ಒಂದು ಬೋಳು ಗುಡ್ಡ ಕಾಡಾದ ಕತೆ..


Team Udayavani, Nov 19, 2017, 6:25 AM IST

forest.jpg

ಮಲೆನಾಡೆಂದರೆ ಹಾಗೆ, ಸಾಲು ಸಾಲು ಗುಡ್ಡಗಳು. ದಟ್ಟ ಕಾಡುಗಳು. ಅದರ ನಡುವೆ ಕೆಲವೆಡೆ ಬೋಳು ಗುಡ್ಡಗಳು. ದಟ್ಟ ಕಾಡಿನಲ್ಲಿ ಈ ರೀತಿಯ ಬೋಳು ಗುಡ್ಡಗಳು ಯಾಕಿರುತ್ತದೆ ಎಂದು ಚಿಕ್ಕವನಿಗಿದ್ದಾಗ ಪ್ರಶ್ನೆಯೊಂದು ಸದಾ ಉದ್ಭವವಾಗುತ್ತಿತ್ತು. ನಮ್ಮ  ಊರಿನ ನಡುವೆಯೂ ಬೋಳುಗುಡ್ಡವೊಂದು ಇತ್ತು. ಕಾಡನ್ನು ನೋಡುತ್ತಿದ್ದ ನಮಗೆ ಇದರ ಮಧ್ಯೆ ಈ ಬೋಳುಗುಡ್ಡ ಆಪ್ತತೆಯೊಂದನ್ನು ಹುಟ್ಟಿಸಿತ್ತು. ಒಂದು ಜೀವಂತ ಪ್ರಪಂಚವೊಂದನ್ನು ಸೃಷ್ಟಿಸಿತ್ತು.

ಸುತ್ತ ಇರುವ ಗುಡ್ಡ ಬೆಟ್ಟಗಳಿಗೆ ಹೋಲಿಸಿದರೆ ಇದೇನೂ ದೊಡ್ಡದಾಗಿರಲಿಲ್ಲ. ಬೋಳು ಬೋಳಾಗಿದ್ದ ಇದನ್ನು ನಾವು ಬೋಳು ಗುಡ್ಡ ಎಂದೇ ಕರೆಯುತ್ತಿದ್ದೆವು. ಅಲ್ಲಲ್ಲಿ ಕುರುಚಲು ಗಿಡ, ಮಧ್ಯ ಮಧ್ಯ ನೆಲ್ಲಿ ಮರ, ಬೆಂಬಾರಲ ಹಣ್ಣಿನ ಮೊಟ್ಟುಗಳು, ಕಬಳಿ ಹಣ್ಣಿನ ಗಿಡಗಳು, ಕವಳೆ ಕಾಯಿ, ಅರಮರಲು ಕಾಯಿ ಗಿಡ, ರಂಜದ ಮರ ಹರಡಿಕೊಂಡಿದ್ದವು.

ಗಂಧದ ಗಿಡಗಳಿಗೂ, ಗುಲಗಂಜಿ ಬಳ್ಳಿಗಳಿಗೂ ಈ ಗುಡ್ಡವೇ ತವರಾಗಿತ್ತು. ಕಲ್ಲು ಕಲ್ಲಾದ ಉಳಿದ ಜಾಗದಲ್ಲಿ ಹಸಿರು ಹುಲ್ಲು ಯಥೇತ್ಛವಾಗಿ ಬೆಳೆಯುತ್ತಿತ್ತು. ಮಳೆ ಆರಂಭವಾಯಿತು ಎಂದರೆ ಆ ಗುಡ್ಡದ ಎಳೆ ಹುಲ್ಲಿನ ಹಸಿರ ಸೊಬಗು ಮನಸ್ಸನ್ನು ನಿತ್ಯ ಮುದಗೊಳಿಸುತ್ತಿತ್ತು. ನಮ್ಮೂರ ಅಷ್ಟೂ ಜಾನುವಾರುಗಳು ಇಲ್ಲಿಯೇ ಮೇಯುತ್ತಿದ್ದವು. ಈ ಬಯಲು ಗುಡ್ಡ ಬಾಲ್ಯದಲ್ಲಿ ನಮ್ಮ ಬದುಕಿನ ಒಂದು ಭಾಗವೂ ಆಗಿತ್ತು. ಗುಡ್ಡದ ನೆತ್ತಿ ಮೇಲೆ ಬೇಟೆದೇವರ ಕಲ್ಲೊಂದಿತ್ತು. ಕೆಲವರು ಬೇಟೆಯಾಡಲು ಬರುವವರು ಬೇಟೆಗೆ ಹೋಗುವ ಮುನ್ನ ಇದಕ್ಕೆ ಪೂಜೆ ಸಲ್ಲಿಸಿ ಮುಂದೆ ಹೋಗುತ್ತಿದ್ದರು. ಗುಡ್ಡದ ಅಲ್ಲಲ್ಲಿ ಚದುರಿದಂತಿದ್ದ ಕಲ್ಲುಗಳ ನಡುವೆ ನವಿಲುಗಳು ಕಳಚಿ ಹೋಗುತ್ತಿದ್ದ ಗರಿಗಳು ನಮ್ಮ ಪುಸ್ತಕದಲ್ಲಿ ಜೀವ ತಳೆಯುತ್ತಿದ್ದವು.

