ಖಾಸಗಿ ವೈದ್ಯರ ಮುಷ್ಕರ ಎಫೆಕ್ಟ್: ಒಂದೇ ದಿನ 17 ಬಲಿ
Team Udayavani, Nov 17, 2017, 6:00 AM IST
ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಮುಷ್ಕರ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳ ವೈದ್ಯರ ಹಠಮಾರಿ ಧೋರಣೆಯಿಂದಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಗುರುವಾರವೊಂದೇ ದಿನ 17 ಮಂದಿ ಜೀವಕಳೆದುಕೊಂಡಿದ್ದಾರೆ. ಈ ಮೂಲಕ ನಾಲ್ಕು ದಿನದಲ್ಲಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿದೆ. ಈ ಮಧ್ಯೆ, ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ರಮೇಶ್‌ಕುಮಾರ್ ನಡುವೆ ಇನ್ನೂ ಹಗ್ಗಜಗ್ಗಾಟ ಮುಂದುವರಿದಿದೆ.
ಭಾರತೀಯ ವೈದ್ಯ ಸಂಘದ ಕರ್ನಾಟಕ ಘಟಕ ಮತ್ತು ವಿವಿಧ ವೈದ್ಯಕೀಯ ಸಂಘಟನೆಗಳು ಖಾಸಗಿ ಆಸ್ಪತ್ರೆಗಳ ನಿಯಂತ್ರಣ ವಿಧೇಯಕ ವಿರೋಧಿಸಿ 13 ರಿಂದಲೇ ಬೆಳಗಾವಿಯಲ್ಲಿ ಮುಷ್ಕರ ನಡೆಸುತ್ತಿವೆ. ಪ್ರತಿಭಟನೆ ಶುರುವಾದ ದಿನದಿಂದ ಇಲ್ಲಿವರೆಗೆ ಖಾಸಗಿ ಆಸ್ಪತ್ರೆಗಳ ಒಪಿಡಿ ವಿಭಾಗದ ಸೇವೆ ಸಿಗದಿರುವುದರ ಪರಿಣಾಮದಿಂದಾಗಿ ಭಾರಿ ಪ್ರಮಾಣದ ಸಾವುಗಳು ಸಂಭವಿಸಿವೆ.
ಗುರುವಾರ ಬೆಂಗಳೂರಿನ ಚಂದ್ರ ಲೇಔಟ್‌ನ ಸತೀಶ್(45)ಕೇರಳ ಮೂಲದ ಆನೆಕಲ್ ನಿವಾಸಿ ಉನ್ನಿಕೃಷ್ಣನ್ (47), ಚಾಮರಾಜನಗರ ಜಿಲ್ಲೆಯ ಯಳದುಂಬ ಗ್ರಾಮದ ಮಾದೇಗೌಡ(52), ಕನಕಪುರ ತಾಲೂಕಿನ ಗಿಡ್ಡೇಗೌಡನದೊಡ್ಡಿ ಗ್ರಾಮದ ಚರಣ್ ಗೌಡ(6), ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಬೆಳವಂಗಲ ಗ್ರಾಮದ ಶಿವಣ್ಣ(68), ವಿಜಯಪುರ ಚಾವಡಿ ಗಲ್ಲಿಯ ನಿವಾಸಿ ಗಂಗಪ್ಪ ಹಳ್ಳಿ(67), ಕೊಪ್ಪಳ ಜಿಲ್ಲೆಯ ಭಾಗ್ಯನಗರದ ಭರಮಪ್ಪ ಬಂಗಾಳಿ ಮರದ(42), ರಾಯಬಾಗ ತಾಲೂಕಿನ ಬಸಪ್ಪ ಬಾಳಪ್ಪ ಮುರಾಬಟ್ಟಿ ಸಕಾಲದಲ್ಲಿ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ.
