ರಸ್ತೆ ಗುಂಡಿಗೆ ವೈಟ್‌ಟಾಪಿಂಗ್ ಪರಿಹಾರ
Team Udayavani, Nov 18, 2017, 11:27 AM IST
ಬೆಂಗಳೂರು: ರಸ್ತೆಗುಂಡಿಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಸರ್ಕಾರ ನಗರದಾದ್ಯಂತ ವೈಟ್‌ಟಾಪಿಂಗ್ ರಸ್ತೆಗಳ ನಿರ್ಮಾಣಕ್ಕೆ ಮುಂದಾಗಿದೆ. ಮಳೆ, ಕಳಪೆ ಕಾಮಗಾರಿ, ಅಧಿಕ ವಾಹನ ಸಂಚಾರದಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿ ವರ್ಷ ಗುಂಡಿಗಳು ಸೃಷ್ಟಿಯಾಗಿ ಸವಾರರು ತೊಂದರೆ ಅನುಭವಿಸುತ್ತಿದ್ದು, ಗುಂಡಿಗಳಿಂದ ಆಗುವ ಅನಾಹುತಗಳಿಂದಾಗಿ ಸರ್ಕಾರ ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಆ ಹಿನ್ನೆಲೆಯಲ್ಲಿ ನಗರದ ರಸ್ತೆಗಳನ್ನು ಗುಂಡಿಮುಕ್ತಗೊಳಿಸಲು ಸರ್ಕಾರ ವೈಟ್‌ಟಾಪಿಂಗ್ ಮೊರೆ ಹೋಗಿದೆ.
ಅದರಂತೆ ಎರಡು ಹಂತಗಳಲ್ಲಿ ನಗರದ 24 ರಸ್ತೆಗಳು ಹಾಗೂ 6 ಜಂಕ್ಷನ್‌ಗಳ 93.47 ಕಿಲೋ ಮೀಟರ್‌ಗಳನ್ನು 972.69 ಕೋಟಿ ವೆಚ್ಚದಲ್ಲಿ ವೈಟ್‌ಟಾಪಿಂಗ್ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮೊದಲ ಹಂತದಲ್ಲಿ ಪಾಲಿಕೆಯ ಅಧಿಕಾರಿಗಳು ನಗರದ ಆರು ರಸ್ತೆಗಳಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಆರಂಭಿಸಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಗುತ್ತಿಗೆ ಪಡೆದ ಸಂಸ್ಥೆಗಳಿಗೆ ಹೆಚ್ಚುವರಿ ಯಂತ್ರಗಳನ್ನು ತರಿಸಿಕೊಳ್ಳುವಂತೆ ಪಾಲಿಕೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಎಲ್ಲೆಲ್ಲಿ ಕಾಮಗಾರಿ ಆರಂಭ: ನಗರದ ನಾಗಾವರ ಹೊರವರ್ತುಲ ರಸ್ತೆಯ ಹೆಣ್ಣೂರು ಜಂಕ್ಷನ್, ಹೊಸೂರು ರಸ್ತೆಯ ಲಸ್ಕರ್ ರಸ್ತೆ, ಪಶ್ಚಿಮ ಕಾರ್ಡ್ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ ಹಾಗೂ ವಿಜಯನಗರ ರಸ್ತೆಗಳಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಆರಂಭವಾಗಿದೆ. ಸಂಚಾರ ಪೊಲೀಸರು ನೀಡಿರುವ ಅನುಮತಿಯಂತೆ ಹಂತ ಹಂತವಾಗಿ ಕಾಮಗಾರಿ ನಡೆಸಲಾಗುತ್ತಿದ್ದು, ವಿಜಯನಗರದಲ್ಲಿ 100 ಮೀ., ಹೆಣ್ಣೂರು ಜಂಕ್ಷನ್‌ನಲ್ಲಿ 500 ಮೀ. ಹಾಗೂ ಲಸ್ಕರ್ ರಸ್ತೆಯಲ್ಲಿ 170 ಮೀ. ಉದ್ದದ ವೈಟ್‌ಟಾಪಿಂಗ್ ಕಾಮಗಾರಿ ನಡೆಸಲಾಗಿದೆ.