ಪುಸ್ತಕದ ಹಾಳೆಗಳ ನಡುವೆ ಇಟ್ಟಿರುತ್ತಿದ್ದ ಅರಳೀ ಎಲೆಗೆ ಸಂಗಾತಿಯಾಗುತ್ತಿತ್ತು. ಗುಡ್ಡದ ಬಯಲಲ್ಲಿ, ಮನೆಯ ಕೋಣೆಯಲ್ಲಿ, ನಾವೇ ಕಟ್ಟಿದ ಆಟದ ಮನೆಗಳಲ್ಲಿ ನಡೆಯುತ್ತಿದ್ದ ನಾಟಕದಲ್ಲಿ ಕೃಷ್ಣನ ರೂಪಕ್ಕೆ ಬಳಕೆಯಾಗುತ್ತಿತ್ತು. ಹತ್ತಾರು ನವಿಲುಗರಿಗಳು ಒಟ್ಟಾಗಿ ಸಿಕ್ಕಿದಾಗ ಅಕ್ಕನ ಕೈಯಲ್ಲಿ ಬೀಸಣಿಕೆಯಾಗಿ ರೂಪಾಂತರವಾಗುತ್ತಿತ್ತು.

ಅಲ್ಲಿನ ಮರದ ನೆಲ್ಲಿಕಾಯಿಯ ಒಗರು, ಕೊನೆಗುಳಿಯುವ ಸಿಹಿ, ಬೆಂಬಾರಲ ಹಣ್ಣಿನ ಹದವಾದ ರುಚಿ, ನಾಲಿಗೆಯೆಲ್ಲಾ ಸುಲಿದು ಹೋಗುತ್ತಿದ್ದ ಹುಲಿಗೆ ಹಣ್ಣಿನ ಹುಚ್ಚಟೆ ಹುಳಿ ನೆನಪುಗಳಾಗಿ ಮಾತ್ರ ಉಳಿದು ಬಿಟ್ಟಿದೆ. ದೀಪಾವಳಿ ಬಂತೆಂದರೆ ಜಾನುವಾರುಗಳಿಗೆ ಸರ ಮಾಡಿ ಹಾಕುತ್ತಿದ್ದ ಉಗುಣೆ ಕಾಯಿಯ ಬಳ್ಳಿಗಳೆಲ್ಲವೂ ಇದೇ ಗುಡ್ಡದಲ್ಲಿದ್ದು, ಈಗ ಕನವರಿಕೆಯಾಗುತ್ತಿದೆ. ಈ ಹಣ್ಣುಗಳನ್ನು ತಿನ್ನಲೆಂದೇ ನಿತ್ಯ ಸಾವಿರಾರು ಹಕ್ಕಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದವು. ಅತ್ತ ಅವು, ಇತ್ತ ನಾವು ಒಟ್ಟೊಟ್ಟಿಗೆ ಜೊತೆಯಾಗುತ್ತಿದ್ದವು. ನಮ್ಮ ಕೈಗೆ ಸಿಗದೆ ಆಟವಾಡಿಸುತ್ತಿದ್ದ ಚಿಟ್ಟಳಿಲು, ಕೆಂದಳಿಲು ನಮ್ಮ ಆಟಗಳಿಗೆ, ಹೊತ್ತು ಕಳೆಯುವ ವೇಳೆಗೆ ಮತ್ತಷ್ಟು ಜೀವಂತಿಕೆ ಕೊಡುತ್ತಿದ್ದವು. ಅವುಗಳ ಜೊತೆ ಒಂದು ಸ್ನೇಹ ಗಟ್ಟಿಯಾಗಿ ಬೆಳೆಯುತ್ತಿತ್ತು.

