ಕಾಸರಗೋಡು ಎಂದೆಂದೂ ಕನ್ನಡದ ನೆಲ
Team Udayavani, Nov 9, 2017, 9:15 AM IST
ಕಾಸರಗೋಡು: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ, ಡಾ| ಕಯ್ನಾರ ಕಿಂಞ್ಞಣ್ಣ ರೈ ಅಂತಹ ಧೀಮಂತರನ್ನು ಕೊಡುಗೆಯಾಗಿ ನೀಡಿದ ಕಾಸರಗೋಡು ಎಂದೆಂದೂ ಕನ್ನಡ ನಾಡು. ಕಾಸರಗೋಡಿನ ಸಂಸ್ಕೃತಿ ಎಲ್ಲವೂ ಕನ್ನಡವೇ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಘೋಷಿಸಿದ ಮಹಾಜನ ವರದಿ ಶೀಘ್ರವೇ ಜಾರಿಯಾಗಬೇಕು. ಆ ಮೂಲಕ ಕಾಸರಗೋಡನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸಬೇಕೆಂದು ಕರ್ನಾಟಕ ನವನಿರ್ಮಾಣ ಸೇನೆ ಬೆಂಗಳೂರು ಇದರ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಅವರು ಹೇಳಿದರು.
ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಗೋಡೆಗಳಲ್ಲಿ ಕನ್ನಡ ವಿರೋಧಿ ಬರಹಗಳನ್ನು ಬರೆದು ಕನ್ನಡಿಗರನ್ನು, ವಿದ್ಯಾರ್ಥಿಗಳನ್ನು, ಸಾಹಿತಿಗಳನ್ನು ಅವಮಾನಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ನವನಿರ್ಮಾಣ ಸೇನೆ, ಕಾಸರಗೋಡು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಕಾಸರಗೋಡು, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸ್ನೇಹರಂಗ ಸಂಯುಕ್ತವಾಗಿ ಜಿಲ್ಲಾಧಿಕಾರಿ ಕಚೇರಿಗೆ ನಡೆಸಿದ ಜಾಥಾವನ್ನುದ್ದೇಶಿಸಿ ಅವರು ಮಾತನಾಡಿದರು.
ಕಳೆದ 62 ವರ್ಷಗಳಿಂದ ಕಾಸರಗೋಡಿನ ಕನ್ನಡಿಗರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದ್ದಾರೆ. ಪಣಿಕ್ಕರ್ ಅವರ ವಂಚನೆಯಿಂದ ಇಡೀ ಕನ್ನಡದ ಕುಡಿಗಳು ಸಂಕಷ್ಟ, ನೋವನ್ನು ಅನುಭವಿಸುವಂತಾಗಿದೆ. ಈ ಎಲ್ಲಾ ನೋವು, ಸಂಕಷ್ಟಗಳಿಗೆ ಒಂದೇ ಒಂದು ಪರಿಹಾರ ಮಹಾಜನ ಆಯೋಗ ವರದಿ ಜಾರಿ ಎಂದ ಅವರು ಕಾಸರಗೋಡಿನ ಕನ್ನಡಿಗರಿಗೆ ಯಾವುದೇ ಸಮಸ್ಯೆ ಎದುರಾದರೂ ನಾವು ನಿಮ್ಮ ಜತೆಯಲ್ಲಿರುತ್ತೇವೆ. ಯಾವುದಕ್ಕೂ ಕುಗ್ಗದೆ, ಜಗ್ಗದೆ ನಿಲ್ಲಬೇಕು. ನಿರಂತರವಾಗಿ ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ ಇನ್ನೂ ಮುಂದುವರಿದರೆ ಅದರ ವಿರುದ್ಧ ಸೆಟೆದು ನಿಂತು ಸರಿಯಾದ ದಾರಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ವಿದ್ಯಾರ್ಥಿಗಳ ಮೇಲೆ ಇನ್ನೂ ದೌರ್ಜನ್ಯ ನಡೆದರೆ ನಾವಂತೂ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ.
ಈಗಾಗಲೇ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ವಿರೋಧಿ ಚಟುವಟಿಕೆಗಳಲ್ಲಿ ನಿರತರಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಅವರು ಹೇಳಿದರು.
ಕಾಸರಗೋಡಿನ ಕನ್ನಡಿಗರಿಗಾಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ಡಿ.1 ರಂದು ಕೇರಳದ ರಾಜಾಧಾನಿಯಲ್ಲಿ ಸೆಕ್ರೆಟರಿಯೇಟ್ ಮುಂದೆ ಧರಣಿ ನಡೆಸುವುದಾಗಿ ಇದೇ ಸಂದರ್ಭದಲ್ಲಿ ಅವರು ಹೇಳಿದರು. ಮಲಯಾಳಿಗಳ ಅಟ್ಟಹಾಸ ಕಾಸರಗೋಡಿನ ಕನ್ನಡಿಗರ ಮೇಲೆ ಇನ್ನೂ ಮುಂದುವರಿದರೆ ಬೆಂಗಳೂರಿನಿಂದ ಮಲಯಾಳಿಗರನ್ನು ಹೊರದಬ್ಬಬೇಕಾಗುತ್ತದೆ ಎಂದು ಎಚ್ಚರಿಸಿದರು. ಮಲಯಾಳಿಗಳ ಹಿಂಸೆಗೆ ಜಗ್ಗುವುದು, ಕುಗ್ಗುವುದು ಬೇಡ. ಕನ್ನಡ ಡಿಂಡಿಮವನ್ನು ಬಾರಿಸಿ ಅವರಿಗೆ ಸರಿಯಾದ ಪಾಠವನ್ನು ಕಲಿಸುವ ಶಕ್ತಿಯಾಗಬೇಕು ಎಂದರು.
