ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ
Team Udayavani, Nov 11, 2017, 4:19 PM IST
ವಿಜಯಪುರ: ಬಿಜೆಪಿ ನಾಯಕರು ಏನೇ ತಿಪ್ಪರಲಾಗ ಹಾಕಿದರೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಾವು ಮಾಡಿರುವ ಉತ್ತಮ ಕೆಲಸಕ್ಕೆ ರಾಜ್ಯದ ಜನರು ಕೂಲಿ ಕೊಟ್ಟು ನಮ್ಮನ್ನು ಅಧಿಕಾರಕ್ಕೆ ತನ್ನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೋರಿದರು.
ಶುಕ್ರವಾರ ಇಂಡಿ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಜರುಗಿದ ಇಂಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಡವರ, ರೈತರ ಬಗ್ಗೆ ಕನಿಷ್ಠ ಕಾಳಜಿ ಇಲ್ಲದೇ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ದಲಿತರ ಮನೆಯಲ್ಲಿ ಹೋಟೆಲ್ ಊಟ ತರಿಸಿಕೊಂಡು ತಿಂದರೆ ದಲಿತ ಪರ ಕಾಳಜಿ ಮಾಡಿದಂತಲ್ಲ. ಇಂಥ ಕಾರ್ಯಕ್ರಮಗಳಿಂದ ಜನರ ಕಣ್ಣಿಗೆ ಮಣ್ಣೆರಚಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ ನಾಯಕರು ಅರಿಯಬೇಕು ಎಂದು ತಮ್ಮ ಭಾಷಣದ ಉದ್ದಕ್ಕೂ ಬಿಜೆಪಿ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪಗೆ ರೈತರ ಸಾಲಮನ್ನಾ ಮಾಡುವಂತೆ ಪ್ರತಿಪಕ್ಷಗಳು ಆಗ್ರಹಿಸಿದಾಗ ನನ್ನ ಬಳಿ ನೋಟ್ ಮುದ್ರಿಸುವ ಮಷೀನ್ ಇಲ್ಲ ಎಂದಿದ್ದು ಮೇಲ್ಮನೆಯಲ್ಲಿ ದಾಖಲಾಗಿದೆ. ರೈತರ ಕುರಿತು ಹೀಗೆ ಬೇಜವಾಬ್ದಾರಿಯಿಂದ ಮಾತನಾಡಿದ್ದ ಯಡಿಯೂರಪ್ಪ ಹೆಗಲಿಗೆ ಹಸಿರು ಶಾಲು ಹಾಕಿಕೊಂಡ ಮಾತ್ರಕ್ಕೆ ರೈತರ ಕಾಳಜಿ ಬರಲು ಸಾಧ್ಯವಿಲ್ಲ. ರಾಜಕೀಯದ ಆರಂಭದ ದಿನಗಳಲ್ಲಿ ನಾನು ಕೂಡ ಹಸಿರು ಶಾಲು, ಟೋಪಿ
ಹಾಕಿಕೊಂಡೇ ತಿರುಗಿದ್ದೇನೆ. ಇದೀಗ ರೈತರ ಸಾಲ ಮನ್ನಾ ಮಾಡಿದ್ದೇನೆ. ಹೀಗಾಗಿ ರೈತರ ಕುರಿತು ಮೊಸಳೆ ಕಣ್ಣೀರು ಸುರಿಸುವ ಯಡಿಯೂರಪ್ಪ ಅವರಿಗೆ ರೈತರ ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಟೀಕೆಗಳ ಮಳೆ ಸುರಿಸಿದರು.
ರಾಜ್ಯದಲ್ಲಿ ಯಾರೂ ಸಹ ಹಸಿವೆಯಿಂದ ಬಳಬಾರದೆಂದು ಅಧಿಕಾರಕ್ಕೆ ಬಂದ ಒಂದೇ ತಾಸಿನಲ್ಲಿ ನಮ್ಮ ಸರ್ಕಾರ ಅನ್ನಭಾಗ್ಯ ಜಾರಿಗೆ ತಂದಿದ್ದು, ದೇಶದಲ್ಲೇ ಈ ಸೌಲಭ್ಯ ಕಲ್ಪಿಸಿದ ಮತ್ತೂಂದು ರಾಜ್ಯವಿಲ್ಲ. ಬಡ ಕಾರ್ಮಿಕರ
ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ಮೂಲಕ 5 ರೂ.ಗೆ ಉಪಹಾರ ಹಾಗೂ 10 ರೂ.ಗೆ ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆ ಮಾಡಿದ್ದು, ಬೆಂಗಳೂರಿನಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕು ಕೇಂದ್ರ ಸೇರಿ ಇನ್ನೂ 300 ಕಡೆ ಇಂದಿರಾ ಕ್ಯಾಂಟೀನ್ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು.
ಇಂಡಿ ಶಾಸಕ ಯಶವಂತರಾಯಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಮಾತನಾಡಿದರು. ಜಿಲ್ಲೆಯ ಶಾಸಕರಾದ ಸಿ.ಎಸ್. ನಾಡಗೌಡ, ಶಿವಾನಂದ ಪಾಟೀಲ, ಡಾ| ಎಂ.ಎಸ್. ಬಾಗವಾನ, ರಾಜು ಆಲಗೂರು, ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.