ಬಾಗಲಕೋಟೆಯಲ್ಲಿ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಸಿಗದೇ ಹುಟ್ಟುವ ಮುನ್ನವೇ ಹೊಟ್ಟೆಯಲ್ಲಿದ್ದ ಮಗು ಸತ್ತಿದೆ. ಜಮಖಂಡಿ ತಾಲೂಕಿನ ಬನಹಟ್ಟಿಯ ಶಾಂತವ್ವ ಕಲ್ಲಪ್ಪ ರಾವಳ(60), ಪ್ರೇಮಾ ಮಹದೇವ ಅಜೂರ (45), ಸಿಂಧನೂರು ತಾಲೂಕಿನ ಗೊರೇಬಾಳದ ಬಾಷುಸಾಬ ಮುಲ್ಲಾ ಹಾಗೂ ಮಲ್ಲಮ್ಮ ಎಂಬುವರ ಮಗು ಕೂಡ ಚಿಕಿತ್ಸೆ ನೀಡುವವರಿಲ್ಲದೇ ಮೃತಪಟ್ಟಿದೆ. ಶಿವಮೊಗ್ಗದ ರಾಗಿಗುಡ್ಡದ ನಿವಾಸಿ ಸತ್ತಾರ್(55), ಧಾರವಾಡ ಹೊಸಯಲ್ಲಾಪುರದ ಕಾರ್ತಿಕ್ ರೋಖಡೆ(25), ಹಾವೇರಿಯ ಕನಕಪುರ ಗ್ರಾಮದ ಚಂಪಾ ವಾಸಪ್ಪ ಮುಗದೂರ(35) ಕೂಡ ಸಾವನ್ನಪ್ಪಿದ್ದಾರೆ.
ರೋಗಿಗಳ ಪರದಾಟ: ಎಲ್ಲೆಡೆ ಒಪಿಡಿ ಬಂದ್ ಆಗಿದ್ದರಿಂದ ರೋಗಿಗಳು ಸಂಪೂರ್ಣವಾಗಿ ಸಂಕಷ್ಟ ಎದುರಿಸಿದರು. ಶಿಶುಗಳಿಗೆ ಹಾಗೂ ಹಿರಿಯ ನಾಗರಿಕರಿಗೂ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ನೀಡಿಲ್ಲ. ತಿದ್ದುಪಡಿ ವಿಧೇಯಕದಿಂದ ವೈದ್ಯರಿಗೆ ಹಾಗೂ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಹೀಗಾಗಿ ಒಪಿಡಿ ಬಂದ್ ಮಾಡಿ ವೈದ್ಯರು ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಸಂದೇಶ ಎಲ್ಲಾ ಖಾಸಗಿ ಆಸ್ಪತ್ರೆಯ ಸೂಚನಾ ಫಲಕದಲ್ಲಿ ಹಾಕಲಾಗಿತ್ತು. ಗ್ರಾಮೀಣ ಪ್ರದೇಶದ ಜನರು ನೂರಾರು ಮೈಲಿ ದೂರದಿಂದ ಆರೋಗ್ಯ ಸೇವೆ ಬಯಸಿ ಬಂದವರು, ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದರು.
ಸರ್ಕಾರಿ ವೈದ್ಯರ ಬೆಂಬಲ: ಈ ಮಧ್ಯೆ, ವೈದ್ಯರ ಮುಷ್ಕರಕ್ಕೆ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಬೆಂಬಲ ನೀಡಿದೆ. ಮುಷ್ಕರದಿಂದಾಗಿ ಜನ ಕಷ್ಟಪಡುತ್ತಿದ್ದಾರೆ. ಹೀಗಾಗಿ ಸರ್ಕಾರ ಅವರೊಂದಿಗೆ ಮಾತುಕತೆ ನಡೆಸಿ ಶೀಘ್ರ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಡಾ. ರಂಗನಾಥ್ ಮನವಿ ಮಾಡಿದ್ದಾರೆ.
ಖಾಸಗಿ ವೈದ್ಯರ ವೃತ್ತಿಗೆ ನೇರವಾಗಿ ಕುತ್ತು ತರುವ ಕೆಲವು ಅಂಶಗಳು ತಿದ್ದುಪಡಿ ವಿಧೇಯಕದಲ್ಲಿ ಇರುವಂತಿದೆ. ವೈದ್ಯರಿಗೆ ಹಾಗೂ ರೋಗಿಗಳಿಗೆ ತೊಂದರೆ ಆಗುವ ಅಂಶಗಳಿವೆ. ಅವುಗಳ ಕುರಿತು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆ ನೇತೃತ್ವದಲ್ಲಿ ಖಾಸಗಿ ವೈದ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಅದಕ್ಕೆ ಸಂಘದ ಬೆಂಬಲವಿದೆ ಎಂದಿದ್ದಾರೆ.