ಅದೊಂದು ದಿನ ಇದ್ದಕ್ಕಿದ್ದಂತೆ ಸುದ್ದಿ ಬಂತು. ಈ ಬೋಳು ಗುಡ್ಡದ ಮೇಲೆ ಅರಣ್ಯ ಇಲಾಖೆ ಗಿಡ ನೆಡ್ತಾರಂತೆ ಎಂದು. ನಮಗೆ ಆಗ ಈ ಇಲಾಖೆ ಪಲಾಕೆಯ ಬಗ್ಗೆ ಏನೂ ಸರಿಯಾಗಿ ಗೊತ್ತಿರಲಿಲ್ಲ. ಆದರೆ ಯಾರೋ ಇಲ್ಲಿಗೆ ಬಂದು ಯಾಕೆ ಗಿಡ ನೆಡಬೇಕು ಎಂಬ ಪ್ರಶ್ನೆ ನಮ್ಮಲ್ಲಿ ಉದ್ಭವವಾಗಿತ್ತು. ನೆಡುತೋಪು ಎಂಬುದು ನಮಗೆ ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ. ಇಷ್ಟೆಲ್ಲಾ ಕಾಡಿರುವಾಗ ಇವರೆಂತಕ್ಕೆ ಇಲ್ಲಿ ಗುಡ್ಡದ ಮೇಲೆ ಗಿಡ ನೆಡಬೇಕು ಎಂಬುದಷ್ಟೇ ನಮ್ಮ  ಪ್ರಶ್ನೆಯಾಗಿತ್ತು. ಒಂದು ದಿನ ಅರಣ್ಯ ಇಲಾಖಾ ಸಿಬ್ಬಂದಿಗಳು ಬಂದರು. ನಮ್ಮ ಊರಿನ ಕೆಲಸಗಾರರನ್ನೇ ಜೊತೆಯಾಗಿಸಿಕೊಂಡು ಆ ಬೋಳು ಗುಡ್ಡದ ಮೇಲೆಲ್ಲ ಅಳತೆ ಮಾಡಿ ಗುರುತು ಮಾಡಿದರು. ಹೀಗೆ ಅಳತೆ ಮಾಡಿ ಗಿಡ ನೆಟ್ಟು ಕಾಡು ಮಾಡೋಕಾಗುತ್ತಾ ಎಂದು ಆಗಲೇ ನಮ್ಮ ತಲೆಯಲ್ಲಿ ಪ್ರಶ್ನೆಯೊಂದು ಎದ್ದಿತ್ತು. ನಿತ್ಯ ಕಾಡು ನೋಡುತ್ತಿದ್ದ ನಮಗೆ ಅಲ್ಲಿ ಯಾವ ಅಳತೆ ಪಳತೆ ಎಂತದ್ದೂ ಇರಲ್ಲ ಎಂಬುದು ಗೊತ್ತಿತ್ತು. ನಾವು ಹೀಗೆ ಯೋಚಿಸುತ್ತಿರುವಂತೆಯೇ ಇತ್ತ ಹೊಂಡಗಳು ಜಾಸ್ತಿಯಾಗತೊಡಗಿದವು. ನಮ್ಮೂರಿನ ಯಾರೂ ಅದನ್ನು