಬದುಕಿನ ಗಾಯಕ್ಕೆ ಕಾಲಕ್ಕಿಂತ ದೊಡ್ಡ ಮುಲಾಮು ಮತ್ತೂಂದಿಲ್ಲ. ಈಗ ನನ್ನೊಳಗೊಂದು ನಿರ್ಧಾರ ನೆಲೆಗೊಂಡಿದೆ. ಹಳೆಯ ಭಾವಕ್ಕೆ ಹೊಸ ರಾಗವೊಂದು ಮಿಡಿಯುತ್ತಿದೆ.
ನಾನು ನಿನ್ನ ಗೆಳೆತನದ ಗಡಿದಾಟಿ , ಒಲವಿನ ಮೆಟ್ಟಿಲೇರಲು ತವಕಿಸುತ್ತಿರುವ ಅವತ್ತಿನ ಹುಡುಗನಾಗೇ ಉಳಿದುಹೋಗಿದ್ದೇನೆ. ಒಮ್ಮೆ ನಿನ್ನೆದುರು ನಿಂತು, ನಿನ್ನ ಕಣ್ಣಲ್ಲಿ ಕಣ್ಣಿಟ್ಟು ಆ ಮೂರು ಪದಗಳ, ಎಂಟು ಅಕ್ಷರಗಳ ಬಚ್ಚಿಟ್ಟ ಭಾವಗಳ ಮುಚ್ಚಿಟ್ಟ ಪೆಟ್ಟಿಗೆಯ ಬಂಧಿಸಿರುವ ಬೀಗದ ಕೀಲಿ ಕೈಯನ್ನು ತೆರೆದುಬಿಡುತ್ತೇನೆ. ಮುಂದಿನದು ದೇವರ ಚಿತ್ತ.
ಒಲವಿಗೊಂದು ಆಕಾರ ದಕ್ಕುವುದೋ, ಇಲ್ಲವೆ ನಿನ್ನ ನಿರಾಕರಣೆಯ ಹೊಳೆಯಲ್ಲಿ ಕೊಚ್ಚಿ ಹೋಗುವುದೋ, ಒಂದೂ ಹೊಳೆಯುತ್ತಿಲ್ಲ. ಸದ್ಯಕ್ಕಂತೂ ಒಂದು ನಿಟ್ಟುಸಿರು ಬಿಟ್ಟು, ನಾಳೆ ನಿನ್ನನ್ನು ಎದುರುಗೊಳ್ಳಲು ಎದೆಯ ತಿದಿಯೊತ್ತಿ ಅಣಿಮಾಡಿಕೊಳ್ಳುತ್ತಿದ್ದೇನೆ. ನಾಳೆ ನಿನ್ನ ಕಣ್ಣ ಬಣ್ಣ ಬದಲಾಗುತ್ತದಲ್ಲವಾ?
ನಿನ್ನವನು
* ಜೀವ ಮುಳ್ಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು
Canada: ವಾಲ್‌ಮಾರ್ಟ್ ಓವನ್‌ನಲ್ಲಿ ಭಾರತೀಯ ಮೂಲದ ಯುವತಿಯ ಶವ: ಕೆನಡಾ ಪೊಲೀಸರು ಹೇಳಿದ್ದೇನು?
IFFI Goa 2024: ಚಿತ್ರ ನವಿಲಿಗೆ ಹೊಸ ಬಣ್ಣ; ಬೆಳಗ್ಗೆ ಚಿತ್ರಾವತಿ ಕಣ್ಣು ತೆರೆಯುವುದಣ್ಣ!
Mangaluru: ರಾಜ್ಯದ 2ನೇ ಐಟಿ ಕೇಂದ್ರವಾಗಿ ಅಭಿವೃದ್ಧಿಗೆ ಅವಕಾಶ ಇದ್ದರೂ ಆದ್ಯತೆ ನೀಡದ ಸರಕಾರ
Lockdown Days: ಲಾಕ್‌ಡೌನ್ ಎಂಬ ದಪ್ಪಕ್ಷರದಲ್ಲಿ ಬರೆದ ಇತಿಹಾಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.