ಉಭಯ ಸದನಗಳಲ್ಲೂ ಗದ್ದಲ
ವಿಧೇಯಕ ವಿರೋಧಿಸಿ ವೈದ್ಯರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಸಾರ್ವಜನಿಕರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಉಭಯ ಸದನಗಳಲ್ಲೂ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತು. ಅಲ್ಲದೆ ಸರ್ಕಾರದ ಪ್ರತಿಷ್ಠೆಯೇ 25 ಮಂದಿ ಸಾಯಲು ಕಾರಣವಾಗಿದೆ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಪರಿಷತ್‌ನ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ತರಾಟೆಗೆ ತೆಗೆದುಕೊಂಡರು.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಜಗದೀಶ್ ಶೆಟ್ಟರ್, ಹಠಮಾರಿ ಧೋರಣೆ ಸರಿಯಲ್ಲ. ವೈದ್ಯರ ಪ್ರತಿಭಟನೆಯಿಂದ 25 ಮಂದಿ ಸತ್ತಿದ್ದಾರೆ. ಜನರ ಜೀವ ಉಳಿಸಲು ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎಂಬುದನ್ನು ವಿವರಿಸಿ ಎಂದು ಆಗ್ರಹಿಸಿದರು.
ಇನ್ನು ಮೇಲ್ಮನೆಯಲ್ಲಿ ನೇರವಾಗಿ ಆರೋಗ್ಯ ಸಚಿವ ರಮೇಶ್‌ಕುಮಾರ್ ಅವರನ್ನೇ ತರಾಟೆಗೆ ತೆಗೆದುಕೊಂಡ ಕೆ.ಎಸ್.ಈಶ್ವರಪ್ಪ, ಸಚಿವರ ರಾಜೀನಾಮೆಗೆ ಒತ್ತಾಯಿಸಿದರು. ಜತೆಗೆ ರಮೇಶ್‌ಕುಮಾರ್ ವಿರುದ್ಧ ಕೊಲೆಗಡುಕ ಪದವನ್ನೂ ಬಳಕೆ ಮಾಡಿದರು.
ಈಶ್ವರಪ್ಪ ಬಳಸಿದ ಕೊಲೆಗಡುಕ ಪದಕ್ಕೆ ಕಾಂಗ್ರೆಸ್‌ನ ಎಲ್ಲ ಸಚಿವರು, ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಎರಡೂ ಕಡೆಯ ಸದಸ್ಯರ ನಡುವೆ ಮಾತಿನ ಚಕಮಕಿ ಮುಂದುವರಿಯಿತು. ಇದರ ನಡುವೆಯೇ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವೈದ್ಯರ ನಿಯೋಗ ನನ್ನೊಂದಿಗೆ ಚರ್ಚಿಸಿದ ಸಂದರ್ಭದಲ್ಲಿ ಮುಷ್ಕರ ಹಿಂತೆಗೆದುಕೊಳ್ಳುವ ಭಾವನೆ ವ್ಯಕ್ತವಾಗಿತ್ತು. ಆದರೆ, ನೀವು (ಬಿಜೆಪಿ) ಹೋಗಿ ಧರಣಿ ಮುಂದುವರಿಸಲು ಪ್ರಚೋದನೆ ನೀಡಿದ್ದರಿಂದ ವೈದ್ಯರು ಮುಷ್ಕರ ಮುಂದುವರಿಸಿ ಜನ ಸಾಯುವಂತಾಗಿದೆ. ನಿಜವಾದ ಕೊಲೆಗಡುಕರು ನೀವು ಎಂದು ತಿರುಗೇಟು ನೀಡಿದರು.