ತಡೆಯಲಿಲ್ಲ. ಆ ಬೋಳುಗುಡ್ಡ ನಮ್ಮೂರಿನ ಅಸ್ಮಿತೆಯಾಗಿತ್ತು. ನೂರಾರು ಜಾನುವಾರುಗಳ ಅಕ್ಷಯ ಪಾತ್ರೆಯಾಗಿತ್ತು¤. ನಮ್ಮ ನೆನಪುಗಳ ಗೂಡಾಗಿತ್ತು. ಊರಿನ ಜಲಮೂಲಗಳಿಗೆ ಬೇಕಾದ ಮಳೆ ನೀರನ್ನು ಸಂಗ್ರಹಿಸುವ ಸೋಸು ಜರಡಿಯಾಗಿತ್ತು. ಆದರೆ ಊರಿನ ಹಿರೀಕರಿಗೆ  ಇದೊಂದು ಬದಲಾವಣೆಯ ದಾರಿ ಎನಿಸಿರಬೇಕು. ನಿಂತ ನೀರಾದಂತೆ ಅನಿಸಿದ್ದ  ತಮ್ಮ ಊರಿನ ಬದುಕಿಗೆ ಹೊಸ ಚೈತನ್ಯ ನೀಡಬಹುದೆಂದು ಭಾವಿಸಿರಬಹುದು. ಇನ್ನು ಸೌದೆ ಕಡಿದು ತರಲು ದೂರದ ಕಾಡಿಗೆ ಹೋಗಬೇಕಾದ್ದಿಲ್ಲ, ಬೇಲಿ ಗೂಟ ಮನೆಯ ಬಾಗಿಲಲ್ಲಿಯೇ ಸಿಗುತ್ತೆ, ಮರದ ತೊಲೆಗಳಿಗೆ ಅಲೆದಾಡಬೇಕಾಗಿಲ್ಲ ಎಂದೆಲ್ಲ ಆಲೋಚನೆಗಳು ಬಂದಿರಲಿಕ್ಕೆ ಸಾಕು. ಅಷ್ಟಾಗಿಯೂ ಸರ್ಕಾರದ ಕಾರ್ಯಕ್ರಮವನ್ನು ವಿರೋಧಿಸುವ ತಾಕತ್ತಾದರೂ ಆಗ ಯಾರಿಗಿತ್ತು? ನೆಡುತೋಪು ಎಂಬುದರ ಕಲ್ಪನೆಯೇ ಇಲ್ಲದ ಹೊತ್ತಿನಲ್ಲಿ ಇದರ ಅಡ್ಡ ಪರಿಣಾಮಗಳ ಕುರಿತು ಅರಿವಾದರೂ ಹೇಗಿರಲು ಸಾಧ್ಯ? ಇದು ಈ ಊರವರ ಮಾತಲ್ಲ, ಇಡೀ ಮಲೆನಾಡಿನ ಸ್ಥಿತಿಯೇ ಆಗಿತ್ತು. ಹಾಗಾಗಿಯೇ ಮಲೆನಾಡಿನ ನಡುನಡುವೆ ಪ್ರಕೃತಿಯೇ ಬಿಟ್ಟಿದ್ದ ಜಾಗವನ್ನು ಅರಣ್ಯ ಇಲಾಖೆ, ಎಂಪಿಎಂ ಕಾರ್ಖಾನೆಯವರು ಆಕ್ರಮಿಸಿಕೊಂಡರು.