ಅಚ್ಚಗನ್ನಡ ಪ್ರದೇಶವಾದ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬ ಇಚ್ಛಾಶಕ್ತಿಯನ್ನು ಕರ್ನಾಟಕದ ಸಂಸದರು ತೋರಬೇಕು. ಲೋಕಸಭೆಯಲ್ಲಿ ಮಹಾಜನ ವರದಿ ಜಾರಿಗೆ ಒತ್ತಾಯಿಸಬೇಕೆಂದು ಆಗ್ರಹಿಸಿದ ಅವರು ಮಲಯಾಳಿಗಳ ಗೊಡ್ಡು ಬೆದರಿಕೆಗೆ ಬಾಗುವ ಅಗತ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಹೋರಾಟಗಾರ, ನ್ಯಾಯವಾದಿ ಅಡೂರು ಉಮೇಶ್ ನಾೖಕ್ ಅವರು ಮಾತನಾಡಿ ಅನ್ಯಾಯವಾಗಿ ಕೇರಳಕ್ಕೆ ಸೇರಿಹೋದ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಲು ಮಹಾಜನ ವರದಿಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ಕರ್ನಾಟಕ ನವ ನಿರ್ಮಾಣ ಸೇನೆಯ ಕೇರಳ ರಾಜ್ಯ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದರು. ಸ್ನೇಹರಂಗದ ಅಧ್ಯಕ್ಷ ಬಾಲಕೃಷ್ಣ ಅವರು ಮಾತನಾಡಿದರು. ಗುರುಪ್ರಸಾದ ಕೋಟೆಕಣಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಅಮೈ ಅವರು ಸ್ವಾಗತಿಸಿದರು.
ವಿದ್ಯಾನಗರದ ಕಾಸರಗೋಡು ಸರಕಾರಿ ಕಾಲೇಜು ಪರಿಸರದಿಂದ ಆರಂಭಗೊಂಡ ಜಿಲ್ಲಾಧಿಕಾರಿ ಕಚೇರಿ ಜಾಥಾವನ್ನು ಹಿರಿಯ ಕನ್ನಡ ಹೋರಾಟಗಾರ ನ್ಯಾಯವಾದಿ ಅಡೂರು ಉಮೇಶ್ ನಾೖಕ್ ಅವರು ಕನ್ನಡ ಧ್ವಜವನ್ನು ಕರ್ನಾಟಕ ನವನಿರ್ಮಾಣ ಸೇನೆಯ ಕರ್ನಾಟಕ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಅವರಿಗೆ ಹಸ್ತಾಂತರಿಸಿ ಉದ್ಘಾಟಿಸಿದರು. ವಿದ್ಯಾರ್ಥಿಗಳು ಸಹಿತ ನೂರಾರು ಮಂದಿ ಭಾಗವಹಿಸಿದ ಜಾಥಾವನ್ನು ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಪೊಲೀಸರು ತಡೆದರು.
ಮೆರವಣಿಗೆಗೆ ನ್ಯಾಯವಾದಿ ಅಡೂರು ಉಮೇಶ್ ನಾೖಕ್, ಕಾಸರಗೋಡು ನಗರಸಭಾ ಸದಸ್ಯರಾದ ಸವಿತಾ ಟೀಚರ್, ಶಂಕರ್, ಶಿವರಾಮ ಕಾಸರಗೋಡು, ಗುರುಪ್ರಸಾದ್ ಕೋಟೆಕಣಿ, ಸತ್ಯನಾರಾಯಣ ಅಮೈ, ಶ್ರೀಕಾಂತ್ ಕಾಸರಗೋಡು, ದಯಾನಂದ ಬೆಳ್ಳೂರಡ್ಕ, ಯೋಗೀಶ್ ಕೋಟೆಕಣಿ ಮೊದಲಾದವರು ನೇತೃತ್ವ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕನ್ನಡ ಪರ ಘೋಷಣೆಗಳನ್ನು ಕೂಗುತ್ತಾ ಕೇರಳ ಸರಕಾರಕ್ಕೆ ಧಿಕ್ಕಾರ ಹಾಕುತ್ತಾ ಕನ್ನಡಿಗರ ಹಕ್ಕು ಸವಲತ್ತುಗಳನ್ನು ಕಾಪಾಡುವಂತೆ ಸರಕಾರವನ್ನು ಒತ್ತಾಯಿಸಲಾಯಿತು. ಸಭೆಯ ಬಳಿಕ ಭೀಮಾಶಂಕರ ಪಾಟೀಲ ಅವರ ನೇತೃತ್ವದಲ್ಲಿ ಕನ್ನಡಿಗರ ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು. ಕಾಸರಗೋಡಿನ ಕನ್ನಡಿಗರು ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆಯಲಾಯಿತು. ಸರಕಾರಿ ಕಾಲೇಜಿನಲ್ಲಿ ಕನ್ನಡ ವಿದ್ಯಾರ್ಥಿಗಳಿಗೆಸಗಿದ ಅವಮಾನದ ಹಿಂದಿನ ಶಕ್ತಿಯನ್ನು ಪತ್ತೆಹಚ್ಚಿ ಕ್ರಮ ತೆಗೆದುಕೊಳ್ಳುವಂತೆ ವಿನಂತಿಸಲಾಯಿತು. ಕನ್ನಡಿಗರ ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.