ಈ ಮಧ್ಯೆ, ಉಭಯ ಸದನಗಳಲ್ಲೂ ಉತ್ತರ ನೀಡಿದ ಸಚಿವ ರಮೇಶ್‌ಕುಮಾರ್, ಈ ವಿಚಾರದಲ್ಲಿ ನನಗೆ ಪ್ರತಿಷ್ಠೆಯೇನೂ ಇಲ್ಲ. ವೈದ್ಯರೇ ಮುಷ್ಕರ ಬಿಟ್ಟು ಮುಕ್ತ ಮನಸ್ಸಿನಿಂದ ಮಾತುಕತೆಗೆ ಬರಲಿ ಎಂದು ಹೇಳಿದರು. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸಲು ಹಣ ನೀಡುತ್ತಿರುವುದರಿಂದ ಎಷ್ಟು ಹಣ ನೀಡಬೇಕು ಎಂದು ನಿರ್ಧರಿಸುವ ಆಧಿಕಾರ ಸರ್ಕಾರಕ್ಕೆ ಇರಬೇಡವೇ? ಜನರ ಜೀವ ಉಳಿಸುವುದು ಸರ್ಕಾರದ ಕರ್ತವ್ಯ. ವೈದ್ಯರೂ ಪ್ರತಿಷ್ಠೆ ಬಿಟ್ಟು ಮುಕ್ತವಾಗಿ ಚರ್ಚಿಸಲಿ ಎಂದರು.
ಮುಷ್ಕರ ನಿಲ್ಲಿಸಲು ಹೈಕೋರ್ಟ್ ತಾಕೀತು
ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿರುವ ವೈದ್ಯರ ವಿರುದ್ಧ ಹೈಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿದೆ. ಮುಷ್ಕರದ ಕಾರಣದಿಂದಾಗಿ ಸಂಭವಿಸಿದ ಸಾವು ನೋವುಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿತು. ಅಕ್ಷರಸ್ಥರಾಗಿರುವ ವೈದ್ಯರು ಸದ್ಯದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ವೈದ್ಯರ ಮೊದಲ ಆದ್ಯತೆ ಸೇವೆಯೇ ಅಲ್ಲವೇ? ನಿಮ್ಮ ಸಮಸ್ಯೆಗಳ ಬಗ್ಗೆಯೂ ಆಲಿಸೋಣ, ಆದರೆ ಸಮಾಜದ ಹಿತದೃಷ್ಟಿಯಿಂದ ತಕ್ಷಣವೇ ಮುಷ್ಕರ ಕೈಬಿಟ್ಟು ಸೇವೆಗೆ ಮುಂದಾಗಿ ಎಂದು ಮೌಕಿಕವಾಗಿ ಸೂಚಿಸಿತು.ಜತೆಗೆ ರಾಜ್ಯಸರ್ಕಾರ, ಕರ್ನಾಟಕ ಮೆಡಿಕಲ್ ಕೌನ್ಸಿಲ್, ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್‌ಗಳ ಸಂಘ, ಭಾರತೀಯ ವೈದ್ಯಕೀಯ ಸಂಘಕ್ಕೆ ನೋಟಿಸ್ ಜಾರಿಗೊಳಿಸಿ ಶುಕ್ರವಾರಕ್ಕೆ ವಿಚಾರಣೆ ಮುಂದೂಡಿತು.
ಸರ್ಕಾರಿ ಆಸ್ಪತ್ರೆಗಳತ್ತ ರೋಗಿಗಳು
ವೈದ್ಯರ ಮುಷ್ಕರದಿಂದಾಗಿ ಗುರುವಾರವೂ ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿ ಸೌಲಭ್ಯ ಸಿಗದ ಕಾರಣ, ರೋಗಿಗಳು ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದರು. ಈ ಪರಿಣಾಮ ಬೆಂಗಳೂರಿನ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.5ರಿಂದ 10ರಷ್ಟು ಹೊರರೋಗಿಗಳ ಸಂಖ್ಯೆ ಹೆಚ್ಚಾಗಿದೆ. ನಗರದ ಕೆ.ಸಿ.ಜನರಲ್, ಜಯದೇವ, ಕಿದ್ವಾಯಿ, ವಿಕ್ಟೋರಿಯಾ, ಬೌರಿಂಗ್, ಇಎಸ್‌ಐ, ಬಿಬಿಎಂಪಿ ಆಸ್ಪತ್ರೆಗಳು, ಜಿಲ್ಲಾ ಆರೋಗ್ಯ ಕೇಂದ್ರಗಳು, ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೆಚ್ಚಿನ ಸೇವೆ ಒದಗಿಸಲಾಗಿತ್ತು. ಇನ್ನು ಉತ್ತರ ಕರ್ನಾಟಕದಲ್ಲಿ ಹಲವಾರು ಮಂದಿ ರೋಗಿಗಳು ಚಿಕಿತ್ಸೆಗಾಗಿ ನೆರೆಯ ರಾಜ್ಯಗಳತ್ತ ಹೋದರು.
