ಮೇಲ್ಛಾವಣಿ ಇಲ್ಲದೆ ಮಳೆಗಾಲದಲ್ಲಿ ಅನ್ನದ ಸಾರು ಡಬ್ಬಲ್ ಆಗುತ್ತೆ!
Team Udayavani, Nov 11, 2017, 2:45 PM IST
ನಗರ: ಮಳೆಗಾಲದಲ್ಲಿ ಮೇಲ್ಛಾವಣಿ ಇಲ್ಲದೆ ಅನ್ನದ ಬಟ್ಟಲಿಗೆ ನೀರು ಸುರಿದು ಸಾಂಬಾರು ಡಬ್ಬಲ್ ಆಗುವ ಕಥೆ, ಕುರಿಯ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ವ್ಯಥೆ, ನಗರದಲ್ಲಿ ಫುಟ್‌ಪಾತ್ ಇಲ್ಲದೆ ವಿದ್ಯಾರ್ಥಿಗಳು ಪಡುತ್ತಿರುವ ಪಾಟಲಿಯಿದು!
ಹೀಗೆ ಪುತ್ತೂರು ತಾಲೂಕಿನಲ್ಲಿ ಮಕ್ಕಳ ಹಕ್ಕುಗಳಿಗೆ ಎದುರಾಗುತ್ತಿರುವ ಹಲವು ಸಮಸ್ಯೆಗಳನ್ನು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರ ಮುಂದೆ ಎಳೆ-ಎಳೆಯಾಗಿ ಮಕ್ಕಳು ಬಿಚ್ಚಿಟ್ಟದ್ದು, ನಗರದ ಲಯನ್ಸ್ ಕ್ಲಬ್ ಸಭಾಭವನದಲ್ಲಿ ನಡೆದ ಮಕ್ಕಳ ಸಂಸತ್‌ನಲ್ಲಿ.
ತಾಲೂಕಿನ 22 ಶಾಲೆಯ ಮಕ್ಕಳು ಸಾಲು-ಸಾಲು ಪ್ರಶ್ನೆಗಳ ಮೂಲಕ ಮಕ್ಕಳ ಸಂಸತ್ ಕಲಾಪದಲ್ಲಿ ಹಲವು ವಿಚಾರಗಳು ಪ್ರಸ್ತಾಪಗೊಂಡವು.
ಮೇಲ್ಛಾವಣಿ ಬೇಕು
ಕೊಂಬೆಟ್ಟು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಶ್ರೀರಂಜಿನಿ ಮಾತನಾಡಿ, ಮಳೆಗಾಲದಲ್ಲಿ ತಟ್ಟೆಗೆ ಅನ್ನ ಹಾಕಿಕೊಂಡು, ಮರಳಿ ತರಗತಿ ಕೊಠಡಿಗೆ ಬರಬೇಕಾದರೆ, ಮೇಲ್ಛಾವಣಿ ಇಲ್ಲದೆ ಬಟ್ಟಲಿಗೆ ಮಳೆ ನೀರು ಬಿದ್ದು, ಡಬ್ಬಲ್ ಸಾಂಬಾರಿನ ದರ್ಶನ ಆಗುತ್ತದೆ. ಸೂಕ್ತ ಮೇಲ್ಛಾವಣಿ, ಸಭಾಭವನದ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.
ಫುಟ್‌ಪಾತ್ ಸಮಸ್ಯೆ
ಶ್ರೀ ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿನಿ ಭಾಗ್ಯಶ್ರೀ ಮಾತನಾಡಿ, ನಗರದ ಬಸ್ ನಿಲ್ದಾಣದಿಂದ ಶಾಲೆಯ ತನಕ ಮುಖ್ಯ ರಸ್ತೆಯ ಬದಿಗಳಲ್ಲಿ ಫುಟ್ ಪಾತ್‌ನಲ್ಲಿ ನಡೆದುಕೊಂಡು ಬರಬೇಕು. ಫುಟ್‌ಪಾತ್ ಸರಿ ಇಲ್ಲ. 9ನೇ ತರಗತಿಯ ಸೋಶಿಯಲ್ ವಿಷಯ ಭಾಗ-2 ಪಾಠ ಪುಸ್ತಕ ಎಲ್ಲರಿಗೆ ಸಿಕ್ಕಿಲ್ಲ ಎಂದರು.