ಮೇಲ್ಪದರ ಅಳತೆಯ ವಿವರ: ಡಾಂಬರು ರಸ್ತೆಗಳನ್ನು ನಿರ್ಮಿಸುವ ವೇಳೆ ಭೂಮಿಯಿಂದ ಸುಮಾರು 40 ಎಂ.ಎಂ. ನಷ್ಟು ಮೇಲ್ಪದರವನ್ನು ಹಾಕಲಾಗುತ್ತದೆ. ಕೆಲವೊಂದು ರಸ್ತೆಯ ಮೇಲ್ಪದರ ಕಿತ್ತು ಬಂದಿದ್ದಲ್ಲಿ 6 ರಿಂದ 8 ಎಂ.ಎಂ. ಡಾಂಬರು ಸಹ ಹಾಕಲಾಗುತ್ತದೆ. ಆದರೆ, ವೈಟ್ ಟಾಪಿಂಗ್ ರಸ್ತೆ ನಿರ್ಮಿಸುವ ವೇಳೆ ರಸ್ತೆಗೆ ಅನುಗುಣವಾಗಿ 150 ರಿಂದ 200 ಎಂ.ಎಂ.ವರೆಗೆ ಕಾಂಕ್ರಿಟ್ ಮೇಲ್ಪದರ ನಿರ್ಮಿಸಲಾಗುವುದರಿಂದ ರಸ್ತೆ ಧೀರ್ಘಕಾಲ ಬಾಳಿಕೆ ಬರುತ್ತದೆ.
ವೈಟ್‌ಟಾಪಿಂಗ್ ದುಬಾರಿ: ಡಾಂಬರು ರಸ್ತೆಗಳಿಗೆ ಹೋಲಿಕೆ ಮಾಡಿದರೆ ವೈಟ್‌ಟಾಪಿಂಗ್ ರಸ್ತೆ ನಿರ್ಮಾಣ ಬಲು ದುಬಾರಿಯಾಗಿದೆ. ಒಂದು ಕಿ.ಮೀ. ಡಾಂಬರು (ಬಿಸಿ ಹಾಗೂ ಬಿಎಂ) ರಸ್ತೆ ನಿರ್ಮಿಸಲು 80 ಲಕ್ಷದಿಂದ 1.05 ಕೋಟಿ ವೆಚ್ಚವಾಗಲಿದೆ. ಆದರೆ, ವೈಟ್‌ಟಾಪಿಂಗ್ ರಸ್ತೆಯ ಮೇಲ್ಪದರ ನಿರ್ಮಾಣಕ್ಕೆ ಮಾತ್ರವೇ ಸುಮಾರು 1.14 ಕೋಟಿ ಖರ್ಚಾಗಲಿದ್ದು, ರಸ್ತೆಯ ಬದಿಯಲ್ಲಿ ಒಳಚರಂಡಿ, ನೀರಿನ ಸಂಪರ್ಕ, ಒಎಫ್ಸಿ ಸೇವೆಗಳಿಗೆ ಡಕ್ಟ್ಗಳ ಅಳವಡಿಕೆ ಸೇರಿದರೆ ಒಂದು ಕಿ.ಲೋ.ಮೀಟರ್ 2.50 ಕೋಟಿಯವರೆಗೆ ಖರ್ಚಾಗಲಿದೆ ಎಂದು ಪಾಲಿಕೆಯ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.
