ಉತ್ಸವದ ಮೆರುಗು ಹೆಚ್ಚಿಸಿದ ಕಲ್ಲಿನ ಸಾಮಗ್ರಿಗಳು
Team Udayavani, Nov 19, 2017, 3:51 PM IST
ಬೆಳ್ತಂಗಡಿ: ತಂತ್ರಜ್ಞಾನಗಳ ಭರಾಟೆ ಮುಂದುವರಿಯುತ್ತಿದ್ದಂತೆ ಹಿರಿಯರು ಬಳಸುತ್ತಿದ್ದ ನೈಸರ್ಗಿಕ ವಸ್ತುಗಳು ಕಣ್ಮರೆಯಾಗುತ್ತಿವೆ. ಹಳ್ಳಿಗಳಲ್ಲಿಯೂ ಇಂದು ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ಸಾಮಗ್ರಿಗಳು ಕಾಣಸಿಗುವುದು ಅಪರೂಪವಾಗಿದೆ. ಆದರೆ ಧರ್ಮಸ್ಥಳದ ಲಕ್ಷ ದೀಪೋತ್ಸವದಲ್ಲಿ ಕಲ್ಲಿನ ಕೆತ್ತನೆಯಿಂದ ಮಾಡಿದ ಮನೆಯಲ್ಲಿ ದಿನನಿತ್ಯದ ಕೆಲಸಗಳಿಗೆ ಬಳಸುವ ಅಳಿವಿನಂಚಿನಲ್ಲಿರುವ ವಿವಿಧ ಸಾಮಗ್ರಿಗಳು ಗಮನ ಸೆಳೆದವು.
ಲಕ್ಷದೀಪೋತ್ಸವದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಬೇಲೂರಿನ ಮಂಜುನಾಥ ಎಂಬವರು ಹಾಗೂ ಅವರ ಕುಟುಂಬಸ್ಥರು ಕಲ್ಲಿನಿಂದ ಸಣ್ಣ ಗಾತ್ರದಲ್ಲಿ ತಯಾರಿಸಿ ಧಾನ್ಯಗಳನ್ನು ಕುಟ್ಟಿ ಪುಡಿ ಮಾಡುವ ಕಲ್ಲು, ರಾಗಿ, ಅಕ್ಕಿ ಬೀಸುವ ಕಲ್ಲು, ಕಾವಲಿ, ಚಪಾತಿ ತಯಾರಿಸುವ ಕಲ್ಲನ್ನು ಮಾರಾಟಕ್ಕೆ ಇಟ್ಟಿದ್ದರು.
ಪಾರಂಪರಿಕವಾಗಿ ವೃತ್ತಿ ನಡೆಸಿಕೊಂಡು ಬಂದಿರುವ ಇವರು ಪ್ರತಿ ವರ್ಷ ದೀಪೋತ್ಸವ ಮತ್ತು ಶಿವರಾತ್ರಿ ಸಂದರ್ಭದಲ್ಲಿ ಬೇಲೂರಿನಿಂದ ಧರ್ಮಸ್ಥಳಕ್ಕೆ ಬಂದು ತಾವೇ ಕಲ್ಲನ್ನು ಕೆತ್ತಿ ತಯಾರಿಸಿದ ವಿವಿಧ ವಿನ್ಯಾಸಗಳ ಸಾಮಗ್ರಿಗಳನ್ನು ಮಾರಾಟ ಮಾಡುತ್ತಾರೆ. ಧಾನ್ಯಗಳನ್ನು ಪುಡಿ ಮಾಡಲು ಮಿಕ್ಸಿ ಇದ್ದರೂ ತುಂಬಾ ಜನ ಇದನ್ನು ಖರೀದಿಸುತ್ತಿದ್ದಾರೆ. ಇದರಿಂದ ರುಚಿ ಹೆಚ್ಚು. ಆರೋಗ್ಯವೂ ವೃದ್ಧಿಸುತ್ತದೆ. ನಮ್ಮ ವ್ಯಾಪಾರ ಉತ್ತಮವಾಗಿ ನಡೆಯುತ್ತಿದೆ ಎಂದು ಮಾಲಕ ಮಂಜುನಾಥ ಅಭಿಪ್ರಾಯಪಟ್ಟರು.
ಇಷ್ಟೇ ಅಲ್ಲದೆ ದೀಪ, ಶಿವಲಿಂಗ, ಗಣಪತಿ ಮತ್ತು ಶಿವನ ವಿಗ್ರಹಗಳು, ನಂದಿ, ಆನೆ, ದೇವರ ಗುಡಿ ಹೀಗೆ ಬಗೆಬಗೆಯ ಕಲ್ಲುಕೆತ್ತನೆ ವಿನ್ಯಾಸದ ದೀಪಗಳನ್ನು ಮಾರಾಟಕ್ಕಿಟ್ಟಿದ್ದರು. ಶೋಕೇಸ್‌ನಲ್ಲಿ ಇಡಬಹುದಾದ ಗಾತ್ರದ ಈ ಸಾಮಗ್ರಿಗಳು ಜನರನ್ನು ಆಕರ್ಷಿಸಿ, ದೀಪೋತ್ಸವದ ಮೆರುಗು ಹೆಚ್ಚಿಸಿದವು.
ರಾಜೇಶ್ವರಿ ಬೆಳಾಲು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.