ಪ್ರತಿಭಟನೆಯಿಂದ ಕಿರಿ-ಕಿರಿ
ನಗರದ ಮೌಂಟ್‌ನ್‌ವ್ಯೂ ಶಾಲಾ ವಿದ್ಯಾರ್ಥಿನಿ ನೌರಿನಾ ಫಾತಿಮಾ ಮಾತನಾಡಿ, ಮುಖ್ಯ ರಸ್ತೆ ಬದಿಯಲ್ಲೇ ಶಾಲೆ ಇದೆ. ರಸ್ತೆಯ ಪಕ್ಕದಲ್ಲೇ ಪ್ರತಿಭಟನಾ ಸಭೆಗಳು ನಡೆಯುವುದರಿಂದ ತೊಂದರೆ ಆಗಿದೆ, ಶಾಲಾ ಗೋಡೆಗೆ ಎಚ್‌ಟಿ ಲೈನ್ ತಾಗುತ್ತಿದ್ದು, ಮೆಸ್ಕಾಂಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಸ್ಪಂದನೆ ಸಿಕ್ಕಿಲ್ಲ ಎಂದರು.
ಗೇಟು ಬದಲಾಯಿಸಿ
ನೆಲ್ಲಿಕಟ್ಟೆ ಹಿ.ಪ್ರಾ.ಶಾಲಾ ವಿದ್ಯಾರ್ಥಿನಿ ಪ್ರಜ್ಞಾ, ಬಿಆರ್‌ಸಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶಾಲಾ ಆವರಣದ ಗೇಟಿನಿಂದಲೇ ಪ್ರವೇಶ ಮಾಡುವುದರಿಂದ ಅಲ್ಲಿ ಟ್ರಾಫಿಕ್ ಸಮಸ್ಯೆ ಇದೆ. ಹಾಗಾಗಿ ಈಗಿರುವ ಗೇಟು ಅನ್ನು ಬದಲಾಯಿಸಿ, ಬೇರೆ ಕಡೆ ಅಳವಡಿಸಬೇಕು ಎಂದರು. ಹಾರಾಡಿ ಶಾಲಾ ವಿದ್ಯಾರ್ಥಿನಿ ಯಕ್ಷಿತಾ ಅವರು, ಗುರುತು ಹಾಕಿ ಪ್ರಶ್ನೆಗೆ ಉತ್ತರಿಸುವುದರಿಂದ ನಮ್ಮ ಬರವಣಿಗೆಯ ಅಭಿರುಚಿಗೆ ಧಕ್ಕೆ ಆಗುತ್ತದೆ ಎಂದರು.
ಬನ್ನೂರು ಶಾಲಾ ವಿದ್ಯಾರ್ಥಿ ರಕ್ಷಿತ್ ಮಾತನಾಡಿ, ಶಾಲೆಯಲ್ಲಿ ಹುಡುಗರಿಗೆ ಶೌಚಾಲಯ ಇಲ್ಲ. ವಿದ್ಯಾರ್ಥಿನಿಯರ ಶೌಚಾಲಯದ ಬಳಿ ಅಪಾಯಕಾರಿ ಸ್ಥಿತಿಯಲ್ಲಿ ಮರವೊಂದು ಇದೆ. ಅದನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.
ಪರ್ಲಡ್ಕ ಶಾಲಾ ವಿದ್ಯಾರ್ಥಿನಿ ಮಿಸ್ರಿಯಾ, ಶಾಲೆಯಲ್ಲಿ ಕಂಪ್ಯೂಟರ್ ಇಲ್ಲ ಎಂದು ಸಮಸ್ಯೆ ತೋಡಿಕೊಂಡರು. ಕೆಮ್ಮಿಂಜೆ ಶಾಲಾ ವಿದ್ಯಾರ್ಥಿನಿ ಇಶನಾ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ಆಗಿಲ್ಲ ಎಂದರು. ಕೆಮ್ಮಾಯಿ ಶಾಲಾ ವಿದ್ಯಾರ್ಥಿನಿ ರಶ್ಮಿ , ನಮ್ಮಲ್ಲಿ 1 ಕೊಠಡಿ ನಾದುರಸ್ತಿಯಲ್ಲಿದ್ದು, ಹೊಸ ಕೊಠಡಿ ನಿರ್ಮಿಸಬೇಕಿದೆ. ಕಳೆದ ವರ್ಷ ನೀವು ಎರಡು ಕೊಠಡಿ ನಿರ್ಮಿಸಿಕೊಟ್ಟಿದ್ದಿರಿ. ಇನ್ನೊಂದು ಕೊಠಡಿಯನ್ನು ನಿರ್ಮಿಸಿ ಕೊಡಿ ಎಂದರು.