ಸೇರಿ ನೆಡುತೋಪು ಮಾಡಿಬಿಟ್ಟರು. ಪ್ರಕೃತಿ ಯಾಕಾಗಿ ಇಂತಹ ಜಾಗವನ್ನೆಲ್ಲಾ  ತಾನು ನಿರ್ಮಿಸಿಕೊಂಡಿದೆ ಎಂದು ಆಲೋಚಿಸುವಷ್ಟು ಕೂಡ ತಮ್ಮ ಯೋಚನಾ ಧಾಟಿಯನ್ನು, ಜ್ಞಾನವನ್ನು ಸರ್ಕಾರಿ ಮಂದಿಗಳು ವಿಸ್ತರಿಸಿಕೊಂಡಿರಲಿಲ್ಲ. 

ನೋಡ ನೋಡುತ್ತಿದ್ದಂತೆ ಹತ್ತಾರು ಮಂದಿ ಕೆಲಸ ಶುರು ಮಾಡಿದರು. ಮಳೆ ಬೀಳುತ್ತಿದ್ದಂತೆ ಇಲ್ಲಿ ನೆಟ್ಟ ಗಿಡಗಳು ಚಿಗುರಿದವು. ತಿಂಗಳಲ್ಲಿ ಚಿಗುರು ಉಕ್ಕಿಸಿ ಬೆಳೆಯುವ ವೇಗದ ಪರಿ ಕಂಡು ಊರವರು ಖುಷಿಪಟ್ಟರು. ನಾವು ನೆಟ್ಟರೆ ಹಿಂಗೆಲ್ಲಾ ಬರಲ್ಲ, ಈ ಸರ್ಕಾರದೋರು ಎಂತಹ ನೆಟ್ರಾ ಲಾಯಕ್ಕಾಗಿ ಬರುತ್ತೆ ಎಂದೆಲ್ಲ ಸ್ವಗತವೆಂಬಂತೆ ಮಾತನಾಡಿಕೊಂಡರು. ತಮ್ಮ ತೋಟದ ಅಡಿಕೆ ಮರ, ಭತ್ತದ ಗದ್ದೆಯ ಹುಲ್ಲಿನ ಚಿಗುರಿಗಿಂತ ಈ ನೆಡುತೋಪಿನ ಚಿಗುರು ಆಕರ್ಷಕ ಎನಿಸತೊಡಗಿತು. ಇದನ್ನು ಬೇಲಿಗೂಟ ಮಾಡಿಕೊಳ್ಳಲು ಎರಡು ವರ್ಷವಾದರೂ ಕಾಯಬೇಕೇನೋ ಎಂಬೆಲ್ಲ ಲೆಕ್ಕಾಚಾರಗಳು ಅಲ್ಲಿ ಮೂಡಿದ್ದವು.

ನಾಲ್ಕೈದು ವರ್ಷಗಳಷ್ಟಾಗುವಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿದ್ದವು. ಕೊಟ್ಟಿಗೆಯಿಂದ ಬಿಟ್ಟರೆ ಗುಡ್ಡದ ತುಂಬೆಲ್ಲ ಓಡಾಡಿ ತನ್ನ ಹೊಟ್ಟೆ ತುಂಬಿಸಿಕೊಂಡು ಬರುತ್ತಿದ್ದ ಜಾನುವಾರುಗಳಿಗೀಗ ಮೇಯಲು ಜಾಗವಿರಲಿಲ್ಲ. ಹೀಗಾಗಿ  ಮನೆಯಲ್ಲಿಯೇ ಕಟ್ಟಿ ಸಾಕಲಾರಂಭಿಸಿದರು. ನಿಧಾನವಾಗಿ “ಇದನ್ನೆಲ್ಲಾ  ಕಟ್ಟಿ ಸಾಕುವುದು ಸಾಧ್ಯವಾ ಮಾರಾಯೆÅ’’ ಎಂದು ಒಂದೊಂದನ್ನೇ ಮಾರಿಕೊಂಡರು. ಈ ನಾಲ್ಕೈದು ವರ್ಷಗಳಲ್ಲಿ ಊರಿನ ಕೊಟ್ಟಿಗೆಗಳಲ್ಲಿ ಜಾನುವಾರು ಸಂಖ್ಯೆ ಇಳಿದಿದ್ದನ್ನು ಯಾರೂ ಸರಿಯಾಗಿ ಗಮನಿಸಲೇ ಇಲ್ಲ. ಮಲೆನಾಡಿನ ಕಣಿವೆ, ಗುಡ್ಡದ ತುಂಬೆಲ್ಲ ತುಂಬಿರುತ್ತಿದ್ದ ಮಲೆನಾಡಿನ ವಿಶಿಷ್ಟ ಜಾನುವಾರು ತಳಿ ಮಲೆನಾಡು ಗಿಡ್ಡ ಅಳಿವಂಚಿಗೆ ಬರಲು ಈ ನೆಡುತೋಪೇ ಮೂಲ ಕಾರಣವಾಗಿರಬಹುದು. ಸತ್ವ ಭರಿತ ಹಾಲು ನೀಡುತ್ತಿದ್ದ ಈ ಮಲೆನಾಡು ಗಿಡ್ಡ ತಳಿಯ ಹಾಲಿನಲ್ಲಿ  ಔಷಧೀಯ ಮತ್ತು ವಿಶೇಷ ಗುಣಗಳನ್ನೆಲ್ಲಾ ಯಾವುದೋ ಪತ್ರಿಕೆಯಲ್ಲಿ ನಾವೇ ಓದಬೇಕಾದ ಸ್ಥಿತಿಗೆ ಬಂದು ನಿಂತಿದ್ದೇವೆ. ದನಗಳು ಇಲ್ಲವಾಗುತ್ತಿದ್ದಂತೆ ಮನೆಯಲ್ಲಿಯೇ ತಯಾರಾಗುತ್ತಿದ್ದ  ಕೊಟ್ಟಿಗೆ ಗೊಬ್ಬರಕ್ಕೆ ಊರೆಲ್ಲ ಹುಡುಕಬೇಕಾದ ಸ್ಥಿತಿ ಬಂತು.

