ಕಾವಿಧಾರಿಗಳ ಕಾಲಿಗೆ ಬೀಳುವುದು ನಾವೇ ಮಾಡಿಕೊಳ್ಳುವ ಅವಮಾನ
Team Udayavani, Nov 14, 2017, 11:27 AM IST
ಬೆಂಗಳೂರು: ನೂರಕ್ಕೆ 95ರಷ್ಟು ಕಾವಿ ಬಟ್ಟೆ ಧರಿಸಿರುವ ಜನರ ಬಗ್ಗೆ ನನಗೆ ಅನುಮಾನವಿದೆ. ಕಾವಿ ಧರಿಸಿದರೆ ವಿವೇಕ, ಅನುಭವ ಬರುವುದಿಲ್ಲ. ಅಧಿಕಾರ ಬರುತ್ತದಷ್ಟೇ. ಅವರ ಕಾಲಿಗೆ ಬೀಳುವುದು ನಮಗೆ ಮಾಡಿಕೊಂಡ ಅವಮಾನ ಎಂದು ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಹೇಳಿದ್ದಾರೆ.
ನಗರದ ಕನ್ನಡ ಭವನದ ನಯನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವಜ್ಞಾನಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಧರ್ಮಾಂತರ “ಧರ್ಮ ದೀಕ್ಷ ಪರಿವರ್ತನಾ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಹುಟ್ಟಿದ ಧರ್ಮ, ಜಾತಿಯಲ್ಲೇ ಸಾಯಬೇಕೆನ್ನುವ ತತ್ವವನ್ನು ತಮ್ಮ ಅಧಿಕಾರ ಉಳಿಸಿಕೊಳ್ಳಲು ಮಾಡುತ್ತಾರೆ. ಮನುಷ್ಯನಿಗೆ ಬುದ್ದಿಕೊಟ್ಟು ಯೋಚಿಸುವ ಶಕ್ತಿ ಇದ್ದರೂ ಕಾವಿ ತೊಟ್ಟಿರುವವರ ಕಾಲಿಗೆ ಬೀಳುತ್ತಾರೆ. ಅದು ನಮಗೆ ನಾವೇ ಮಾಡಿಕೊಂಡ ಅವಮಾನ. ನಾವು ಕಾಲಿಗೆ ಬೀಳಬೇಕಾದ್ದು, ಹೆತ್ತ ತಾಯಿಗೆ ಮಾತ್ರ, ಆಕೆ ಮೂಲಕ ಪ್ರಕೃತಿ ಮಾತೆಗೆ ಪೂಜಿಸಬೇಕು.
ಶ್ರೀಕೃಷ್ಣ ಪರಮಾತ್ಮನೆ ಬಂದರೂ ನಾನು ಆತನ ಕಾಲು ಮುಟ್ಟುವುದಿಲ್ಲ. ಮುಟ್ಟಿದರೆ ಅದು ನನಗೆ ನಾನೇ ಅಪಮಾನ ಮಾಡಿಕೊಂಡಂತೆ,’ ಎಂದರು. ಎಲ್ಲ ಧರ್ಮದ ಮಠಗಳ ಒಳ ಪಿತೂರಿ ಏನೆಂದರೆ ಪ್ರಜಾಪ್ರಭುತ್ವದ ಸಾರ ಹೀರಿ, ಅದನ್ನು ನಾಶ ಮಾಡುವುದೇ ಆಗಿದೆ. ಎಲ್ಲ ಮಠಗಳಿಗೂ ಪ್ರಜಾಪ್ರಭುತ್ವದ ಬಗ್ಗೆ ವಿರೋಧವಿದೆ.
ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದಕ್ಕೆ ಮತ್ತು ಸಂವಿಧಾನವನ್ನು ರೂಪಿಸಿಕೊಂಡು ಸಮಾನತೆ ಪ್ರಯತ್ನ ಪಡುತ್ತಿರುವುದಕ್ಕೆ ಅವರ ವಿರೋಧವಿದೆ. ಏಕೆ ನಿಮ್ಮ ವಿರೋಧ ಎಂದು ಕೇಳಿದರೆ, ಅದೇ ಪುರಾಣ, ಋಷಿಗಳ ಹಳೆ ಕಥೆ ಹೇಳುತ್ತಾರೆ. ನಮಗೆ ಸಾವಿರ ವರ್ಷದ ಹಿಂದಿನ ಕತೆ ಬೇಡ. ಸಾವಿರ ವರ್ಷಗಳ ಭವಿಷ್ಯ ಬೇಕಿದ್ದು, ಆ ಬಗ್ಗೆ ಕನಸು ಕಾಣಬೇಕಿದೆ ಎಂದು ಹೇಳಿದರು.
ನಾನು ಮಾತ್ರ ಬದುಕಬೇಕು. ಉಳಿದವರು ಇರುವುದೇ ನನ್ನ ಸೇವೆ ಮಾಡುವುದಕ್ಕೆ ಎಂದಿರುವ ಮನು ಒಬ್ಬ ಈಡಿಯೆಟ್, ಕ್ರಿಮಿನಲ್. ಮನು (ಮನುಸ್ಮತಿ) ಹೇಳಿದ್ದನ್ನು ಪ್ರಶ್ನೆ ಮಾಡಿದ ಕೂಡಲೇ ಬುದ್ಧನನ್ನು ಈ ದೇಶದಿಂದಲೇ ಓಡಿಸುವ ಪ್ರಯತ್ನಗಳು ನಡೆದವು. ಪ್ರಸ್ತುತ ರಾಜ್ಯದಲ್ಲಿ ವಿವಾದವಾಗಿರುವ ಲಿಂಗಾಯತ-ವೀರಶೈವ ಧರ್ಮದ ಕುರಿತು ಕೆಲವು ಸ್ವಾಮೀಜಿಗಳು ನೀಡುವ ಹೇಳಿಕೆ ಬಾಲಿಶತನದ್ದು.
ನನಗೆ ಏನು ಬೇಕು, ಹೇಗಿರಬೇಕು ಎಂಬುದು ನನ್ನ ನಿರ್ಧಾರವಾಗಬೇಕು. ಯಾರಿಗೂ ನೋವು ಕೊಡದೆ, ಅವಮಾನ ಮಾಡದೆ ಅಹಿಂಸಾತ್ಮಕವಾಗಿ ಬದುಕನ್ನು ರೂಪಿಸಿಕೊಳ್ಳಲು ಪ್ರಕೃತಿ ಹಕ್ಕು ಕೊಟ್ಟಿದೆ. ದಿನ ನಿತ್ಯ ಹೊಸ ಮನುಷ್ಯರಾಗದಿದ್ದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಯಾಗಲು ಸಾಧ್ಯವಿಲ್ಲ. ಹೊಸದಾಗಿ ಚಿಂತಿಸುವುದೇ ನಿಜವಾದ ಮತಾಂತರ ಎಂದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಸಿ.ಎಚ್.ರಾಜಶೇಖರ್, ರುದ್ರಪ್ಪ ಹನಗವಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.