ವೈಟ್‌ಟಾಪಿಂಗ್‌ಗೆ ಎರಡು ರೀತಿಯ ಯಂತ್ರಗಳ ಬಳಕೆ: ವೈಟ್‌ಟಾಪಿಂಗ್ ರಸ್ತೆ ನಿರ್ಮಾಣ ವೇಳೆ ರಸ್ತೆಯ ಅಳತೆಗೆ ಅನುಗುಣವಾಗಿ ಎರಡು ರೀತಿಯ ಯಂತ್ರಗಳನ್ನು ಬಳಕೆ ಮಾಡಲಾಗುತ್ತದೆ. 11 ರಿಂದ 14 ಮೀಟರ್ ಅಳತೆಯ ರಸ್ತೆಗೆ ಡಾಂಬರೀಕರಣ ಮಾಡಲು ಸ್ಲಿಪ್‌ಫಾರ್ಮ್ ಪವೇರ್ ಯಂತ್ರ ಬಳಸಲಾಗುತ್ತಿದ್ದು, ಈ ಯಂತ್ರ ಒಮ್ಮೆ 8.5 ರಿಂದ 11 ಮೀಟರ್ ರಸ್ತೆಯಲ್ಲಿ ಕಾಂಕ್ರಿಟ್ ಕಾಮಗಾರಿ ನಡೆಸುತ್ತದೆ. ಅದೇ ರೀತಿಯ 6 ರಿಂದ 8 ಮೀಟರ್ ಅಳತೆಯ ರಸ್ತೆಗೆ ಫಿಕ್ಸ್‌ಫಾರ್ಮ್ ಪವೇರ್ ಯಂತ್ರಗಳನ್ನು ಬಳಸಲಾಗುತ್ತಿದ್ದು, ಈ ಯಂತ್ರವು ಒಮ್ಮೆ 5.5 ಮೀಟರ್ ಅಳತೆಯ ರಸ್ತೆಗೆ ಕಾಂಕ್ರಿಟ್ ಸುರಿಯಲಿದೆ.
ಆಗಸ್ಟ್ ವೇಳೆಗೆ ಎರಡು ಹಂತ ಪೂರ್ಣ: ಪಾಲಿಕೆಯ ಎರಡು ಹಂತಗಳಲ್ಲಿ ಕೈಗೆತ್ತಿಕೊಂಡಿರುವ 24 ರಸ್ತೆ ಮತ್ತು 6 ಜಂಕ್ಷನ್‌ಗಳನ್ನು ವೈಟ್ ಟಾಪಿಂಗ್ ರಸ್ತೆಗಳನ್ನಾಗಿ ಪರಿವರ್ತಿಸುವ ಕಾಮಗಾರಿ ಜುಲೈ-ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ. ಮೊದಲ ಹಂತದ ಆರು ರಸ್ತೆಗಳ ಕಾಮಗಾರಿಯನ್ನು ಜನವರಿ ವೇಳೆಗೆ ಬಹುತೇಕ ಪೂರ್ಣಗೊಳ್ಳಲಿದ್ದು, ಸೇವಾಜಾಲಗಳ ಸ್ಥಳಾಂತರವಿಲ್ಲದಿದ್ದರೆ ಕಾಮಗಾರಿ ಶೀಘ್ರ ಮುಗಿಯಲಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸರ್ವೀಸ್ ರಸ್ತೆಗಳು ಡಾಂಬರೀಕರಣ: ನಗರದ ಹೊರವಲಯದ ಹೊರ ಹಾಗೂ ಒಳ ವರ್ತುಲ ರಸ್ತೆಗಳ ಮುಖ್ಯರಸ್ತೆಗಳನ್ನು ಮಾತ್ರ ವೈಟ್‌ಟಾಪಿಂಗ್ ಕಾಮಗಾರಿ ನಡೆಸಲಾಗುವುದು. ಸಾಮಾನ್ಯವಾಗಿ ಮುಖ್ಯರಸ್ತೆಗಳಲ್ಲಿ ಜಲಮಂಡಳಿ, ಬೆಸ್ಕಾಂ, ಒಎಫ್ಸಿ ಸೇರಿದಂತೆ ಇತರೆ ಇಲಾಖೆಗಳ ಸೇವಾಜಾಲಗಳ ಸಂಪರ್ಕವಿರುವುದಿಲ್ಲ. ಹೀಗಾಗಿ ಮುಖ್ಯರಸ್ತೆಗಳಲ್ಲಿ ಮಾತ್ರ ವೈಟ್‌ಟಾಪಿಂಗ್ ಕಾಮಗಾರಿ ನಡೆಯಲಿದ್ದು, ಸರ್ವೀಸ್ ರಸ್ತೆಗಳಲ್ಲಿ ಡಾಂಬರೀಕರಣ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.