ಅದು ದುರ್ಲಭ ಎಂದು ಗೊತ್ತಾದಾಗ ಸುಲಭವಾಗಿ ಸಿಗುವ ರಾಸಾಯನಿಕ ಗೊಬ್ಬರ ಊರಿನ ತೋಟ, ಗದ್ದೆಗಳಲ್ಲೆಲ್ಲಾ ಬಳಕೆಯಾಗತೊಡಗಿತು. ಮಣ್ಣು  ಸತ್ವ ಕಳೆದುಕೊಂಡಿತು. ಕೆಳಗಿನ ಹಳ್ಳದಲ್ಲಿ ಮೀನುಗಳು ಕಾಣೆಯಾಗತೊಡಗಿದವು. 
ನಿತ್ಯ ಊರ ಮುಂದಿನ ಗುಡ್ಡದಲ್ಲಿ  ನಾಟ್ಯವಾಡುತ್ತಿದ್ದ ನವಿಲುಗಳು ತಮ್ಮ ಗರಿ ಉದುರಿಸಲು ಜಾಗ ಹುಡುಕತೊಡಗಿದ್ದನ್ನು ಯಾರೂ ಗಮನಿಸಲಿಲ್ಲ. ಊರೆಲ್ಲಾ ಬುರ್ರೆಂದು ಸುತ್ತಾಡುತ್ತಾ ಹಾರಾಡುತ್ತಿದ್ದ ಹಕ್ಕಿಗಳ ಗುಂಪು ತನ್ನ ಹಾದಿ ಬದಲಿಸಿದ್ದನ್ನು ಗಮನಿಸಲು ಇನ್ನೂ ಎರಡು ವರ್ಷ ಹೆಚ್ಚಿಗೆ ಬೇಕಾಯಿತು. ನಿತ್ಯ ಹಸಿರ ಹುಲ್ಲು ನೋಡುತ್ತಿದ್ದ ಊರ ಮಂದಿಗೀಗ ಕಾಡು ಕಾಣಿಸತೊಡಗಿತು. ಆದರೆ ಅದು ಕಾಡಲ್ಲ ಎಂದು ಅಂದುಕೊಳ್ಳಲು ಹಲವು ವರ್ಷಗಳೇ ಬೇಕಾಗಿದ್ದು ವಿಪರ್ಯಾಸ. ಊರಿನವ ರೇನೋ ಬೇಲಿ ಗೂಟಕ್ಕೆ ಸುಲಭವಾಯಿತು ಎಂದು ಪ್ಲಾಂಟೇಶನ್‌ ಹೊಕ್ಕು ಗೂಟ ಕಡಿದುಕೊಂಡು ಬಂದರು. ಇವರು ಈಚೆ ಬರುತ್ತಿದ್ದಂತೆ ದನದ ಕೊಟ್ಟಿಗೆಗೆ, ಗೊಬ್ಬರದ ಗುಂಡಿಗೆ ಸೊಪ್ಪು ತಂದು ಹಾಕುತ್ತಿದ್ದ ಕೆಲಸದಾಳುಗಳು ಕೂಡ ದೂರದ ಕಾಡಿಗೇಕೆ ಹೋಗಬೇಕು, ಇಲ್ಲಿಯೇ ಪ್ಲಾಂಟೇಶನ್‌ನಲ್ಲಿ ಉದುರುತ್ತಿರುವ ದರಗು(ಒಣಗಿದ ಎಲೆ) ಇದೆಯಲ್ಲಾ ಎಂದು ನೀಲಗಿರಿ, ಅಕೇಶಿಯಾದ ಒಣಗಿದ ಎಲೆಗಳನ್ನು ಗುಡ್ಡೆ ಮಾಡಿ ತಂದು ಕೊಟ್ಟಿಗೆಗೆ ಹಾಕಿದರು. ಗೊಬ್ಬರದ ಗುಂಡಿ ತುಂಬಿಸಿದರು. ವರ್ಷವಾಗುವಷ್ಟರಲ್ಲಿ ಗೊಬ್ಬರದಲ್ಲಿ ಏನೋ ಸತ್ವ ಕಡಿಮೆಯಾಗಿ ದೆಯಲ್ಲ ಎಂದು ಅಂದುಕೊಳ್ಳುವಾಗ ಪ್ಲಾಂಟೇಶನ್‌ ತೋಟದೊಳಗೆ ತನ್ನ ಕೈ ಚಾಚಿತ್ತು. ಸಗಣಿಯ ಸತ್ವವನ್ನೇ ನಾಶ ಮಾಡುವ ಶಕ್ತಿ ಈ ಎಲೆಗಳಿಗಿದೆ ಎಂದು ಗೊತ್ತಾಗಿದ್ದೇ ತಡವಾಗಿ. ನೀಲಗಿರಿ ಬುಡದಲ್ಲಿ ಹುಲ್ಲು ಸಹ ಹುಟ್ಟಲ್ಲಾ, ಆಳದ ನೀರ ನ್ನೆಲ್ಲಾ ಸೆಳೆದು ಬಾವಿಯನ್ನು ಬರಿದಾಗಿಸುತ್ತೆ ಎಂದು ಯಾರೋ ಯಾವಾಗಲೋ ಹೇಳಿದ ಮಾತು ಮನೆಯೆದುರು ಸತ್ಯ ದರ್ಶನ ಮಾಡಿಸಲು ಕಾದು ನಿಂತಿದ್ದು ಅರಿವಾಗುವಷ್ಟರಲ್ಲಿ ತಡವಾಗಿತ್ತು. ಎಂದೂ ಬತ್ತದ ನಮ್ಮೂರಿನ ಒರತೆ ನೀರಿನ ಬುಗ್ಗೆಗಳೆಲ್ಲಾ ಆಗಾಗ್ಗೆ ಬತ್ತುತ್ತೇವೆ ಎಂಬ ಸೂಚನೆಯನ್ನು ನೀಡುತ್ತಿವೆ.