ತಿದ್ದುಪಡಿಗೆ ಒಪ್ಪದ ಸಚಿವ
ವಿಧೇಯಕದಲ್ಲಿನ ಕೆಲವು ಅಂಶಗಳನ್ನು ಬಿಡುವಂತೆ ಸಿಎಂ ಸಿದ್ದರಾಮಯ್ಯ ಅವರು ಆರೋಗ್ಯ ಸಚಿವ ರಮೇಶ್‌ಕುಮಾರ್ ಅವರ ಮನವೊಲಿಕೆಗೆ ಯತ್ನ ಮಾಡಿದರಾದರೂ, ಅವರು ಒಪ್ಪಿಲ್ಲ. ಗುರುವಾರ ರಾತ್ರಿ ನಡೆದ ಹಿರಿಯ ಸಚಿವರ ಸಭೆಯಲ್ಲಿ ತಿದ್ದುಪಡಿ ಮಾಡಬಹುದಾದ ಪಟ್ಟಿಯೊಂದನ್ನು ಸಿಎಂ ಇಟ್ಟಿದ್ದಾರೆ. ಇದಕ್ಕೆ ಕೆಲವು ಸಚಿವರು ಒಪ್ಪಿದರೂ, ರಮೇಶ್‌ಕುಮಾರ್ ಮಾತ್ರ, ಜನ ವಿಧೇಯಕದ ಬಗ್ಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ. ಹೀಗಾಗಿ ತಿದ್ದುಪಡಿ ಮಾಡುವುದು ಬೇಡ ಎಂದು ಹಠ ಹಿಡಿದರು. ಕಡೆಗೆ ಸದನದಲ್ಲಿ ಮಂಡಿಸಿ, ಸದಸ್ಯರಿಂದ ಬರುವ ಅಭಿಪ್ರಾಯ ಪರಿಗಣಿಸಿ ಬೇಕಿದ್ದರೆ ಬದಲಾವಣೆ ಮಾಡೋಣ ಎಂದು ಎನ್ನಲಾಗಿದೆ. ಬಳಿಕ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ವೈದ್ಯರ ಪ್ರತಿನಿಧಿಗಳೊಂದಿಗೆ ಸಭೆ ಕರೆಯಲಾಗಿದ್ದು, ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಮಾಡುವ ಬಗ್ಗೆ ರಮೇಶ್‌ಕುಮಾರ್ ಅವರಿಗೆ ಸಲಹೆ ಮಾಡಿದರು ಎಂದು ಹೇಳಲಾಗಿದೆ.
ಇಂದಿನಿಂದ ಸೇವೆ ಲಭ್ಯ
ಹೈಕೋರ್ಟ್‌ನ ಮುಷ್ಕರ ಕೈಬಿಡುವ ಸೂಚನೆಗೆ ಮಣಿದಿರುವ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಸಂಘ(ಫನಾ) ಶುಕ್ರವಾರದಿಂದ ಎಲ್ಲ ಸೇವೆ ಒದಗಿಸಲು ನಿರ್ಧರಿಸಿದೆ. ಆದರೆ, ಭಾರತೀಯ ವೈದ್ಯ ಸಂಘದ ಕರ್ನಾಟಕ ಶಾಖೆಯ ಪದಾಧಿಕಾರಿಗಳು ಬೆಳಗಾವಿಯಲ್ಲೇ ಉಪವಾಸ ಸತ್ಯಾಗ್ರಹ ಮುಂದುವರಿಸಲು ನಿರ್ಧರಿಸಿದ್ದಾರೆ. ಜತೆಗೆ ಹೋರಾಟದಲ್ಲೇ ಬಿರುಕು ಮೂಡಿದ್ದು, ವಿಧೇಯಕದ ಬಗ್ಗೆ ಸರ್ಕಾರ ಹೊಂದಿರುವ ನಿಲುವು ವಿರೋಧಿಸಲು ಎಲ್ಲಾಸಂಘಟನೆಗಳು ನಿರ್ಧರಿಸಿವೆ.
