ಪರೀಕ್ಷೆಯಲ್ಲಿ ಏಕ ಮಾಧ್ಯಮ ಆಯ್ಕೆ ಕಡ್ಡಾಯ
Team Udayavani, Nov 14, 2017, 6:30 AM IST
ಬೆಂಗಳೂರು: ಪಿಯು ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ಮಾಧ್ಯಮದಲ್ಲಿ ಮಾತ್ರವೇ ಪರೀಕ್ಷೆ
ಬರೆಯಬೇಕೆಂಬ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.
ಆಯ್ಕೆ ಮಾಡಿಕೊಂಡಿರುವ ಮಾಧ್ಯಮದಲ್ಲೇ ಪರೀಕ್ಷೆ ಬರೆಯಬೇಕೆಂಬ ಕಟ್ಟುಪಾಡು ಈ ಹಿಂದೆ ಇರಲಿಲ್ಲ. ಪ್ರಸಕ್ತ
ಸಾಲಿನಿಂದ ಪಿಯು ವಿದ್ಯಾರ್ಥಿಗಳು ಭಾಷಾ ವಿಷಯ ಹೊರತುಪಡಿಸಿ, ಉಳಿದೆಲ್ಲ ವಿಷಯ ಆಯ್ಕೆ ಮಾಡಿಕೊಂಡಿರುವ
ಏಕ ಮಾಧ್ಯಮದಲ್ಲೇ(ಕನ್ನಡ ಅಥವಾ ಇಂಗ್ಲಿಷ್) ಬರೆಯಬೇಕು ಎಂದು ಇಲಾಖೆ ಕಟ್ಟಾಜ್ಞೆ ಹೊರಡಿಸಿದೆ. ಮಾತ್ರವಲ್ಲದೇ ಆಯ್ಕೆ ಮಾಡಿಕೊಂಡಿರುವ ಮಾಧ್ಯಮದಲ್ಲಿ ಪರೀಕ್ಷೆ ಬರೆಯದಿದ್ದರೆ ಅಂತಹ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡದಿರಲು ನಿರ್ಧರಿಸಿದೆ.
ಈ ವಿಚಾರವಾಗಿ ವಾಣಿಜ್ಯ ವಿಭಾಗದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸ್ವಲ್ಪ ವಿನಾಯ್ತಿ ನೀಡಲಾಗಿದೆ. ಪರೀಕ್ಷೆ
ಮಾಧ್ಯಮ ಕನ್ನಡ ಆಯ್ಕೆ ಮಾಡಿಕೊಂಡಿದ್ದರೂ, ಲೆಕ್ಕಶಾಸ್ತ್ರ , ಗಣಕವಿಜ್ಞಾನ, ಸಂಖ್ಯಾಶಾಸ್ತ್ರ ಹಾಗೂ ಬೇಸಿಕ್ ಮ್ಯಾಥ್ಸ್ ವಿಷಯವನ್ನು ಇಂಗ್ಲಿಷ್‌ನಲ್ಲಿ ಬರೆಯಬಹುದು. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಅರ್ಥಶಾಸ್ತ್ರ ವನ್ನು ಕನ್ನಡದಲ್ಲಿ ಬರೆದು, ಲೆಕ್ಕಶಾಸ್ತ್ರ , ಸಂಖ್ಯಾಶಾಸ್ತ್ರ ವನ್ನು ಇಂಗ್ಲಿಷ್‌ನಲ್ಲಿ ಬರೆಯಲು ಅವಕಾಶ ಇದೆ. ಆದರೆ, ಕಲಾ ವಿಭಾಗದ ವಿದ್ಯಾರ್ಥಿಗಳು ಅರ್ಥಶಾಸ್ತ್ರ ಕ್ಕೆ ಇಂಗ್ಲಿಷ್ ಮಾಧ್ಯಮ ಆಯ್ದುಕೊಂಡಲ್ಲಿ, ಉಳಿದ (ಇತಿಹಾಸ,ರಾಜ್ಯಶಾಸ್ತ್ರ , ಸಮಾಜಶಾಸ್ತ್ರ ಇತ್ಯಾದಿ) ವಿಷಯವನ್ನು ಇಂಗ್ಲಿಷ್‌ನಲ್ಲೇ ಬರೆಯಬೇಕು. ಇತಿಹಾಸ ಇಂಗ್ಲಿಷ್‌ನಲ್ಲಿ ಬರೆಯಲು ಕಷ್ಟ ಆಗುತ್ತದೆ ಎಂದು ಕನ್ನಡದಲ್ಲಿ ಬರೆಯುವಂತಿಲ್ಲ. ಇತಿಹಾಸವನ್ನು ಕನ್ನಡದಲ್ಲಿ ಬರೆಯಲು ಆಯ್ಕೆ ಮಾಡಿಕೊಂಡರೆ, ಉಳಿದ ವಿಷಯವನ್ನು ಕನ್ನಡದಲ್ಲೇ ಬರೆಯಬೇಕು.