ಪಾಲಿಕೆಯ 24 ರಸ್ತೆಗಳು ಹಾಗೂ 6 ಜಂಕ್ಷನ್ ರಸ್ತೆಗಳ ವೈಟ್‌ಟಾಪಿಂಗ್‌ಗೆ ಸರ್ಕಾರ 972 ಕೋಟಿ ರೂ. ನೀಡಿದ್ದು, ಮೊದಲ ಹಂತದಲ್ಲಿ 6 ರಸ್ತೆಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಗುತ್ತಿಗೆ ಸಂಸ್ಥೆಗಳಿಗೆ ಹೆಚ್ಚುವರಿ ಯಂತ್ರಗಳನ್ನು ತರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ವೈಟ್‌ಟಾಪಿಂಗ್ ರಸ್ತೆಗಳಿಂದ ರಸ್ತೆಗುಂಡಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದ್ದು, ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ.
-ಕೆ.ಟಿ.ನಾಗರಾಜ್, ಬಿಬಿಎಂಪಿ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್
1500 ಕಿ.ಮೀ ರಸ್ತೆಗೆ ಟಾಪಿಂಗ್ ಭಾಗ್ಯ: ನಗರದ ವಿವಿಧ ಭಾಗಗಳಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಿಸಲಾಗಿರುವ ವೈಟ್‌ಟಾಪಿಂಗ್ ರಸ್ತೆಗಳಿಂದ ವಾಹನ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಆ ಹಿನ್ನೆಲೆಯಲ್ಲಿ ಈಗಾಗಲೇ 93.47 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್‌ಟಾಪಿಂಗ್ ಮಾಡಲಾಗುತ್ತಿದ್ದು, ಇತ್ತೀಚೆಗೆ ಮುಖ್ಯಮಂತ್ರಿಗಳು ನಗರದ 1500 ಕಿ.ಮೀ.ಉದ್ದದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳನ್ನು ವೈಟ್‌ಟಾಪಿಂಗ್ ಮಾಡುವುದಾಗಿ ಘೋಷಿಸಿದ್ದಾರೆ.
ವೈಟ್‌ಟಾಪಿಂಗ್ ಹೇಗೆ ವಿಭಿನ್ನ?: ಡಾಂಬಾರು ರಸ್ತೆ ಬಿಟುಮಿನ್ ಕಾಂಕ್ರಿಟ್ ಹಾಗೂ ಬಿಟುಮಿನ್ ಮೆಕಾಡಮ್ ಮಿಶ್ರಣದಿಂದ ನಿರ್ಮಿಸಲಾಗುತ್ತದೆ. ಹೀಗೆ ನಿರ್ಮಿಸಿದ ರಸ್ತೆಗಳು ಸುಮಾರು 4 ವರ್ಷಗಳು ಬಾಳಿಕೆ ಬರಲಿದ್ದು, ಮಳೆಗಾಲದಲ್ಲಿ ರಸ್ತೆಗಳು ಹಾಳಾಗುವ ಸಾಧ್ಯತೆಯಿರುತ್ತದೆ. ಆದರೆ, ವೈಟ್‌ಟಾಪಿಂಗ್ ರಸ್ತೆಯನ್ನು ಸಂಪೂರ್ಣ ಕಾಂಕ್ರಿಟ್‌ನಿಂದ ನಿರ್ಮಿಸುವುದರಿಂದ ಕನಿಷ್ಠ 30 ವರ್ಷಗಳ ಬಾಳಿಕೆ ಬರಲಿದೆ. ಮಳೆಗಾಲದಲ್ಲಿಯೂ ರಸ್ತೆಗುಂಡಿ ಸಮಸ್ಯೆ ಉಂಟಾಗುವುದಿಲ್ಲ ಎಂಬುದು ಬಿಬಿಎಂಪಿ ಅಧಿಕಾರಿಗಳ ಅಭಿಪ್ರಾಯವಾಗಿದೆ.
* ವೆಂ. ಸುನೀಲ್ ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
New Zealand: ತವರಿನಂಗಳದಲ್ಲೇ ಟೆಸ್ಟ್ ನಿವೃತ್ತಿಗೆ ಸೌಥಿ ನಿರ್ಧಾರ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.