ಹನುಮ ಗಿರಿ ಮೇಳದ ತಿರುಗಾಟಕ್ಕೆ ನ. 16ರಂದು ಚಾಲನೆ
Team Udayavani, Nov 10, 2017, 4:46 PM IST
ಈಶ್ವರಮಂಗಲ: ಪುತ್ತೂರು-ಸುಳ್ಯ ಭಾಗದಲ್ಲಿ 25 ವರ್ಷಗಳ ಬಳಿಕ ತೆಂಕುತಿಟ್ಟಿನ ಹೊಸ ಮೇಳ ತಿರುಗಾಟಕ್ಕೆ ಸಜ್ಜಾಗಿದೆ.
ಇದರಿಂದ ಈ ಪ್ರದೇಶದಲ್ಲಿ ಮತ್ತೆ ಯಕ್ಷಗಾನದ ಸಂಭ್ರಮ ಕಾಣಸಿಗಲಿದೆ.
ಈಶ್ವರಮಂಗಲದ ಹನುಮಗಿರಿ ಆಂಜನೇಯ ಕ್ಷೇತ್ರದಿಂದ ಶ್ರೀ ಕೋದಂಡ ರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯು ನ. 16ರಂದು ಉದ್ಘಾಟನೆಗೊಳ್ಳಲಿದೆ.
ಪುತ್ತೂರು, ಸುಳ್ಯಭಾಗದಲ್ಲಿ 25 ವರ್ಷಗಳ ನಂತರ ಮತ್ತೂಂದು ಹೊಸ ಪ್ರಯತ್ನ ನಡೆದಿದೆ. ಇದುವರೆಗೆ ಕೆಲವು ಮೇಳಗಳು ಹವ್ಯಾಸಿ ಕಲಾವಿದರನ್ನು ಸೇರಿಸಿಕೊಂಡು ಯಕ್ಷಗಾನ ಬಯಲಾಟವನ್ನು ಮಾಡಿದರೂ ಹೆಚ್ಚು ಯಶಸ್ವಿಯಾಗಲಿಲ್ಲ. ಈಗ ಈ ಮೇಳ ತೆಂಕುತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದರ ತಂಡವನ್ನು ಹೊಂದಿದೆ. ಈ ವಿದ್ಯಮಾನವನ್ನು ಉಭಯ ತಾಲೂಕುಗಳಲ್ಲಿನ ಯಕ್ಷಗಾನ
ಬೆಳವಣಿಗೆಗೆ ನಡೆಸುತ್ತಿರುವ ಪ್ರಯತ್ನ ಎಂದು ಹೇಳಲಾಗುತ್ತಿದೆ. ಈ ವರ್ಷ ನೂತನ ಪೌರಾಣಿಕ ಪ್ರಸಂಗಗಳಾದ ಸಿಂಧೂರ ತೇಜ ಹಾಗೂ ವೇದವತಿ ಪ್ರದರ್ಶನಗೊಳ್ಳಲಿವೆ. ಹರಕೆ ಬಯಲಾಟಗಳ ಸೇವೆಯೂ ನಡೆಯಲಿದೆ.
ಭಾಗವತರಾಗಿ ಪದ್ಯಾಣ ಗಣಪತಿ ಭಟ್, ರವಿಚಂದ್ರ ಕನ್ನಡಿಕಟ್ಟೆ, ಚಂಡೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಪದ್ಮನಾಭ ಉಪಾಧ್ಯಾಯ, ಚೈತನ್ಯಕೃಷ್ಣ ಪದ್ಯಾಣ, ಮದ್ದಳೆಯಲ್ಲಿ ಜಯರಾಮ್ ಭಟ್ ಕಡಬ, ವಿನಯ ಆಚಾರ್ಯ ಭಾಗವಹಿಸುವರು. ನೂತನ ಮೇಳಕ್ಕೆ ರಂಗಸ್ಥಳ, ವೇಷ-ಭೂಷಣಗಳು ಸಿದ್ಧ ಗೊಂಡಿವೆ. ಕಲಾ ಪೋಷಕ ಡಾ| ಟಿ. ಶ್ಯಾಮ್ ಭಟ್ ಅವರ ಮಾರ್ಗದರ್ಶನ ಇದಕ್ಕಿದೆ.
