ಬಿಜೆಪಿ ಮುಖಂಡರು ನನ್ನ ಸಂಪರ್ಕದಲ್ಲಿದ್ದಾರೆ
Team Udayavani, Nov 10, 2017, 8:26 AM IST
ಬನಹಟ್ಟಿ/ಹುಬ್ಬಳ್ಳಿ: “ಬಿಜೆಪಿಯ ಅನೇಕ ಮುಖಂಡರು ನನ್ನೊಂದಿಗೆ ಸಂಪರ್ಕದಲ್ಲಿದ್ದು, ಕಾಂಗ್ರೆಸ್ ಸೇರಲು ಆಸಕ್ತ ರಾಗಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗುರುವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಅನೇಕ ಮುಖಂಡರು ತಮ್ಮ ಸಂಪರ್ಕದಲ್ಲಿದ್ದಾರೆ ಯಾದರೂ, ಅವರ ಹಿನ್ನೆಲೆ ತಿಳಿದುಕೊಳ್ಳಲಾಗುತ್ತಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದಿಲ್ಲ. ಕೋಮುವಾದಿಗಳು ನಮಗೆ ಬೇಕಾಗಿಲ್ಲ ಎಂದರು.
ಕುಮಾರಸ್ವಾಮಿ ನನ್ನನ್ನು ಹೊರ ಹಾಕಿದರು: ಇದೇ ವೇಳೆ, ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಅವರು, “ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಏನೆಲ್ಲ ಅಧಿಕಾರ ಕೊಟ್ಟರೂ ಪಕ್ಷ ಬಿಟ್ಟು ಹೋದರು ಎಂದು ಕುಮಾರಸ್ವಾಮಿ ಸುಳ್ಳು ಹೇಳುತ್ತಾ ಹೊರಟಿದ್ದಾರೆ. ನಾನು ಜೆಡಿಎಸ್ ತೊರೆದು ಬಂದಿಲ್ಲ. ಅವರೇ ನನ್ನನ್ನು ಹೊರ ಹಾಕಿದ್ದರು’ ಎಂದರು.
ಕಾಂಗ್ರೆಸ್‌ಗೆ ಎಸ್‌ಡಿಪಿಐ ದೋಸ್ತಿ ಅಗತ್ಯವಿಲ್ಲ: ಖಾದರ್
ಬೆಂಗಳೂರು: ಎಸ್‌ಡಿಪಿಐ ಜತೆ ಕಾಂಗ್ರೆಸ್ ಮೈತ್ರಿ ಅಥವಾ ಹೊಂದಾಣಿಕೆ ಅಗತ್ಯವಿಲ್ಲ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಎಸ್‌ಡಿಪಿಐ ಜತೆ ನಾವು ಮೈತ್ರಿ ಮಾಡಿಕೊಂಡರೆ ಆರ್ ಎಸ್‌ಎಸ್ ಹಾಗೂ ವಿಶ್ವಹಿಂದೂ ಪರಿಷತ್ ಬಗ್ಗೆ ಮಾತನಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಎಸ್‌ಡಿಪಿಐ ದೊಡ್ಡ ಶಕ್ತಿಯೇನೂ ಅಲ್ಲ. ನಮ್ಮ ನಮ್ಮ ಕ್ಷೇತ್ರಗಳಲ್ಲಿ ನಾವು ಸರಿ ಇದ್ದರೆ ಎಸ್‌ಡಿಪಿಐ ಯಾಕೆ ಬೆಳೆಯುತ್ತದೆ. ಅವರನ್ನು ಬೆಳೆಯಲು ಬಿಟ್ಟು ಅವರ ಸಹಕಾರ ಪಡೆಯುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು. “ಕಳೆದ ಚುನಾವಣೆಯಲ್ಲಿ ನನ್ನ ಕ್ಷೇತ್ರದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ನಿಂತು ಮೂರು ಸಾವಿರ ಮತ ಪಡೆದರು. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಎಸ್‌ಡಿಪಿಐ ಸ್ಪರ್ಧೆ ಮಾಡಿರಲಿಲ್ಲ, ಆಗ ನಾನು 10 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೆ. ಎಸ್‌ಡಿಪಿಐ ಸ್ಪರ್ಧೆ ಮಾಡಿದಾಗ ನನ್ನ ಗೆಲುವಿನ ಅಂತರ 30 ಸಾವಿರ ಮತಗಳಾಗಿತ್ತು. ಅವರು ಸ್ಪರ್ಧೆ ಮಾಡುವುದರಿಂದ ಕಾಂಗ್ರೆಸ್ ಮತ ವಿಭಜನೆಯಾಗುತ್ತದೆ ಎಂಬುದು ಸುಳ್ಳು. ನಮ್ಮ ಭಾಗದಲ್ಲಂತೂ ಅದು ಆಗದ ಮಾತು’ ಎಂದರು.
ಡಿಕೆಶಿ ಪಕ್ಷ ಬಿಡಲ್ಲ: ಸಿದ್ದು
ಹುಬ್ಬಳ್ಳಿ: ಇಂಧನ ಸಚಿವ ಡಿ.ಕೆ.ಶಿವಕುಮಾರ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಗುರುವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ ಹುಟ್ಟಾ ಕಾಂಗ್ರೆಸ್ಸಿಗರು. ಆದಾಯ ತೆರಿಗೆ ದಾಳಿ ನಡೆಸುವ ಮೂಲಕ ಅವರನ್ನು ಬಿಜೆಪಿಗೆ ಸೆಳೆದುಕೊಳ್ಳಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಫಲ ಸಿಗುವುದಿಲ್ಲ. ಅವರು ಸದ್ಯ ಸಚಿವರಾಗಿದ್ದು, ಉಪಮುಖ್ಯಮಂತ್ರಿ ಹುದ್ದೆ ಸೇರಿ ಯಾವುದೇ ಆಮಿಷಕ್ಕೂ ಅವರು ಪಕ್ಷ ಬಿಡುವುದಿಲ್ಲ. ಇಂಥದ್ದಕ್ಕೆಲ್ಲ ಶಿವಕುಮಾರ ಸೊಪ್ಪು ಹಾಕಲಾರರು. ಸಾಂವಿಧಾನಿಕವಾಗಿ ಉಪಮುಖ್ಯಮಂತ್ರಿ ಎಂಬ ಹುದ್ದೆಯೇ ಇಲ್ಲ. ರಾಜಕೀಯ ಕಾರಣಕ್ಕಾಗಿ ನಾವು ಮಾಡಿಕೊಂಡ ಹುದ್ದೆ ಅದು ಎಂದರು.
ಕಾಂಗ್ರೆಸ್ ತೊರೆಯಲ್ಲ
ರಾಮನಗರ: ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಎಷ್ಟೇ ಒತ್ತಡ ಬಂದರೂ, ರಾಜಕೀಯ ತಂತ್ರಗಾರಿಕೆ ಎದುರಾದರೂ ಕಾಂಗ್ರೆಸ್ ತೊರೆಯುವುದಿಲ್ಲ. ಅಲ್ಲದೆ, ಡಿ.ಕೆ.ಶಿವಕುಮಾರ್ ಸಹ ಕಾಂಗ್ರೆಸ್ ಬಿಡಲ್ಲ ಎಂದರು. ವಿಧಾನಸಭಾ ಚುನಾವಣೆ ಕುರಿತು ಪ್ರತಿಕ್ರಿಯಿಸಿ, ಪಕ್ಷದ ಹೈಕಮಾಂಡ್ ಸೂಚನೆ ನೀಡಿದರೆ ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.