ಈ ಬೋಳುಗುಡ್ಡ ಎಂಬುದಿಲ್ಲದೆ ವಿಷಾದದ ಛಾಯೆಯೊಂದು ಮಡುಗಟ್ಟಿ ನಿಂತಿದೆ. ಆ ಆಪ್ತತೆ ಇಲ್ಲವಾದ ನೋವು ಕಾಡುತ್ತದೆ. ನೆನಪುಗಳು ಎಲ್ಲೆಲೋ ಚದುರದಿಂತಾಗುತ್ತದೆ.  ಈ ಗುಡ್ಡದ  ನೆನಪಾಗುತ್ತಲೇ ಆಧುನಿಕತೆ ಎಂಬ ರಾಕ್ಷಸನ ನೆನಪಾಗುತ್ತದೆ. 

–  ಗೋಪಾಲ್‌ ಯಡಗೆರೆ

ಟಾಪ್ ನ್ಯೂಸ್

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

7-vitla

Vitla: ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿ ಸಾವು

Kane Williamson makes a brilliant comeback

NZvsENG: ಭರ್ಜರಿ ಕಮ್‌ಬ್ಯಾಕ್ ಮಾಡಿದ ಕೇನ್‌ ವಿಲಿಯಮ್ಸನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

India ಸೆಕ್ಯುಲರ್‌ ಸಿವಿಲ್‌ ಕೋಡ್‌-ನಾಡಿನ ನಾಡಿಮಿಡಿತದ ಕರೆ

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

Cinema Story:”ಇಂತಹ” ನೆಗೆಟಿವ್ ಕಥಾ ವಸ್ತುಗಳಿಲ್ಲದೇನೆ ಸಿನಿಮಾ ಬಾಕ್ಸಾಫೀಸ್ ತುಂಬ ಬಹುದೇ ?

ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿ

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

ಜಮೀನು ವ್ಯಾಜ್ಯ: ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thirthahalli: ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ.. ಪ್ರಮೋದ್ ಮುತಾಲಿಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.