ರಾಜಭವನದಲ್ಲಿ ಯಕ್ಷಗಾನ
ರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಪ್ರಯಕ್ತ ನ. 8 ರಂದು ಬೆಂಗಳೂರಿನ ರಾಜಭವನದಲ್ಲಿ ಯಕ್ಷಗಾನ ಪ್ರದರ್ಶಿಸಿದ ಹೆಗ್ಗಳಿಕೆ ಈ ಮೇಳದ್ದು. ರಾಜ್ಯಪಾಲ ವಜುಭಾಯಿ ವಾಲಾ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಳದ ಕಲಾವಿದರನ್ನು ಅಭಿನಂದಿಸಿದ್ದರು.
ತಿರುಗಾಟ ಪೂರ್ವದಲ್ಲೇ ಸಂಭ್ರಮ ತಿರುಗಾಟಕ್ಕೆ ಹೊರಡುವ ಮುನ್ನವೇ ಮೇಳದ ಹಿರಿಯ ಕಲಾವಿದ ಶಿವರಾಮ ಜೋಗಿ ಅವರಿಗೆ ನ. 1ರಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸರಕಾರ ಗೌರವಿಸಿತ್ತು. ಇದು ಮೇಳದ ಸಂಭ್ರಮವನ್ನು ಹೆಚ್ಚಿಸಿದೆ.
ಪೌರಾಣಿಕ ಪ್ರಸಂಗಕ್ಕೂ ಅವಕಾಶ ಇದೆ
ಮೇಳ ಮಾಡಬೇಕು, ಪೌರಾಣಿಕ ಪ್ರಸಂಗಗಳನ್ನು ನಡೆಸಬೇಕು ಎಂಬುದು ಭಕ್ತಾದಿಗಳ ಅಪೇಕ್ಷೆಯಾಗಿತ್ತು. ಪ್ರಶ್ನೆ ಚಿಂತನ ನಡೆಸಿದಾಗ ಶ್ರೀ ಕೋದಂಡರಾಮನ ಹೆಸರಿನಲ್ಲಿ ಯಕ್ಷಗಾನ ಮೇಳ ಮಾಡುವುದು ಒಳ್ಳೆಯದು ಎಂದು ಕಂಡುಬಂತು. ಕ್ಷೇತ್ರದ ಎರಡು ಪ್ರಸಂಗವಲ್ಲದೆ ಭಕ್ತ ಜನರ ಅಪೇಕ್ಷೆಯ ಪೌರಾಣಿಕ ಪ್ರಸಂಗಕ್ಕೂ ಅವಕಾಶ ಇದೆ.
– ನನ್ಯ ಅಚ್ಯುತ ಮೂಡೆತ್ತಾಯ,
ಆಡಳಿತ ಧರ್ಮದರ್ಶಿ, ಧರ್ಮಶ್ರೀ ಪ್ರತಿಷ್ಠಾನ, ಹನುಮಗಿರಿ
ಕಲಾ ಕ್ಷೇತ್ರಕ್ಕೆ ಮುನ್ನುಡಿ
ಹನುಮಗಿರಿ ಕ್ಷೇತ್ರ ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಶ್ರೀ ಪಂಚಮುಖೀ ಆಂಜನೇಯ ಕ್ಷೇತ್ರ ಹಾಗೂ ಕೋದಂಡರಾಮನ ಏಕಶಿಲಾ ವಿಗ್ರಹ ಭಕ್ತರನ್ನು ಸೆಳೆಯುತ್ತಿದೆ. ಇಲ್ಲಿನ ಕಲ್ಲು ಬಂಡೆಗಳಲ್ಲಿ ಕೆತ್ತಿದ ರಾಮಾಯಣ ಚರಿತೆ, ಹನುಮ ಚರಿತೆ ಆಕರ್ಷಿಸುತ್ತಿದೆ.ಈಗ ಮೇಳದ ಮೂಲಕ ಕಲಾಕ್ಷೇತ್ರಕ್ಕೂ ಪದಾರ್ಪಣೆ ಮಾಡಿದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.