ರಾಜೀನಾಮೆ ನೀಡಲು ಮಂತ್ರಿಯಾಗಿಲ್ಲ ಮತ್ತು ಅದರಿಂದ ಸಮಸ್ಯೆ ಬಗೆ ಹರಿಯುತ್ತದೆ ಎಂಬ ನಂಬಿಕೆಯೂ ಇಲ್ಲ. ಮಂತ್ರಿಯಾಗಬೇಕೆಂಬ ಕನಸು ಕಂಡವನೂ ನಾನಲ್ಲ. ಮುಖ್ಯಮಂತ್ರಿ ನನ್ನ ನಾಯಕರು. ಅವರ ಮೇಲೆ ನಂಬಿಕೆ ಇದೆ. ನನ್ನ ಮೇಲೆ ಅವರಿಗೆ ನಂಬಿಕೆ ಇದೆ.
– ಕೆ.ಆರ್. ರಮೇಶ್‌ಕುಮಾರ್, ಆರೋಗ್ಯ ಸಚಿವ
ಸರ್ಕಾರ ಮತ್ತು ಮುಷ್ಕರ ನಿರತ ವೈದ್ಯರು ಸಾರ್ವಜನಿಕ ಹಿತದೃಷ್ಟಿಯಿಂದ ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ವೈದ್ಯರ ಮುಷ್ಕರದಿಂದ ಗಂಭೀರ ಸಮಸ್ಯೆ ಉಂಟಾಗಿದ್ದು, ಸಾಮಾನ್ಯ ಜನರಿಗೆ ಇದರಿಂದ ತೊಂದರೆಯಾಗುತ್ತಿದೆ. ಸರ್ಕಾರ ಆದಷ್ಟು ಬೇಗ ವೈದ್ಯರ ಜತೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
– ಕೆ.ಬಿ.ಕೋಳಿವಾಡ, ಸ್ಪೀಕರ್
ಜನರಿಗೆ ವಿರುದ್ಧವಾದ ಕಾಯ್ದೆ ಮಾಡುತ್ತಿರುವ ಈ ಮಹಾನುಭಾವರನ್ನು ದೇವರೇ ಕಾಪಾಡಬೇಕು. ನಿಮಗೆ ಮಾನವೀಯತೆ ಇಲ್ಲ ಎಂದಾದರೂ ನಮಗಿದೆ. ಜನರು ಸಾಯುತ್ತಿದ್ದಾರೆ ಎಂದರೆ ಅದಕ್ಕೆ ನಮಗೆ ಕಣ್ಣೀರು ಬರುತ್ತದೆ. ಆದರೆ, ಕಾನೂನು ಪ್ರಕಾರ ಏನನ್ನು ಬೇಕಾದರೂ ಮಾಡುತ್ತೇನೆ ಎಂದರೆ ನಡೆಯುವುದಿಲ್ಲ.
– ಡಾ.ಎಚ್.ಎನ್.ರವೀಂದ್ರ, ಖಾಸಗಿ ಆಸ್ಪತ್ರೆಗಳ ವೈದ್ಯರ ಸಂಘದ ಅಧ್ಯಕ್ಷ
ಖಾಸಗಿ ಆಸ್ಪತ್ರೆಗಳಿಗೆ ತೊಂದರೆಯಾಗುವ ಕೆಪಿಎಂಇ ಕಾಯ್ದೆ ಮಸೂದೆಯನ್ನು ಸರ್ಕಾರ ಮಂಡಿಸಿದ್ದೇ ಆದರೆ ಅದು ಅಂಗೀಕಾರವಾಗದಂತೆ ನೋಡಿಕೊಳ್ಳುತ್ತೇವೆ. ಕಾಂಗ್ರೆಸ್‌ನಲ್ಲೂ ಈ ಮಸೂದೆ ವಿರೋಧಿಸುವವರಿದ್ದಾರೆ. ಚರ್ಚೆಯಲ್ಲಿ ಜೆಡಿಎಸ್ ಕಡೆಯಿಂದ ಯಾರೂ ಪಾಲ್ಗೊಳ್ಳುವುದಿಲ್ಲ.
– ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.