ಪದವಿ ಪೂರ್ವ ಇಲಾಖೆಯ ಈ ನಿಯಮ ಗ್ರಾಮೀಣ ಪ್ರದೇಶದ ದ್ವಿತೀಯ ಪಿಯು ಕಲಾ ವಿಭಾಗದ ವಿದ್ಯಾರ್ಥಿಗಳಲ್ಲಿ
ಆತಂಕ ಸೃಷ್ಟಿಸಿದೆ. ಕಾರಣ, ಬಹುತೇಕ ವಿದ್ಯಾರ್ಥಿಗಳು ಈಗಾಗಲೇ ಶೇ.80ರಷ್ಟು ನೋಟ್ಸ್ ಹಾಗೂ ಶೇ.75ರಷ್ಟು ಅಭ್ಯಾಸ ಪೂರ್ಣಗೊಳಿಸಿದ್ದಾರೆ. ಪ್ರಥಮ ಪಿಯುನಲ್ಲಿ ಅರ್ಥಶಾಸ್ತ್ರವನ್ನು ಆಂಗ್ಲ ಭಾಷೆಯಲ್ಲಿ ಬರೆದ ವಿದ್ಯಾರ್ಥಿಗಳು ಇತಿಹಾಸ, ರಾಜ್ಯಶಾಸ್ತ್ರ ಇತ್ಯಾದಿ ವಿಷಯ ಕನ್ನಡದಲ್ಲಿ ಬರೆದಿದ್ದಾರೆ. ಆದರೆ, ಪ್ರಸಕ್ತ ಸಾಲಿನಲ್ಲಿ ಇದಕ್ಕೆ ಅವಕಾಶ ಇಲ್ಲ. ಅನಿವಾರ್ಯವಾಗಿ ಕನ್ನಡವನ್ನೇ ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.
ವಿದ್ಯಾರ್ಥಿಗಳ ಆಗ್ರಹ: ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿರುವ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಂತೆ ಕೆಲವು ವಿಷಯದಲ್ಲಿ ವಿನಾಯ್ತಿ ನೀಡಬೇಕು. ಅರ್ಥಶಾಸ್ತ್ರ ಅಥವಾ ಇತಿಹಾಸವನ್ನು ಇಂಗ್ಲಿಷ್‌ನಲ್ಲಿ ಬರೆದರೆ, ಬೇರೆ ವಿಷಯವನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಬೇಕು. ಕೆಲವೊಂದು ವಿಷಯವನ್ನು ಈಗಾಗಲೇ ಇಂಗ್ಲಿಷ್ ಮತ್ತು ಕೆಲವು ವಿಷಯವನ್ನು ಕನ್ನಡದಲ್ಲಿ ಅಭ್ಯಾಸ ಮಾಡುತ್ತಿದ್ದೇವೆ. ಮುಂದಿನ ವರ್ಷದಿಂದ ಮಾಧ್ಯಮದ ಆಯ್ಕೆಯನ್ನು ಕಡ್ಡಾಯ ಮಾಡಿ, ಈ ವರ್ಷ ಕಲಾ ವಿದ್ಯಾರ್ಥಿಗಳಿಗೂ ವಿನಾಯ್ತಿ ನೀಡಬೇಕು. ಇದೇ ನೀತಿ ಮುಂದುವರಿದರೆ ಫಲಿತಾಂಶದ ಮೇಲೆ ದುರಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪಿಯು ಕಲಾ ವಿಭಾಗದ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ವಿದ್ಯಾರ್ಥಿಗಳ ಈ ನಿಲುವಿಗೆ ಬಹುತೇಕ ಉಪನ್ಯಾಸಕರು ಬೆಂಬಲ ಸೂಚಿಸಿದ್ದಾರೆ.
ವಾಣಿಜ್ಯ ವಿಭಾಗದ ಸಂಖ್ಯೆ ಶಾಸ್ತ್ರ ವಿಷಯಗಳಲ್ಲಿ ಮಾತ್ರ ವಿನಾಯ್ತಿ ನೀಡಿದ್ದೇವೆ. ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಮಾಧ್ಯಮದಲ್ಲೇ ಪರೀಕ್ಷೆ ಬರೆಯುವುದರಿಂದ ಮೌಲ್ಯಮಾಪನ ಸುಲಭವಾಗುತ್ತದೆ. ಆಯಾ ಮಾಧ್ಯಮವಾರು ಮೌಲ್ಯಮಾಪನ ಮಾಡಬಹುದು. ಒಂದೇ ವಿದ್ಯಾರ್ಥಿ ಎರಡು ಮಾಧ್ಯಮದಲ್ಲಿ ಪರೀಕ್ಷೆ ಬರೆಯುವುದು ಸರಿಯಲ್ಲ. ಅವಕಾಶವೂ ನೀಡುವುದಿಲ್ಲ.
– ಸಿ.ಶಿಖಾ, ನಿರ್ದೇಶಕಿ, ಪಿಯು ಇಲಾಖೆ
– ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.