ಸಮಸ್ಯೆಗೆ ಸ್ಪಂದನೆ
ತೆಂಕಿಲ ಶಾಲಾ ವಿದ್ಯಾರ್ಥಿಗಳು ಉರ್ಲಾಂಡಿ ಬಳಿ ರಸ್ತೆ ದಾಟಲು ಇರುವ ಸಮಸ್ಯೆ ಬಗ್ಗೆ ತೋಡಿಕೊಂಡಾಗ, ಶಾಸಕಿ, ಸಂಚಾರ ಪೊಲೀಸ್ ಠಾಣಾಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸ್ಪಂದಿಸುವಂತೆ ಸೂಚನೆ ನೀಡಿದರು. ಅದೇ ರೀತಿ ನಗರಸಭಾ ವ್ಯಾಪ್ತಿಯ ಸಮಸ್ಯೆಗಳಿಗೆ ಸಂಬಂಧಿಸಿ, ಅಧಿಕಾರಿಯನ್ನು ಸ್ಥಳಕ್ಕೆ ಕರೆಯಿಸಿ, ಗಮನ ಹರಿಸುವಂತೆ ಸೂಚಿಸಿದರು.
ಸುಧಾನ ಶಾಲಾ ವಿದ್ಯಾರ್ಥಿನಿ ಅಪೇಕ್ಷಾ ಅವರು, ಹೆಣ್ಣು ಮಕ್ಕಳ ಓಡಾಟಕ್ಕೆ ಪ್ರತ್ಯೇಕ ಬಸ್ ಕಲ್ಪಿಸುವಂತೆ, ಸೈಂಟ್ ವಿಕ್ಟರ್‌ನ ರಿಷಿಕಾ , ಶಾಲೆಯಲ್ಲಿ ಕಾಯಿನ್ ಬೂತ್ ಸೌಲಭ್ಯ ನೀಡುವಂತೆ, ಸಾಲ್ಮರ ಮೌಂಟನ್ ವ್ಯೂ ಶಾಲಾ ವಿದ್ಯಾರ್ಥಿನಿ ರಶೀದಾ, ಶಾಲಾ ವಠಾರ ಫಲಕ ಅಳವಡಿಸುವಂತೆ, ಬೆಥನಿ ಶಾಲಾ ವಿದ್ಯಾರ್ಥಿ ಸುಜನ್ ರೈ, ಮುಖ್ಯ ರಸ್ತೆಯಿಂದ ಪಾಂಗ್ಲಾಯಿ ಸಂಪರ್ಕ ರಸ್ತೆಯಲ್ಲಿನ ಹೊಂಡ ಮುಚ್ಚುವಂತೆ, ಮಂಜಲ್ಪಡ್ಪು ಬಿಇಎಂ ಅನುದಾನಿತ ಶಾಲಾ ವಿದ್ಯಾರ್ಥಿ ವೇದಾಕ್ಷ , ಶಿಕ್ಷಕರ ನೇಮಕಾತಿ ಮಾಡುವಂತೆ ಮನವಿ ಮಾಡಿದರು.
ಲಯನ್ಸ್ ಅಧ್ಯಕ್ಷ ಆನಂದ ರೈ ದೇವಿನಗರ, ಲಯನೆಸ್ ಅಧ್ಯಕ್ಷೆ ವಾಣಿ ಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಲಯನ್ಸ್ ಮಾಜಿ ಅಧ್ಯಕ್ಷ ಸುಂದರ ಗೌಡ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷೆ ನಯನಾ ರೈ ಉಪಸ್ಥಿತರಿದ್ದರು. ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ ನಿರೂಪಿಸಿದರು. ಸಂಪನ್ಮೂಲ ವ್ಯಕ್ತಿ ಸಂಶುದ್ದಿನ್ ಸಂಪ್ಯ ಸಂವಾದ ನಡೆಸಿಕೊಟ್ಟರು
ಶಾಸಕಿ ಮೆಚ್ಚುಗೆ
ಕುರಿಯ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ, ವಿದ್ಯಾರ್ಥಿನಿಯೊಬ್ಬರು ವಿಷಯ ಪ್ರಸ್ತಾಪಿಸಿ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ವಿದ್ಯಾರ್ಥಿನಿಯ ಸಾಮಾಜಿಕ ಜಾಗೃತಿಯ ಪ್ರಶ್ನೆಗೆ ಮೆಚ್ಚುಗೆ ಸೂಚಿಸಿದ ಶಾಸಕಿ, ಇದರ ಬಗ್ಗೆ ಪೊಲೀಸ್ ಇಲಾಖೆಗೆ ಸೂಚಿಸುವುದಾಗಿ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.